Mysore
20
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ವರ್ಷ ಕಳೆದರೂ ಟೆಂಡರ್ ಹಣ ಕಟಿಸಿಕೊಳದ ಗ್ರಾ.ಪಂ

ಅಭಿವೃದ್ಧಿಗೆ ವ್ಯಯಿಸಬೇಕಾದ ೧೨. ೬೧ ಲಕ್ಷ ರೂ. ತೆರಿಗೆ ಪೋಲಾಗುವ ಭೀತಿ; ಕೂಡಲೇ ಹಣ ಸಂಗ್ರಹಿಸಲು ಒತ್ತಾಯ

ಕೃಷ್ಣ ಸಿದ್ದಾಪುರ
ಸಿದ್ದಾಪುರ: ಆದಾಯ ಸಂಗ್ರಹಣೆಯಲ್ಲಿ ಮುಂಚೂಣಿಯಲ್ಲಿ ಇರುವ ಸಿದ್ದಾಪುರ ಗ್ರಾ. ಪಂ. ೨೦೨೪-೨೫ನೇ ಸಾಲಿನ ಮಾಂಸ ಮಳಿಗೆಯ ಟೆಂಡರ್ ಹಣ ಕಟ್ಟಿಸಿಕೊಳ್ಳದೆ ಕಾಲಹರಣ ಮಾಡುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಬೇಕಾದ ಲಕ್ಷಾಂತರ ರೂ. ತೆರಿಗೆ ಹಣ ಕೈ ತಪ್ಪುವ ಭೀತಿ ಎದುರಾಗಿದೆ.

ಸಿದ್ದಾಪುರ ಪಟ್ಟಣವು ನೆಲ್ಲಿಹುದಿಕೇರಿ, ಇಂಜಿಲಗೆರೆ, ಮಾಲ್ದಾರೆ ಹಾಗೂ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ದೊಡ್ಡ ಪಟ್ಟಣವಾಗಿದ್ದು, ಬಹುತೇಕ ಸಾಮಗ್ರಿಗಳಿಗೆ ಇಲ್ಲಿಗೆ ಬರಬೇಕು. ಪಟ್ಟಣದಲ್ಲಿ ಒಟ್ಟು ೧೦ ಕೋಳಿ, ೫ ಕುರಿ, ೨ ಹಂದಿ ಮಾಂಸ ಮಳಿಗೆಗಳಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ೨೦೨೪-೨೫ನೇ ಸಾಲಿನಲ್ಲಿ ಹರಾಜನ್ನು ಹಿಂದಿನ ವರ್ಷಕ್ಕಿಂತ ಶೇ. ೨ರಷ್ಟು ಹೆಚ್ಚಿಸಿ ೧೪,೦೭,೬೦೦ ರೂ. ಗೆ ಬಿಡ್ ಮಾಡಲಾಗಿದ್ದು, ಮಾರ್ಚ್ ಅಂತ್ಯಕ್ಕೆ ವಾಯಿದೆ ಮುಗಿಯಲಿದೆ.

ಹರಾಜು ಪ್ರಕ್ರಿಯೆ ಮುಗಿದು ವರ್ಷ ಸಮೀಪಿಸುತ್ತಿದ್ದರೂ ಗ್ರಾ. ಪಂ. ಮಾತ್ರ ಟೆಂಡರ್‌ದಾರರಿಂದ ಪೂರ್ಣ ಪ್ರಮಾಣದಲ್ಲಿ ಹಣ ವಸೂಲಿ ಮಾಡದೆ ಇರುವುದರಿಂದ ಪಂಚಾಯಿತಿ ಬೊಕ್ಕಸಕ್ಕೆ ಸೇರಬೇಕಾದ ಸಂಗ್ರಹವಾಗದೆ ಹಾಗೆಯೇ ಉಳಿದಿದೆ. ಟೆಂಡರ್‌ದಾರರ ಹಿತ ಕಾಪಾಡುವ ದೃಷ್ಟಿಯಿಂದ ಕಂತಿನ ರೂಪದಲ್ಲಿ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಕೆಲವು ಬಿಡ್‌ದಾರರು ಒಂದು ಕಂತು ಕಟ್ಟಿದ್ದಾರೆ. ಉಳಿದ ಹಣ ಕಟ್ಟಲು ಸಿದ್ದರಿದ್ದರೂ ಕಟ್ಟದೇ ಬಿಡ್‌ದಾರರು ಕಟ್ಟಿದರೆ ಮಾತ್ರ ತಾವು ಪಾವತಿಸುವುದಾಗಿ ಹೇಳುತ್ತಾರೆ.

ಬಡವರು ಪತ್ರ ವ್ಯವಹಾರಕ್ಕೆಂದು ಪಂಚಾಯಿತಿಗೆ ಬಂದರೆ ಮನೆ, ಕಂದಾಯ, ನೀರಿನ ತೆರಿಗೆ ಎಂದು ಗದಾಪ್ರಹಾರ ಮಾಡುವ ಗ್ರಾಮ ಪಂಚಾಯಿತಿ, ಲಕ್ಷಾಂತರ ರೂ. ತೆರಿಗೆಯನ್ನು ವಸೂಲಿ ಮಾಡದೆ ಜಾಣ ಕುರುಡುತನ ಪ್ರದರ್ಶಿ ಸುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿನ ಪಂಪ್ ಸೆಟ್, ಬೀದಿ ದೀಪದ ವಿದ್ಯುತ್ ಬಿಲ್, ನೌಕರರ ವೇತನ, ಕಚೇರಿ ನಿರ್ವಹಣೆ ಹೀಗೆ ಲಕ್ಷಾಂತರ ರೂ. ಬೇಕಾಗಿದ್ದು, ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡದೆ ಇರುವುದರಿಂದ ಗ್ರಾಪಂ ಆದಾಯ ಕುಂಠಿತಗೊಳ್ಳುವುದರೊಂದಿಗೆ ಪಂಚಾ ಯಿತಿಯ ವಾರ್ಷಿಕ ಬಜೆಟ್ ಮೇಲೆ ಪರಿಣಾಮ ಬೀರಲಿದೆ.

ಗ್ರಾಮ ಸಭೆಯಲ್ಲಿ ಮಾಂಸ ಮಳಿಗೆ ತೆರಿಗೆ ಸಂಗ್ರಹ ವಿಚಾರ ಪ್ರಸ್ತಾಪವಾಗಿ ನಿರ್ಣಯ ಕೈಗೊಂಡಿದ್ದರೂ ಕೆಲವು ಸದಸ್ಯರ ಒತ್ತಡದಿಂದ ವಸೂಲಿ ಮಾಡುವುದನ್ನು ಕೈಬಿಡಲಾಗಿದೆ ಎನ್ನಲಾಗಿದೆ. ಕೂಡಲೆ ಟೆಂಡರ್ ಹಣ ವಸೂಲಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗ್ರಾಮ ಸಭೆಯಲ್ಲಿ ಹರಾಜು ಹಣ ಸಂಗ್ರಹಿಸುವಂತೆ ಸೂಚಿಸಿ ಎರಡು ತಿಂಗಳಾದರೂ ಕಾರ್ಯರೂಪಕ್ಕೆ ಬಂದಿಲ್ಲ.ಪ್ರತಿ ವರ್ಷ ಕಡಿಮೆ ಮೊತ್ತಕ್ಕೆ ಹರಾಜಾಗುವ ಕುರಿ ಮತ್ತು ಹಂದಿ ಮಾಂಸದ ಮಳಿಗೆಗಳ ಬಿಡ್ ಮಾಡಿ ಅಲ್ಲಿ ಕೋಳಿ ಮಾಂಸವನ್ನು ಮಾರಾಟ ಮಾಡಲಾಗು ತ್ತಿದೆ. ಇದರಿಂದ ಕೋಳಿ ಮಾಂಸ ಮಳಿಗೆ ಹೊಂದಿದ ಬಿಡ್‌ದಾರರಿಗೂ ಹಾಗೂ ಗ್ರಾ. ಪಂ. ಗೂ ನಷ್ಟವಾಗುತ್ತಿದೆ. -ಹೆಚ್. ಬಿ. ರಮೇಶ್, ಜಿಲ್ಲಾ ಕಾರ್ಯದರ್ಶಿ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ.

ಬಿಡ್ಡಿಂಗ್‌ದಾರರ ಕೋರಿಕೆ ಮೇರೆಗೆ ಕಂತಿನ ರೂಪದಲ್ಲಿ ಹಣಕಟ್ಟಲು ಅವಕಾಶ ನೀಡಿದ್ದರಿಂದ ನಮ್ಮ ಅವಽಯಲ್ಲಿ ಸಂಪೂರ್ಣ ಹಣ ಜಮಾ ಆಗಿದೆ. ಕುರಿ ಮತ್ತು ಹಂದಿ ಮಾಂಸದ ಪರವಾನಗಿ ಪಡೆದು ಅಲ್ಲಿ ಕೋಳಿ, ಕುರಿಮಾಂಸ ಎರಡನ್ನೂ ಮಾರಾಟ ಮಾಡುವುದರಿಂದ ಕೋಳಿಮಾಂಸ ಟೆಂಡರ್‌ದಾರರಿಗೆ ಅನ್ಯಾಯವಾಗುತ್ತಿದ್ದು, ಪಂಚಾಯಿತಿಗೂ ನಷ್ಟ ಉಂಟಾಗುತ್ತಿದೆ. -ರೀನಾ ತುಳಸಿ, ಗ್ರಾ. ಪಂ. ಸದಸ್ಯೆ.

ಸಂಗ್ರಹವಾಗಬೇಕಾದ ಹಣ ಎಷ್ಟು? ೨೦೨೩-೨೪ನೇ ಸಾಲಿನಲ್ಲಿ ಕೋಳಿ ಮಾಂಸ ಮಳಿಗೆಯೊಂದಕ್ಕೆ ೧,೩೭,೦೦೦ ರೂ. ಗಳಂತೆ ೬ ಮಳಿಗೆಗಳಿಂದ ೮,೨೨,೦೦೦ ರೂ. , ಕುರಿ ಮಾಂಸದ ೪ ಮಳಿಗೆಗಳಿಂದ ಮಳಿಗೆಯೊಂದಕ್ಕೆ ೮೭,೫೦೦ ರೂ. ಗಳಂತೆ ೩,೫೦,೦೦೦ ರೂ. , ಹಂದಿ ಮಾಂಸದ ೨ ಮಳಿಗೆಗಳಿಂದ ಮಳಿಗೆಯೊಂದಕ್ಕೆ ೧,೦೪,೦೦೦ ರೂ. ನಂತೆ ೨,೦೮,೦೦೦ ರೂ. ಸೇರಿ ಒಟ್ಟು ೧೩,೮೦,೦೦೦ ರೂ. ಹರಾಜು ತೆರಿಗೆ ಸಂಗ್ರಹ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಹಿಂದಿನ ತೆರಿಗೆಗೆ ಶೇ. ೨ರಷ್ಟು ಹೆಚ್ಚಿಸಿ ಹಳೆ ಟೆಂಡರ್‌ದಾರರಿಗೆ ಮಳಿಗೆ ನೀಡಿದ್ದು, ಇದರಂತೆ ೧೪,೦೭,೬೦೦ ರೂ. ಸಂಗ್ರಹವಾಗಬೇಕಿತ್ತು. ಆದರೆ ಕೇವಲ ೧,೪೬,೫೦೦ ರೂ. ಮಾತ್ರ ಈವರೆಗೆ ಸಂಗ್ರಹಿಸಿದ್ದು, ಸುಮಾರು ರೂ. ೧೨,೬೧,೧೦೦ ಸಂಗ್ರಹಿಸದೆ ಬಾಕಿ ಉಳಿಸಲಾಗಿದೆ.

ಜಿಲ್ಲೆಯ ಉಳಿದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೋಳಿ ಮಾಂಸ ಬೆಲೆ ಕಡಿಮೆ ಇದ್ದು, ಸಿದ್ದಾಪುರ ಗ್ರಾ. ಪಂ. ವ್ಯಾಪ್ತಿಯಲ್ಲಿ ದುಪ್ಪಟ್ಟು ಬೆಲೆಗೆ ಮಾರಲಾಗುತ್ತಿದೆ. ತೆರಿಗೆ ಪಾವತಿಸದ ಮಾಂಸ ವ್ಯಾಪಾರಿಗಳು ಬಡ ಜನರ ಜೇಬಿಗೆ ಕತ್ತರಿ ಹಾಕಿ ಹಗಲು ದರೋಡೆಯನ್ನು ಮಾಡುತ್ತಿದ್ದು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. -ಎಂ. ಎಂ. ಶೌಕತ್ ಅಲಿ, ಮಾಜಿ ಗ್ರಾ. ಪಂ. ಸದಸ್ಯ

Tags: