೩ ವರ್ಷದಿಂದ ಹತ್ತಿ ದರ ಇಳಿಕೆ; ಬೇಸತ್ತು ಅನ್ಯ ಬೆಳೆಗೆ ಮುಂದಾದ ಅನ್ನದಾತರು
ಕೋಟೆ, ನಂಜನಗೂಡು ತಾಲ್ಲೂಕಿನಲ್ಲಿ ಹತ್ತಿ ಬೆಳೆಯುವ ಪ್ರದೇಶ ಇಳಿಮುಖ
೪೫,೨೧೯ ಹೆಕ್ಟೇರ್‌ನಲ್ಲಿ ಬಿತ್ತನೆ; ೨೨,೦೦೦ ಹೆಕ್ಟೆ ರ್ ಪ್ರದೇಶ ಹೆಚ್ಚಳ
ಕೆ.ಬಿ.ರಮೇಶನಾಯಕ
ಮೈಸೂರು: ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಹತ್ತಿ ಬೆಲೆಯು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವ ಕಾರಣ ಬೇಸತ್ತಿರುವ ಹತ್ತಿ ಬೆಳೆಗಾರರು ಮುಸುಕಿನ ಜೋಳ ಬೆಳೆಯುವತ್ತ ಮುಖ ಮಾಡಿದ್ದು, ಜಿಲ್ಲೆಯ ಎಚ್. ಡಿ. ಕೋಟೆ, ನಂಜನಗೂಡು ತಾಲ್ಲೂಕುಗಳಲ್ಲಿ ಮುಸುಕಿನ ಜೋಳ ಬೆಳೆಯುವ ಪ್ರದೇಶ ವಿಸ್ತರಣೆಗೊಂಡಿದೆ.
ಕಳೆದ ಮೂರು ವರ್ಷಗಳಿಂದ ರೇಷ್ಮೆಗೂಡಿನ ದರ ಏರಿಕೆಯಿಂದ ರೇಷ್ಮೆ ಬೆಳೆಯುವ ಪ್ರದೇಶ ಹೆಚ್ಚಾಗಿರುವ ಹೊತ್ತಲ್ಲೇ ವಾಣಿಜ್ಯ ಬೆಳೆಯಾದ ಹತ್ತಿ ಬದಲಿಗೆ ಮುಸುಕಿನ ಜೋಳ ಬೆಳೆಯಲು ರೈತರು ಒಲವು ತೋರಿದ್ದಾರೆ. ಇದರಿಂದಾಗಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮುಸುಕಿನ ಜೋಳ ಬಿತ್ತನೆ ಮಾಡಿರುವ ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಬಂದಿರುವ ರೈತರು ದ್ವಿದಳ ಧಾನ್ಯಕ್ಕಿಂತಲೂ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರು. ಪಿರಿಯಾಪಟ್ಟಣ, ಹುಣಸೂರು ತಾಲ್ಲೂಕುಗಳಲ್ಲಿ ಹೆಚ್ಚಾಗಿ ತಂಬಾಕು ಬೆಳೆದರೆ, ಎಚ್. ಡಿ. ಕೋಟೆ, ನಂಜನಗೂಡು ತಾಲ್ಲೂಕಿನಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುತ್ತಿದ್ದರು. ಕೆ. ಆರ್. ನಗರ, ತಿ. ನರಸೀಪುರ ತಾಲ್ಲೂಕುಗಳಲ್ಲಿ ಭತ್ತದ -ಸಲನ್ನು ಬೆಳೆಯುವುದು ಸಾಮಾನ್ಯವಾಗಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಪ್ರತಿ ಕ್ವಿಂಟಾಲ್ ಹತ್ತಿ ಬೆಲೆ ೯ಸಾವಿರ ರೂ. ಇದ್ದದ್ದು, ಈಗ ಮಾರುಕಟ್ಟೆಯಲ್ಲಿ ಕನಿಷ್ಠ ೨,೮೮೦ ರೂ. ನಿಂದ ೫,೩೦೦ ರೂ. ಗೆ ಇಳಿದಿರುವುದರಿಂದ ಹತ್ತಿ ಬೆಳೆಗಾರರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ತಮಿಳುನಾಡಿನ ಕೊಯಮತ್ತೂರು, ತಿರುಪೂರ್, ಸೇಲಂ ಮೊದಲಾದ ಭಾಗಗಳಿಂದ ಆಗಮಿಸುತ್ತಿದ್ದ ಖರೀದಿದಾರರು ಈಗ ಕಡಿಮೆಯಾಗಿದ್ದಾರೆ. ಹೀಗಾಗಿ, ಸ್ಥಳೀಯವಾಗಿ ಮಾರಾಟ ಮಾಡಬೇಕಿರುವುದು ದರ ಕುಸಿತಕ್ಕೆ ಮೂಲ ಕಾರಣವಾಗಿದ್ದು, ಹಾಕಿದ ಬಂಡವಾಳ ಸಿಗದೆ ರೈತರು ಪರಿತಪಿಸುತ್ತಿದ್ದಾರೆ. ಇದರಿಂದಾಗಿ ಹತ್ತಿ ಬೆಳೆಯುವುದಕ್ಕೆ ನಿರಾಸಕ್ತಿ ಹೊಂದಿ ಮುಸುಕಿನ ಜೋಳದ ಕಡೆಗೆ ಒಲವು ತೋರಿರುವ ಪರಿಣಾಮ ಈ ಬಾರಿ ಮುಸುಕಿನ ಜೋಳ ಬೆಳೆಯುವ ಪ್ರದೇಶ ದುಪ್ಪಟ್ಟಾಗಿದೆ.
೪೫,೨೧೯ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ: ಎಚ್. ಡಿ. ಕೋಟೆ, ನಂಜನಗೂಡು ತಾಲ್ಲೂಕುಗಳಲ್ಲಿ ಹೆಚ್ಚಾಗಿ ಹತ್ತಿ ಬೆಳೆಯುತ್ತಿದ್ದರಿಂದ ೨೩,೪೯೫ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಹತ್ತಿ ದರ ತೀವ್ರವಾಗಿ ಇಳಿಕೆ ಕಂಡ ಬೆನ್ನಲ್ಲೇ ಈ ಬಾರಿ ೪೫,೨೧೯ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಂದಾಜು ೨೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನಜೋಳ ಬಿತ್ತನೆ ಪ್ರದೇಶ ಜಾಸ್ತಿಯಾಗಿರುವುದು ಗಮನಾರ್ಹವಾಗಿದೆ. ಹತ್ತಿ ಬೆಳೆಗೆ ಹೆಚ್ಚು ಗೊಬ್ಬರ ಬಳಕೆ, ಕೂಲಿಯಾಳುಗಳಿಗೆ ಹೆಚ್ಚು ಕೂಲಿ ಭರಿಸಬೇಕಾಗಿರುವುದರಿಂದ, ಅಲ್ಲದೆ, ಮಳೆ ಅಥವಾ -ಸಲು ಕೈಕೊಟ್ಟರೆ ದುಪ್ಪಟ್ಟು ನಷ್ಟವಾಗಲಿದೆ. ಆದರೆ, ಮುಸುಕಿನ ಜೋಳ ಬೆಳೆಯಲ್ಲಿ ಗೊಬ್ಬರ ಬಳಕೆ ಕಡಿಮೆಯಾಗಿರುವು ದರ ಜತೆಗೆ ಮೂರು ತಿಂಗಳಲ್ಲಿ -ಸಲು ಕೈಸೇರುವ ಕಾರಣ ರೈತರು ಬೆಳೆ ಪರಿವರ್ತನೆಗೆ ಮುಖಮಾಡಿದ್ದಾರೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ತಂಬಾಕು ತುಸು ಹೆಚ್ಚಳ: ಸರ್ಕಾರ ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರುತ್ತಿರುವ ನಡುವೆಯೂ ಜಿಲ್ಲೆಯಲ್ಲಿ ತಂಬಾಕು ಬೆಳೆ ಪ್ರದೇಶ ತುಸು ಜಾಸ್ತಿಯಾಗಿದೆ. ಕಳೆದ ವರ್ಷ ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು,ಎಚ್. ಡಿ. ಕೋಟೆ, ಕೆ. ಆರ್. ನಗರ ತಾಲ್ಲೂಕುಗಳ ಕೆಲವು ಪ್ರದೇಶ ಸೇರಿದಂತೆ ೬೧,೦೩೦ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ನಾಟಿ ಮಾಡಿದ್ದರೆ, ಈ ವರ್ಷ ೬೧,೯೫೫ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಕಳೆದ ವರ್ಷ ತಂಬಾಕು ಬೆಲೆಯು ಜಾಸ್ತಿಯಾದ ಪರಿಣಾಮ ಬಹುತೇಕ ರೈತರು ತಾವು ಹೊಂದಿರುವ ಎಲ್ಲಾ ಜಮೀನಿನಲ್ಲಿ ತಂಬಾಕು ನಾಟಿ ಮಾಡಿದ್ದರಿಂದ ಬೆಳೆ ಪ್ರದೇಶ ಹೆಚ್ಚಳಕ್ಕೆ ಕಾರಣವಾಗಿದೆ.
ಬಿತ್ತನೆ ಪ್ರದೇಶವೂ ಹೆಚ್ಚಳ
ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಚೆನ್ನಾಗಿ ಬಿದ್ದಿರುವ ಕಾರಣ ಜಿಲ್ಲೆಯಲ್ಲಿ ಮುಸುಕಿನ ಜೋಳ ಬಿತ್ತನೆ ಪ್ರದೇಶ ಜಾಸ್ತಿಯಾಗಿದೆ. ಈ ವರ್ಷ ೧,೬೦,೦೮೮ ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ ೧,೪೦,೮೬೬ ಹೆಕ್ಟೇರ್ ಮಾತ್ರ ಬಿತ್ತನೆಯಾಗಿತ್ತು. ವಾಡಿಕೆಗಿಂತಲೂ ಹೆಚ್ಚು ಮಳೆ ಬಿದ್ದು ಭೂಮಿ ಹದ ಮಾಡಿಕೊಂಡಿದ್ದ ರಿಂದ ಬಿತ್ತನೆ ಪ್ರಮಾಣ ಜಾಸ್ತಿಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಕಳೆದ ಎರಡು-ಮೂರು ವರ್ಷಗಳಿಂದ ಹತ್ತಿ ಬೆಲೆ ಇಳಿಕೆಯಾಗಿರುವ ಪರಿಣಾಮ ರೈತರು ಮುಸುಕಿನ ಜೋಳ ಬೆಳೆಯುವುದಕ್ಕೆ ಒಲವು ತೋರಿದ್ದು, ಹತ್ತಿ ಬಿತ್ತನೆ ಪ್ರದೇಶ ಇಳಿಕೆಯಾ ಗಿದೆ. ಎಚ್. ಡಿ. ಕೋಟೆ, ನಂಜನಗೂಡು ತಾಲ್ಲೂಕು ಗಳಲ್ಲಿ ಈ ವರ್ಷ ೨೦ ಸಾವಿರ ಎಕರೆಗೂ ಹೆಚ್ಚಿನ ಪ್ರದೇಶ ದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಬಹುದಾಗಿರುವುದರಿಂದ ರೈತರು ಮುಸುಕಿನ ಜೋಳ ಬಿತ್ತನೆ ಮಾಡಲು ಕಾರಣವಾಗಿದೆ. -ಕೆ.ಎಚ್.ರವಿ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ





