Mysore
24
moderate rain

Social Media

ಮಂಗಳವಾರ, 06 ಅಕ್ಟೋಬರ್ 2026
Light
Dark

ಒತ್ತುವರಿ, ಕಳೆಗಿಡಗಳ ನಡುವೆ ಅಪಾಯದ ಹಾದಿ

ಕಾಂಗೀರ ಬೋಪಣ್ಣ

ಕೆದಮುಳ್ಳೂರು-ತೋರ-ಪಾಲಂಗಾಲ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡ್ಡಿ ; ಅಧಿಕಾರಿಗಳ ವಿರುದ್ಧ  ಗ್ರಾಮಸ್ಥರ ಆಕ್ರೋಶ 

ವಿರಾಜಪೇಟೆ: ಕೆದಮುಳ್ಳೂರು, ತೋರ ಹಾಗೂ ಪಾಲಂಗಾಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದೀಗ ಒತ್ತುವರಿ ಮತ್ತು ಕಳೆಗಿಡಗಳ ಸಮಸ್ಯೆ ಯಿಂದಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ.

ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದರೆ, ಕೆಲವೆಡೆ ಸಾರ್ವಜನಿಕ ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಬೇಲಿಗಳಿಂದ ರಸ್ತೆ ಮತ್ತಷ್ಟು ಕಿರಿದಾಗಿದೆ. ಪರಿಣಾಮವಾಗಿ ಎದುರು ಬದುರಾಗಿ ವಾಹನಗಳು ಬಂದಾಗ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಪಘಾತದ ಆತಂಕವೂ ಎದುರಾಗಿದೆ. ಪ್ರಮುಖ ಸಂಪರ್ಕ ರಸ್ತೆಯಾಗಿದ್ದರೂ ಸಂಬಂಧಪಟ್ಟ ಇಲಾಖೆಗಳು ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ರಸ್ತೆಯ ಬದಿಯ ಕಳೆಗಿಡಗಳು ಬೆಳೆದು ವಾಹನ ಚಾಲಕರಿಗೆ ಎದುರಿನಿಂದ ಬರುವ ವಾಹನಗಳು ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ತಿರುವುಗಳು ಹಾಗೂ ಕಿರಿದಾದ ಭಾಗಗಳಲ್ಲಿ ಸಂಚಾರ ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಸ್ತೆಯ ಬದಿಯಲ್ಲಿರುವ ಕೆಲವು ತೋಟಗಳ ಮಾಲೀಕರು ಪಿಡಬ್ಲ್ಯುಡಿ ರಸ್ತೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇಲಿಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಈಗಾಗಲೇ ಕಿರಿದಾಗಿರುವ ರಸ್ತೆಯ ಜಾಗವನ್ನು ಮತ್ತಷ್ಟು ಆಕ್ರಮಿಸಿಕೊಂಡಿರುವುದರಿಂದ ಭವಿಷ್ಯದಲ್ಲಿ ರಸ್ತೆ ವಿಸ್ತರಣೆ ಅಥವಾ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಒತ್ತುವರಿ ತೆರವುಗೊಳಿಸುವಂತೆ ಸಂಬಂಧಪಟ್ಟ ಮಾಲೀಕರಿಗೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎರಡು-ಮೂರು ಬಾರಿ ನೋಟಿಸ್ ಜಾರಿಗೊಳಿಸಿದ್ದರೂ, ಇದುವರೆಗೆ ಪರಿಣಾಮಕಾರಿ ಕ್ರಮ ಕಂಡುಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ನೋಟಿಸ್ ನೀಡಿದ ಬಳಿಕವೂ ಒತ್ತುವರಿ ಮುಂದುವರಿದಿರುವುದು ಅಧಿಕಾರಿಗಳ ಕ್ರಮದ ಮೇಲೆಯೇ ಪ್ರಶ್ನೆ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ರಸ್ತೆ ಬದಿಯ ಕಳೆಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಹಲವು ಬಾರಿ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಕಳೆಗಿಡ ತೆರವು ಹಾಗೂ ರಸ್ತೆ ಸಂಬಂಧಿತ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ, ಶೀಘ್ರದಲ್ಲೇ ರಸ್ತೆ ಬದಿಯ ಜಂಗಲ್ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು ಎನ್ನಲಾಗಿದೆ. ಆದರೆ ಹಲವು ದಿನಗಳು ಕಳೆದರೂ ಸ್ಥಳದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಸಾರ್ವಜನಿಕರು ಸಮಸ್ಯೆ ಕುರಿತು ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಮರ್ಪಕವಾಗಿ ಸ್ಪಂದನೆ ದೊರೆಯುತ್ತಿಲ್ಲ. ಜನರಸಮಸ್ಯೆಗಳಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ದೂರವಾಣಿ ಕರೆ ಸ್ವೀಕರಿಸುವುದಕ್ಕೂ ಸಮಯ ವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದೆ ಈ ರಸ್ತೆಯ ನಿರ್ವಹಣೆ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಈಗ ಅಽಕಾರಿಗಳಿಗೆ ಏನಾಗಿದೆ ಎಂಬುದು ತಿಳಿಯುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಇಲ್ಲದಿದ್ದರೆ ಅದನ್ನು ಅಽಕಾರಿಗಳು ಬಹಿರಂಗವಾಗಿ ತಿಳಿಸಲಿ. ಆದರೆ ರಸ್ತೆಯ ಅವ್ಯವಸ್ಥೆಯಿಂದ ಜನರ ಜೀವಕ್ಕೆ ಅಪಾಯ ಎದುರಾಗುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಪರಿಶಿಷ್ಟ ವರ್ಗದ ಪ್ರಮುಖರಾದ ಪರಮೇಶ್ವರ ಅವರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

” ರಸ್ತೆ ಬದಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಲು ಇಲಾಖೆಗೆ ಸಾಧ್ಯವಾಗದಿದ್ದರೆ ಗ್ರಾಮಸ್ಥರೇ ಐದು, ಹತ್ತು ರೂಪಾಯಿಯಂತೆ ಚಂದಾ ಸಂಗ್ರಹಿಸಿ ರಸ್ತೆ ಬದಿಯ ಜಂಗಲ್ ತೆರವುಗೊಳಿಸುವ ಪರಿಸ್ಥಿತಿ ಬಂದಿದೆ. ಜನರ ದೂರವಾಣಿ ಕರೆ ಸ್ವೀಕರಿಸಿ ಸಮಸ್ಯೆ ಆಲಿಸಲು ಸಾಧ್ಯವಾಗದ, ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು.”

-ಪರಮೇಶ್ವರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ

” ರಸ್ತೆ ಸಮಸ್ಯೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ವಿರಾಜಪೇಟೆ ವಿಭಾಗದ ಇಂಜಿನಿಯರ್‌ಗೆ ಸೂಚನೆ ನೀಡಲಾಗುವುದು. ಉಳಿದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಆಗಿದ್ದು, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸಾರ್ವಜನಿಕರ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುವಂತೆ ವಿರಾಜಪೇಟೆ ವಿಭಾಗದ ಎಂಜಿನಿಯರ್‌ಗೆ ಸೂಚನೆ ನೀಡಲಾಗುವುದು.”

-ಪ್ರಭು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್

Tags:
error: Content is protected !!