Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಕಲ್ಕಟ್ಟ ಕೆರೆ, ವಿಜಯಪುರ ಕೆರೆ ತುಂಬಿಸಲು ಆಗ್ರಹ 

ಮಹೇಂದ್ರ ಹಸಗೂಲಿ

ಖಾಲಿಯಾದ ಕೆರೆಗಳು; ಅಂತರ್ಜಲ ಕುಸಿತದ ಆತಂಕದಲ್ಲಿ ರೈತರು

ಗುಂಡ್ಲುಪೇಟೆ: ತಾಲ್ಲೂಕಿನ ಕೆರೆ ತುಂಬಿಸುವ ಯೋಜನೆಯಡಿ ಈ ವರ್ಷ ಕಲ್ಕಟ್ಟ ಕೆರೆ ಮತ್ತು ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿರುವ ವಿಜಯಪುರ ಅಮಾನಿ ಕೆರೆಗಳಿಗೆ ನೀರು ತುಂಬಿಸಲು ಜಿಲ್ಲಾಡಳಿತ ಮತ್ತು ಸಣ್ಣ ನೀರಾವರಿ ಇಲಾಖೆ ವಿಳಂಬ ಮಾಡುತ್ತಿವೆ. ತಾಲ್ಲೂಕಿನ ಬಗ್ಗೆ ಜಿಲ್ಲಾಧಿಕಾರಿ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಆಲಂಬೂರು ಏತ ನಿರಾವರಿ ಯೋಜನೆಯಲ್ಲಿ ಹುತ್ತೂರು ಕೆರೆ ಸೇರಿದಂತೆ ವಡ್ಡಗೆರೆ ಕೆರೆ, ಯರಿಯೂರು ಕೆರೆ, ಕರಕಲ ಮಾದಳ್ಳಿ ಕೆರೆ, ದಾರಿ ಬೇಗೂರು ಕೆರೆ, ವಡಯ್ಯನಪುರದ ಬಸವನಕಟ್ಟೆ ಕೆರೆ, ಬೊಮ್ಮಲಾಪುರ ಕೆರೆ, ಶಿವಪುರದ ಕಲ್ಕಟ್ಟ ಕೆರೆ, ವಿಜಯಪುರ ಅಮಾನಿ ಕೆರೆಗಳನ್ನು ತುಂಬಿಸುವ ಯೋಜನೆಯಲ್ಲಿ ಈ ವರ್ಷ ಕರಕಲಮಾದಳ್ಳಿ, ಕಲ್ಕಟ್ಟ ಕೆರೆ, ವಿಜಯಪುರ ಕೆರೆಯನ್ನು ತುಂಬಿಸಿಲ್ಲ ಎಂಬುದು ರೈತರ ಆರೋಪ.

ಚಾ.ನಗರ ಮತ್ತು ಗುಂಡ್ಲುಪೇಟೆ ಭಾಗದ ಕೆರೆಗಳನ್ನು ತುಂಬಿಸುವ ವೇಳಾಪಟ್ಟಿಯಲ್ಲಿ ಒಂದು ವರ್ಷ ಚಾ.ನಗರ ಕೆರೆ ತುಂಬಿಸಲು ಮತ್ತೊಂದು ವರ್ಷ ಗುಂಡ್ಲುಪೇಟೆ ಭಾಗದ ಕೆರೆಗಳನ್ನು ತುಂಬಿಸಲು ವೇಳಾಪಟ್ಟಿ ಇದೆ. ವಿಸ್ತೀರ್ಣದಲ್ಲಿ ದೊಡ್ಡದಾದ ಎರಡು ಕೆರೆಗಳನ್ನು ಈ ವರ್ಷ ತುಂಬಿಸಿಲ್ಲ ಎಂದು ರೈತರು ಜಿಲ್ಲಾಡಳಿತ ಮತ್ತು ಸಣ್ಣ ನೀರಾವರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಮಹಾಪಂಚ್‌ ಕಾರ್ಟೂನ್‌

ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನೀರನ್ನು ಬಿಡದೆ ಇರುವುದರಿಂದ ಬೋರ್‌ವೆಲ್‌ಗಳಲ್ಲಿ ನೀರು ಬತ್ತುತ್ತಿದ್ದು, ಶಿವಪುರ, ಹುಂಡೀಮನೆ, ಚೌಡಹಳ್ಳಿ, ಹುಲ್ಲೇಪುರ ಗ್ರಾಮಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆರೆ ವ್ಯಾಪ್ತಿಯ ೨೦ಕ್ಕೂ ಅಧಿಕ ಗ್ರಾಮಗಳ ರೈತರು ಅಂಕಹಳ್ಳಿ ಮತ್ತು ವಡೆಯನಪುರದಲ್ಲಿ ರೈತರ ಸಭೆಯನ್ನು ಕರೆದಿದ್ದು, ಮುಂದಿನ ದಿನಗಳಲ್ಲಿ ಕೆರೆ ತುಂಬಿಸದಿದ್ದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

” ಮೋಟಾರ್ ಸಮಸ್ಯೆಯಿಂದ ನೀರು ಪೂರೈಕೆ ವಿಳಂಬವಾಗಿದೆ. ಇನ್ನು ೧೫-೨೦ ದಿನಗಳಲ್ಲಿ ಮೋಟಾರ್ ರಿಪೇರಿಯಾಗಲಿದ್ದು, ಕೆರೆ ತುಂಬಿಸುವ ಯೋಜನೆಗೆ ಮತ್ತೆ ಚಾಲನೆ ನೀಡಲಾಗುವುದು. ಕಲ್ಕಟ್ಟ ಕೆರೆಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.”

ಮಹೇಶ್, ಇಂಜಿನಿಯರ್,

” ಸಣ್ಣ ನೀರಾವರಿ ಇಲಾಖೆ ಗಾಂಧಿ ಗ್ರಾಮ ಏತ ನೀರಾವರಿ ಯೋಜನೆಯಲ್ಲಿಯೂ ಬಳಚಲ ವಾಡಿ, ಕಮರಹಳ್ಳಿ ಕೆರೆ ಬಿಟ್ಟರೆ ಗರಗನಹಳ್ಳಿ, ಮಳವಳ್ಳಿ ಕೆರೆ ತುಂಬಿಸಲಿಲ್ಲ. ಇತ್ತ ೯ ಕೆರೆಗಳನ್ನು ತುಂಬಿಸುವ ಯೋಜನೆ ಯಲ್ಲಿ ಕಲ್ಕಟ್ಟ ಕೆರೆ, ವಿಜಯಪುರ ಕೆರೆಯನ್ನು ತುಂಬಿಸಿಲ್ಲ. ಇನ್ನೂ ೧೧೦ ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನವಾಗಿ ಅಷ್ಟೂ ಕೆರೆಗಳನ್ನು ತುಂಬಿಸಲು ಸಾಧ್ಯವೇ? ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು.”

ಮಹದೇವಪ್ಪ, ರೈತ ಮುಖಂಡ, ಶಿವಪುರ

” ಕೂಡಲೇ ಜಿಲ್ಲಾಡಳಿತ ಗುಂಡ್ಲುಪೇಟೆ ಭಾಗದ ಕಲ್ಕಟ್ಟೆ ಕೆರೆ, ವಿಜಯಪುರ ಮತ್ತು ಅಮಾನಿಕೆರೆಯನ್ನು ತುಂಬಿಸಲು ತುರ್ತು ಕ್ರಮ ಕೈಗೊಂಡು ಮುಂದೆ ರೈತರಿಗೆ ಆಗಬಹುದಾದ ಕಷ್ಟ ನಷ್ಟವನ್ನು ತಪ್ಪಿಸಬೇಕು. ನಮ್ಮ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಈ ವರ್ಷದ ವೇಳಾಪಟ್ಟಿಯಂತೆ ಎಲ್ಲಾ ಕೆರೆಗಳಿಗೂ ತುಂಬಿಸದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ.”

ನಾಗರ್ಜುನ್, ರೈತ ಮುಖಂಡ

Tags:
error: Content is protected !!