Mysore
26
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ದೃಷ್ಠಿ ಕದ್ದೊಯ್ಯುವ ಕಳ್ಳನ ಬಗ್ಗೆ ಇರಲಿ ಎಚ್ಚರ

ಗ್ಲಾಕೋಮಾ ಬಗ್ಗೆ ಅಗತ್ಯ ಮುನ್ನೆಚ್ಚರಿಕೆಗೆ ಜಿಲ್ಲಾ ಆರೋಗ್ಯ ಇಲಾಖೆ ಮನವಿ

ನವೀನ್ ಡಿಸೋಜ
ಮಡಿಕೇರಿ: ಸದ್ದಿಲ್ಲದೇ ದೃಷ್ಟಿ ಕದ್ದೊಯ್ಯುವ ಕಳ್ಳ ಎಂದೇ ಕರೆಯಲಾಗುವ ಗ್ಲಾಕೋಮಾ ಬಗ್ಗೆ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದೆ.

ಗ್ಲಾಕೋಮಾ ಕಣ್ಣಿಗೆ ಸಂಬಂಧಪಟ್ಟ ಆತಂಕಕಾರಿ ಕಾಯಿಲೆಯಾಗಿದ್ದು, ಇದರಿಂದ ಕಣ್ಣಿನ ದೃಷ್ಟಿ ಹೋಗುತ್ತದೆ. ಸಾಧಾರಣವಾಗಿ ೪೦ ವರ್ಷಗಳಿಗಿಂತಲೂ ಹೆಚ್ಚಿನ ವಯಸ್ಸಿನವರಿಗೆ, ಅದರಲ್ಲೂ ಅನುವಂಶಿಕವಾಗಿ ಗ್ಲಾಕೋಮಾ ರೋಗವು ಕಂಡು ಬರುತ್ತದೆ. ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಟಿ ಕದಿಯುವ ಕಾಯಿಲೆ ಗ್ಲಾಕೋಮಾ ಬಗ್ಗೆ ಎಚ್ಚರ ಅತ್ಯವಶ್ಯವಾಗಿದ್ದು, ೪೦ ವಯಸ್ಸಿನ ನಂತರ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಕಣ್ಣನ್ನು ಪರೀಕ್ಷಿಸಿಕೊಳ್ಳಬೇಕಾಗುತ್ತದೆ.

ಬೆಳಕಿನ ಸುತ್ತ ಕಾಮನಬಿಲ್ಲಿನಂತಹ ವೃತ್ತಗಳನ್ನು ಕಾಣುವುದು. ತಲೆನೋವು ಹಾಗೂ ಕಣ್ಣು ನೋವು, ಅಸ್ಪಷ್ಟ ದೃಷ್ಟಿ ಹಾಗೂ ನೋಟದ ವಲಯ ಕುಗ್ಗುತ್ತಾ ಹೋಗುವುದು, ಪದೇ ಪದೇ ಕನ್ನಡಕ ಬದಲಾಯಿಸಬೇಕಾಗಿ ಬರುವುದು ಮುಂತಾದ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಮ್ಮ ಸಮೀಪದ ನೇತ್ರ ತಜ್ಞರನ್ನು ಕೂಡಲೇ ಸಂಪರ್ಕಸಿ, ಗ್ಲಾಕೋಮಾ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರೀಕ್ಷಿಸಿ ದೃಢಪಡಿಸಿಕೊಳ್ಳ ಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಗ್ಲಾಕೋಮಾವನ್ನು ಕಣ್ಣಿನ ಒತ್ತಡ ಮಾಪನ ಪರೀಕ್ಷೆ, ನೋಟದ ವಲಯ ಪರೀಕ್ಷೆ, ಕಣ್ಣಿನ ನರದ ಪರೀಕ್ಷೆಯಿಂದ ದೃಢಪಡಿಸಬಹುದಾಗಿದೆ. ಗ್ಲಾಕೋಮಾ ಕಾಯಿಲೆಗೆ ಪ್ರಥಮ ಹಂತದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಸಂಪೂರ್ಣ ಕುರುಡುತನ ಉಂಟಾಗಲಿದೆ. ಗ್ಲಾಕೋಮಾವನ್ನು ತಡೆಗಟ್ಟಲು ಸಾಧ್ಯವಿಲ್ಲ, ಆದರೆ ಪ್ರಾರಂಭದಲ್ಲಿ ಪತ್ತೆ ಹಚ್ಚಿ ಸೂಕ್ತವಾದ ಚಿಕಿತ್ಸೆಯನ್ನು ನಿಯಮಿತವಾಗಿ ಪಡೆಯುವುದರಿಂದ ಕಣ್ಣು ಕುರುಡುತನವನ್ನು ತಪ್ಪಿಸಬಹುದಾಗಿದೆ. ಕಣ್ಣಿಗೆ ಜೀವನ ಪರ್ಯಂತ ಔಷಽ ಹಾಕುವುದು ಮತ್ತು ಶಸ್ತ್ರಚಿಕಿತ್ಸೆ ಮೂಲಕ ಸರಿ ಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಸಾರ್ವಜನಿಕರಿಗೆ ಮಾಹಿತಿ ನೀಡಿವೆ.

ಗ್ಲಾಕೋಮಾ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇದೇ ಸಮಯದಲ್ಲಿ ಬರಬೇಕೆನ್ನುವ ನಿಯಮವೂ ಇಲ್ಲ. ಆದರೆ, ದೂಳು ಸೇರಿದಂತೆ ಮತ್ತಿತರ ಕಾರಣಗಳಿಂದ ಕಣ್ಣಿಗೆ ಹಾನಿಯುಂಟಾದ ಸಂದರ್ಭದಲ್ಲಿ ನೇತ್ರ ತಜ್ಞರ ಬಳಿ ತಪಾಸಣೆ ಮಾಡಿಸಿ, ಔಷಧ ಪಡೆಯಬೇಕಾಗುತ್ತದೆ. ನಿರ್ಲಕ್ಷ ಮಾಡಿದಲ್ಲಿ ಗ್ಲಾಕೋಮಾ ಆಗುವ ಸಾಧ್ಯತೆ ಇರುತ್ತದೆ.

ಗ್ಲಾಕೋಮಾ ನಿರಂತರವಾಗಿ ಇರುವ ಕಾಯಿಲೆ. ಈ ಸಮಯದಲ್ಲೇ ಆಗಬೇಕೆನ್ನುವ ನಿಯಮವಿಲ್ಲ. ಹಲವು ದಿನಗಳಿಂದ ಕಣ್ಣಿನ ತೊಂದರೆಯಿಂದ ಬಳಲುತ್ತಿರುವವರು ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು, ಗ್ಲಾಕೋಮಾ ಬಂದಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಗ್ಲಾಕೋಮಾ ಬಗ್ಗೆ ಜಾಗೃತರಾಗಬೇಕಾಗಿದೆ. -ಡಾ. ಸತೀಶ್‌ಕುಮಾರ್, ಡಿಎಚ್‌ಒ,

 

ಕೊಡಗು ಸಹಾಯವಾಣಿ ೧೦೪ಕ್ಕೆ ಕರೆ ಮಾಡಿ

ಗ್ಲಾಕೋಮಾ ಕಣ್ಣಿನ ಒಂದು ಗಂಭೀರವಾದ ಕಾಯಿಲೆ. ಇದರಿಂದ ಕಣ್ಣಿನ ಒಳಗಿನ ಒತ್ತಡ ಹೆಚ್ಚಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಕಾಯಿಲೆಯ ಇರುವಿಕೆ ಗೊತ್ತಾಗುವ ವೇಳೆಗೆ ಕಣ್ಣಿನ ನರವಾದ ಆಪ್ಟಿಕ್ ನರಕ್ಕೆ ಬಹಳಷ್ಟು ತೊಂದರೆ ಉಂಟಾಗಿರುತ್ತದೆ. ಅಲ್ಲದೆ, ಕಾಯಿಲೆಯಿಂದ ಹಾಳಾದ ನರವನ್ನು ಮತ್ತೆ ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಈ ಕಾಯಿಲೆಯಿಂದ ನಾಶವಾದ ದೃಷ್ಟಿ ಮತ್ತೆ ಬರುವ ಸಾಧ್ಯತೆ ಕಡಿಮೆ.

 

Tags: