Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಕಿರಿಕಿರಿ 

ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ ನಿರ್ಧಾರ 

ಕುಶಾಲನಗರ: ಪುರಸಭೆ ವ್ಯಾಪ್ತಿಯ ಯೋಗಾನಂದ ಬಡಾವಣೆಯಲ್ಲಿ ಅವೈಜ್ಞಾನಿಕ ಚರಂಡಿಯಿಂದ ಸ್ಥಳೀಯರು ಹೈರಾಣಾಗಿದ್ದು, ಚರಂಡಿ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸಲು ಸ್ಥಳೀಯರು ಮುಂದಾಗಿದ್ದಾರೆ. ಇಲ್ಲಿನ ಪುರಸಭೆಯ ೮ನೇ ವಾರ್ಡ್‌ನ ಯೋಗಾನಂದ ಬಡಾವಣೆಯ ಹೊಳೆಯ ಪಕ್ಕದ ಕೊನೆಯ ರಸ್ತೆಯಲ್ಲಿ ಚರಂಡಿ ಸಮಸ್ಯೆ ತಲೆದೋರಿದೆ. ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ಚರಂಡಿ ನೀರು ಕಟ್ಟಿನಿಂತಿದೆ. ಸರಿಯಾಗಿ ನೀರು ಹರಿಯುವ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಕೊಳಚೆ ನೀರು ಕಟ್ಟಿನಿಂತಿದ್ದು, ಇದರಿಂದ ರೋಗರುಜಿನಗಳು  ಹರಡುವ ಸಾಧ್ಯತೆಗಳು ಹೆಚ್ಚಿವೆ.

ಕೊಳಚೆ ನೀರು ಸರಾಗವಾಗಿ ಹರಿಯದೇ ಮನೆ ಮುಂಭಾಗ ನಿಂತ ಕೊಳಚೆ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಸೊಳ್ಳೆಕಾಟದಿಂದ ಸ್ಥಳೀಯರು ಬೇಸತ್ತಿದ್ದು, ಅನಾರೋಗ್ಯದಿಂದ ಆಸ್ಪತ್ರೆಗೆ ಓಡಾಡುವಂತಾಗಿದೆ. ಮಕ್ಕಳ ಆರೋಗ್ಯದಲ್ಲಿ ಆಗಾಗ ಏರುಪೇರು ಕಾಣುತ್ತಿದ್ದು, ಚರಂಡಿ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಚರಂಡಿ ನೀರು ದುರ್ವಾಸನೆ ಬೀರುತ್ತಿದ್ದು, ರಸ್ತೆಯಲ್ಲಿ ತಿರುಗಾಡುವವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ದಿನನಿತ್ಯ ದುರ್ವಾಸನೆ ಮಿಶ್ರಿತ ಗಾಳಿಯನ್ನು ಸೇವಿಸುವಂತಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದಾಗಿದೆ. ಪುರಸಭೆಯಿಂದಲೂ ಚರಂಡಿ ಸ್ವಚ್ಛತೆ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಅಂಗನವಾಡಿಗಳಿಗೆ ೬ ತಿಂಗಳಿಂದ ಬಾರದ ಮೊಟ್ಟೆ ಹಣ!

ಪುರಸಭೆಯ ವ್ಯಾಪ್ತಿಯಲ್ಲಿ ಇಂದಿಗೂ ಇಂತಹ ಸಮಸ್ಯೆಗಳೊಂದಿಗೆ ಜೀವಿಸಬೇಕಾಗಿರುವುದು ಇಲ್ಲಿನ ಆಡಳಿತ ವೈಫಲ್ಯವನ್ನು ಎತ್ತಿ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಬೇಸತ್ತಿರುವ ಸ್ಥಳೀಯ ನಿವಾಸಿಗಳು, ಸಮಸ್ಯೆ ಪರಿಹರಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗುತ್ತೇವೆ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

” ಕುಶಾಲನಗರ ಪುರಸಭೆಯಿಂದ ಇಲ್ಲಿನ ಚರಂಡಿ ಸಮಸ್ಯೆಗೆ ಪರಿಹಾರ ಒದಗಿಸಿಕೊಡಲು ಸಾಧ್ಯವಾಗದಿ ರುವುದು ವಿಪರ್ಯಾಸ. ಮಕ್ಕಳು, ಹಿರಿಯರು ಎನ್ನದೆ, ಜನರ ಆರೋಗ್ಯ ಹದಗೆಡುತ್ತಿದೆ. ದುರ್ವಾಸನೆಯಲ್ಲಿ ಕಾಲಕಳೆಯುವಂತಾಗಿದ್ದು, ಪುರಸಭೆ ಇಲ್ಲಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.”

– ಹನೀಫ್, ಸಮಾಜ ಸೇವಕ 

” ಸಾರ್ವಜನಿಕರ ದೂರಿನನ್ವಯ ಸ್ಥಳ ಪರಿಶೀಲನೆ ಮಾಡಲಾಗುವುದು. ನಂತರ ಆದಷ್ಟು ಬೇಗನೇ ಚರಂಡಿ ಸಮಸ್ಯೆಗೆ ಪರಿಹಾರ ನೀಡಲು ಪುರಸಭೆ ಕಾರ್ಯೋನ್ಮುಖವಾಗಲಿದೆ.”

-ಗಿರೀಶ್, ಪುರಸಭೆ ಮುಖ್ಯಾಧಿಕಾರಿ

” ಹಲವು ವರ್ಷಗಳಿಂದ ಚರಂಡಿ ಸಮಸ್ಯೆ ಬಗ್ಗೆ ಪಂಚಾಯಿತಿ ಸದಸ್ಯರಿಗೆ ಹಾಗೂ ಪುರಸಭೆಗೆ ದೂರು ನೀಡುತ್ತಲೇ ಬಂದಿದ್ದೇವೆ. ಆದರೆ ಈವರೆಗೂ ಸಮಸ್ಯೆ ಬಗೆಹರಿದಿಲ್ಲ. ಕುಶಾಲನಗರ ಪುರಸಭೆ ಆದಷ್ಟು ಬೇಗನೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ತಪ್ಪಿದಲ್ಲಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ.”

-ಶರೀಫ್, ಸ್ಥಳೀಯ ನಿವಾಸಿ

” ಅವೈಜ್ಞಾನಿಕ ಚರಂಡಿ ಸಮಸ್ಯೆಯಿಂದ ಸ್ಥಳೀಯರು ಹೈರಾಣಾಗಿದ್ದಾರೆ. ಸೊಳ್ಳೆ, ನೊಣಗಳ ಕಾಟ ಸಹಿಸಲಾಗುತ್ತಿಲ್ಲ. ಮಕ್ಕಳ ಆರೋಗ್ಯ ಏರುಪೇರಾಗುತ್ತಿದೆ. ಅನಾರೋಗ್ಯದಿಂದ ದಿನನಿತ್ಯ ಆಸ್ಪತ್ರೆಗೆ ಓಡಾಡಬೇಕಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ.”

-ಫೌಸಿಯಾ, ಸ್ಥಳೀಯ ನಿವಾಸಿ

-ಕೆ.ಬಿ. ಶಂಶುದ್ದೀನ್

Tags:
error: Content is protected !!