ಹನೂರು ತಾಲ್ಲೂಕಿನ ಮ.ಬೆಟ್ಟ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಲ 150ಕ್ಕೂ ಹೆಚ್ಚು ಮಂದಿ ಗುಳೆ
ಹನೂರು: ತಾಲ್ಲೂಕಿನ ಕಾಡಂಚಿನ ಗ್ರಾಮ ಗಳ ಆದಿವಾಸಿ ಸಮುದಾಯದವರು ನರೇಗಾ ಯೋಜನೆಯಡಿ ಸಮರ್ಪಕವಾಗಿ ಕೂಲಿ ಕೆಲಸ ಸಿಗದೇ ಇರುವುದರಿಂದ ಕೊಡಗಿನ ಕಾಫಿ ತೋಟಗಳಿಗೆ ಗುಳೆ ಹೊರಟಿದ್ದಾರೆ.
ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಣೆ ಹೊಲ, ಮೆಂದಾರೆ, ಗೊರಸಾಣೆ, ಕೋಣನಕೆರೆ, ಪೊನ್ನಾಚಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಪೊನ್ನಾಚಿ ಗ್ರಾಮದವರು, ಮೀಣ್ಯಂ ಗ್ರಾಪಂ ವ್ಯಾಪ್ತಿಯ ಸೂಳೆಕೋಬೆ ಗ್ರಾಮದ ೧೫೦ಕ್ಕೂ ಹೆಚ್ಚು ನಿವಾಸಿಗಳು ಬುಧವಾರ ತಡರಾತ್ರಿ ೫ ಗೂಡ್ಸ್ ವಾಹನಗಳಲ್ಲಿ ಕೂಲಿ ಕೆಲಸಕ್ಕಾಗಿ ಕೊಡಗಿಗೆ ತೆರಳಿದ್ದಾರೆ.
ಮ. ಬೆಟ್ಟಕ್ಕೆ ಬರುತ್ತಿದ್ದ ಬಹುತೇಕ ಭಕ್ತಾದಿ ಗಳು ಜಾತ್ರಾ ಮಹೋತ್ಸವ, ಹಬ್ಬ ಹರಿದಿನ, ಅಮಾವಾಸ್ಯೆ, ರಜಾ ದಿನಗಳು ಸೇರಿದಂತೆ ವಿಶೇಷ ದಿನಗಳಲ್ಲಿ ನಾಗಮಲೆ ಕ್ಷೇತ್ರಕ್ಕೆ ಪಾದ ಯಾತ್ರೆಯ ಮೂಲಕ ತೆರಳಿ ದೇವರ ದರ್ಶನ ಪಡೆಯುತ್ತಿದ್ದರು. ಆದರೆ ೧ ವರ್ಷದಿಂದ ನಾಗಮಲೆ ಕ್ಷೇತ್ರಕ್ಕೆ ಭಕ್ತಾದಿಗಳು ತೆರಳಲು ನಿಷೇಧ ಹೇರಲಾಗಿದೆ. ಇದರಿಂದ ಭಕ್ತರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಬಹುತೇಕ ಕುಟುಂಬಗಳು ಬೀದಿಗೆ ಬಂದಿವೆ.
ನಾಗಮಲೆ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದರಿಂದ ಕಾಡಂಚಿನ ಗ್ರಾಮಗಳ ಜನರು ಇಂಡಿಗನತ್ತ ಗ್ರಾಮದಲ್ಲಿ ಹೋಟೆಲ್, ಟೀ ಅಂಗಡಿ, ಕಡಲೆಕಾಯಿ, ಸ್ಥಳೀಯವಾಗಿ ಬೆಳೆಯುವ ಪದಾರ್ಥಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ೧ ವರ್ಷದಿಂದ ನಾಗಮಲೆ ಕ್ಷೇತ್ರಕ್ಕೆ ಭಕ್ತಾದಿಗಳಿಗೆ ಹಾಗೂ ಜೀಪ್‌ಗಳ ಸಂಚಾರಕ್ಕೆ ನಿಷೇಧ ಹೇರಿರುವುದರಿಂದ ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಹಲವಾರು ಕುಟುಂಬಗಳು ಕೂಲಿ ಅರಸಿ ತಮಿಳುನಾಡು, ಕೇರಳ ರಾಜ್ಯಗಳ ಕಡೆಗೆ ವಲಸೆ ಹೊರಟಿದ್ದಾರೆ.
೨ ತಿಂಗಳುಗಳಿಂದ ಆನ್‌ಲೈನ್ ಮೂಲಕ ನಾಗಮಲೆ ಕ್ಷೇತ್ರಕ್ಕೆ ತೆರಳಲು ಅರಣ್ಯ ಇಲಾಖೆ ವತಿಯಿಂದ ಆನ್‌ಲೈನ್ ಮೂಲಕ ಅನುಮತಿ ನೀಡಲಾಗಿದ್ದರೂ ಭಕ್ತಾದಿಗಳ ಸಂಖ್ಯೆ ಕ್ಷೀಣಿಸಿರುವುದರಿಂದ ಮ. ಬೆಟ್ಟ ಗ್ರಾಪಂ ವ್ಯಾಪ್ತಿಯ ನಿವಾಸಿಗಳು ಗುಳೆ ಹೊರಟಿದ್ದಾರೆ.
ಮೆಂದಾರೆಯಲ್ಲಿ ಯಾವುದೇ ಕೆಲಸವಿಲ್ಲದೆ ಇರುವುದರಿಂದ ಕಾಫಿ ತೋಟಕ್ಕೆ ಕೆಲಸಕ್ಕಾಗಿ ಹೋಗುತ್ತಿದ್ದೇವೆ. ಎರಡು ತಿಂಗಳು ಅಲ್ಲಿಯೇ ಇದ್ದು ಕಾಫಿ ಹಾಗೂ ಮೆಣಸು ಕೊಯ್ಲು ಮುಗಿದ ನಂತರ ವಾಪಸ್ ಗ್ರಾಮಕ್ಕೆ ಬರುತ್ತೇವೆ. ಸರ್ಕಾರ ಮೆಂದಾರೆ ಗ್ರಾಮವನ್ನು ಶೀಘ್ರದಲ್ಲಿ ಸ್ಥಳಾಂತರ ಮಾಡಿದರೆ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಅವಕಾಶ ಸಿಗುತ್ತದೆ. -ಪಡಗಲ, ಮೆಂದಾರೆ ನಿವಾಸಿ ಮೆಂದಾರೆ,
ಇಂಡಿಗನತ್ತ, ಕಾಡುಹೊಲ ಗ್ರಾಮಗಳ ವಿವಿಧ ಕಾಮಗಾರಿಗಳಿಗೆ ಈಗಾಗಲೇ ಹಿರಿಯ ಅಽಕಾರಿಗಳಿಂದ ಅನು ಮತಿ ಸಿಕ್ಕಿದೆ. ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಇರುವ ವರು ಕೂಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ನಾಳೆಯಿಂದಲೇ ಅನು ಮತಿ ನೀಡಲಾಗುವುದು. ಕೆಲವು ಗ್ರಾಮಗಳಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಲಿ ಕೆಲಸಕ್ಕೆ ತೆರಳಿದ್ದಾರೆ. ಆದರೆ ನರೇಗಾ ಯೋಜನೆ ಯಡಿ ಕೂಲಿ ಕೆಲಸ ಸಿಗುತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾಗಿದೆ. -ಕಿರಣ್, ಪಿಡಿಒ, ಮಲೆ ಮಹದೇಶ್ವರ ಬೆಟ್ಟ
ನಮ್ಮ ಭಾಗದಲ್ಲಿ ನರೇಗಾ ಯೋಜನೆಯಡಿ ಸಮರ್ಪಕ ಕೂಲಿ ಕೆಲಸಗಳು ಸಿಗುತ್ತಿಲ್ಲ. ಈ ಬಾರಿ ಮಳೆಯನ್ನೇ ನಂಬಿಕೊಂಡು ಬಿತ್ತನೆ ಮಾಡಿದ್ದು, ಉತ್ತಮ ಮಳೆಯಾಯಿತು. ಆದರೆ, ಬೆಳೆ ಕಟಾವು ಸಂದರ್ಭದಲ್ಲಿ ಸೈಕ್ಲೋನ್ ಉಂಟಾಗಿ ಮಳೆಗೆ ಬೆಳೆಗಳೆಲ್ಲ ಕೊಳೆತು ಹೋಗಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರದಿಂದ ಇದುವರೆಗೂ ಬೆಳೆ ಪರಿಹಾರ ಬಾರದೇ ಇರುವುದರಿಂದ ಜೀವನ ಕಷ್ಟದಲ್ಲಿದೆ. ಹೀಗಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೇವೆ. -ಭಾಗ್ಯ, ಆಣೆಹೊಲ ಗ್ರಾಮದ ನಿವಾಸಿ