Mysore
25
overcast clouds

Social Media

ಶನಿವಾರ, 17 ಅಕ್ಟೋಬರ್ 2026
Light
Dark

ಮತದಾನದ ಹಕ್ಕು ಕಸಿಯಲು ನಮೂನೆ ೭ ದುರ್ಬಳಕೆ ಆರೋಪ!

ಕೆ.ಎಸ್.ಚಂದ್ರಶೇಖರ ಮೂರ್ತಿ

ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ 

ಪರಿಚಯಸ್ಥರೇ ಅರ್ಜಿ ನಮೂನೆ ೭ ಕೊಡಿಸಲು ಪ್ರೇರೇಪಿಸಿದ್ರಾ?

ನಮೂನೆ ೭ ಸಲ್ಲಿಕೆ ರಾಜಕೀಯ ದುರುದ್ದೇಶಪೂರಿತವಾಗಿತ್ತೆ?

ನಮೂನೆ ೭ ಸಲ್ಲಿಸಲು ಮುಕ್ತ ಅವಕಾಶ ದುರ್ಬಳಕೆಗೆ ಎಸ್‌ಐಆರ್ ವೇದಿಕೆ ಆಯ್ತಾ?

ಮೈಸೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡುವ ಉದ್ದೇಶದ ನಮೂನೆ ೭ ದುರ್ಬಳಕೆಯಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ವೈಯಕ್ತಿಕ ದ್ವೇಷ, ರಾಜಕೀಯ ದುರುದ್ದೇಶದಿಂದ ಮತದಾರರ ವಿರುದ್ಧ ಸುಳ್ಳು ಮಾಹಿತಿ ನೀಡಿ, ಅವರ ಸಾಂವಿಧಾನಿಕ ಮತದಾನದ ಹಕ್ಕು ಕಸಿದುಕೊಳ್ಳುವ ಯತ್ನ ನಡೆಯುತ್ತಿದೆ ಎಂಬ ಆರೋಪ ಮೈಸೂರಿ ನಲ್ಲಿ ಕೇಳಿಬಂದಿದೆ.

ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ ೨೯ರ ವಲಯ ಕಚೇರಿ ೭ ಮತ್ತು ೮ರ ವ್ಯಾಪ್ತಿಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ನೀಡಿ ನಮೂನೆ ೭ ಸಲ್ಲಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ನಮೂನೆ ೭?: ಮತದಾರರ ಪಟ್ಟಿಯಲ್ಲಿ ಈಗಾಗಲೇ ಇರುವ ವ್ಯಕ್ತಿಯ ಹೆಸರನ್ನು ಕೈಬಿಡಲು ಅಥವಾ ಹೊಸದಾಗಿ ಹೆಸರು ಸೇರ್ಪಡೆಗೊಳಿಸುವುದಕ್ಕೆ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸುವ ಅಧಿಕೃತ ಅರ್ಜಿಯೇ ನಮೂನೆ ೭. ಮತದಾರ ಮೃತಪಟ್ಟಿದ್ದರೆ, ಸಾಮಾನ್ಯ ನಿವಾಸವನ್ನು ಬದಲಾಯಿಸಿದ್ದರೆ ಅಥವಾ ಕಾನೂನುಬದ್ಧ ಅನರ್ಹತೆಯಿದ್ದರೆ ನಿಯಮಾನುಸಾರ ಆಕ್ಷೇಪಣೆ ಸಲ್ಲಿಸಲು ಈ ಅರ್ಜಿ ಬಳಕೆಯಾಗುತ್ತದೆ. ಆದರೆ, ಇಂತಹ ಸದುದ್ದೇಶದ ಅವಕಾಶವನ್ನು ದುರುಪಯೋಗಪಡಿಸಿಕೊಂಡು, ಅಪರಿಚಿತ ಮತದಾರರ ವಿರುದ್ಧವೂ ನಮೂನೆ ೭ ಸಲ್ಲಿಸಲಾಗುತ್ತಿದೆ ಎಂಬ ಆರೋಪ ಆತಂಕ ಮೂಡಿಸಿದೆ.

೩೯ ವರ್ಷಗಳಿಂದ ವಾಸವಿದ್ದರೂ ಆಕ್ಷೇಪಣೆ!: ನರಸಿಂಹರಾಜ ಕ್ಷೇತ್ರದ ಮಾಜಿ ಕಾರ್ಪೊರೇಟರ್ ಸೈಯದ್ ಹಸರತ್ ಉಲ್ಲಾ ಅವರು ತಮ್ಮ ಕುಟುಂಬದೊಂದಿಗೆ ಕಳೆದ ೩೯ ವರ್ಷಗಳಿಂದ ಎನ್.ಆರ್.ಮೊಹದಲ್ಲಿ ವಾಸವಿದ್ದು, ಪ್ರಸ್ತುತ ವಿಳಾಸ ದಲ್ಲಿಯೇ ಮತದಾನದ ಹಕ್ಕು ಹೊಂದಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎನ್ಯೂಮರೇಷನ್ ಅರ್ಜಿಯನ್ನೂ ಭರ್ತಿ ಮಾಡಿದ್ದರೂ ಅವರ ವಿರುದ್ಧ ನಮೂನೆ ೭ ಸಲ್ಲಿಸಲಾಗಿದೆ ಎಂಬ ಆರೋಪವಿದೆ.

ಹರೀಶ್ ಕುಮಾರ್ ಎಂಬವರು ತಮ್ಮ ವಿರುದ್ಧ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಸಿದ ವ್ಯಕ್ತಿ ತನಗೆ ಪರಿಚಯವೇ ಇಲ್ಲ ಎಂದು ಹಸರತ್ ಉಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬಗ್ಗೆ ತಿಳಿದಿರುವವರೇ ಈ ರೀತಿ ಅರ್ಜಿ ಸಲ್ಲಿಸಲು ಪ್ರೇರೇಪಿಸಿದ್ದಾರೆ ಎಂಬುದು ಇನ್ನಷ್ಟು ಬೇಸರ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಪ್ರಕರಣದಲ್ಲಿ ರಾಘವೇಂದ್ರ ಎಂಬವರು ೨೭ ಜನರ ವಿರುದ್ಧ ಹಾಗೂ ಅನಿಲ್ ಥಾಮಸ್ ಎಂಬವರು ೩೬ ಮತದಾರರ ವಿರುದ್ಧ ಸುಳ್ಳು ಮಾಹಿತಿ ನಮೂದಿಸಿ ಅರ್ಜಿ ಸಲ್ಲಿಸಿzರೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಆರೋಪಗಳ ಸತ್ಯಾಸತ್ಯತೆ ಯನ್ನು ತನಿಖೆಯಿಂದ ತಿಳಿಯಬೇಕಿದೆ.

ಮತದಾನದ ಹಕ್ಕಿಗೆ ಧಕ್ಕೆ ಉಂಟಾಗದಿರಲಿ: ಮತದಾರರ ಪಟ್ಟಿಯ ಶುದ್ಧೀಕರಣದ ಉದ್ದೇಶದಿಂದ ರೂಪಿಸಿರುವ ಪ್ರಕ್ರಿಯೆಯೇ ದುರ್ಬಳಕೆ ಯಾದರೆ ಅರ್ಹ ಮತದಾರರು ತಮ್ಮ ಹಕ್ಕು ಕಳೆದುಕೊಳ್ಳುವ ಆತಂಕ ಎದುರಾಗುತ್ತದೆ. ಪರಿಚಯವಿಲ್ಲದ ವ್ಯಕ್ತಿಗಳ ವಿರುದ್ಧ ಅರ್ಜಿ ಸಲ್ಲಿಸುವುದರ ಹಿಂದೆ ವೈಯಕ್ತಿಕ ದ್ವೇಷವಿದೆಯೇ ಅಥವಾ ರಾಜಕೀಯ ದುರುದ್ದೇಶವಿದೆಯೇ ಎಂಬುದೂ ತನಿಖೆಯಿಂದ ಬಹಿರಂಗವಾಗಬೇಕಿದೆ.

ಮತದಾರರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಸಿ, ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ ಕಾನೂನು ಕ್ರಮ ಜರುಗಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ನಡೆಯುವುದರ ಜೊತೆಗೆ, ಅರ್ಹ ಮತದಾರರ ಸಾಂವಿಧಾನಿಕ ಹಕ್ಕುಗಳಿಗೆ ಯಾವುದೇ ದಕ್ಕೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕಿದೆ.

Tags:
error: Content is protected !!