Mysore
20
clear sky

Social Media

ಸೋಮವಾರ, 17 ಫೆಬ್ರವರಿ 2025
Light
Dark

ಬಹುರೂಪಿಗೆ ಮತಷ್ಟು ವೈಭವದ ಮೆರುಗು ನೀಡುವ ಆಶಯ

ಸಾಲೋಮನ್
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಕ್ರಾಂತಿ ಸಡಗರದ ನಡುವೆಯೇ ರಂಗಾಯಣದ ಅಂಗಳದಲ್ಲಿ ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ ಗರಿಗೆದರಿದೆ. ಆಗಸದಲ್ಲಿ ಸೂರ್ಯ ಜರಿ ಹೋಗುತ್ತಿದ್ದಂತೆ ಚುಮುಚುಮು ಚಳಿಯಲ್ಲಿ ಮೈಸೂರಿನ ರಂಗಾಸಕ್ತರು ರಂಗಾಯಣದಲ್ಲಿ ಜಮಾಯಿಸುವುದು ಸಾಮಾನ್ಯ ದೃಶ್ಯವಾಗಿತ್ತು. ಮಂಗಳವಾರ ಉದ್ಘಾಟನೆ ಗೊಂಡ ೨೪ನೇ ‘ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವ’ಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಹಿನ್ನೆಲೆಯಲ್ಲಿ ರಂಗಾಯಣದ ವೈಭವವನ್ನು ಇನ್ನಷ್ಟು ಅದ್ಭುತವಾಗಿ ರೂಪಿಸಲು ಅನೇಕ ಪ್ರಯತ್ನ ಗಳೊಂದಿಗೆ ಬಹುರೂಪಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ನಿರ್ದೇಶಕ ಸತೀಶ್ ತಿಪಟೂರು ‘ಆಂದೋಲನ’ ನಡೆಸಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

‘ಬಹುರೂಪಿ’ ನಿಮಗೆ ಮೊದಲ ರಾಷ್ಟ್ರೀಯ ನಾಟಕೋತ್ಸವ ಹೇಗನಿಸುತ್ತಿದೆ?
ಸತೀಶ್ ತಿಪಟೂರು: ಇದು ರಂಗಾಯಣದ ೨೪ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ. ಈ ಹಿಂದಿನ ಉತ್ಸವಗಳು ಬಹುರೂಪಿಗೆ ಸಾಮಾಜಿಕ ನ್ಯಾಯ, ಪರಿಕಲ್ಪನೆಯಲ್ಲಿ ವಿಶೇಷ ಸ್ವರೂಪವನ್ನು ನೀಡಿವೆ. ಆ ಸ್ವರೂಪಕ್ಕೆ ಇನ್ನಷ್ಟು ವೈಭವ, ಮತ್ತ್ನಷ್ಟು ಹೊಳಪು ನೀಡಿ ಅರ್ಥಪೂರ್ಣವಾಗಿ ನಡೆಸುವ ಪ್ರಯತ್ನ ಮಾಡುತ್ತಿದ್ದೇನೆ, ಇದಕ್ಕೆ ರಂಗಾಯಣದ ಎಲ್ಲ ಸಿಬ್ಬಂದಿಯೂ ಕೈ ಜೋಡಿಸಿರುವುದಲ್ಲದೆ, ಸಾಂಸ್ಕೃತಿಕ ನಗರಿ ಎನಿಸಿಕೊಂಡಿರುವ ಮೈಸೂರು ನಗರದಲ್ಲಿ ರಂಗಕರ್ಮಿಗಳು ಹಾಗೂ ರಂಗಾಸಕ್ತರಿಂದ ಉತ್ತಮ ಪ್ರತಿಕ್ರಿಯೆಯೂ ಲಭಿಸಿದೆ.

ಬಹುರೂಪಿ ಸಾಮಾಜಿಕ ನ್ಯಾಯದ ಅರ್ಥ ಕಳೆದುಕೊಂಡಿತ್ತೆ?
ಸತೀಶ್ ತಿಪಟೂರು: ಹಿಂದಿನ ಕೆಲ ವರ್ಷಗಳಲ್ಲಿ ಹಾಗನಿಸಿದ್ದಿದೆ. ನಾಟಕೋತ್ಸವಗಳು ನಿರ್ದೇಶಕರಿಗಿರುವ ವಿಚಾರಧಾರೆ ಹಾಗೂ ಆಸಕ್ತಿ ಹಿನ್ನೆಲೆಯಲ್ಲಿ ಸಿದ್ಧವಾಗುತ್ತವೆ. ಇಡೀ ರಾಷ್ಟ್ರಾದ್ಯಂತ ರಂಗಭೂಮಿ ಸಾಮಾಜಿಕ ನ್ಯಾಯ, ಆಡಳಿತ ವ್ಯವಸ್ಥೆಯ ಅಂಕು – ಡೊಂಕುಗಳಿಗೆ ಹಿಡಿಯುವ ಕನ್ನಡಿ ಆಗಿತ್ತೋ ಅದು ಕೊರೊನಾ ಆರಂಭವಾದ ನಂತರ ಸಾಕಷ್ಟು ಬದಲಾವಣೆಯನ್ನು ಕಂಡಿದೆ.

ಇದು ಮೈಸೂರಿನ ರಂಗಾಯಣದಲ್ಲಿ ಮಾತ್ರವಲ್ಲ, ಮುಂಬೈನ ಎನ್‌ಎಸ್‌ಡಿಯಲ್ಲೂ ಸಾಕಷ್ಟು ಅನಿರೀಕ್ಷಿತ ಬದಲಾವಣೆಗಳು ಆಗಿವೆ. ಬಹುರೂಪಿ ನಾಟಕೋತ್ಸವದ ಬಗ್ಗೆ ಜನಮಾನಸದಲ್ಲಿ ಏನು ಪರಿಕಲ್ಪನೆ ಇದೆಯೋ ಅದನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ.

