Mysore
21
broken clouds

Social Media

ಬುಧವಾರ, 16 ಸೆಪ್ಟೆಂಬರ್ 2026
Light
Dark

ಇ-ಕೆವೈಸಿಗೆ ಮುಗಿಬಿದ್ದ ಫಲಾನುಭವಿಗಳು 

ಕೆ.ಬಿ.ರಮೇಶನಾಯಕ

ರಾಜ್ಯ ಸರ್ಕಾರದ ಗಡುವಿನೊಳಗೆ ಪ್ರಕ್ರಿಯೆ ಮುಗಿಸಲು ಇಲಾಖೆ ಕಸರತ್ತು. 

ಮೈಸೂರು: ನಕಲಿ ಫಲಾನುಭವಿಗಳನ್ನು ಕೈಬಿಟ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥಗಳು ಅರ್ಹರಿಗೆ ತಲುಪುವಂತೆ ಮಾಡಲು ರಾಜ್ಯಸರ್ಕಾರ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಸೆ.೩೦ರ ಗಡುವು ನೀಡಿದ್ದು, ಫಲಾನುಭವಿಗಳು ತಮ್ಮ ಪಡಿತರಚೀಟಿ ರದ್ದಾಗುವುದನ್ನು ತಪ್ಪಿಸಿಕೊಳ್ಳಲು ಕೆವೈಸಿಗಾಗಿ ಮುಗಿಬಿದ್ದಿದ್ದಾರೆ. ನಗರ ಪ್ರದೇಶದ ವಿವಿಧೆಡೆ ಸರ್ವರ್ ತೊಂದರೆ ಹಾಗೂ ಬಯೋಮೆಟ್ರಿಕ್ ದೋಷಗಳು ಕಡಿಮೆಯಾಗಿದ್ದರೂ ಗ್ರಾಮಾಂತರ ಪ್ರದೇಶದಲ್ಲಿ ಕಾಡುತ್ತಿರುವ ಸರ್ವರ್ ಸಮಸ್ಯೆಯಿಂದಾಗಿ ಫಲಾನುಭವಿಗಳು ಗಂಟೆಗಟ್ಟಲೆ ಕಾದು ಕುಳಿತುಕೊಳ್ಳಬೇಕಾಗಿದೆ.

ಕೆವೈಸಿ ಮಾಡಿಸದಿದ್ದರೂ ಬಿಪಿಎಲ್ ಪಡಿತರಚೀಟಿ ರದ್ದು ಮಾಡುವುದಿಲ್ಲ ಎನ್ನುವ ಅಭಯವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರೇ ಹೇಳಿದ್ದರೂ ಫಲಾನುಭವಿಗಳು ಕೊಂಚ ಆತಂಕದಿಂದ ನ್ಯಾಯಬೆಲೆ ಅಂಗಡಿಗೆ ದಾಂಗುಡಿ ಇಟ್ಟು ಇ-ಕೆವೈಸಿ ಮಾಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಫಲಾನುಭವಿಗಳು ತಮ್ಮ ಮೊಬೈಲ್‌ನಲ್ಲೇ ಆಪ್ ಡೌನ್‌ಲೋಡ್ ಮಾಡಿಕೊಂಡು ಇ-ಕೆವೈಸಿ ಮಾಡಿಕೊಳ್ಳುವ ಅವಕಾಶ ಇದ್ದರೂ ನ್ಯಾಯಬೆಲೆ ಅಂಗಡಿಯತ್ತ ದಾಂಗುಡಿ ಇಡುತ್ತಿರುವುದರಿಂದ ಅನೇಕ ಕಡೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಪ್ರಸ್ತುತ ದಿನದಲ್ಲಿ ಕಾರು, ಬೈಕ್, ಜಮೀನುಗಳನ್ನು ಹೊಂದಿದ್ದರೂ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆಯುತ್ತಾರೆ. ಅದರಲ್ಲೂ ತಮ್ಮ ಮಕ್ಕಳು ಸರ್ಕಾರಿ ನೌಕರರಾಗಿದ್ದಾರೆ ಎಂದು ತಿಳಿದಿದ್ದರೂ ಅದನ್ನು ಮರೆಮಾಚಿ ಹಳ್ಳಿಗಳಲ್ಲಿ ಬಿಪಿಎಲ್ ಪಡಿತರಚೀಟಿ ಪಡೆದುಕೊಂಡಿದ್ದಾರೆ. ಪಡಿತರ ಚೀಟಿ ಬರೀ ಸರ್ಕಾರ ನೀಡುವ ಪಡಿತರ ಪದಾರ್ಥಗಳಿಗೆ ಮಾತ್ರ ಸೀಮಿತವಾಗಿರದೆ ಸರ್ಕಾರದ ಅನೇಕ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಹೊಂದಿರುವುದನ್ನು ಮಾನದಂಡವಾಗಿ ಮಾಡಿರುವ ಕಾರಣ ಈಗ ಎಲ್ಲಿಲ್ಲದ ಬೇಡಿಕೆಯಾಗಿದೆ. ಹಾಗಾಗಿ, ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ ೧೦ ಕೆಜಿ ಅಕ್ಕಿ ಕೊಡುವುದನ್ನು ಶುರು ಮಾಡಿದ ಮೇಲೆ ಬಿಪಿಎಲ್ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಾಗಿದ್ದವು.

ಈಗ ಸರ್ಕಾರ ಅನರ್ಹರನ್ನು ಕೈಬಿಟ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸು ವಂತೆ ಹೇಳಿರುವುದಲ್ಲದೆ ಸೆ.೩೦ಕ್ಕೆ ಗಡುವು ನೀಡಿರುವುದರಿಂದ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳು, ಸೇವಾ ಕೇಂದ್ರಗಳಲ್ಲಿ ಕಾದುನಿಂತು ಮಾಡಿಸುತ್ತಿರುವುದು ಕಂಡುಬಂದಿದೆ.

ಜಿಲ್ಲೆಯಲ್ಲಿ ೧೩,೮೬,೫೫೬ ಫಲಾನುಭವಿಗಳು: ಜಿಲ್ಲೆಯ ಎಚ್.ಡಿ.ಕೋಟೆ, ಹುಣಸೂರು, ಕೃಷ್ಣರಾಜನಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ಸಾಲಿಗ್ರಾಮ, ತಿ.ನರಸೀಪುರ ತಾಲ್ಲೂಕುಗಳು ಸೇರಿದಂತೆ ೧೩,೮೬,೫೫೬ ಫಲಾನುಭವಿಗಳಿದ್ದು, ಶನಿವಾರದವರೆಗೆ ೨,೫೮,೯೮೯ ಫಲಾನುಭವಿಗಳ ಇ-ಕೆವೈಸಿಯಾಗಿದೆ. ಭಾನುವಾರ ಮತ್ತು ಗೌರಿ ಗಣೇಶ ಹಬ್ಬದ ದಿನವಾದ ಸೋಮವಾರ ಕೂಡ ಕೆಲವು ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಬಾಗಿಲು ತೆರೆದು ಇ-ಕೆವೈಸಿ ಪಡೆಯಲಾಗಿದೆ. ಉಳಿದಂತೆ ಜಿಲ್ಲೆಯ ೧೧,೨೭,೫೬೭ ಮಂದಿ ಫಲಾನುಭವಿಗಳ ಇ-ಕೆವೈಸಿ ಬಾಕಿ ಇದ್ದು, ಪ್ರತಿ ತಾಲ್ಲೂಕಿನಲ್ಲಿ ಪ್ರತಿನಿತ್ಯ೧೦ ರಿಂದ ೧೫ ಸಾವಿರ ಗುರಿಯನ್ನು ಕೊಟ್ಟು ಮುಗಿಸಲು ಹೇಳಲಾಗಿದೆ. ರಾಜ್ಯಾದ್ಯಂತ ಸರ್ವರ್ ಸಮಸ್ಯೆಯಾಗಿ ವಿಳಂಬವಾಗುತ್ತಿರುವುದರಿಂದ ಮತ್ತಷ್ಟು ದಿನಗಳ ಕಾಲ ವಿಸ್ತರಿಸಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡು ನ್ಯಾಯಬೆಲೆ ಅಂಗಡಿ ಮಾಲೀಕರು ಒಂದಿಷ್ಟು ಸಮಾಧಾನದಿಂದ ಫಲಾನುಭವಿಗಳ ಇ-ಕೆವೈಸಿ ಮಾಡುತ್ತಿರುವುದನ್ನು ಕಾಣಬಹುದು.

ಕ್ಯೂ ನಿಲ್ಲಬೇಕಿಲ್ಲ: ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗೆ ಹೋಗಿ ಕ್ಯೂ ನಿಲ್ಲುವುದನ್ನು ತಪ್ಪಿಸಲು ಮೊಬೈಲ್ ಅಪ್ಲಿಕೇಷನ್ ಮೂಲಕ ಸ್ವಯಂಪ್ರೇರಣೆಯಿಂದ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಬಹುತೇಕರು ಈ ವ್ಯವಸ್ಥೆಯನ್ನು ಬಳಸಿಕೊಳ್ಳಲು ಗೊತ್ತಾಗದ ಕಾರಣ ಹಿಂದೇಟು ಹಾಕುತ್ತಿದ್ದಾರೆ. ಮೇರಾ ರೇಷನ್ ಹಾಗು ಆಧಾರ್ ಫ್ಲಸ್ ಐಡಿ ಆಪ್ ಡೌನ್‌ಲೋಡ್ ಮಾಡಿಕೊಂಡು ಪಡಿತರ ಚೀಟಿ ಸಂಖ್ಯೆಯನ್ನು ಎಂಟ್ರಿ ಮಾಡಬೇಕು. ನಂತರ, ಕುಟುಂಬದವರ ಹೆಸರನ್ನು ನೋಂದಣಿ ಮಾಡಿದ ಮೇಲೆ ಅಂತಿಮವಾಗಿ ಎಂಟ್ರಿ ಕ್ಲಿಕ್ ಮಾಡಿದರೆ ಏಕಕಾಲದಲ್ಲಿ ಆಗಲಿದೆ. ಇದು ಸರಳವಾದರೂ ಬಳಕೆ ಮಾಡುವುದು ಗೊತ್ತಾಗದೆ ನ್ಯಾಯಬೆಲೆ ಅಂಗಡಿಯನ್ನೇ ಆಶ್ರಯಿಸುವಂತಾಗಿದೆ.

ಎಪಿಎಲ್ ಕಾರ್ಡುದಾರರಿಗೆ ಸದ್ಯಕ್ಕಿಲ್ಲ ಗಡುವು: 

ಮೈಸೂರು: ಎಪಿಎಲ್ ಕಾರ್ಡುದಾರರು ಸದ್ಯಕ್ಕೆ ಇ-ಕೆವೈಸಿ ಮಾಡಿಸಬೇಕಿಲ್ಲದಿದ್ದರೂ ಮುಂದೆ ಮಾಡಿಸಬೇಕಾಗಿದೆ. ಸರ್ಕಾರ ಮೊದಲ ಹಂತದಲ್ಲಿ ಬಿಪಿಎಲ್ ಕಾರ್ಡುದಾರರು ಮಾತ್ರ ಮಾಡಿಸುವಂತೆ ಹೇಳಿದೆ. ಎಪಿಲ್ ಕಾರ್ಡುದಾರರಿಗೆ ಇಕೆವೈಸಿ ಮಾಡಿಸುವಂತೆ ಹೇಳಿದ್ದರೂ ಅಂತಿಮ ಗಡುವು ಇಲ್ಲ ಎಂದು ತಿಳಿಸಲಾಗಿದೆ.

” ಕಳೆದ ಎರಡು ದಿನಗಳಿಂದ ಪಡಿತರ ಅಂಗಡಿಗೆ ಬರುತ್ತಿದ್ದೇವೆ. ಸರ್ವರ್ ಬಹಳ ಸ್ಲೋ ಇದೆ ಎನ್ನುತ್ತಿದ್ದಾರೆ. ನಸುಕಿನ ಮೂರು ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದೇವೆ. ನಮ್ಮಂತಹ ವಯೋವೃದ್ಧರಿಗೆ ಬಹಳ ತ್ರಾಸ ಆಗುತ್ತದೆ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ಇಲ್ಲಿ ಕೆವೈಸಿ ಮಾಡಿಸಲು ಬಂದಿದ್ದೇವೆ. ಅಲ್ಲಿ ಆಧಾರ್‌ಕಾರ್ಡ್ ಮಾಡಿಸಿಕೊಂಡು ಬಂದಿದ್ದೇವೆ. ಇಲ್ಲಿ ಬಯೋಮೆಟ್ರಿಕ್ ಮಾಡಿಸಲು ಬಂದಿದ್ದೇವೆ. ಮುಂಜಾನೆ ೮ ಗಂಟೆಗೆ ನ್ಯಾಯಬೆಲೆ ಅಂಗಡಿಯವರು ಬಂದಿದ್ದಾರೆ. ಇಲ್ಲಿ ಯವರೆಗೆ ಕೇವಲ ಐದು ಜನರದು ಬಯೋಮೆಟ್ರಿಕ್ ಆಗಿದೆ.ಇಲ್ಲಿಗೆ ಬರಲು ಎರಡು ದಿನ ಆಗಿದ್ದು, ಸರ್ವರ್ ಇಲ್ಲ. ರೇಷನ್ ಅಂಗಡಿ ಮಾಲೀಕರಾದರೂ ಏನು ಮಾಡಬೇಕು.”

ಕಮಲಮ್ಮ, ಪಡಿತರ ಚೀಟಿದಾರರು

” ಕೆಲವು ಕಡೆ ಸರ್ವರ್ ಸಮಸ್ಯೆ ಇರುವುದನ್ನು ಪರಿಹರಿಸಲಾಗಿದೆ. ಬೆಳಿಗ್ಗೆಯಿಂದ ಸಂಜೆ ತನಕ ಇ-ಕೆವೈಸಿ ಮಾಡಿಸುವುದಕ್ಕೆ ಹೇಳಲಾಗಿದೆ. ಪಡಿತರದಾರರು ತಮ್ಮ ಅಂಗಡಿಗಳಲ್ಲಿ ಸಮಯ ಮಾಡಿಕೊಂಡು ಹೋದರೆ ಸಾಕು. ಒಂದೇ ಸಮಯದಲ್ಲಿ ಹತ್ತಾರು ಜನರು ಬರುವ ಅಗತ್ಯವಿಲ್ಲ.”

ಮಂಟೇಸ್ವಾಮಿ, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

 

 

Tags:
error: Content is protected !!