ನಾಗೇಶ ಹೆಗಡೆ
ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ
ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್ ಶಿಫಾರಸು
ಒಂದು ಸುಳ್ಳನ್ನು ಸಾವಿರ ಜನರ ಕಿವಿಯಲ್ಲಿ ತುರುಕಿಬಿಟ್ಟರೆ ಆ ಅಷ್ಟೂ ಜನ ಕೂಗಿದ್ದೇ ಸತ್ಯವಾಗುತ್ತದೆ. ‘ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ’ ಎಂಬ ಒಕ್ಕೊರಲಿನ ಕೂಗು ಹೀಗೇ ಎದ್ದಿದೆ. ಮಾಧ್ಯಮಗಳೂ ಆ ಕೂಗಿಗೆ ಲೌಡ್ ಸ್ಪೀಕರ್ ಆಗಿ, ಕೊನೆಗೆ ಈ ಸುಳ್ಳನ್ನು ಹಬ್ಬಿಸಿದವರೇ ಅದನ್ನು ತಾವೇ ನಂಬಿ ವಿಧಾನಸೌಧದ ಉಭಯ ಸದನಗಳಲ್ಲಿ ಅದನ್ನೇ ಇನ್ನೂ ಜೋರಾಗಿ ಕೂಗಿ ಹೇಳಿ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆಯನ್ನು ಅನಿರ್ದಿಷ್ಟ ಕಾಲ ಮುಂದೂಡಲಾಯಿತು.
ವಾಸ್ತವ ಏನೆಂದರೆ, ಈಗಾಗಲೇ ಬಹುಪಾಲು ‘ಸಂರಕ್ಷಿತ ಪ್ರದೇಶ’ ಎಂದು ಗುರುತಿಸಲಾದ ಜಾಗವನ್ನಷ್ಟೇ ಸಂರಕ್ಷಣೆ ಮಾಡಬೇಕೆಂದು ಕಸ್ತೂರಿ ರಂಗನ್ ವರದಿ ಹೇಳುತ್ತಿದೆ! ಅದಕ್ಕೆ ‘ಪರಿಸರ ಸೂಕ್ಷ್ಮ ಪ್ರದೇಶ’ ಎಂಬ ಹೊಸ ಹಣೆಪಟ್ಟಿ ಕಟ್ಟಿ ಅದರ ಮೇಲೆ ‘ಕಟ್ಟುನಿಟ್ಟಿನ ನಿಗಾ ಇಡಬೇಕು’ ಎಂದು ಹೇಳಿದೆ. ಅದು ಹನ್ನೆರಡು ವರ್ಷಗಳ ನಂತರವೂ ಪಥ್ಯವಾಗಲಿಲ್ಲ ನಮ್ಮ ಜನಪ್ರತಿನಿಧಿಗಳಿಗೆ.
‘ಕಟ್ಟುನಿಟ್ಟಿನ ನಿಗಾ’ ಎಂದರೇನು? ಅವೂ ಹಳೆಯ ನಿಬಂಧನೆಗಳೇ! ಅಲ್ಲಿ ಗಣಿಗಾರಿಕೆ ಕೂಡದು. ಮರಳು ಎತ್ತುವ ದಂಧೆ ಮತ್ತು ಗ್ರಾನೈಟ್ ಕ್ವಾರಿ ಇರಕೂಡದು. ನಾಟಾ ಕಡಿದು ಸಾಗಿಸಕೂಡದು. ಈಗಾಗಲೇ ಅವೆಲ್ಲ ನಡೆಯುತ್ತಿದ್ದರೆ ಇನ್ನು ಐದು ವರ್ಷಗಳಲ್ಲಿ ಅವನ್ನೆಲ್ಲ ಬಂದ್ ಮಾಡಬೇಕು. ಅಷ್ಟೆ! ಇದರಿಂದ ಯಾರಿಗೆ ಬಂದಿದೆ ಸಮಸ್ಯೆ, ಗೊತ್ತು ತಾನೆ?
ಹಿಂದಿನ, ಮಾಧವ ಗಾಡ್ಗೀಳ್ ಸಮಿತಿಯಲ್ಲಿ ಶಿಫಾರಸು ಮಾಡಲಾದ ಕೆಲವು ಹಳೇ ನಿಯಮಗಳು ಸಡಿಲವಾಗಿವೆ. ಈಗ ಅಲ್ಲಿ ಅಣೆಕಟ್ಟು ಕಟ್ಟಬಹುದು, ಆದರೆ ಎಲ್ಲ ನೀರನ್ನೂ ಬಂಧಿಸಬಾರದು. ಒಂದಿಷ್ಟು (30%) ಸಹಜ ನೀರು, ಅಣೆಕಟ್ಟೆಯ ಕೆಳಗೂ ಸದಾ ಹರಿಯುತ್ತಿರಬೇಕು. ಏಕೆಂದರೆ ಕಣಿವೆ ಪೂರ್ತಿ ಒಣಗಿದರೆ ಅಲ್ಲಿದ್ದ ಮೀನು, ಕಪ್ಪೆ, ನೀರ್ನಾಯಿ, ನೀರೊಳ್ಳೆ ಹಾವು, ಹಾವಸೆ ಇವೆಲ್ಲ ಸಾಯುತ್ತವೆ. ವನ್ಯಜೀವಿಗಳಿಗೆ ಕುಡಿಯಲು ನೀರಿಲ್ಲದಿದ್ದರೆ ವಲಸೆ ಹೋಗಿ ರೈತರಿಗೆ ಇನ್ನಷ್ಟು ಕಷ್ಟ ಕೊಡುತ್ತವೆ. ಅವೆಲ್ಲ ಆಗದಂತೆ 30% ನೀರು ಅಲ್ಲಿ ಸದಾ ಹರಿಯುತ್ತಿರಬೇಕು. ಅಷ್ಟೆ!
ಅದಕ್ಕೇಕೆ ಆಕ್ಷೇಪಣೆ?
ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳನ್ನು ಮತ್ತೊಮ್ಮೆ ಖಡಕ್ ಶಿಫಾರಸು ಮಾಡಲಾಗಿದೆ. ಅಲ್ಲಿ ಉಷ್ಣ ವಿದ್ಯುತ್ ಸ್ಥಾವರ ಬರುವಂತಿಲ್ಲ. ಭಾರೀ ಅನಾಹುತಕಾರಿ ಕೆಮಿಕಲ್ ಫ್ಯಾಕ್ಟರಿ, ಇಲೆಕ್ಟ್ರೊ ಪ್ಲೇಟಿಂಗ್, ಚರ್ಮಸಂಸ್ಕರಣೆ ಇಂಥ ‘ಕೆಂಪು’ ಉದ್ಯಮ ಬರಕೂಡದು. ಬರಬಾರದು ತಾನೆ? ಇದೂ ಒಳ್ಳೆಯದೇ ಅಲ್ಲವೆ?
ಇನ್ನು, ಅಲ್ಲಿ ವಾಸಿಸುವವರ ಮೂಲ ಅಗತ್ಯಗಳಿಗೆ ಏನೇನೂ ತೊಂದರೆ ಇರುವುದಿಲ್ಲ. ಸಂಕ, ಸೇತುವೆ, ಬೋರ್ವೆಲ್, ರಸ್ತೆ ಇತ್ಯಾದಿಗಳಿಗೆ ನಿರ್ಬಂಧ ಇಲ್ಲ. ಮರಳು, ಗ್ರಾನೈಟನ್ನೂ ನೀವು ಮನೆಕಟ್ಟಲು ಬಳಸಬಹುದು. ಆದರೆ ನಗರಕ್ಕೆ ಮಾರುವ ದಂಧೆ ಮಾಡುವಂತಿಲ್ಲ. ಅದಕ್ಕೆ ನಿರ್ಬಂಧ ಬೇಕು ತಾನೆ?
ತೀರಾ ವಿಶಾಲವಾದ 20 ಸಾವಿರ ಚದರ ಮೀಟರಿಗಿಂತ ದೊಡ್ಡದಾದ (200 ಮೀಟರ್ ಉದ್ದ, 100 ಮೀಟರ್ ಅಗಲದ) ಗೋದಾಮು, ಸಭಾಭವನ, ಸ್ಟೇಡಿಯಂ ಇತ್ಯಾದಿ ಕಟ್ಟುವಂತಿಲ್ಲ. ಯಾರಿಗೆ, ಯಾಕೆ ಬೇಕು ಅಷ್ಟು ದೊಡ್ಡ ಭವನ?
ಗಾಡ್ಗೀಳ್ ಶಿಫಾರಸು ಮಾಡಿದ್ದ ಇನ್ನೊಂದು ಅಂಶವನ್ನು ಇದರಲ್ಲಿ ಕಿತ್ತು ಹಾಕಲಾಗಿದೆ: ಅದೇನೆಂದರೆ ಅಲ್ಲಿದ್ದವರ ಬದುಕಿಗೆ ಕಂಟಕ ತರಬಲ್ಲ ಹೊಸ ಯೋಜನೆ ಏನಾದರೂ ಬರಲೇಬೇಕೆಂದಿದ್ದರೆ, ಆಯಾ ಗ್ರಾಮಸಭೆಯ ಜೊತೆ ಸಮಾಲೋಚನೆ ನಡೆಸಿ, ಅವರು ಒಪ್ಪಿದರೆ ಮಾತ್ರ ಜಾರಿಗೆ ತರಬಹುದು. ಅದಕ್ಕೆಂದು ಸ್ಥಳೀಯ ಭಾಷೆಯಲ್ಲಿ ಈ ಸಮಿತಿಯ ವರದಿಯನ್ನು ಸರಳವಾಗಿ ತರ್ಜುಮೆ ಮಾಡಿ ವಿತರಿಸಿರಬೇಕು ಎಂದಿತ್ತು. ಕಸ್ತೂರಿ ರಂಗನ್ ಸಮಿತಿಯ ಶಿಫಾರಸಿನಲ್ಲಿ ಗ್ರಾಮಸಭೆಯ ಅನುಮತಿ ಪಡೆಯುವ ಪ್ರಶ್ನೆಯೇ ಬರುವುದಿಲ್ಲ. ಏಕೆಂದರೆ ಈ ಸೂಕ್ಷ್ಮ ಪರಿಸರವೆಲ್ಲ ಈಗಾಗಲೇ ಸಂರಕ್ಷಿತ ಪ್ರದೇಶ ಆಗಿದ್ದರಿಂದ ಅಲ್ಲಿ ಯಾವುದೂ ಜನವಸತಿಯ ಅನುಮತಿ ಕೇಳುವ, ಅವರನ್ನು ಗುಳೆ ಎಬ್ಬಿಸುವ ಪ್ರಶ್ನೆಯೇ ಬರುವುದಿಲ್ಲ.
ಇಂಥ ಸರಳ ವಿಷಯಗಳನ್ನು ಜನರ ಮುಂದಿಡುವಲ್ಲಿ ಕಳೆದ 12 ವರ್ಷಗಳಲ್ಲಿ ಎಲ್ಲ ಸರ್ಕಾರಗಳೂ ವಿಫಲ ಆಗಿವೆ. ಕನ್ನಡದಲ್ಲಿ ಇದುವರೆಗೆ ತರ್ಜುಮೆ ಮಾಡಿಸಿಲ್ಲ (ಅಲ್ಲೊಂದು ಗುಟ್ಟಿದೆ, ಅದಕ್ಕೆ ಆಮೇಲೆ ಬರುತ್ತೇನೆ) . ಸ್ವಾರ್ಥ ಗಣಿಧಣಿಗಳು, ಮರಳು ಮಾಫಿಯಾಗಳು, ಎಸ್ಟೇಟ್ ಮಾಲಿಕರು, ಅರಣ್ಯಾಧಿಕಾರಿಗಳು ಹಬ್ಬಿಸಿದ ಊಹಾಪೋಹಗಳನ್ನೇ ರೆವಿನ್ಯೂ ಅಧಿಕಾರಿಗಳೂ, ಶಾಸಕರೂ ನಂಬಿದ್ದಲ್ಲದೇ ಮುಗ್ಧ ಜನರ ತಲೆಗೂ ತುಂಬಿದ್ದಾರೆ.
