ವಿಲಕ್ಷಣವಾಗಿ ಹುಟ್ಟಿದ ಕಂದಮ್ಮನಿಗೆ ಚೆಂದದ ರೂಪ
ಸಾಲೋಮನ್
ವೈದ್ಯಕೀಯ ಲೋಕದ ಅಪರೂಪದ ಅಚ್ಚರಿ
ಚೆಲುವಾಂಬ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಶುಶ್ರೂಷೆ ಗಮನಾರ್ಹ
ಮೈಸೂರು: ಜನಿಸುತ್ತಲೇ ವೈದ್ಯಕೀಯ ಲೋಕದಲ್ಲಿ ಅಚ್ಚರಿಯುಂಟು ಮಾಡಿದ್ದ ಮಗು ವಾರದಲ್ಲಿ ಚೇತರಿಕೆ ಕಂಡು ವೈದ್ಯಕೀಯ ಲೋಕದಲ್ಲಿ ಮತ್ತೊಮ್ಮೆ ಅಚ್ಚರಿ ಮೂಡಿಸಿದೆ. ಈ ಪ್ರಕರಣ ನಗರದ ಚೆಲುವಾಂಬ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ನಡೆದಿದೆ. ಇದಕ್ಕೆಲ್ಲ ಅಲ್ಲಿನ ವೈದ್ಯರ ಚಿಕಿತ್ಸೆ ಹಾಗೂ ದಾದಿಯರ ಶುಶ್ರೂಷೆಯೇ ಕಾರಣ ಎನ್ನುವುದು ಸತ್ಯದ ಸಂಗತಿ.
ನಗರದ ಚೆಲುವಾಂಬ ಆಸ್ಪತ್ರೆಯ ಮಕ್ಕಳ ವಿಭಾಗದ ನವಜಾತ ಶಿಶುಗಳ ತೀವ್ರ ನಿಗಾ ಘಟಕದ ವೈದ್ಯರಾದ ಡಾ.ಶಾಲಿನಿ, ಡಾ.ಹಂಸ ಹಾಗೂ ಶುಶ್ರೂಷಕಿ ಉಷಾ ಮತ್ತು ತಂಡದವರು ಹಗಲೂ ರಾತ್ರಿ ಪ್ರತಿ ಕ್ಷಣವೂ ಕಣ್ಣಲ್ಲಿ ಕಣ್ಣಿಟ್ಟು ಹೆತ್ತ ಮಗುವಿನಂತೆ ನೋಡಿಕೊಂಡಿದ್ದ ರಿಂದ ಕೆಲವೇ ದಿನಗಳಲ್ಲಿ ವಿಕಾರ ರೂಪದಲ್ಲಿ ಹುಟ್ಟಿದ್ದ ಗಂಡು ಮಗು ಚೇತರಿಕೆ ಕಂಡು ಸುಂದರ ರೂಪವನ್ನು ಪಡೆದುಕೊಂಡಿದೆ.
ಹುಟ್ಟುತ್ತಲೇ ತಲೆ, ಕಣ್ಣು, ಮೂಗು ಊದಿಕೊಂಡು. ಕಂದು ಬಣ್ಣಕ್ಕೆ ತಿರುಗಿದ್ದ ನೋಡಲು ಅಸ್ವಾಭಾವಿಕ ವಾಗಿಯೇ ಕಾಣುತ್ತಿದ್ದ ಗಂಡು ಶಿಶು ಈಗ ಸುಂದರವಾಗಿ, ಮುದ್ದು ಮುzಗಿ ಕಂಗೊಳಿಸುವುದಕ್ಕೆ ಈ ಎಲ್ಲ ತಾಯಂದಿರ ಆರೈಕೆಯೇ ಕಾರಣವಾಗಿದೆ.
ಏನಾಗಿತ್ತು ಶಿಶುವಿಗೆ? ಸಾಮಾನ್ಯವಾಗಿ ಶಿಶು ಜನಿಸು ವಾಗ ನೆತ್ತಿ ಮುಂದಿಟ್ಟುಕೊಂಡು ಬರುವುದು ಸಾಮಾನ್ಯ. ಆದರೆ, ನಂಜನಗೂಡು ತಾಲ್ಲೂಕಿನ ಹುರ ಗ್ರಾಮದಲ್ಲಿ ಜನಿಸಿದ ಈ ಮಗು ಮುಖ ಮುಂದೆ ಇಟ್ಟುಕೊಂಡು ಬಂದಿದೆ. ಈ ಕಾರಣದಿಂದ ಹೆರಿಗೆಯ ಸಮಯವೂ ಹೆಚ್ಚಾಗಿದೆ. ಮಗುವಿನ ಮುಖದ ಭಾಗ ಮಾತ್ರ ಹೊರ ಬಂದು ಇಡೀ ಶರೀರ ಗರ್ಭದ ಇದ್ದುದರಿಂದ ತಲೆ ಭಾಗದಲ್ಲಿ ಒತ್ತಡ ಹೆಚ್ಚಾದ ಕಾರಣ ನವಜಾತ ಶಿಶುವಿನ ತಲೆ, ಕಣ್ಣು, ಮೂಗು ಹಾಗೂ ತಲೆಯ ಭಾಗದಲ್ಲಿ ಊತ ಕಂಡುಬಂದಿದೆ ಎಂದು ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಆರ್.ಸವಿತಾ ‘ಆಂದೋಲನ’ ದಿನಪತ್ರಿಕೆಗೆ ತಿಳಿಸಿದರು.
ಸಾಮಾನ್ಯವಾಗಿ ಹೆರಿಗೆ ಆಗಿದ್ದೇ ತಡ ಶಿಶು ಅಳುವುದನ್ನು ಕೇಳುತ್ತೇವೆ. ಆದರೆ, ಈ ಶಿಶು ಅಳಲಿಲ್ಲ, ಶಿಶುವಿಗೆ ಉಸಿ ರಾಟದ ತೊಂದರೆಯೂ ಕಂಡು ಬಂದಿದ್ದರಿಂದ ಅದಕ್ಕೆ ಆಕ್ಸಿಜನ್ ಹಾಕಿ ಮೈಸೂರಿಗೆ ಕಳುಹಿಸಿದ್ದರು. ನಮ್ಮ ಆಸ್ಪತ್ರೆಯ ವೈದ್ಯರಾದ ಡಾ.ಶಾಲಿನಿ, ಡಾ ಹಂಸ ತಂಡದವರು ಮಗುವಿನ ಬಗ್ಗೆ ಬಹಳ ಎಚ್ಚರಿಕೆ ವಹಿಸಿ ನೋಡಿಕೊಳ್ಳುತ್ತಿದ್ದಾರೆ ಎಂದರು.
ಚಿಕಿತ್ಸೆ ಏನು?: ಆಸ್ಪತ್ರೆಗೆ ಕರೆತಂದ ಕೂಡಲೇ ಶಿಶುವನ್ನು ಐಸಿಯು ಕೇರ್‌ನಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ. ಶಿಶುವಿಗೆ ಇನ್-ಕ್ಷನ್ ಆಗಿದೆಯೋ ಇಲ್ಲವೋ, ಎನ್ನುವುದನ್ನು ತಿಳಿದುಕೊಳ್ಳಲು ‘ಬ್ಲಡ್ ಕಲ್ಚರ್’ ಮಾಡಿಸಲಾಗಿದೆ. ಅದರ ವರದಿ ಇನ್ನೂ ಬಂದಿಲ್ಲ. ಅಲ್ಲಿಯವರೆಗೂ ಆಂಟಿ ಬಯಾಟಿಕ್ ನೀಡಲಾಗುತ್ತಿದೆ. ಮಗುವಿಗೆ ತಾಯಿಯ ಹಾಲನ್ನು ಕೊಡಲಾಗುತ್ತಿದೆ. ಶಿಶು ಚಿಕಿತ್ಸೆಗೆ ಸ್ಪಂದಿಸುತ್ತಿರುವುದರಿಂದ ದಿನೇ ದಿನೇ ಚೇತರಿಕೆ ಕಾಣುತ್ತಿದೆ ಎಂದು ಹೇಳಿದರು.
” ಈ ರೀತಿಯ ಹೆರಿಗೆ ಆಗುತ್ತಿರುತ್ತದೆ. ಐನೂರರಲ್ಲಿ ಒಂದು ಶಿಶು ಹೀಗೆ ಹುಟ್ಟುತ್ತದೆ. ನಮ್ಮಲ್ಲಿ ಅದಕ್ಕೆ ಅಗತ್ಯ ಚಿಕಿತ್ಸೆ ನೀಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಶಿಶು ಸಂಪೂರ್ಣ ಚೇತರಿಸಿಕೊಳ್ಳುತ್ತದೆಂಬ ನಿರೀಕ್ಷೆ ಇದೆ. ಶಿಶು ಆರೋಗ್ಯ ಸುಧಾರಣೆಗೆ ನಮ್ಮಿಂದ ಏನೇನು ಪ್ರಯತ್ನಗಳನ್ನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುತ್ತಿದ್ದೇವೆ.”
-ಡಾ.ಎಸ್.ಆರ್.ಶಾಲಿನಿ, ಸಹಾಯಕ ಪ್ರಾಧ್ಯಾಪಕರು, ಚೆಲುವಾಂಬ ಆಸ್ಪತ್ರೆ
” ಶಿಶು ಜನನ ಅಸ್ವಾಭಾವಿಕವಾಗಿದೆ. ಹೆರಿಗೆ ವೇಳೆ ಮುಖ ಮುಂದಿಟ್ಟು ಬಂದ ಕಾರಣ ತಲೆಯ ಭಾಗದಲ್ಲಿ ಒತ್ತಡ ಹೆಚ್ಚಾಗಿದೆ. ಇದೇ ಶಿಶುವಿನ ರೂಪ ವಿಕಾರವಾಗಿ ಬದಲಾಗಲು ಕಾರಣ. ಅಗತ್ಯ ಚಿಕಿತ್ಸೆ ನೀಡಿದ್ದೇವೆ. ಗಾಬರಿ ಆಗುವಂಥದ್ದು ಏನಿಲ್ಲ. ಬ್ಲಡ್ ಕಲ್ಚರ್ ವರದಿ ನೋಡಿ, ಹೆಚ್ಚಿನ ಚಿಕಿತ್ಸೆ ನೀಡುತ್ತೇವೆ. ಶಿಶು ಕೂಡ ಸ್ಪಂದಿಸುತ್ತಿರುವುದು ಸಂತಸ ತಂದಿದೆ.”
-ಡಾ ಹಂಸ, ಸಹಾಯಕ ಪ್ರಾಧ್ಯಾಪಕರು, ಚೆಲುವಾಂಬ ಆಸ್ಪತ್ರೆ





