ಶ್ರೇಯಸ್ ದೇವನೂರು
ಮುಂದಿನ ಜಂಬೂಸವಾರಿಯ ಆನೆಗಳ ಸಾಲಿನಲ್ಲಿ ಕಾಣಸಿಗನು
ಕೆಲವು ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು. ಆದರೆ ಆ ಕ್ಷಣಗಳಲ್ಲಿ ಮನಸ್ಸು ಅನುಭವಿಸುವ ನೋವನ್ನು ಯಾವ ಕ್ಯಾಮೆರಾದಲ್ಲೂ ಸೆರೆಹಿಡಿಯಲು ಸಾಧ್ಯವಿಲ್ಲ. ಈ ಬಾರಿಯ ದಸರೆಯ ನಂತರ ಅಭಿಮನ್ಯುವನ್ನು ಮೈಸೂರಿನಿಂದ ಬೀಳ್ಕೊಡುವಾಗ ನನಗಾದ ಅನುಭವವೂ ಅಂಥದ್ದೇ. ಇಷ್ಟು ವರ್ಷ ದಸರೆಯನ್ನು ಚಿತ್ರೀಕರಿಸಿದ್ದೇನೆ. ಅರಮನೆಯ ಬೆಳಕು, ಜಂಬೂಸವಾರಿ, ಚಿನ್ನದ ಅಂಬಾರಿ, ಆನೆಗಳ ಗಾಂಭೀರ್ಯ-ಎಲ್ಲವನ್ನೂ ನನ್ನ ಕ್ಯಾಮೆರಾ ಕಂಡಿದೆ. ಆದರೆ ಈ ಬಾರಿ ಅಭಿಮನ್ಯುವನ್ನು ಕಳುಹಿಸಿಕೊಡುವಾಗ ಮಾತ್ರ ನನ್ನ ಕಣ್ಣೆದುರಿನ ದೃಶ್ಯವನ್ನು ಸೆರೆಹಿಡಿಯುವುದಕ್ಕಿಂತ, ಆ ಕ್ಷಣವನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು. ಕಣ್ಣಂಚಿನಲ್ಲಿ ನೀರು ತುಂಬಿತ್ತು. ಕೈಯಲ್ಲಿ ಕ್ಯಾಮೆರಾ ಇದ್ದರೂ, ಮನಸ್ಸಿನಲ್ಲಿ ಮಾತ್ರ ಇನ್ನು ಮುಂದೆ ಅಭಿಮನ್ಯುವನ್ನು ಮೈಸೂರಿನಲ್ಲಿ ನೋಡಲು ಸಾಧ್ಯವಿಲ್ಲವೆಂಬ ಭಾವನೆ.
ಅಭಿಮನ್ಯು ಇನ್ನು ಮುಂದೆ ಮೈಸೂರು ದಸರೆಯ ಭಾಗವಾಗುವುದಿಲ್ಲ. ನಿವೃತ್ತಿಯ ಬಳಿಕ ಅವನು ಮತ್ತೆ ಮೈಸೂರಿಗೆ ಬರುವುದಿಲ್ಲ ಎಂಬ ಸತ್ಯ ಮನಸ್ಸಿಗೆ ತಟ್ಟಿದಾಗ, ಮನಸ್ಸಿಗೆ ನೋವುಂಟಾಗಿದ್ದು ಸಹಜ ಆದರೂ ಸತತ ಪ್ರಯತ್ನದ ನಂತರ ನಿಶಾನೆ ಆನೆಯಾಗಿ ಈ ವರ್ಷ ದಸರಾದಲ್ಲಿ ಮುನ್ನಡೆದಿzನೆ. ಅಭಿಮನ್ಯುವಿಗೆ ತಾನು ದಸರೆಯ ಕೊನೆಯ ಪಯಣದಲ್ಲಿದ್ದೇನೆ, ಇನ್ನು ಮುಂದೆ ಮೈಸೂರಿನ ಅರಮನೆಯ ಅಂಗಳಕ್ಕೆ ಬರುವುದಿಲ್ಲ, ತನ್ನ ಪರಿಚಿತ ತಾಲೀಮು ಹಾದಿಯಲ್ಲಿ ಹೆಜ್ಜೆ ಹಾಕುವುದಿಲ್ಲ ಎಂಬುದು ಅವನಿಗೆ ತಿಳಿದಿದೆಯೇ? ಬಹುಶಃ ಅವನಿಗೆ ಇದು ಮತ್ತೊಂದು ಪಯಣವಾಗಿರಬಹುದು. ಆದರೆ ಅವನನ್ನು ಬೀಳ್ಕೊಡುತ್ತಿದ್ದ ನಮಗೆ ಇದು ಕೇವಲ ಮತ್ತೊಂದು ಪಯಣವಾಗಿರಲಿಲ್ಲ. ವರ್ಷಗಳಿಂದ ಮೈಸೂರಿಗರಿಗೆ ಭಾಗವಾಗಿದ್ದ ಜೀವಿಯೊಂದಕ್ಕೆ ಹೇಳುತ್ತಿದ್ದ ವಿದಾಯವಾಗಿತ್ತು. ವನ್ಯಜೀವಿಗಳ ಜಗತ್ತಿನಲ್ಲಿ ಅವನು ಒಂದು ಆನೆ. ಪ್ರಕೃತಿಯ ದೃಷ್ಟಿಯಲ್ಲಿ ಅವನು ತನ್ನ ಬದುಕನ್ನು ನಡೆಸುವ ಜೀವಿ. ಆದರೆ ಮನುಷ್ಯರಾದ ನಾವು ಅವನೊಂದಿಗೆ ಬೆಳೆಸಿಕೊಂಡಿರುವ ಭಾವನಾತ್ಮಕ ಸಂಬಂಧಕ್ಕೆ ಅಷ್ಟೇ ಸರಳವಾದ ವಿವರಣೆ ನೀಡಲು ಸಾಧ್ಯವಿಲ್ಲ.
ದಸರೆಯ ತಾಲೀಮಿನಲ್ಲಿ ಸಂದರ್ಭದಲ್ಲಿ ಪ್ರತಿದಿನ ಕಾಣುತ್ತಿದ್ದ ಪರಿಚಿತ ರೂಪ, ಅವನ ಹೆಜ್ಜೆಗಳನ್ನು ಮತ್ತೆ ಮತ್ತೆ ಸೆರೆಹಿಡಿದ ನೆನಪುಗಳು-ಇವೆಲ್ಲವೂ ಸೇರಿ ಅಭಿಮನ್ಯುವನ್ನು ನಮಗೆ ಕೇವಲ ಒಂದು ಆನೆಯಾಗಿ ಉಳಿಸಿಲ್ಲ.ಏಷ್ಯಾದ ಅತ್ಯುತ್ತಮ ಕುಮ್ಕಿ ಆನೆಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವಅಭಿಮನ್ಯುವಿನ ಸಾಮರ್ಥ್ಯ ಮತ್ತು ಅನುಭವದ ಬಗ್ಗೆ ಹೇಳಲು ಸಾಕಷ್ಟು ಸಂಗತಿಗಳಿವೆ.
ಆದರೆ ನನಗೆ ಅವನೊಂದಿಗಿನ ಸಂಬಂಧವನ್ನು ನೆನಪಿಸುವುದು ಕೇವಲ ಅವನು ಹೊತ್ತ ಜವಾಬ್ದಾರಿಗಳಲ್ಲ. ಅಂಬಾರಿ ಆನೆಯಾಗುವ ಮೊದಲು ಪೊಲೀಸ್ ಬ್ಯಾಂಡ್ ರಥವನ್ನು ದಸರಾದ ಪಥಸಂಚಲನದಲ್ಲಿ ಎಳೆಯುತ್ತಿದ್ದ ಅಭಿಮನ್ಯುವನ್ನು ನಾನು ನೋಡಿದ್ದೇನೆ. ನನ್ನ ಕ್ಯಾಮೆರಾವೂ ಅವನನ್ನು ಅಂದಿನಿಂದಲೇ ದಾಖಲಿಸುತ್ತಾ ಬಂದಿದೆ. ಆ ದಿನಗಳಿಂದ ಇಂದಿನವರೆಗೆ ಅವನ ಪಯಣವನ್ನು ಕಣ್ಣಾರೆ ಕಂಡಿರುವುದರಿಂದ, ಅವನ ವಿದಾಯ ನನಗೆ ಇನ್ನಷ್ಟು ವೈಯಕ್ತಿಕವಾಗಿದೆ.
೨೦೨೦ರಿಂದ ೨೦೨೫ರವರೆಗೆ ಆರು ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ ಅಭಿಮನ್ಯು, ಲಕ್ಷಾಂತರ ಜನರ ಹೆಮ್ಮೆಯ ಕ್ಷಣಗಳಿಗೆ ಸಾಕ್ಷಿಯಾಗಿzನೆ. ಪ್ರತಿ ವರ್ಷ ದಸರಾ ಆನೆಗಳನ್ನು ಬೀಳ್ಕೊಡುವ ಸಂದರ್ಭದಲ್ಲಿ ಅಭಿಮನ್ಯುವನ್ನು ನೋಡಿದಾಗ ಮುಂದಿನ ವರ್ಷ ಬರುತ್ತಾನೆ ಎಂಬ ನಿರೀಕ್ಷೆ ಇರುತ್ತಿತ್ತು. ಆದರೆ ಈ ವರ್ಷ ನಿರೀಕ್ಷೆ ನೆನಪಾಗಿ ಉಳಿಯಲಿದೆ. ಈ ಬಾರಿ ಅವನನ್ನು ಕಳುಹಿಸಿಕೊಡುವಾಗ, ನನ್ನ ಮನಸ್ಸಿನಲ್ಲಿ ಒಂದು ದೃಶ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕೆನಿಸಿತು-ಮೈಸೂರು ಅರಮನೆಯ ಮುಂಭಾಗದಲ್ಲಿ ಅಭಿಮನ್ಯು ಹೆಜ್ಜೆಗಳು ಮತ್ತು ಅವನ ಪ್ರತಿದಿನದ ತಾಲೀಮು ಹಾದಿ. ಏಕೆಂದರೆ ಮುಂದೆ ಆ ಸ್ಥಳದಲ್ಲಿ ಅವನನ್ನು ನೋಡಲು ಸಾಧ್ಯವಾಗುವುದಿಲ್ಲ. ಪ್ರತಿದಿನದ ತಾಲೀಮಿನಲ್ಲಿ ಸಹಜವಾಗಿ ಕಾಣುತ್ತಿದ್ದ ಅವನ ಹೆಜ್ಜೆಗಳು, ದಸರಾ ಸಂದರ್ಭದಲ್ಲಿ ಮೈಸೂರಿನ ಪರಿಚಿತ ಪರಿಸರದೊಂದಿಗೆ ಬೆಸೆದುಕೊಂಡಿದ್ದ ಅವನ ಇರುವಿಕೆ-ಇವೆಲ್ಲವೂ ಇನ್ನು ಮುಂದೆ ಛಾಯಾಚಿತ್ರಗಳಲ್ಲಿ ಮಾತ್ರ ಉಳಿಯಲಿವೆ.
ಆದ್ದರಿಂದಲೇ ಈ ಬಾರಿ ಅಭಿಮನ್ಯುವನ್ನು ಕಳುಹಿಸಿಕೊಡುವ ಮೊದಲು, ಮೈಸೂರು ಮತ್ತು ಅಭಿಮನ್ಯುವನ್ನು ಒಂದೇ ಚೌಕಟ್ಟಿನಲ್ಲಿ ಸೆರೆಹಿಡಿಯಬೇಕೆನಿಸಿತು. ಅದು ಕೇವಲ ಒಂದು ಫೋಟೋವಾಗಿರಲಿಲ್ಲ. ಮುಂದೆ ಅವನನ್ನು ನೋಡಬೇಕೆನಿಸಿದಾಗ ತೆರೆದು ನೋಡುವ ನೆನಪಾಗಿತ್ತು. ಅವನ ಗಜಗಾಂಭೀರ್ಯವನ್ನು ಮಾತ್ರವಲ್ಲ, ಮೈಸೂರಿನೊಂದಿಗೆ ಅವನಿಗಿದ್ದ ಸಂಬಂಧವನ್ನು ಉಳಿಸಿಕೊಳ್ಳುವ ನನ್ನ ಪ್ರಯತ್ನವಾಗಿತ್ತು. ಮುಂದಿನ ವರ್ಷ ದಸರೆಯ ಆನೆಗಳು ಅರಮನೆಯ ಅಂಗಳಕ್ಕೆ ಬಂದಾಗ, ನನ್ನ ಕ್ಯಾಮೆರಾ ಮತ್ತೆ ಕೆಲಸ ಮಾಡುತ್ತದೆ. ಹೊಸ ಆನೆಗಳು ಕಾಣಿಸಿಕೊಳ್ಳುತ್ತವೆ. ಜಂಬೂಸವಾರಿ ನಡೆಯುತ್ತದೆ. ಆದರೆ ಆನೆಗಳ ಸಾಲಿನಲ್ಲಿ ಅಭಿಮನ್ಯುವನ್ನು ಹುಡುಕುವ ನನ್ನ ಕಣ್ಣುಗಳಿಗೆ ಅವನು ಕಾಣಿಸುವುದಿಲ್ಲ. ಬಹುಶಃ ಆ ಕ್ಷಣದಲ್ಲಿ, ಮೈಸೂರಿನಿಂದ ಅವನನ್ನು ಕಳುಹಿಸಿಕೊಟ್ಟ ಈ ದಿನ ನೆನಪಾಗಬಹುದು.
ಅಭಿಮನ್ಯು, ನಿನಗೆ ಇದು ಮತ್ತೊಂದು ಪಯಣವಾಗಿರಬಹುದು. ಆದರೆ ನಿನ್ನನ್ನು ಬೀಳ್ಕೊಟ್ಟ ನಮಗೆ ಇದು ಮರೆಯಲಾಗದ ವಿದಾಯ. ನೀನು ಇನ್ನು ಮೈಸೂರಿಗೆ ಬರುವುದಿಲ್ಲ ಎಂಬ ಸತ್ಯವನ್ನು ತಿಳಿದಿದ್ದರೂ, ಮೈಸೂರಿನ ಜನರಿಗೆ ದಸರಾ ಸಂದರ್ಭದಲ್ಲಿ ನಿನ್ನನ್ನು ಮತ್ತೆ ನೋಡಬೇಕೆಂಬ ಆಸೆ ಮನಸ್ಸಿನಲ್ಲಿ ಉಳಿಯುತ್ತದೆ.
ಇಷ್ಟು ವರ್ಷ ನಿನ್ನನ್ನು ಕ್ಯಾಮೆರಾದಲ್ಲಿ ನೋಡಿದೆ. ಈ ಬಾರಿ ನಿನ್ನನ್ನು ಕಳುಹಿಸಿಕೊಡುವಾಗ, ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯಕ್ಕಿಂತ ನನ್ನ ಕಣ್ಣಿನಲ್ಲಿ ತುಂಬಿಕೊಂಡಿದ್ದ ಕಣ್ಣೀರು ಹೆಚ್ಚು ನೆನಪಿನಲ್ಲಿ ಉಳಿಯಿತು. ಮೈಸೂರು ನಿನಗೆ ವಿದಾಯ ಹೇಳಿದೆ, ಅಭಿಮನ್ಯು. ಆದರೆ ನಿನ್ನನ್ನು ಇಷ್ಟು ವರ್ಷ ಪ್ರೀತಿಯಿಂದ ಕಂಡ ನಮ್ಮ ಮನಸ್ಸು ಮಾತ್ರ ಇನ್ನೂ ನಿನಗೆ ವಿದಾಯ ಹೇಳಲು ಸಿದ್ಧವಾಗಿಲ್ಲ.
” ಮುಂದಿನ ವರ್ಷ ದಸರೆಯ ಆನೆಗಳು ಅರಮನೆಯ ಅಂಗಳಕ್ಕೆ ಬಂದಾಗ, ನನ್ನ ಕ್ಯಾಮೆರಾ ಮತ್ತೆ ಕೆಲಸ ಮಾಡುತ್ತದೆ. ಹೊಸ ಆನೆಗಳು ಕಾಣಿಸಿಕೊಳ್ಳುತ್ತವೆ. ಜಂಬೂಸವಾರಿ ನಡೆಯುತ್ತದೆ. ಆದರೆ ಆನೆಗಳ ಸಾಲಿನಲ್ಲಿ ಅಭಿಮನ್ಯುವನ್ನು ಹುಡುಕುವ ನನ್ನ ಕಣ್ಣುಗಳಿಗೆ ಅವನು ಕಾಣಿಸುವುದಿಲ್ಲ.”