ವರದಿಯಲ್ಲಿ ಒಂದಿಷ್ಟು ಲೋಪಗಳಿವೆ, ನಿಜ. ಗಾಡ್ಗೀಳ್ ಸಮಿತಿಯ ವರದಿಯನ್ನು ಬದಿಗೊತ್ತಿ ಹೊಸ ಕಸ್ತೂರಿ ರಂಗನ್ ಸಮಿತಿಗೆ ವರದಿ ಕೊಡಲು ಸಿಕ್ಕ ಸಮಯ ಕೇವಲ 15 ತಿಂಗಳು ಅಷ್ಟೆ. ಯಾರಿಗೂ ಈ ವಿಶಾಲ ಘಟ್ಟ ಪ್ರದೇಶವನ್ನು ಖುದ್ದಾಗಿ ವೀಕ್ಷಿಸಲು, ಜನರೊಂದಿಗೆ ಮಾತಾಡಲು ಸಾಧ್ಯವಿರಲಿಲ್ಲ. ಆಗಿನ ಉಪಗ್ರಹ ನಕ್ಷೆಗಳ ಆಧಾರದ ಮೇಲೆ ‘ಸಂರಕ್ಷಿತ ಪ್ರದೇಶ’ಗಳನ್ನು ಗುರುತಿಸಲಾಗಿದೆ. ಹಾಗಾಗಿ ಗ್ರಾಮಗಳನ್ನು ಗುರುತಿಸುವಲ್ಲಿ ತಪ್ಪಾಗಿರುವ ಸಾಧ್ಯತೆಗಳಿವೆ. ಕೇರಳ ಸರ್ಕಾರ ಅದಕ್ಕೇ ಏನು ಮಾಡಿದೆ ಗೊತ್ತೆ? ಇಂಗ್ಲಿಷ್ ವರದಿಯನ್ನು ಮಲೆಯಾಳಂ ಭಾಷೆಗೆ ತರ್ಜುಮೆ ಮಾಡಲಾಗಿದೆ. ಅಷ್ಟೇ ಅಲ್ಲ, ಪ್ರತಿ ತಾಲ್ಲೂಕಿನಲ್ಲೂ ಸ್ಥಳೀಯ ಸಮೀಕ್ಷಾ ಸಮಿತಿಗಳನ್ನು ಓಡಾಡಿಸಿ ಯಾವ ಯಾವ ಗ್ರಾಮಗಳು ತಪ್ಪಾಗಿ ಸೇರ್ಪಡೆ ಆಗಿವೆ ಎಂದು ನೋಡಿವೆ. ಅಂಥ ಗ್ರಾಮಗಳನ್ನು ಬೇರ್ಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೇಳಿತ್ತು, ಈಗಲ್ಲ, 2014ರಲ್ಲೇ ಹೇಳಿತ್ತು.
