Mysore
28
haze

Social Media

ಗುರುವಾರ, 01 ಜನವರಿ 2026
Light
Dark

ಪಚ್ಚೆದೊಡ್ಡಿ ಗ್ರಾಮಕ್ಕೆ ತ್ರಿಸದಸ್ಯ ಸಮಿತಿ ತಂಡ ಭೇಟಿ

ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು

ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ ಮೂಲಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಆದೇಶದ ಮೇರೆಗೆ ತ್ರಿಸದಸ್ಯ ಸಮಿತಿಯ ಸದಸ್ಯರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಇತ್ತೀಚೆಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಪ್ರತಿ ದಿನ ೧೪ ಕಿ.ಮೀ. ನಡೆದುಕೊಂಡು ಹೋಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ಮನವಿಪತ್ರ ಬರೆದಿದ್ದ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಪರಿಣಾಮ ಸರ್ಕಾರದ ವತಿಯಿಂದ ವರದಿ ಕೇಳಿದ್ದು, ತ್ರಿಸದಸ್ಯ ಸಮಿತಿ ಗ್ರಾಮಕ್ಕೆ ಭೇಟಿ ನೀಡಿ ಪರಿ ಶೀಲನೆ ನಡೆಸಿ ಗ್ರಾಮಸ್ಥರಿಂದ ಅಗತ್ಯ ಮಾಹಿತಿ ಪಡೆದಿದೆ.

ಈ ಸಂದರ್ಭದಲ್ಲಿ ತ್ರಿಸದಸ್ಯ ಸಮಿತಿಯ ಅಧಿಕಾರಿಗಳು ಅಲ್ಲಿನ ಮಕ್ಕಳನ್ನು ಭೇಟಿ ಮಾಡಿ ಮಕ್ಕಳ ಜೊತೆಗೆ ಚರ್ಚೆ ನಡೆಸಿದಾಗ ಮಕ್ಕಳು ಮಾತನಾಡಿ, ಸಾಕಷ್ಟು ವರ್ಷಗಳಿಂದ ರಸ್ತೆ ವ್ಯವಸ್ಥೆ ಸಮರ್ಪಕವಾಗಿಲ್ಲದೆ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಲೆ ಬಿಡುವಂತಹ ಆತಂಕ ಕೂಡ ಎದುರಾಗಿತ್ತು. ಇದೀಗ ಅರಣ್ಯ ಇಲಾಖೆ ವತಿಯಿಂದ ಶಾಲಾ ಸಮಯಕ್ಕೆ ಸರಿಯಾಗಿ ವಾಹನದ ವ್ಯವಸ್ಥೆ ಮಾಡಿರುವುದು ನಮಗೆ ಓದಲು ಇನ್ನಷ್ಟು ಪ್ರೇರಣೆಯನ್ನು ಕೊಟ್ಟಿದೆ ಎಂದು ತಿಳಿಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ: ನಮ್ಮ ಗ್ರಾಮದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವನ್ಯ ಪ್ರಾಣಿಯಿಂದಾಗಿ ಬೆಳೆ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಸಂಚರಿಸುವುದು ಸಾಹಸದ ಕೆಲಸವಾಗಿದೆ. ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹನೂರು ಜಿ.ವಿ.ಗೌಡ ಕಾಲೇಜಿನ ಸಪ್ರಾಂಶುಪಾಲರಾದ ರಾಜೇಶ್, ರಾಮಾಪುರ ಕಾಲೇಜಿನ ಪ್ರಾಚಾರ್ಯ ಗಿರಿಯಣ್ಣ, ಬಂಡಳ್ಳಿ ಕಾಲೇಜಿನ ಪ್ರಾಚಾರ್ಯ ನಾಗಸುಂದರ್ ಮೂರ್ತಿ, ಗ್ರಾಮಸ್ಥರಾದ ಮುನಿರಾಜು, ವಿದ್ಯಾರ್ಥಿಗಳು ಹಾಗೂ ಅತಿಥಿ ಉಪನ್ಯಾಸಕಿ ನಂದಿನಿ, ಇನ್ನಿತರರು ಹಾಜರಿದ್ದರು.

ವಾಹನ ವ್ಯವಸ್ಥೆ ಇಲ್ಲ:  ಗ್ರಾಮದಲ್ಲಿ ರಾತ್ರಿ ವೇಳೆ ಯಾರಾದರೂ ಅನಾರೋಗ್ಯಕ್ಕೀಡಾದರೆ ಅಥವಾ ಗರ್ಭಿಣಿಯರನ್ನು ಕರೆದೊಯ್ಯಲು ಯಾವುದೇ ವಾಹನದ ವ್ಯವಸ್ಥೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರಥಮ ಚಿಕಿತ್ಸೆ ಪಡೆದುಕೊಳ್ಳಲು ಕೂಡ ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯರು ಪರದಾಡಬೇಕಾಗಿದೆ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

Tags:
error: Content is protected !!