Mysore
28
overcast clouds

Social Media

ಸೋಮವಾರ, 19 ಅಕ್ಟೋಬರ್ 2026
Light
Dark

ಅಂದು ಪಾರ್ಟಿ ಮೂಡ್‌ನಲ್ಲಿ ಪಬ್‌ಗೆ ಎಂಟ್ರಿ; ಇಂದು…?!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ

Stoney Brook ಹೋಟೆಲ್‌ನ D-Boss Safari ಜಾಗದಲ್ಲಿ ಪಾರ್ಟಿಯ ಮರು ಚಿತ್ರಣ

ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ ದಿನ ಪಾರ್ಟಿ ಮಾಡಿದ ಸ್ಥಳ ಅದಾಗಿತ್ತು

೧೪.೦೬.೨೦೨೪ರಂದು ಮಧ್ಯಾಹ್ನ ೧೨ ಗಂಟೆ ಹೊತ್ತಿಗೆ ಅನ್ನಪೂರ್ಣೇಶ್ವರಿ ಸ್ಟೇಷನ್‌ನ ಪೊಲೀಸ್ ಅಧಿಕ್ಷಕರು ನನ್ನನ್ನು ಮುಂದಿನ ತನಿಖೆಗಾಗಿ ಕರೆದರು. ನನ್ನ ಕಾರನ್ನು ಸೀಜ್ ಮಾಡುವಾಗ ಇದ್ದ ಆ ಇಬ್ಬರು ಮಹಜರ್ ಸಾಕ್ಷಿದಾರರೇ ಮತ್ತೆ ಬಂದಿದ್ದರು. ಮಹಜರ್ ಸಾಕ್ಷಿದಾರರು, ‘ನಿಮ್ಮನ್ನು ಮನೆಗೆ ಕರೆದುಕೊಂಡು ಹೋದರೆ ಡಿವಿಆರ್ ಮತ್ತು ಬಟ್ಟೆಗಳನ್ನು ಹಾಜರುಪಡಿಸುತ್ತೀರ’ ಎಂದು ಕೇಳಿದರು. ನಾನು ಆಯ್ತು ಎಂದೆ. ನಂತರ ನನ್ನನು ಪೊಲೀಸ್ ಜೀಪಿನಲ್ಲಿ ಕೂರಿಸಿಕೊಂಡರು. ನಾನು ನಮ್ಮ ಮನೆಗೆ ಹೋಗುವ ದಾರಿ ತೋರಿಸಿದೆ.

ಮಧ್ಯರಾತ್ರಿ ನಮ್ಮ ಮನೆಯಲ್ಲಿ ನನ್ನ ಬಟ್ಟೆ, ಡಿವಿಆರ್ ಸೀಜ್:  ಮಧ್ಯರಾತ್ರಿ ೧ ಗಂಟೆ ಸುಮಾರಿಗೆ ನಮ್ಮ ಮನೆ ತಲುಪಿದೆವು. ನಂತರ ನಾನು ಅವರನ್ನು ನಮ್ಮ ಮನೆಯ ಒಳಗಡೆ ಕರೆದುಕೊಂಡು ಹೋದೆ. ನಮ್ಮ ಮನೆಯ ಹಾಲ್‌ನಲ್ಲಿ ಇದ್ದ ಡಿವಿಆರ್ (HIKVISION) ಅನ್ನು ನಾನೇ ತೆಗೆದು ಅವರಿಗೆ ಕೊಟ್ಟೆ. ಆ ವೇಳೆ ನನ್ನನ್ನು ನಿಲ್ಲಿಸಿ ನನ್ನ ಬಲಕ್ಕೆ ಲ್ಯಾಪ್‌ಟಾಪ್ ಹಿಡಿದುಕೊಂಡಿದ್ದ ಪೊಲೀಸ್ ಸಿಬ್ಬಂದಿ ನಟೇಶ್, ಅವರ ಪಕ್ಕದಲ್ಲಿ ಪೊಲೀಸ್ ಸಿಬ್ಬಂದಿ, ಅವರ ಪಕ್ಕದಲ್ಲಿ ಇಬ್ಬರು ಮಹಜರ್ ಸಾಕ್ಷಿದಾರರು, ಅವರ ಪಕ್ಕದಲ್ಲಿ ಪೊಲೀಸ್ ನಿರೀಕ್ಷಕರು ನಿಂತುಕೊಂಡು ಒಂದು ಫೋಟೋವನ್ನು ತೆಗೆದುಕೊಂಡರು.

ನಂತರ ನನ್ನ ರೂಂಗೆ ಕರೆದುಕೊಂಡು ಹೋಗಿ, ರೇಣುಕಾಸ್ವಾಮಿ ಕೊಲೆಯಾದ ದಿನ ನಾನು ಧರಿಸಿದ್ದ (Stunt Boy) ಕಂಪೆನಿಯ ಬ್ಲೂ ಜೀನ್ಸ್ , MODZON ಕಂಪೆನಿಯ ಬ್ಲಾಕ್ ಕಲರ್ ಟೀ-ಶರ್ಟ್) ಬಟ್ಟೆಗಳನ್ನು ಅವರಿಗೆ ನೀಡಿದೆ. ಈ ಸಂದರ್ಭದಲ್ಲಿ ನನ್ನನ್ನು ನಿಲ್ಲಿಸಿಕೊಂಡು ಒಂದು ಫೋಟೋ ತೆಗೆದುಕೊಂಡರು. ಮಹಜರ್ ಸಾಕ್ಷಿದಾರರು ಅವುಗಳ ವಿವರ ದಾಖಲಿಸಿ ಪ್ರಿಂಟ್‌ಔಟ್ ತೆಗದು, ನನ್ನ ಸಹಿ ಪಡೆದರು.

ಮೋರಿಗೆ ಎಸೆದಿದ್ದ ಮೊಬೈಲ್ ಸಿಗಲೇ ಇಲ್ಲ:  ೧೭.೦೬.೨೦೨೪ರಂದು ಸ್ಟೇಷನ್‌ಗೆ ಬಂದ ಎಸಿಪಿ ಚಂದನ್ ಅವರು, ‘ನೀನು ನಿನ್ನಹೇಳಿಕೆಯಲ್ಲಿ ಮೊಬೈಲ್‌ಗಳನ್ನು ಬಿಸಾಕಿದೆ ಎಂದು ತಿಳಿಸಿದ್ದೀಯ. ಈಗ ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋದರೆ ಆ ಸ್ಥಳವನ್ನು ತೋರಿಸುತ್ತೀಯ’ ಎಂದು ಕೇಳಿದರು. ನಾನು ತೋರಿಸುತ್ತೇನೆ ಎಂದು ಹೇಳಿದೆ. ಅಷ್ಟೊತ್ತಿಗೆ ಇಬ್ಬರು ಮಹಜರ್ ಸಾಕ್ಷಿದಾರರು ಕೂಡ ಬಂದಿದ್ದರು. ನಂತರ ನನ್ನನ್ನು ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡರು. ನಾನು ಪೊಲೀಸರಿಗೆ ಸತ್ವ ಅಪಾರ್ಟ್ ಮೆಂಟ್ ಕಡೆ ದಾರಿ ತೋರಿಸಿದೆ. ನಂತರ ಆ ಅಪಾರ್ಟ್‌ಮೆಂಟ್ ಹತ್ತಿರ ಇರುವ ಮೋರಿ ಬಳಿ ಕರೆದುಕೊಂಡು ಹೋದೆ. (ಆ ಸತ್ವ ಅಪಾಟ್ ಮೆಂಟ್ ಬಳಿಯೇ ನಾವು ರೇಣುಕಾಸ್ವಾಮಿಯ ಡೆಡ್ ಬಾಡಿಯನ್ನು ಬಿಸಾಕಿ ದ್ದುದು) ಅಷ್ಟೊತ್ತಿಗೆ ಅಲ್ಲಿಗೆ ಬಿಬಿಎಂಪಿಯ ನಾಲ್ಕೈದು ಜನ ಪೌರಕಾರ್ಮಿಕ ಸಿಬ್ಬಂದಿಯನ್ನು ಕರೆಸಿದ್ದರು. ಅಲ್ಲಿ ನಾನು ಮೋರಿಗೆ ಮೊಬೈಲ್‌ಗಳನ್ನು ಎಸೆದ ಜಾಗ ತೋರಿಸಿದಾಗ, ಆ ಪೌರಕಾರ್ಮಿಕ ಸಿಬ್ಬಂದಿ ಮೋರಿಗೆ ಇಳಿದರು. ಸುತ್ತಮುತ್ತಲ ಕೊಳಚೆ ನೀರು ಹರಿಯುತ್ತಿದ್ದ ಜಾಗಗಳಲ್ಲೆಲ್ಲಾ ಮೊಬೈಲ್‌ಗಳನ್ನು ಹುಡುಕಾಡಿದರು, ಆದರೆ ಅವರಿಗೆ ಮೊಬೈಲ್‌ಗಳು ಸಿಗಲಿಲ್ಲ.

ಈ ಕುರಿತ ವಿವರಗಳನ್ನು ದಾಖಲಿಸಲು ಮಹಜರ್ ಸಾಕ್ಷಿದಾರರು ಟೈಪ್ ಮಾಡಿಸುತ್ತಿದ್ದರು. ಈ ಸಂದರ್ಭದಲ್ಲಿ ಮೋರಿಯ ಮುಂದೆ ನನ್ನನ್ನು ನಿಲ್ಲಿಸಿ ಎರಡು ಫೋಟೋಗಳನ್ನು ತೆಗೆಸಿದರು. ನಂತರ ನನ್ನನ್ನು ಇಬ್ಬರು ಪಂಚರೊಂದಿಗೆ ವಾಪಸ್ ಸ್ಟೇಷನ್‌ಗೆ ಕರೆದುಕೊಂಡು ಬಂದು ಅಲ್ಲಿ ಪ್ರಿಂಟ್‌ಔಟ್‌ಗಳನ್ನು ತೆಗೆದು ನನ್ನ ಸಹಿ ಪಡೆದರು.

ಅದೇ ದಿನ ಮಧ್ಯಾಹ್ನ ೩ರಿಂದ ೪ ಗಂಟೆ ಸುಮಾರಿಗೆ ನಮ್ಮನ್ನು (ದರ್ಶನ್, ಪ್ರದೋಷ್, ನಾಗರಾಜ್, ವಿನಯ್, ಪವನ್) Stoney Brook ಹೋಟೆಲ್ ಹತ್ತಿರ ಕರೆದುಕೊಂಡು ಹೋದರು. ನಾವು ಆ ಹೋಟೆಲ್ ಹತ್ತಿರ ಹೋಗುವಷ್ಟರಲ್ಲಿ ಚಿಕ್ಕಣ್ಣ(ಚಾ. ಸಾ.೮೦) ಅವರು ಕೂಡ ಬಂದಿದ್ದರು. ಆ ಹೋಟೆಲ್‌ನಲ್ಲಿ ಇದ್ದ D-Boss Safar ಎಂಬ ಜಾಗಕ್ಕೆ ಕರೆದುಕೊಂಡು ಹೋದರು. (ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ ದಿನ ಪಾರ್ಟಿ ಮಾಡಿದ ಸ್ಥಳ ಅದಾಗಿತ್ತು) ಪಾರ್ಟಿ ಮಾಡಿದ ದಿನ ನಾವೆಲ್ಲರೂ ಯಾವ ರೀತಿ ಕುಳಿತಿದ್ದೆವೋ ಅದೇ ರೀತಿ ನಮ್ಮನ್ನೆಲ್ಲ ಅಲ್ಲಿ ಮತ್ತೆ ಕೂರಿಸಿದರು. ಆ ದಿನ Stoney Brook ಹೋಟೆಲ್‌ನಲ್ಲಿ ನಮಗೆ ಫುಡ್ ಮತ್ತು ಡ್ರಿಂಕ್ಸ್ ಸರ್ವ್ ಮಾಡಿದ ಹುಡುಗನನ್ನೂ ಕೂಡ ಅಲ್ಲಿಗೆ ಕರೆಸಿದರು. ನಂತರ ಅದರ ಮರು ಚಿತ್ರಣದಂತೆ ಮಾಡಿದ ಫೊಟೋಗಳನ್ನು ತೆಗೆಸಿದರು. ಈ ವಿವರಗಳನ್ನು ಪಂಚ ಸಾಕ್ಷಿದಾರರು ಟೈಪ್ ಮಾಡಿಸುತ್ತಿದ್ದರು. ನಂತರ ಮಹಜರ್ ಪ್ರಿಂಟ್ ಔಟ್ ತೆಗೆದು ನಮ್ಮೆಲ್ಲರ ಸಹಿಗಳನ್ನು ಪಡೆದರು.

Tags:
error: Content is protected !!