ಕರ್ನಾಟಕದ ಜನಪ್ರತಿನಿಧಿಗಳು ಅಂಥ ಯಾವ ಕೆಲಸವನ್ನೂ ಮಾಡಿಲ್ಲ. ಬರೀ ಬೆದರಿಕೆಯ ಊಹಾಪೋಹವನ್ನು ಬಿತ್ತುವ ಕೆಲಸವನ್ನಷ್ಟೇ ಮಾಡಿದ್ದಾರೆ. ಘಟ್ಟದ ಬದುಕಿಗೆ ಸಂಬಂಧವೇ ಇಲ್ಲದ ಶಾಸಕರು ಕೂಡ (ದೂರದ ಬೀದರ್ನಿಂದ ಹಿಡಿದು, ಈಚೆ ಕೋಲಾರ್ವರೆಗಿನ ಶಾಸಕರೂ) ವರದಿಯನ್ನು ಓದದೆಯೇ ಏಕತ್ರವಾಗಿ ‘ಬೇಡ’ ಎಂದು ಈಗಾಗಲೇ ಮೂರು ಬಾರಿ ವರದಿಯನ್ನು ತಿರಸ್ಕರಿಸಿದ್ದಾರೆ. ಯಾಕೆ ಅಂತ ಕೇಳಬೇಡಿ! ಮುಗ್ಧ ಜನರ ಭಾವನೆಗಳನ್ನು ಕೆರಳಿಸಿ, ಆ ಬಿಸಿಯಲ್ಲೇ ಬೇಳೆ ಬೇಯಬೇಕಲ್ಲ?
ಇಲ್ಲೂ ಒಂದು ಗುಟ್ಟು ಇದೆ. 2014ರಲ್ಲಿ ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿಯಲ್ಲಿ ತಪ್ಪಾಗಿ ಗುರುತಿಸಲಾದ ನಿಮ್ಮ ರಾಜ್ಯದ ಹಳ್ಳಿಗಳನ್ನು (ಕೇರಳದ ಮಾದರಿಯಲ್ಲಿ) ನೀವೂ ಗುರುತಿಸಿ ಎಂದು ಐದು ರಾಜ್ಯಗಳಿಗೆ ತಿಳಿಸಿತ್ತು. ಅದಕ್ಕೆ ತಕ್ಕಂತೆ ಕರ್ನಾಟಕ ಸರ್ಕಾರ ಒಂದು ರಾಜ್ಯಮಟ್ಟದ ಕಾರ್ಯ ಸಮಿತಿಯನ್ನು ನೇಮಕ ಮಾಡಿತ್ತು. ಮೂವರು ಉನ್ನತ ಅರಣ್ಯಾಧಿಕಾರಿಗಳ ಸುಪರ್ದಿಯ ಆ ಸಮಿತಿ ತನ್ನ ವರದಿಯನ್ನು 2015ರಲ್ಲೇ ನೀಡಿತ್ತು. ಯಾವ ಯಾವ ಹಳ್ಳಿಗಳನ್ನು ಕೈಬಿಡಬೇಕು ಎಂಬ ಉದ್ದನ್ನ ಪಟ್ಟಿಯೇ ಅದರಲ್ಲಿದೆ. ‘ಸರ್ಕಾರ ಅದನ್ನು ಪರಿಶೀಲನೆ ಮಾಡಲೇ ಇಲ್ಲ’ ಎನ್ನುತ್ತಾರೆ ಅಂಥ ದಾಖಲೆಗಳನ್ನೆಲ್ಲ ಸಂಗ್ರಹಿಸಿದ ಬಿ. ಜಿ. ಸಿದ್ದಾರ್ಥ. ಆ ಕಡತಗಳನ್ನೆಲ್ಲ ಹೊತ್ತು ತಂದು ನನಗೆ ತೋರಿಸಿದ ಸಿದ್ದಾರ್ಥ ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದನ್ನೂ ನನ್ನೆದುರು ತೋರಿಸಿದ್ದಾರೆ!
ಈ ಸರಕಾರಕ್ಕೆ ಅರಣ್ಯ ರಕ್ಷಣೆಯ ಬಗ್ಗೆ, ಗುಡ್ಡಕಣಿವೆಗಳ ಸ್ಥಿರತೆಯ ಬಗ್ಗೆ, ಜಲಮೂಲಗಳ ಬಗ್ಗೆ, ವನ್ಯಜೀವಿಗಳ ದಾಳಿಯಿಂದ ಹೈರಾಣಾದ ಜನರ ಸಂಕಟಗಳ ಬಗ್ಗೆ, ತಾಪಮಾನ ಏರಿಕೆಯ ಬಗ್ಗೆ, ಮುಂದಿನ ಪೀಳಿಗೆಯ ಬಗ್ಗೆ ಸ್ವಲ್ಪ ಏನಾದರೂ ಕಾಳಜಿ ಇದ್ದಿದ್ದರೆ ಹತ್ತು ವರ್ಷಗಳ ಹಿಂದೆಯೇ ಇವನ್ನು ಜನರ ಮುಂದಿಟ್ಟು, ಪಶ್ಚಿಮ ಘಟ್ಟಗಳ ನಿವಾಸಿಗಳ ಆತಂಕವನ್ನು ನಿವಾರಿಸಲು ಸಾಧ್ಯವಿತ್ತು. ಆತಂಕಗೊಂಡಿದ್ದ ಗ್ರಾಮಗಳನ್ನು ವರದಿಯ ವ್ಯಾಪ್ತಿಯಿಂದ ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ಹೇಳಬಹುದಿತ್ತು. ವರದಿ ಜಾರಿಗೆ ಬಂದರೆ ಯಾರಿಗೂ ತೊಂದರೆ ಆಗದೆಂದು ಹೇಳಬಹುದಿತ್ತು. ಐದು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಮತ್ತೊಮ್ಮೆ ನಮ್ಮ ರಾಜ್ಯಕ್ಕೆ ನೆನಪಿಸಿದಾಗ ಆಗಲಾದರೂ ಜನರಿಗೆ ಇದನ್ನು ಹೇಳಬಹುದಿತ್ತು. ಅದೇನೂ ಮಾಡದೆಯೇ ಎರಡು ಬಾರಿ ‘ವರದಿಯನ್ನು ತಿರಸ್ಕರಿಸುತ್ತೇವೆ’ ಎಂದು ಜನರಿಗೆ ನಮ್ಮ ಸರ್ಕಾರ ಹೇಳಿತು.
ಕಡೇಪಕ್ಷ ಮೊನ್ನಿನ ವಿಶೇಷ ಅಧಿವೇಶನದಲ್ಲಿ ರಾಜ್ಯ ಸಮಿತಿ ಹಳೇ ಶಿಫಾರಸಿನ ಬಗ್ಗೆ, ಕನ್ನಡ ಅನುವಾದದ ಬಗ್ಗೆ ನಡೆದ ಕೆಲಸಗಳನ್ನು ಹೇಳಬಹುದಿತ್ತು. ಈ ವಿಷಯವನ್ನು ಮೊನ್ನೆ ಸದನದಲ್ಲಿ ಚರ್ಚೆಗೆ ಎತ್ತಿಕೊಂಡಾಗ ಶಾಸಕರಲ್ಲದ ಇಬ್ಬರು ಪರಿಣತರ ಕನ್ನಡ ಉಪನ್ಯಾಸವನ್ನು ಸದನದಲ್ಲಿ ಏರ್ಪಡಿಸಬೇಕಿತ್ತು. ಕಸ್ತೂರಿ ರಂಗನ್ ಸಮಿತಿಯಲ್ಲಿದ್ದ ಪದ್ಮಶ್ರೀ ದರ್ಶನ್ ಶಂಕರ್ ಬೆಂಗಳೂರಿನಲ್ಲೇ ಇದ್ದಾರೆ. ಅವರಿಗೆ ಕನ್ನಡದಲ್ಲಿ ಮಾತಾಡಲು ಕಷ್ಟವಾದರೆ, ಅಥವಾ ಮುಜುಗರವಾದರೆ, ಹಿಂದೆ ಗಾಡ್ಗೀಳ್ ಸಮಿತಿಯ ಸದಸ್ಯರಾಗಿದ್ದ ಡಾ. ಕೆ.ಎನ್ ಗಣೇಶಯ್ಯ ಇದ್ದಾರೆ. ಕರೆಯಬಹುದಿತ್ತು.
[ಒಂದು ಮಾತನ್ನು ನೆನಪಿಡೋಣ. ಕಸ್ತೂರಿ ರಂಗನ್ ಸಮಿತಿಯ 9 ಸದಸ್ಯರಲ್ಲಿ ಯಾರೊಬ್ಬರೂ ಜನವಿರೋಧಿ ಅಲ್ಲ. ಅರಣ್ಯ ಮತ್ತು ಜನರ ಕ್ಷೇಮಚಿಂತನೆ ಮಾಡುವಲ್ಲಿ ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಪರಿಣತರು. ನನಗೆ ಸ್ವಂತ ಪರಿಚಯ ಇರುವ ಪದ್ಮಶ್ರೀ ಸುನೀತಾ ನಾರಾಯಣ್ (Down to Earth ಸಂಪಾದಕಿ) ಪಟ್ಟಭದ್ರರ ವಿರುದ್ಧ ಅದೆಷ್ಟೊ ದೊಡ್ಡ ದೊಡ್ಡ ಸಮರ ಸಾರಿ ಜಯಿಸಿದ್ದಾರೆ.]
ಕಸ್ತೂರಿ ರಂಗನ್ ಸಮಿತಿಯ ವರದಿ ಜಾರಿಗೆ ಬಂದರೆ ಅಪಾಯಗಳೇನೇನು ಎಂಬುದನ್ನು ಸದನಕ್ಕೆ ಹೇಳಬಲ್ಲ ಇನ್ನೊಬ್ಬರನ್ನು ಸರ್ಕಾರವೇ ಆಯ್ಕೆ ಮಾಡಿ ಅವರ ಉಪನ್ಯಾಸವನ್ನೂ ಕೇಳಬಹುದಿತ್ತು. ಆ ಏನನ್ನೂ ಮಾಡದೇ ಎರಡೂವರೆ ದಿನಗಳ ಕಾಲ ವಾಗ್ಙರಿ ಹರಿಸಿ ಎಲ್ಲ ಜನಪ್ರತಿನಿಧಿಗಳೂ ಸತ್ಯವನ್ನು ಮರೆಮಾಚಿ ಕೇಂದ್ರಕ್ಕೆ
ಸುಡು ವಾಸ್ತವ ಏನು ಗೊತ್ತೆ? ವರದಿ ಜಾರಿಗೆ ಬಂದರೆ ಅಪಾಯ ಅಲ್ಲಿನ ಜನರಿಗಲ್ಲ, ಅರಣ್ಯ ಇಲಾಖೆಗೆ ದೊಡ್ಡ ಆಘಾತ ಮತ್ತು ತಲೆನೋವು ಬರಲಿದೆ. ಆಡಳಿತಶಾಹಿಯ ಅಕ್ರಮ ಗಳಿಕೆಗೆ ದೊಡ್ಡ ಹೊಡೆತ ಬೀಳಲಿದೆ. ಭ್ರಷ್ಟಾಚಾರದ ಗಂಗೆ ಉಲ್ಟಾ ಹರಿಯುತ್ತ ಮೇಲಿನವರೆಗೆ ತಲುಪುತ್ತದಲ್ಲ, ಅದರ ಹರಿವಿಗೆ ಅಡ್ಡಿಯಾಗಬಹುದು. ಇದುವರೆಗಂತೂ ಅರಣ್ಯ ಇಲಾಖೆಯ ಮತ್ತು ಕಂದಾಯ ದಾಖಲೆಗಳೆಲ್ಲ ಅಸ್ತವ್ಯಸ್ತ ಇವೆ. ಇಲಾಖೆಯ ಧೋರಣೆಯಿಂದಾಗಿ ಪಶ್ಚಿಮಘಟ್ಟಗಳ ಮೂಲನಿವಾಸಿಗಳು ಏನೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಕಾನೂನು ಬಂದರೆ ಈ ಅಧಿಕಾರಶಾಹಿಯಿಂದ ಇನ್ನೇನೇನು ಸಂಕಟ ಬಂದೀತೊ ಎಂದು ಜನತೆ ಕಂಗಾಲಾಗಿದೆ. ಜನರ ಪ್ರತಿರೋಧ ಅರಣ್ಯ ಇಲಾಖೆಯ ದಬ್ಬಾಳಿಕೆಯ ವಿರುದ್ಧ ಇದೆಯೇ ವಿನಾ ಕಸ್ತೂರಿ ರಂಗನ್ ಸಮಿತಿಯ ವರದಿಯ ವಿರುದ್ಧ ಇರಲು ಕಾರಣವೇ ಇಲ್ಲ! ವರದಿ ಕನ್ನಡದಲ್ಲಿ ಬಂದಿದ್ದರೆ ತಾನೆ ವಾಸ್ತವ ಗೊತ್ತಾಗೋದು? ಕನ್ನಡದಲ್ಲಿ ಬರದಂತೆ ನೋಡಿಕೊಳ್ಳುವ ವ್ಯವಸ್ಥೆ ಗಟ್ಟಿಯಾಗಿದೆ!
ಸ್ಥಳೀಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ; ಪಟ್ಟಭದ್ರ ಹಿತಾಸಕ್ತಿಗಳೆಲ್ಲ ಸೂಕ್ಷ್ಮ ವಲಯದ ಆಸುಪಾಸಿನಲ್ಲಿ ಠಿಕಾಣಿ ಹೂಡಿವೆ. ಈ ಕಟುವಾಸ್ತವಗಳೆಲ್ಲ ಹಿಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಗೊತ್ತಿತ್ತು. ಈಗಿನ ಅರಣ್ಯ ಸಚಿವ ರಾಮಲಿಂಗಾರೆಡ್ಡಿಯವರಿಗೂ ಗೊತ್ತಿತ್ತು .
ಅಂಥ ಪಟ್ಟಭದ್ರ ಹಿತಾಸಕ್ತಿಗಳಿಗೆಲ್ಲ ರಕ್ಷಣೆ ಸಿಕ್ಕಂತಾಗಿದೆ. ಅಸಲೀ ರಕ್ಷಣೆ ಸಿಗಬೇಕಾದ ಪಶ್ಚಿಮ ಘಟ್ಟದ ಅರಣ್ಯ, ಜೀವಜಾಲ, ಗುಡ್ಡ ಕಣಿವೆ ಮತ್ತು ಮೂಲ ನಿವಾಸಿಗಳನ್ನು ಅವುಗಳ ಪಾಲಿಗೆ ಬಿಡಲಾಗಿದೆ. ಮತ ಹಾಕಲಾರದ ಮೂಕ ಜೀವಿಗಳಿಗೆ ಮತ್ತು ಎಳೆಯ ಪೀಳಿಗೆಗೆ ಭವಿಷ್ಯದಲ್ಲಿ ಏನಾದರಾಗಲಿ ನಮಗೇನು ಎಂಬ ಧ್ವನಿ ದೊಡ್ಡದಾಗಿ ಸದನದಲ್ಲಿ ಹೊಮ್ಮಿದೆ. ಇನ್ನೂ ಪ್ರಾಯಶಃ ಹತ್ತುವರ್ಷಗಳ ಕಾಲ ಈಗಿದ್ದ ಸ್ಥಿತಿಯೇ ಮುಂದುವರಿಯಬಹುದು. ಸಹ್ಯಾದ್ರಿ ಇಂಥ ಅಪಸವ್ಯಗಳನ್ನು ಅಷ್ಟು ಹೊತ್ತು ಸಹಿಸಿಕೊಳ್ಳಬೇಕಷ್ಟೆ.




