Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ರಸ್ತೆ ಮಧ್ಯದಲ್ಲೆ ತೆರೆದ ಮ್ಯಾನ್‌ಹೋಲ್; ಅಪಾಯಕ್ಕೆ ಆಹ್ವಾನ

ಅವಘಡಗಳು ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ

ಎಂ. ನಾರಾಯಣ
ತಿ. ನರಸೀಪುರ: ಪಟ್ಟಣದ ಪ್ರಮುಖ ಭಾಗದಲ್ಲೇ ಒಳಚರಂಡಿಯ ಮ್ಯಾನ್ ಹೋಲ್ ತೆರೆದುಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಸಂಬಂಧಪಟ್ಟವರು ಗಮನಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಮಧ್ಯಭಾಗದಲ್ಲಿ ಮ್ಯಾನ್ ಹೋಲ್ ಮುಚ್ಚಳ ತೆರೆದುಕೊಂಡಿದ್ದು, ಅಪಘಾತಗಳಾಗಿ ಸಾವು ನೋವು ಸಂಭವಿಸುವ ಮುನ್ನ ಪುರಸಭೆ ಎಚ್ಚೆತ್ತು ಅದನ್ನು ಮುಚ್ಚಬೇಕು ಎಂದು ಪಟ್ಟಣದ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯವರು ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮ್ಯಾನ್ ಹೋಲ್ ಮುಚ್ಚಳ ತೆರೆದು ತಿಂಗಳುಗಳೇ ಕಳೆದರೂ ಪುರಸಭೆ ಇತ್ತ ಗಮನ ಹರಿಸಿಲ್ಲ. ಮ್ಯಾನ್ ಹೋಲ್ ಮುಚ್ಚಳ ತೆರೆದಿರುವ ಸಮೀಪದಲ್ಲೇ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಇದ್ದು, ಪ್ರತಿನಿತ್ಯ ಸಾವಿರಾರು ಮಕ್ಕಳು ಈ ರಸ್ತೆಯ ಮೂಲಕ ಶಾಲೆಗೆ ತೆರಳುತ್ತಾರೆ. ಪೋಷಕರು ವಾಹನಗಳಲ್ಲಿ ಮಕ್ಕಳನ್ನು ಕರೆತರುತ್ತಾರೆ. ಈ ವೇಳೆ ಅವಘಡಗಳಾದರೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಅಪಘಾತಗಳು ಸಂಭವಿಸುವ ಮುನ್ನವೇ ಮುಚ್ಚುವ ಕಾರ್ಯ ಕೈಗೊಳ್ಳ ಬೇಕು ಎಂದು ವಿವೇಕಾನಂದ ನಗರದ ನಿವಾಸಿಗಳು ಮನವಿ ಮಾಡಿದ್ದಾರೆ. ಸೇಂಟ್ ಮೇರಿಸ್ ಶಾಲೆ ವತಿಯಿಂದ ಸ್ಥಳೀಯ ಪುರಸಭಾ ಸದಸ್ಯೆ ರೂಪ ಪರಮೇಶ್ ಹಾಗೂ ತಾಲ್ಲೂಕು ತಹಸಿಲ್ದಾರ್‌ರವರಿಗೂ ಮನವಿ ಮಾಡಿದ್ದರೂ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಸೆಂಟ್ ಮೇರಿಸ್ ಶಾಲೆಯ ಮುಖ್ಯ ದ್ವಾರದ ಬಳಿಯ ರಸ್ತೆಯಲ್ಲಿ ಮ್ಯಾನ್ ಹೋಲ್ ಮುಚ್ಚಳವು ತೆರೆದ ಸ್ಥಿತಿಯಲ್ಲಿದ್ದು, ಶಾಲೆಯ ಮಕ್ಕಳು ವಾಹನಗಳಲ್ಲಿ ಈ ರಸ್ತೆಯಲ್ಲಿ ಚಲಿಸು ವುದರಿಂದ ಸಮಸ್ಯೆ ಆಗುತ್ತದೆ. ಮ್ಯಾನ್ ಹೋಲ್ ಮುಚ್ಚಿಸುವಂತೆ ಪುರಸಭೆಗೆ ಶಾಲೆ ವತಿಯಿಂದ ಲಿಖಿತ ಮನವಿ ಸಲ್ಲಿಸಲಿದ್ದೇವೆ. -ಆರ್. ಗೋವಿಂದ, ಉಪ ಪ್ರಾಂಶುಪಾಲರು, ಸೇಂಟ್ ಮೇರಿಸ್ ಶಾಲೆ, ತಿ. ನರಸೀಪುರ.

ಪುರಸಭಾ ವ್ಯಾಪ್ತಿಯಲ್ಲಿ ಹಲವು ಕಡೆ ಒಳಚರಂಡಿ ವ್ಯವಸ್ಥೆ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಂಡಿರುವ ಕೆಲವು ಕಡೆ ಮ್ಯಾನ್‌ಹೋಲ್‌ಗಳ ಮುಚ್ಚಳ ತೆಗೆದುಕೊಂಡಿವೆ. ಮತ್ತೆ ಕೆಲವು ಕಡೆ ದುರಸ್ತಿಯಲ್ಲಿವೆ. ಈ ಬಗ್ಗೆ ಪುರಸಭೆ ವತಿಯಿಂದ ಕೆಯುಐಡಿ ಎಫ್‌ಸಿಗೆ ಪತ್ರ ಬರೆಯಲಾಗಿದ್ದು, ವರ್ಕ್ ಆರ್ಡರ್ ಕೂಡ ಆಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. -ಸಿದ್ದಯ್ಯ, ಇಂಜಿನಿಯರ್, ಪುರಸಭೆ, ತಿ. ನರಸೀಪುರ.

Tags:
error: Content is protected !!