ಕಾವೇರಿ ನದಿಯ ಉಳಿವಿಗಾಗಿ ಹೋರಾಟದ ಹಾದಿ ಹಿಡಿದ ವಿವಿಧ ಸಂಘಟನೆಗಳು; ಜೀವಜಲ ವಿಷವಾಗುವುದನ್ನು ತಡೆಯಲು ಒತ್ತಾಯ
ಮಡಿಕೇರಿ: ಕರುನಾಡ ಜೀವನದಿ ಕಾವೇರಿಗೆ ಇದೀಗ ಒಡಲಲ್ಲೇ ಕಂಟಕ ಎದುರಾಗಿದ್ದು, ಕೋಟ್ಯಂತರ ಜನರ ಪಾಲಿಗೆ ಜೀವಜಲವಾಗಿರುವ ಕಾವೇರಿ ನದಿಯ ಸ್ವಚ್ಛತೆಗೆ ಹೋರಾಟ ರೂಪುಗೊಳ್ಳುತ್ತಿದೆ.
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ಕರುನಾಡ ಜನರ ಪಾಲಿಗೆ ವರವಾಗಿದೆ. ತಮಿಳುನಾಡಿಗೂ ಹರಿಯುವ ಮೂಲಕ ಸಂಜೀವಿನಿಯಾಗಿ ಕಾವೇರಿ ಗುರುತಿಸಿಕೊಂಡಿದೆ. ಕೇವಲ ಕುಡಿಯುವುದಕ್ಕೆ ಮಾತ್ರವಲ್ಲದೇ ಕೃಷಿಗೂ ಲಭ್ಯವಾಗುವ ಮೂಲಕ ರೈತರ ಪಾಲಿಗೆ ಜೀವನಾಡಿಯಾಗಿದೆ. ರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳಿಗೂ ಇದೇ ಕಾವೇರಿ ನದಿಯ ನೀರನ್ನು ಬಳಸಲಾಗುತ್ತಿದೆ.
ಪ್ರಸ್ತುತ ಕಾವೇರಿ ನದಿ ತನ್ನ ಒಡಲಲ್ಲೇ ಕಲುಷಿತವಾಗುತ್ತಿದೆ. ನದಿ ಅಂಚಿನಲ್ಲಿರುವ ರೆಸ್ಟೋರೆಂಟ್, ರೆಸಾರ್ಟ್, ಹೋಂ ಸ್ಟೇಗಳು ಕೊಳಚೆ ನೀರನ್ನು ನೇರವಾಗಿ ನದಿಗೆ ಹರಿಸುತ್ತಿವೆ. ಜೊತೆಗೆ ಇದೀಗ ಕೊಡಗಿನ ಕಾಫಿ ತೋಟಗಳಲ್ಲಿ ಕಾಫಿ ಪಲ್ಪರ್ ನಡೆಯುತ್ತಿದ್ದು, ಅದರಿಂದ ಬರುವ ತ್ಯಾಜ್ಯವನ್ನು ನೇರವಾಗಿ ಕಾವೇರಿ ನದಿಗೆ ಹರಿಸಲಾಗುತ್ತಿದೆ. ಇದರ ಜೊತೆಗೆ ಪ್ಲಾಸ್ಟಿಕ್ ಸೇರಿದಂತೆ ಕೆಲ ವಿಷತ್ಯಾಜ್ಯಗಳು ನದಿಯ ಒಡಲನ್ನು ಸೇರುತ್ತಲೇ ಇದೆ. ಹೀಗಾಗಿ ಕಾವೇರಿ ಸಂಪೂರ್ಣ ವಿಷಮಯವಾಗಿ ಮಾರ್ಪಡುತ್ತಿದೆ. ಹೀಗೆ ಕಲುಷಿತ ನೀರು ಕಾವೇರಿ ನದಿಯನ್ನು ಸೇರುತ್ತಿದ್ದರೂ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ಕಾಫಿ ತೋಟದ ಮಾಲೀಕರು, ರೆಸಾರ್ಟ್ ಮಾಲೀಕರು ಪ್ರಭಾವಿಗಳಾಗಿರುವುದರಿಂದ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಮೀನಮೇಷ ಎಣಿಸಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.
ಈ ಬಗ್ಗೆ ಸ್ಥಳೀಯರು ಸಾಕಷ್ಟು ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಗಮನ ವಹಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಕೊಡಗು ಜಿಲ್ಲೆ ಸೇರಿದಂತೆ ಮಂಡ್ಯ ರಾಮನಗರ, ಹಾಸನ ಭಾಗದ ವಿವಿಧ ಸಂಘಟನೆಗಳು ಕಾವೇರಿ ನದಿಯ ಉಳಿವಿಗಾಗಿ ಹೋರಾಟದ ಹಾದಿ ಹಿಡಿದಿವೆ.
ಕೋಟ್ಯಂತರ ಜನರ ಬದುಕನ್ನು ಬಂಗಾರವಾಗಿಸಿರುವ ಜೀವದಾತೆ ಕಾವೇರಿ ಕಲುಷಿತ ಗೊಳ್ಳುತ್ತಿರುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಜೀವಜಲ ವಿಷಜಲವಾಗುವುದನ್ನು ತಡೆಯಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
” ಉತ್ತಮ ಮಳೆ ಬಂದ ಪರಿಣಾಮ ನೀರಿನ ಅಭಾವ ಕಾಣಿಸಿಕೊಂಡಿಲ್ಲ. ಆದರೆ, ಇಂದು ಕಾವೇರಿ ಕಲುಷಿತಗೊಳ್ಳುತ್ತಿದೆ. ಕಾವೇರಿ ತೀರ್ಥೋದ್ಬವ, ಕಾವೇರಿಯಾತ್ರೆ ದಿನದ ಪ್ರಯುಕ್ತ ಸುತ್ತಮುತ್ತ ಮಾತ್ರ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ. ರೆಸಾರ್ಟ್, ಹೋಟಿಛಿಲ್, ಅಂಗಡಿಮುಂಗಟ್ಟು, ಶೌಚಾಗೃಹದ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು.”
-ಸುನಿಲ್, ಕರ್ನಾಟಕ ಯುವ ರಕ್ಷಣ ವೇದಿಕೆಯ ರಾಜ್ಯಾಧ್ಯಕ್ಷ
” ತಲಕಾವೇರಿಯಿಂದ ಕುಶಾಲನಗರದವರೆಗೆ ಕಾವೇರಿ ನದಿಪಾತ್ರದ ಒತ್ತುವರಿಯನ್ನು ಜಿಲ್ಲಾಡಳಿತ ಪತ್ತೆಹಚ್ಚಿ ತಕ್ಷಣ ಕ್ರಮ ಕೈಗೊಳ್ಳಬೇಕು. ೧೫ ದಿನಗಳೊಳಗೆ ಮಾಡದಿದ್ದಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ಮಾಡಲಾಗುವುದು.”
-ಪ್ರಸನ್ನ ಭಟ್, ಕೊಡಗು ಅಭಿವೃದ್ಧಿ ಸಮಿತಿ ಸ್ಥಾಪಕ ಅಧ್ಯಕ್ಷ
” ಕಾವೇರಿ ನದಿ ಇಂದು ಕಲುಷಿತವಾಗಿದೆ. ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದಕಾವೇರಿಯನ್ನು ಉಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನದಿ ದಡದಲ್ಲಿರುವ ಒತ್ತುವರಿದಾರರನ್ನು ತೆರವುಗೊಳಿಸುವ ಕಾರ್ಯವಾಗಬೇಕು ಹಾಗೂ ನದಿ ತಟದಲ್ಲಿ ಹೋಟೆಲ್, ಮಳಿಗೆಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಇದ್ದಲ್ಲಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು.”
-ಮೊಹಮ್ಮದ್, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ
–ನವೀನ್ ಡಿಸೋಜ