ಒಂದೆರಡು ಉದಾಹರಣೆ ಕೊಡಬಹುದೆ?
ಸತೀಶ್ ತಿಪಟೂರು: ಈ ಬಾರಿ ಬಹುರೂಪಿಯ ಪರಿಕಲ್ಪನೆ ‘ಬಿಡುಗಡೆ’ ಎಂಬುದು ಒಂದು ಮುಖ್ಯವಾದದ್ದು. ಈ ಥೀಮ್ ಇಟ್ಟುಕೊಂಡು, ನಾಟಕಗಳನ್ನು ಆಯ್ಕೆ ಮಾಡಿದ್ದೇವೆ. ವಿಚಾರಸಂಕಿರಣಗಳಲ್ಲಿ ಇದೇ ವಿಚಾರಗಳನ್ನು ಕುರಿತು ಚರ್ಚೆ ಮಾಡುತ್ತಿದ್ದೇವೆ. ಮಕ್ಕಳ ನಾಟಕೋತ್ಸವಕ್ಕೆ ಇದೇ ಮೊದಲ ಬಾರಿ ಅವಕಾಶ ಮಾಡಲಾಗಿದೆ. ಹೀಗೆಯೇ ಬಹುರೂಪಿಯನ್ನು ಮುನ್ನಡೆ ಸುವ ಚಿಂತನೆ ಇದೆ.

ಈ ಬಾರಿ ಬಹುರೂಪಿಗೆ ಬಹಳ ಕಡಿಮೆ ಅನುದಾನ ನೀಡಲಾಗಿದೆ ಎಂಬ ಮಾತಿದೆಯಲ್ಲ?
ಸತೀಶ್ ತಿಪಟೂರು: ಸದ್ಯಕ್ಕೆ ಸರ್ಕಾರದಿಂದ ೨೫ ಲಕ್ಷ ರೂ. ಅನುದಾನ ಸಿಕ್ಕಿದೆ. ಇನ್ನೂ ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದೆವು. ಮುಂದೆ ಕೊಡಬಹುದು ಎಂಬ ನಿರೀಕ್ಷೆ ಇದೆ.

ಮಕ್ಕಳ ಬಹುರೂಪಿ ಆರಂಭಿಸಿದ್ದೀರಿ, ಮುಂದೆ?
ಸತೀಶ್ ತಿಪಟೂರು: ರಂಗಾಯಣ ಒಂದು ರೆಪರ್ಟರಿ ಆಗಿದೆ. ಇಲ್ಲಿ ಮಕ್ಕಳಿಗೆ ನಾಟಕ ಕಲಿಸಲು ಸಾಧ್ಯವಿಲ್ಲ. ಆದರೆ ಮಕ್ಕಳ ನಾಟಕಗಳನ್ನು ಮಾಡಬಹುದು. ಆದರೆ ಮಕ್ಕಳ ಬಹುರೂಪಿ ಬಗ್ಗೆ ನನಗೆ ಹೆಚ್ಚಿನ ಕುತೂಹಲ ಇದೆ. ಮಕ್ಕಳು ದೊಡ್ಡವರಾಗುತ್ತಾ ರಂಗಭೂಮಿ ಕಡೆಗೆ ಬರಲಿ ಎಂಬ ಆಲೋಚನೆ ನನ್ನದು.

ಈಗಾಗಲೇ ರಂಗಾಯಣ ‘ಚಿಣ್ಣರ ಮೇಳ’ ನಡೆಸುತ್ತಿದೆ. ಇದರ ಜೊತೆಗೆ ರಂಗಾಯಣದ ವತಿಯಿಂದ ‘ಮೈ -ಮಿಲಿ’ ಎಂಬ ಮಕ್ಕಳ ನಾಟಕವನ್ನೂ ಪ್ರದರ್ಶನ ಮಾಡಿದ್ದೆವು. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನು ಪ್ರತೀ ಶಾಲೆಯ ಮಕ್ಕಳಿಗೂ ತೋರಿಸುವ ಆಲೋಚನೆ ಇದೆ. ಇದಕ್ಕಾಗಿ ೪೦೦ ಮಂದಿ ಶಿಕ್ಷಕರಿಗೆ ೨ ದಿನಗಳ ಪ್ರದರ್ಶನ ಏರ್ಪಡಿಸಿ ಈ ಬಗ್ಗೆ ಸಂವಾದವನ್ನೂ ಆಯೋಜಿಸುತ್ತಿದ್ದೇವೆ.

ಆ ಮೂಲಕ ಮಕ್ಕಳನ್ನು ಪ್ರದರ್ಶನಕ್ಕೆ ಕರೆತರುವ ಯೋಜನೆ ಇದೆ. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ.

ಬುಧವಾರದಿಂದ ಮಕ್ಕಳ ಬಹುರೂಪಿ ಆರಂಭವಾಗಿದೆ. ಉತ್ತಮ ಪ್ರತಿಕ್ರಿಯೆಯ ನಿರೀಕ್ಷೆ ಇದೆ. ಏಕೆಂದರೆ ಈಗಾಗಲೇ ಅನೇಕರು ಈ ಬಗ್ಗೆ ವಿಚಾರಿಸುತ್ತಿರುವುದು ನನಗೂ ಕುತೂಹಲ ಕೆರಳಿಸಿದೆ ಎಂದರು.

Tags: