Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಕ್ಯಾನ್ಸರ್‌ ಎಂದ ತಕ್ಷಣ ಭಯಪಡಬೇಕಿಲ್ಲ

‘ಮೊದಲ ಹಾಗೂ ೨ನೇ ಹಂತದಲ್ಲಿ ಚಿಕಿತ್ಸೆ ಪಡೆದರೆ ಈ ರೋಗವನ್ನು ಪೂರ್ಣ ಪ್ರಮಾಣದಲ್ಲಿ ವಾಸಿ ಮಾಡಬಹುದು’

ಆಂದೋಲನ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯ ಕ್ಯಾನ್ಸರ್‌ ವಿಭಾಗದ ತಜ್ಞ ವೈದ್ಯರಾದ ಡಾ.ಜಿ.ಎಚ್.ಅಭಿಲಾಷ್‌, ಡಾ.ವಿನಯ್‌ ಕುಮಾರ್‌ರಿಂದ ಹಲವು ಮಾಹಿತಿ.

ಮೈಸೂರು: ಕ್ಯಾನ್ಸರ್ ಎಂದ ತಕ್ಷಣ ಭಯಪಡುವ ಅಗತ್ಯವಿಲ್ಲ. ಯಾವುದೇ ಕ್ಯಾನ್ಸರ್ ಆದರೂ ಅದು ತನ್ನ ಲಕ್ಷಣಗಳನ್ನು ತೋರಿಸುತ್ತದೆ. ಅವುಗಳನ್ನು ನಿರ್ಲಕ್ಷ್ಯ ಮಾಡದೆ ತಪಾಸಣೆಗೆ ಒಳಗಾಗಬೇಕು. ಮೊದಲ ಹಾಗೂ ೨ನೇ ಹಂತದಲ್ಲಿ ಚಿಕಿತ್ಸೆ ಪಡೆದರೆ ಈ ರೋಗ ವನ್ನು ಪೂರ್ಣ ಪ್ರಮಾಣದಲ್ಲಿ ವಾಸಿ ಮಾಡಬಹುದು. ರೋಗವು ೩ ಹಾಗೂ ಅಂತಿಮ ಹಂತಕ್ಕೆ ತಲುಪಿದರೆ ಗುಣಮುಖರಾಗು ವುದು ಕಷ್ಟ. ಹೀಗಾಗಿ, ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಚಿಕಿತ್ಸೆ ಪಡೆಯುವುದೇ ಇದಕ್ಕೆ ಇರುವ ಅತ್ಯುತ್ತಮ ಔಷಧ’. . !

ನಗರದ ಪ್ರತಿಷ್ಠಿತ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ತಜ್ಞ ವೈದ್ಯರಾದ ಡಾ. ಜಿ. ಎಚ್. ಅಭಿಲಾಷ್ ಹಾಗೂ ಡಾ. ವಿನಯ್ ಕುಮಾರ್ ಮುತ್ತಗಿ ಅವರ ಸಲಹೆಗಳಿವು.

‘ಆಂದೋಲನ’ ದಿನಪತ್ರಿಕೆ ಕಚೇರಿಯಲ್ಲಿ ಗುರುವಾರ ನಡೆದ ನೇರ -ನ್ ಇನ್ ಕಾರ್ಯಕ್ರಮದಲ್ಲಿ ಈ ಇಬ್ಬರೂ ಕ್ಯಾನ್ಸರ್ ಕುರಿತು ಜನಸಾಮಾನ್ಯರ ಪ್ರಶ್ನೆಗಳು, ಗೊಂದಲಗಳು ಹಾಗೂ ಸಂದೇಹಗಳನ್ನು ನಿವಾರಿಸಿದರು.

ಗ್ರಾಮೀಣ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಹೆಚ್ಚು: ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರಲ್ಲಿ ಸ್ತನ, ಗರ್ಭಕೋಶದ ಕೊರಳಿನ ಕ್ಯಾನ್ಸರ್, ಪುರುಷರಲ್ಲಿ ಶ್ವಾಸಕೋಶ, ಅನ್ನನಾಳ, ಬಾಯಿ-ಗಂಟಲು ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ.

ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳ ಕ್ಯಾನ್ಸರ್ ಗಳು ಗ್ರಾಮೀಣ ಭಾಗದವರಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದೆ. ನಗರ ಪ್ರದೇಶದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದೆ. ಗ್ರಾಮೀಣ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಹೆಚ್ಚಾಗಿದೆ ಎಂದು ಡಾ. ವಿನಯ್ ಕುಮಾರ್ ಮುತ್ತಗಿ ವಿವರಿಸಿದರು.

ಸಣ್ಣ ವಯಸ್ಸಿನಲ್ಲಿ ಮದುವೆ ಬೇಡ: ಮಹಿಳೆಯರಲ್ಲಿ ಹೆಚ್ಚಾಗಿ ಎರಡು ರೀತಿಯ ಕ್ಯಾನ್ಸರ್‌ಗಳು ಕಾಣಿಸಿಕೊಳ್ಳು ತ್ತವೆ. ಗರ್ಭಕೋಶದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಋತುಮತಿಯಾದ ಕೂಡಲೇ ಮದುವೆ ಮಾಡುತ್ತಿದ್ದರು. ಇದರಿಂದಾಗಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗುತ್ತಿತ್ತು. ಈಗ ಈ ಸಮಸ್ಯೆ ಕಡಿಮೆಯಾಗಿದೆಯಾದರೂ ಕಡಿಮೆ ವಯಸ್ಸಿ ನಲ್ಲಿ ಅಂದರೆ ೨೦-೨೧ಕ್ಕೆ ಮುನ್ನ ವಿವಾಹ ಮಾಡದಿರು ವುದು ಉತ್ತಮ. ಮಹಿಳೆಯರು ಅಂದಾಜು ೨೫-೨೬ರ ಆಸುಪಾಸಿನಲ್ಲಿ ಮದುವೆಯಾಗುವುದು ಕ್ಯಾನ್ಸರ್ ತಡೆ ದೃಷ್ಟಿಯಿಂದ ಉತ್ತಮ ಎಂದರು.

ಅರಿವಿನ ಕೊರತೆ: ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದರಿಂದ ಗುಣಪಡಿಸಬಹುದಾಗಿದೆ. ಈ ಬಗ್ಗೆ ಅರಿವಿದ್ದರೂ, ವಿದ್ಯಾ ವಂತ ಮಹಿಳೆಯರೇ ತಪಾಸಣೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಮಹಿಳೆ ಯರಲ್ಲೂ ಅರಿವಿನ ಕೊರತೆಯಿಂದಾಗಿ ರೋಗಪತ್ತೆ ಹಾಗೂ ಚಿಕಿತ್ಸೆ ವಿಳಂಬವಾಗುತ್ತಿದೆ. ಇದರಿಂದಾಗಿ ಬಹಳಷ್ಟು ಮಂದಿ ಗಂಭೀರ ಹಂತ ತಲುಪಿದಾಗ ಚಿಕಿತ್ಸೆಗೆ ಬರುತ್ತಾರೆ. ಆಗ ಗುಣಪಡಿಸುವುದು ಕಷ್ಟವಾಗುತ್ತದೆ ಎಂದರು.

ಚಿಕಿತ್ಸೆ ದುಬಾರಿ ಅಲ್ಲ: ಕ್ಯಾನ್ಸರ್ ಚಿಕಿತ್ಸೆ ಎಂದರೆ ಅತ್ಯಂತ ದುಬಾರಿ ಎಂಬೆಲ್ಲ ತಪ್ಪುಕಲ್ಪನೆಗಳು ಜನರಲ್ಲಿವೆ. ಆದರೆ, ಈಗ ಈ ಕಾಯಿಲೆಗೆ ಕೆಲವೊಂದು ರಿಯಾಯಿತಿ ದರದ ಚಿಕಿತ್ಸೆ ಲಭ್ಯವಿದೆ. ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಬಹುತೇಕ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ. ಎಪಿಎಲ್ ಕಾರ್ಡ್ ಇದ್ದವರಿಗೂ ಹೆಚ್ಚು ರಿಯಾಯಿತಿ ಇದೆ. ಸರ್ಕಾರದ ಆರೋಗ್ಯ ಭಾಗ್ಯ ಇನ್ನಿತರ ಆರೋಗ್ಯ ವಿಮೆ ಸೌಲಭ್ಯಗಳ ಮೂಲಕವೂ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಡಾ. ಜಿ. ಎಚ್. ಅಭಿಲಾಷ್ ತಿಳಿಸಿದರು.

ಕ್ಯಾನ್ಸರ್ ಲಕ್ಷಣ ನಿರ್ಲಕ್ಷಿಸದಿರಿ: ಸಾಮಾನ್ಯವಾಗಿ ಕ್ಯಾನ್ಸರ್ ರೋಗದಲ್ಲಿ ಎರಡು ಲಕ್ಷಣಗಳು ಕಂಡು ಬರಲಿವೆ. ಊಟದಲ್ಲಿ ವ್ಯತ್ಯಾಸ, ಊಟದ ಇಚ್ಛೆ ತಪ್ಪಿ ಹೋಗುವುದು ಹಾಗೂ ಇದಕ್ಕಿದ್ದಂತೆ ತೂಕ ಕಡಿಮೆ ಯಾಗುವುದು. ೩ರಿಂದ ೬ ತಿಂಗಳಲ್ಲಿ ೧೦ ಕೆಜಿ ತೂಕ ಇಳಿಮುಖವಾದರೇ ಕ್ಯಾನ್ಸರ್ ರೋಗದ ಸಾಧ್ಯತೆಗಳು ಇರಲಿವೆ. ಬಾಯಿ-ಗಂಟಲಿನಲ್ಲಿ ಹುಣ್ಣಿನ ಲಕ್ಷಣಗಳು, ತುತ್ತು ನುಂಗುವಾಗ ನೋವು ಕಾಣಿಸಿಕೊಳ್ಳುವುದು. ಕಡಿಮೆಯಾಗದ ಒಣ ಕೆಮ್ಮು, ಕೆಮ್ಮಿದಾಗ ರಕ್ತ ಒಸರುವುದು. ಈ ಲಕ್ಷಣಗಳು. ಇದ್ದವರು ವೈದ್ಯರ ಬಳಿ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು.

Tags: