Mysore
21
mist

Social Media

ಗುರುವಾರ, 11 ಡಿಸೆಂಬರ್ 2025
Light
Dark

ಚರಮಗೀತೆಗಳಿಂದ ಹುಟ್ಟಿದ ಕಾವ್ಯಜೀವ 

‘ಹಾಡುಪಾಡು ರಾಮು’ ಎಂದೇ ಖ್ಯಾತರಾಗಿದ್ದ ಪತ್ರಕರ್ತ, ಕವಿ ದಿ.ಟಿ.ಎಸ್.ರಾಮಸ್ವಾಮಿ ಅವರ ಹುಟ್ಟುಹಬ್ಬ (ಸೆ.೧೪)ದಹಿನ್ನೆಲೆಯಲ್ಲಿ ಅವರ ಕವನ ಸಂಕಲನ ‘ವಿಷ್ಣುಕ್ರಾಂತಿ ಮತ್ತು ಇತರ ಪದ್ಯಗಳು’ ಕೃತಿ ಕುರಿತು ಕವಿ ವೀರಣ್ಣ ಮಡಿವಾಳರ ಅವರು ಮನನೀಯವಾದ ವಿಮರ್ಶಾ ಲೇಖನ ಬರೆದಿದ್ದು, ಯಥಾವತ್ತು ಪ್ರಕಟಿಸಲಾಗಿದೆ.

ವಿಷ್ಣು ಕ್ರಾಂತಿ ಮತ್ತು ಇತರ ಪದ್ಯಗಳು ಎಂಬ ಈ ಕಾವ್ಯ ಸಂಪುಟ ಒಂದು ಮೂರ್ತ ಜೀವಂತ ಉಸಿರಾಡುವ ದಿವ್ಯ ಜೀವ. ಖಂಡಿತ ಇಂದು ಶಬುದಗಳ ಗೋರಿ ಹೊತ್ತ ಮಸಣದ ಪುಸ್ತಕವಲ, ಅರ್ಥವ ಹುಡುಕಿದರೆ ಇಲ್ಲಿ ಏನೂ ದಕ್ಕದು, ನಿರೀಕ್ಷೆಗಳ ಅಪೇಕ್ಷೆಯಲ್ಲಿ ಈ ಕೃತಿಯ ಅಂತರಂಗಕ್ಕೆ ವಿನೀತರಾಗಿ ಹೆಜ್ಜೆಯಿಟ್ಟರೆ ಕಾವ್ಯಾನುಭವಗಳ ಹೊನ್ನಾರಾಶಿ ಮಳೆ ಸುರಿಸಿ, ಬಹುಶಃ ಸದಾಕಾಲ ಸತ್ತಂತಿರುವ ನಮ್ಮ ಜೀವಕೋಶಗಳಿಗೆ ಪ್ರಾಣ ನೀಡುತ್ತದೆ.

ಇದನ್ನು ಓದಿ : ಒಪ್ಪಂದದ ಕೆಲಸ ನೌಕರಿಯಾದೀತೆ?

ಭಾಷೆ, ಭಾವ, ಬುದ್ಧಿ ಹದವಾಗಿ ಬೆರೆತ ಸಮೃದ್ಧ ಸವಿ ಈ ಸಂಕಲನದಲ್ಲಿದೆ. ಇಲ್ಲಿರುವುದು ಸಾಕಷ್ಟು ಕಹಿಘಟನೆಗಳು, ಆಳದ ಸಂಕಟಗಳ, ತೀರದ ಬೇಗುದಿಗಳು. ಚಮತ್ಕಾರವೆಂದರೆ ಈ ಕವಿಯ ಮಿಂಚುಪದಗಳಸೃಷ್ಟಿಯಿಂದ ನಮ್ಮ ಪರಂಪರಾಗತ ದೈನಿಕ ತಿಳುವಳಿಕೆಗಳೆಲ್ಲ ತಲೆಕೆಳಗಾಗುತ್ತವೆ. ಮತ್ತೊಂದು ಲೋಕದ ಜೀವವೊಂದು ಹತ್ತಾರು ಲೋಕ ಸುತ್ತಿ ಬಂದು ನಮ್ಮೆದೆಗೆ ಸುರಿದಂತಾಗುತ್ತದೆ. ಈ ಕಾವ್ಯದ ಓದು ಜೀವನ್ಮರಣದ ಗಾಢ ಅನುಭವವಾಗಿ, ಕಲಕುತ್ತದೆ, ಜೀವ ಹಿಂಡುತ್ತದೆ, ಜೀವ ನೀಡುತ್ತದೆ. ಕಳೆದೆರಡು ದಶಕಗಳಲ್ಲಿ ಕನ್ನಡ ಕಾವ್ಯ ಚಲಿಸಿದ್ದು ತುಂಬಾ ಕಡಿಮೆ. ಪರಂಪರೆಯ ಮಹಾಮಹಿಮರು ಕಾಲಕ್ಕೆ ತಕ್ಕಂತೆ ಕನ್ನಡ ಕಾವ್ಯವನ್ನು ಕತ್ತುಕೊಟ್ಟು ಕಾಪಾಡಿ ದೃಢವಾದ ಹೆಜ್ಜೆಗಳನ್ನಿಡುತ್ತಾ ಇಂದಿನ ಕಬ್ಬಿಗರ ಕೈಗೆ ದಾಟಿಸಿದರು. ಕಳೆದೆರಡೂವರೆ ದಶಕಗಳಲ್ಲಿ ನಾವೆಲ್ಲ ಚಲಿಸಿದ್ದಕ್ಕಿಂತ ದಣಿದಿದ್ದೇ ಜಾಸ್ತಿ ಆದರೆ ‘ವಿಷ್ಣು ಕ್ರಾಂತಿ’ ಯ ಮೂಲಕ ಕನ್ನಡ ಕಾವ್ಯಕ್ಕೆ ಮತ್ತೆ ಜೀವ ಬಂದಿದೆ ಎಂದರೆ ನೀವು ನಂಬಬೇಕಿಲ್ಲ, ಒಳಗಣ್ಣಿನಿಂದ ಒಳ ಹೃದಯದಿಂದ ಓದಿ ನೋಡಿ.

‘ವಿಷ್ಣುಕ್ರಾಂತಿ’ಯ ಪ್ರತಿ ಪದ್ಯದಲ್ಲಿಯೂ ಪದಗಳು ಕಾಣಿಸುವುದೇ ಇಲ್ಲ. ಇಲ್ಲಿ ಎಲ್ಲೆಲ್ಲಿಯೂ ಕಾವ್ಯವೇ. ಯಾವ ಕವಿತೆಯೂ ಮುಗಿಯುವುದೇ ಇಲ್ಲ,ನಮ್ಮೆದೆಯೊಳಗೆ ಮುಗಿಲೆತ್ತರ ಬೆಳೆಯುತ್ತವೆ. ಈ ಕಾವ್ಯಾಸ್ವಾದನೆಗೆ ಇಂದ್ರಿಯಗಳು ಸಾಲಲ್ಲ, ಮತ್ತೇನೋ ಬೇಕು. ಓದುತ್ತ ಹೋದಂತೆ ಈ ಸಂಕಲನದ ಕವಿತೆಗಳು ‘ಮತ್ತೇನೋ’ ಕೊಡುತ್ತವೆ, ಪಡೆಯಲಿಚ್ಛಿಸುವವರಿಗೆ. ಕನ್ನಡ ಕಾವ್ಯದ ಭಾಷೆ ಸಪ್ಪೆಯಾಗಿ ಬಹಳ ವರುಷಗಳೇ ಆಗಿದ್ದವು ‘ವಿಷ್ಣುಕ್ರಾಂತಿ’ಯ ಮೂಲಕ ನಮ್ಮೆಲ್ಲರ ಕನ್ನಡಕ್ಕೆ ಹೊಸ ಸವಿ, ಗಂಧ, ಹೊಳಪು ದಕ್ಕಿದಂತಾಗಿದೆ ಮತ್ತು ಈ ಬೆಳಕು ಇನ್ನೂ ಹಲವಾರು ವರುಷಗಳವರೆಗೆ ಕನ್ನಡ ಕಾವ್ಯವನ್ನು ಪೊರೆಯಲಿದೆ.

Tags:
error: Content is protected !!