ಚಿರಂಜೀವಿ ಸಿ.ಹುಲ್ಲಹಳ್ಳಿ
ರಾಷ್ಟ್ರಿಯ ಮಹಿಳಾ ಅಂಡರ್-೧೯ ಪಂದ್ಯಾವಳಿಯಲ್ಲಿ ಬೌಲಿಂಗ್‌ನಲ್ಲಿ ಛಾಪು
ಮೈಸೂರು: ದೇಶದ ಮಹಿಳಾ ಕ್ರಿಕೆಟ್ ತಂಡದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಅದಮ್ಯ ಆಸೆ ಆ ಯುವತಿಯ ಕಂಗಳಲ್ಲಿದೆ. ತಮ್ಮಾಸೆಗೆ ಪೂರಕವಾಗಿ ಆಕೆ ಇತ್ತೀಚೆಗೆ ನಗರದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಅಂಡರ್- ೧ ೯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ.
ಬಲಿಷ್ಠ ಆಂಧ್ರಪ್ರದೇಶ ತಂಡವನ್ನು ಫೈನಲ್‌ನಲ್ಲಿ ಕರ್ನಾಟಕ ತಂಡ ಬಗ್ಗು ಬಡಿದು ಚಾಂಪಿಯನ್ ಪಟ್ಟ ಅಲಂಕರಿಸಲು ನೆರವಾದವರು ಮೈಸೂರಿನ ದೀಕ್ಷಾ ಜೆ.ಹೊನ್ನು ಶ್ರೀ. ಫೈನಲ್‌ನಲ್ಲಿ ಆಫ್ ಸ್ಪಿನ್ ಬೌಲಿಂಗ್ ದಾಳಿ ಮಾಡಿ ಆಂಧ್ರಪ್ರದೇಶ ತಂಡದ ಪ್ರಮುಖ ೫ ವಿಕೆಟ್ಗಳನ್ನು ಕಬಳಿಸುವ ಮೂಲಕ ತಂಡದ ಗೆಲುವಿನ ದಾರಿಯನ್ನು ಸುಗಮಗೊಳಿಸಿದರು.
ಟೂರ್ನಿಯಲ್ಲಿ ಬೆಸ್ಟ್ ಬೌಲರ್: ರಾಷ್ಟ್ರೀಯ ಮಹಿಳಾ ಅಂಡರ್-೧೯ ಪಂದ್ಯಾವಳಿಯಲ್ಲಿ ಆಡಿದ ೮ ಪಂದ್ಯಗಳಲ್ಲಿ ದೀಕ್ಷಾ ೧೯ ವಿಕೆಟ್‌ಗಳನ್ನು ಪಡೆದು ಬೆಸ್ಟ್ ಬೌಲರ್ ಅನಿಸಿಕೊಂಡಿದ್ದಾರೆ. ಎರಡು ಬಾರಿ ೫ ವಿಕೆಟ್‌ಗಳನ್ನು ಪಡೆದ ಹೆಗ್ಗಳಿಕೆಗೂ ಅವರು ಭಾಜನರಾಗಿದ್ದಾರೆ. ಲೀಗ್ ಹಂತದಲ್ಲಿ ತ್ರಿಪುರ ತಂಡದ ವಿರುದ್ಧ ೫ ಮತ್ತು ಬಲಿಷ್ಠ ಮುಂಬೈ ವಿರುದ್ಧ ೪ ವಿಕೆಟ್ ಪಡೆದು ಮಿಂಚಿದರೆ, ಸೆಮಿ-ನಲ್‌ನಲ್ಲಿ ಬರೋಡ ವಿರುದ್ಧ ೨, ಹಿಮಾಚಲ ಪ್ರದೇಶ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ವಿರುದ್ಧ ತಲಾ ಒಂದು ವಿಕೆಟ್ ಕಬಳಿಸಿದ್ದರು.
ಬಾಲ್ಯದಿಂದಲೂ ತಮ್ಮ ಮನೆಯ ಮುಂಭಾಗ ಗೆಳೆಯರು ಕ್ರಿಕೆಟ್ ಆಡುವುದನ್ನು ನೋಡಿ ಸೂರ್ತಿ ಪಡೆದ ದೀಕ್ಷಾ ಜೆ. ಹೊನ್ನುಶ್ರೀ, ಕಳೆದ ಐದು ವರ್ಷಗಳಿಂದ ನಿರಂತರ ಪರಿಶ್ರಮ, ಬದ್ಧತೆಯಿಂದ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ. ಸದ್ಯ ನಗರದ ಬಾಲೌಟ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತುದಾರ ರಜತ್ ಅವರ ಮಾರ್ಗದರ್ಶನದಲ್ಲಿ ದೀಕ್ಷಾ ಅಭ್ಯಾಸ ಮಾಡುತ್ತಿದ್ದಾರೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಗಂಟೆಗಟ್ಟಲೆ ನೆಟ್ಸ್‌ನಲ್ಲಿ ತರಬೇತಿ ಪಡೆಯುತ್ತಾರೆ.
ಮಧ್ಯಮ ವರ್ಗದ ಕ್ರಿಕೆಟ್ ಕನಸು: ನಗರದ ಮಹಾಜನ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿರುವ ದೀಕ್ಷಾ, ದೇಶೀಯ ತಂಡದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕನಸು ಹೊಂದಿದ್ದಾರೆ. ದೀಕ್ಷಾ ಅವರು ರಾಘವೇಂದ್ರ ನಗರದ ವಾಸಿಯಾಗಿದ್ದು, ಇವರ ತಂದೆ ಸಿ.ಜಯರಾಮ್ ಗಂಧದ ಕಡ್ಡಿ, ಕರ್ಪೂರಗಳನ್ನು ಅಂಗಡಿಗಳಿಗೆ ಮಾರಾಟ ಮಾಡಿ ಮಗಳ ಕನಸಿಗೆ ನೀರೆರೆಯುತ್ತಿದ್ದಾರೆ. ತಾಯಿ ರೂಪ ಗೃಹಿಣಿಯಾಗಿದ್ದು, ಮಗಳ ಆಟ ಮತ್ತು ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
ಒಂದೇ ವರ್ಷದಲ್ಲಿ ಸ್ಪಿನ್ನರ್ ಆದ ದೀಕ್ಷಾ: ದೀಕ್ಷಾ ಕ್ರಿಕೆಟ್ ತರಬೇತಿ ಆರಂಭಿಸಿದಾಗ ಪೇಸರ್ ಆಗಿದ್ದರು. -ಸ್ಟ್ ಬೌಲಿಂಗ್ ಮಾಡುತ್ತಿದ್ದ ದೀಕ್ಷಾಗೆ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿ ಯೇಷನ್)ನ ರಘುರಾಮ್ ಭಟ್ ಸ್ಪಿನ್ಬೌಲಿಂಗ್ ಮಾಡು ವಂತೆ ಸಲಹೆ ನೀಡಿದರು. ಅದನ್ನು ಗಂಭೀರವಾಗಿ ಸ್ವೀಕರಿಸಿದ ದೀಕ್ಷಾ, ಒಂದೇ ವರ್ಷದಲ್ಲಿ ಆಫ್ ಸ್ಪಿನ್ ಕಲಿತು, ಸ್ಥಿರ ಪ್ರದರ್ಶನ ನೀಡುವಷ್ಟರ ಮಟ್ಟಿಗೆ ತಯಾರಾದರು.
ಪ್ರತಿ ವರ್ಷ ಕರ್ನಾಟಕದಲ್ಲಿ ಮಹಾರಾಣಿ ಕಪ್, ನಿಯಮಿತ ಕ್ಯಾಂಪ್‌ಗಳು ಸೇರಿದಂತೆ ಹಲವು ಅವಕಾಶಗಳು ಸಿಗಲಿವೆ. ಇವುಗಳಲ್ಲಿ ನಾವು ನೀಡುವ ಪ್ರದರ್ಶನದ ಮೂಲಕ ಆಯ್ಕೆಗಾರರನ್ನು ಗಮನ ಸೆಳೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ ದೀಕ್ಷಾ. ಈಗ ದೀಕ್ಷಾ ಅವರು ಜೋನಲ್ ಪಂದ್ಯಗಳು (ಝಡ್‌ಪಿ) ಮತ್ತು ಎನ್‌ಎಸ್ ಪಂದ್ಯಗಳಿಗೆ ಗಮನಹರಿಸಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ರಾಷ್ಟ್ರೀಯ ಮಹಿಳಾ ಅಂಡರ್-೧೯ ತಂಡಕ್ಕೆ ಪ್ರವೇಶ ಪಡೆಯುವ ಗುರಿ ಹೊಂದಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ನೇತನ್ ಲಯನ್ ಮತ್ತು ಮಹಿಳಾ ಕ್ರಿಕೆಟರ್ ಅಶ್ಲೀ ಗಾರ್ಡನರ್ ನನಗೆ ಸೂರ್ತಿ ಎಂಬುದಾಗಿ ದೀಕ್ಷಾ ಖುಷಿಯಿಂದ ಹೇಳುತ್ತಾರೆ.
” ಪೇಸ್‌ನಿಂದ ಸ್ಪಿನ್‌ಗೆ ಬರುವುದು ತುಂಬಾ ಕಷ್ಟ. ಸ್ಪಾಟ್ ಬೌಲಿಂಗ್, ಡ್ರಿಲ್ಸ್, ನಿಯಮಿತ ಅಭ್ಯಾಸ ಇವೆಲ್ಲವೂ ನೆರವಾದವು. ನನ್ನ ಕೋಚ್ ನಿರಂತರವಾಗಿ ಬೆಂಬಲಿಸಿದರು.”
-ದೀಕ್ಷಾ, ಮಹಿಳಾ ಅಂಡರ್ – ೧೯ ಕ್ರಿಕೆಟ್‌ಆಟಗಾರರು
” ಬಾಲೌಟ್ ಕ್ರಿಕೆಟ್ ಅಕಾಡೆಮಿಯ ಪ್ರಾರಂಭದ ದಿನಗಳಿಂದಲೂ ದೀಕ್ಷಾ ಇಲ್ಲಿ ತರಬೇತಿ ಪಡೆ ಯುತ್ತಿದ್ದಾರೆ. ಈಕೆ ನಿತ್ಯ ತರಬೇತಿಗೆ ಸೈಕಲ್‌ನಲ್ಲಿಯೇ ಬರುತ್ತಾರೆ. ಪ್ರಸ್ತುತ ಅಂಡರ್-೧೯ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.”
– ರಜತ್, ತರಬೇತುದಾರ





