Mysore
24
overcast clouds

Social Media

ಶನಿವಾರ, 05 ಸೆಪ್ಟೆಂಬರ್ 2026
Light
Dark

ಭಲೇ ಭಲೇ ಸರ್ಕಾರಿ ಶಾಲೆ

ಮೈಸೂರು: ಶಿಕ್ಷಕರ ಒಗ್ಗಟ್ಟಿನ ಬಲ ಹಾಗೂ ಸಕಾರಾತ್ಮಕ ಚಿಂತನೆಗಳಿಂದ, ಖಾಸಗಿ ಶಾಲೆಗಳಿಗೂ ಸಡ್ಡು ಹೊಡೆದಿರುವ ನಗರದ ಸರ್ಕಾರಿ ಶಾಲೆಯೊಂದು ಹೆಮ್ಮೆಯಿಂದ ದಿಟ್ಟ ಹೆಜ್ಜೆ ಇಟ್ಟಿದೆ.

ಅದು ನಗರದ ಹೆಬ್ಬಾಳು (ಕುಂಬಾರಕೊಪ್ಪಲು ) ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ೧೯೬೦ರಲ್ಲಿ ೩೫ ಗುಂಟೆ ಜಾಗದಲ್ಲಿ ಶಾಲೆ ಶುರುವಾಗಿದೆ. ೬೬ ವರ್ಷಗಳು ಕಳೆದಿದ್ದರೂ, ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳಲ್ಲದೆ, ಹೊರ ರಾಜ್ಯಗಳ ಮಕ್ಕಳು ಕೂಡ ಈ ಶಾಲೆಯಲ್ಲಿ ಓದುತ್ತಿರುವುದು ವಿಶೇಷವಾಗಿದೆ. ಈ ಶಾಲೆಯಲ್ಲಿ ಓದಿದ ಮಕ್ಕಳು ಇಂಜಿನಿಯರ್‌ಗಳು, ಉದ್ಯಮಿಗಳು, ಸಮಾಜ ಸೇವಕರು, ವೈದ್ಯರು, ರಾಜಕಾರಣಿಗಳು ಆಗಿದ್ದಾರೆ. ಮನೆ ಮನೆ ಮಾದೇಗೌಡ ಎಂದು ಹೆಸರಾಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು ಸೇರಿದಂತೆ ಅನೇಕ ಗಣ್ಯರು ಈ ಶಾಲೆಯಲ್ಲಿ ಓದಿದ್ದಾರೆ. ಹಲವು ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಖಾಸಗಿ ಶಾಲೆಗಳ ಅಬ್ಬರಕ್ಕೆ ಅಂಜದ ಶಿಕ್ಷಕರು!: ಕುಂಬಾರಕೊಪ್ಪಲೂ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ತಲೆ ಎತ್ತಿದ್ದರೂ, ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿತವಾಗಿಲ್ಲ. ದಾಖಲಾತಿ ಕುಸಿಯಬಾರದು ಎಂಬ ಆಲೋಚನೆಯಿಂದ ಶಿಕ್ಷಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಹೆಬ್ಬಾಳು, ಬಿ.ಎಂ.ಶ್ರೀನಗರ, ಮೇಟಗಳ್ಳಿ , ಶ್ಯಾದನಹಳ್ಳಿ, ಮಂಜೇಗೌಡನಕೊಪ್ಪಲು ಸೇರಿದಂತೆ ಅಕ್ಕಪಕ್ಕದ ಬಡಾವಣೆ ನಿವಾಸಿಗಳು, ತಮ್ಮ ಮಕ್ಕಳನ್ನು ಆಟೋ ಮಾಡಿ ಈ ಶಾಲೆಗೆ ಕಳುಹಿಸುತ್ತಿದ್ದಾರೆ. ಶಾಲೆಯಿಂದ ಹೊರಗುಳಿಯುವ, ಶಾಲೆಗೆ ಆಗಾಗ ಗೈರು ಹಾಜರಾಗುವ ವಿದ್ಯಾರ್ಥಿಗಳ ಮನೆಗೆ, ಸ್ವತಃ ಶಿಕ್ಷಕರೇ ತೆರಳಿ ಅವರ ಸಮಸ್ಯೆಯನ್ನು ಅರಿತು, ಪೋಷಕರ ಮನವೊಲಿಸಿ, ಮಕ್ಕಳನ್ನು ಶಾಲೆಗೆ ಪುನಃ ಕರೆತರುವ ಕೆಲಸವನ್ನು ಶಿಕ್ಷಕರು ನಿಸ್ಪೃಹತೆಯಿಂದ ಮಾಡುತ್ತಿದ್ದಾರೆ. ೧೯೬೦ರಲ್ಲಿ ಆರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ೧ರಿಂದ ೭ನೇ ತರಗತಿವರೆಗೆ ಇತ್ತು. ೨೦೧೭ರಲ್ಲಿ ರಾಜ್ಯ ಸರ್ಕಾರದಿಂದ ಉನ್ನತೀಕರಿಸಿದ ಶಾಲೆಯೆಂದು ಮಾರ್ಪಾಟು ಮಾಡಿದ ನಂತರ ೮ನೇ ತರಗತಿವರಗೆ ವಿಸ್ತರಣೆ ಮಾಡಲಾಯಿತು.

ಹೊರ ರಾಜ್ಯಗಳ ವಿದ್ಯಾರ್ಥಿಗಳು!: ಕುಂಬಾರಕೊಪ್ಪಲಿಗೆ ಹತ್ತಿರ ಇರುವ ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೇಟಗಳ್ಳಿ ಕೈಗಾರಿಕಾ ಪ್ರದೇಶ, ಬೆಳಗೊಳ ಕೈಗಾರಿಕಾ ಪ್ರದೇಶ ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಹುಡುಕಿಕೊಂಡು ಬರುವ ನಾನಾ ಜಿಲ್ಲೆ ಹಾಗೂ ಹೊರ ರಾಜ್ಯಗಳ ಪೋಷಕರು, ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಶಿಕ್ಷಕರು ಕೂಡ ಮಕ್ಕಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಇಲ್ಲಿಗೆ ದಾಖಲಾತಿ ಮಾಡುತ್ತಾರೆ.

ಹಾಸನ, ಚಾಮರಾಜನಗರ, ಬೆಳಗಾವಿ, ಗದಗ, ಹಾವೇರಿ, ಮಂಡ್ಯ ಜಿಲ್ಲೆಗಳಲ್ಲದೆ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಬಿಹಾರ ರಾಜ್ಯಗಳ ಮಕ್ಕಳೂ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೊರರಾಜ್ಯದ ಮಕ್ಕಳಿಗೂ ಕೂಡ ಕನ್ನಡ ಭಾಷೆ ಕಲಿಸಲು ಶಿಕ್ಷಕರು ಉತ್ಸುಕರಾಗಿದ್ದಾರೆ.

೨೦೨೩-೨೪ನೇ ಸಾಲಿನಲ್ಲಿ ಪಿ.ಎಂ.ಶ್ರೀ. (ಪ್ರಧಾನ ಮಂತ್ರಿ ಸ್ಕೂಲ್ ಫರ್ ರೈಸಿಂಗ್ ಇಂಡಿಯಾ) ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮಾರ್ಪಾಟು ಮಾಡಲಾಯಿತು. ಅಲ್ಲಿಂದ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ ಸೇರ್ಪಡೆಗೊಂಡಿದೆ.

ಕ್ರೀಡಾ ಮೈದಾನ ಇಲ್ಲ: ಶಾಲೆಯಲ್ಲಿ ಕ್ರೀಡೆಗೆ ಸ್ಥಳಾವಕಾಶ ಇಲ್ಲದೇ ಇರುವುದರಿಂದ, ಸಮೀಪದಲ್ಲಿ ಇರುವ ಕೆಂಪೇಗೌಡ ಕ್ರೀಡಾಂಗಣ, ಪಾರ್ಕ್‌ಗಳಲ್ಲಿ ಮಕ್ಕಳಿಗೆ ಆಟೋಟ ನಡೆಯುತ್ತದೆ.

” ನಮ್ಮ ಶಾಲೆಗೆ ಸ್ಥಳೀಯ ಮಕ್ಕಳು ಮಾತ್ರವೇ ಅಲ್ಲದೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಪೋಷಕರು ಹುಡುಕಿಕೊಂಡು ದಾಖಲಾತಿ ಮಾಡುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಎಲ್ಲ ಶಿಕ್ಷಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ.”

-ವೈ.ಇ.ಲೋಹಿತೇಶ, ಮುಖ್ಯ ಶಿಕ್ಷಕ 

” ವಿದ್ಯಾರ್ಥಿಗಳು ಡ್ರಾಪ್‌ಔಟ್ ಆದರೆ, ಅವರ ಮನೆಗೆ ಹೋಗಿ ಪೋಷಕರ ಮನವೊಲಿಸಿ ವಿದ್ಯಾರ್ಥಿ ಗಳು ಶಿಕ್ಷಣವನ್ನು ಮುಂದುವರಿಸುವಂತೆ ಮಾಡುತ್ತೇವೆ. ಈ ಶಾಲೆಯ ಎಲ್ಲ ಶಿಕ್ಷಕರೂ ಸಕಾರಾತ್ಮಕ ಚಿಂತನೆ ಹಾಗೂ ಒಗ್ಗಟ್ಟಿನ ಮನೋಭಾವನೆಯಿಂದ ಕೆಲಸ ಮಾಡುತ್ತಿದ್ದೇವೆ.”

-ಗಿರೀಶ್, ಶಿಕ್ಷಕ

” ಈ ಶಾಲೆಯಲ್ಲಿ ೨೦ ಮಂದಿ ಖಾಯಂ ಶಿಕ್ಷಕರು, ೪ ಅತಿಥಿ ಶಿಕ್ಷಕರು, ಎಲ್‌ಕೆಜಿ-ಯುಕೆಜಿಗೆ ಇಬ್ಬರು ಶಿಕ್ಷಕರು, ಆಯಾ ಇದ್ದಾರೆ. ಎಲ್‌ಕೆಜಿಯಿಂದ ಹಿಡಿದು ೮ನೇ ತರಗತಿವರೆಗೆ ೩೫೫ ಗಂಡು, ೩೬೪ ಹೆಣ್ಣು ಸೇರಿದಂತೆ ಒಟ್ಟು ೭೧೯ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.”

” ೨೦೧೮-೨೦೧೯, ೨೦೨೫-೨೦೨೬ರಲ್ಲಿ ರಾಜ್ಯಮಟ್ಟದ ಎಸ್‌ಡಿಎಂಸಿ ಪ್ರಶಸ್ತಿ, ೨೦೨೫ರಲ್ಲಿ ಈ ಶಾಲೆಯ ಮುಖ್ಯ ಶಿಕ್ಷಕ ವೈ.ಇ.ಲೋಹಿತೇಶ್ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ ೨೦೧೨, ೨೦೧೯ರಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಬ್ಬರು ಶಿಕ್ಷಕರು ಪಡೆದಿದ್ದಾರೆ.”

 

 

 

 

 

Tags:
error: Content is protected !!