Mysore
18
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ತಾತ ತಯಾರಿಸಿದ ಗಾಳಿಪಟ

ಅಖಿಲೇಶ್

ಅದು 2000ನೇ ಇಸವಿ. ನನಗೆ 4 ವರ್ಷ. ನಾಲ್ದಾಣೆ ಹಿಡಿದು ಮಿಠಾಯಿ ಖರೀದಿಸಲು ತಾತನ ಮನೆಯ ಮುಂದಿನ ಪೆಟ್ಟಿ ಅಂಗಡಿಗೆ ಓಡುತ್ತಿದ್ದ ಕಾಲ. ನಮ್ಮ ತಾತನನ್ನು ಕಾಡಿಬೇಡಿ ನಾಲ್ಕಾಣೆ ಪಡೆದು ಅಂಗಡಿಗೆ ಓಡುವುದೇ ನಮ್ಮ ಕೆಲಸ.

ಆಗಷ್ಟೇ ಶಾಲೆ ಸೇರಿದ ನಮಗೆ ಶಾಲೆಯಲ್ಲಿ ಎಲ್ಲವೂ ಹೊಸದು. ಹೊಸ ಸ್ನೇಹಿತರ ಭೇಟಿ. ನಮ್ಮ ಶಿಕ್ಷಕರೊಬ್ಬರು ನಮಗೆ ಗಾಳಿಪಟ ಮಾಡುವುದು ಮತ್ತು ಅದನ್ನು ಹಾರಿಸುವ ಬಗ್ಗೆ ಹೇಳಿಕೊಡುತ್ತಿದ್ದರು. ಎಲ್ಲಿಂದಲೂ ಒಂದು ಗಾಳಿಪಟ ತಂದಿದ್ದ ಅವರು ನಮ್ಮನ್ನೆಲ್ಲ ಮೈದಾನಕ್ಕೆ ಕರೆದುಕೊಂಡು ಹೋಗಿ ವೃತ್ತಾಕಾರದಲ್ಲಿ ನಿಲ್ಲಿಸಿ ಪಟ ಹಾರಿಸಿಯೇ ಬಿಟ್ಟರು. ಮೊದಲ ಬಾರಿ ಗಾಳಿಪಟದ ಹಾರಾಟ ನೋಡಿದ ನನಗಂತೂ ಅದು ಬೇಕೆನಿಸಿತು. ಗಾಳಿಪಟವನ್ನು ಹಾರಲು ಬಿಟ್ಟು ಅದರ ದಾರ ಹಿಡಿದು ಓಡಿದ ಶಿಕ್ಷಕರನ್ನು ಕೂಗುತ್ತಾ ಹಿಂಬಾಲಿಸಿದ ಆ ನೆನಪು ಇನ್ನು ಹಾಗೆಯೇ ಇದೆ.

ಸಂಜೆ ಶಾಲೆಯ ಘಂಟೆ ಬಾರಿಸುತ್ತಿದ್ದಂತೆಯೇ ಗೆಳೆಯ ರೊಂದಿಗೆ ಗಾಳಿಪಟದ ಮಾತುಗಳನ್ನಾಡುತ್ತಾ, ನಮ್ಮ ತಾತ ಎಲ್ಲವನ್ನೂ ಬಲ್ಲವ ನನಗೂ ಇಂದು ಗಾಳಿಪಟ ಮಾಡಿ ಕೊಡು ತ್ತಾರೆ ಎಂದು ಸಂತಸದಿಂದ ಮನೆ ತಲುಪಿದೆ. ಮನೆಯಲ್ಲಿ ಬ್ಯಾಗಿಟ್ಟು ಓಡಿದ್ದು ಸಮೀಪದಲ್ಲೇ ಇದ್ದ ತಾತನ ಮನೆಗೆ.

ಅಂದ ಹಾಗೆ ನಮ್ಮ ತಾತನ ಹೆಸರು ದೇವಪ್ಪ. ತಾತನ ಮನೆಗೆ ಹೋದ ನಾನು ಅವ್ರ ತಾತ ಎಲ್ಲಿ? ಕರ್ಕೊಂಡು ಬಾ. ನನಗೆ ಗಾಳಿಪಟಬೇಕು’ ಎಂದೆ. ‘ಅಯೋ ಅವರ ನಾ ಕಾಣೆ ಹೋಗಿ ಹುಡಿಕ ಬಾ’ ಎಂದಳು ಅಜ್ಜಿ. ಆಗ ನಾವು ಅಜ್ಜಿ ಎಂದಿದ್ದಕ್ಕಿಂತ ಅಮ್ಮನ ಅಮ್ಮಳನ್ನು ಅವ್ವ ಅಂದಿದ್ದೇ ಹೆಚ್ಚು. ತಾತನ ಹಾದಿ ಕಾಯುತ್ತಾ ಕುಳಿತಿದ್ದ ನನಗೆ ತಾತ ಕಂಡಿದ್ದು ಸಂಜೆ 7:30ರ ಸುಮಾರಿಗೆ, ಆಗ ತಾತನನ್ನು ಕಾಡಿಬೇಡಿ ನನಗೊಂದು ಗಾಳಿಪಟ ಮಾಡಿಕೊಡು, ನಾನು ಹಾರಿಸಬೇಕು ಎಂದಾಗ ನನ್ನನ್ನು ಸತಾಯಿಸಿ ಮಾಡಲು ಒಪ್ಪಿದ ತಾತ ನ್ಯೂಸ್ ಪೇಪರ್‌ವೊಂದರಲ್ಲಿ ಗಾಳಿಪಟ ಮಾಡಿಯೇ ಬಿಟ್ಟರು.

ಒಂದು ನ್ಯೂಸ್ ಪೇಪರ್ ತೆಗೆದುಕೊಂಡ ನಮ್ಮ ತಾತ ಒಂದಿಷ್ಟು ಅನ್ನದ ಅಗುಳುಗಳು, ಒಂದು ನಾಲ್ಕು ತೆಂಗಿನ ಗರಿಯ ಕಡ್ಡಿಗಳನ್ನು ತೆಗೆದುಕೊಂಡು ನಾಜೂಕಾಗಿ ಪೇಪರ್ ಕತ್ತರಿಸುತ್ತಾ, ಅದಕ್ಕೆ ಕಡ್ಡಿಗಳನ್ನು ಹಾಕಿ ಅನ್ನದ ಅಗುಳುಗಳನ್ನೇ
ಗಮ್ ಮಾಡಿಕೊಂಡು ಅಂಟಿಸಿಕೊಂಡು ಒಂದು ಗಾಳಿಪಟವನ್ನು ತಯಾರು ಮಾಡಿಯೇ ಬಿಟ್ಟರು. ಗಾಳಿಪಟ ನೋಡುತ್ತಿದ್ದಂತೆಯೇ ಕುಣಿದಾಟ ಕೇಳಬೇಕೇ? ನಾನು ಬುಗರಿ, ಚಿನದಾಂಡು ಕೇಳಿದಾಗ ನಾಜೂಕಾಗಿ ಮಾಡಿಕೊಡುತ್ತಿದ್ದ ತಾತ ಈಗ ಗಾಳಿಪಟವನ್ನೂ ಮಾಡಿಕೊಟ್ಟ ಮೇಲೆ ತಾತ ಮತ್ತಷ್ಟು ಅಚ್ಚುಮೆಚ್ಚಾದ.

ಗಾಳಿಪಟ ಮಾಡಿ ಮುಗಿಸುವಷ್ಟರಲ್ಲಿ ಸಮಯ 9 ಆಗಿತ್ತು. ತಾತನೊಂದಿಗೆ ಕುಳಿತು ಊಟ ಮುಗಿಸಿದ ಬಳಿಕ ಪಟವನ್ನು ಒಮ್ಮೆಯಾದರೂ ಹಾರಿಸಬೇಕಲ್ಲ. ಆ ರಾತ್ರಿ 10 ಗಂಟೆಯವರೆಗೂ ಗಾಳಿಪಟ ಹಿಡಿದು ಮನೆಯ ಮುಂದಿನ ಬೀದಿಯಲ್ಲಿ ಓಡಿ ಓಡಿ ಪಟ ಹಾರಿಸಿದ್ದೆ. ಆ ಅದ್ಭುತ ಕ್ಷಣ ಕಣ್ಣಿಗೆ ಕಟ್ಟಿದಂತಿದೆ. ತಾತ ನಮ್ಮ ಬೇಕು ಬೇಡಗಳನ್ನು ಪೂರೈಸುವವನು. ಏನೇ ಕೇಳಿದರೂ ಇಲ್ಲ ಎನ್ನದೇ ಕೊಡುತ್ತಿದ್ದ. ತಾತ ಮೊಮ್ಮಕ್ಕಳ ಅಚ್ಚು-ಮಚ್ಚು. ತಾತನ ಹೆಗಲೇರಿ ಶಾಲೆಗೆ ಹೋಗುವುದು ಶಾಲೆ ಬಿಟ್ಟ ಮೇಲೆ ತಾತನೊಂದಿಗೆ ಬರುವುದೇ ಒಂದು ಚಂದ. ಆ ಅನುಭವ ಪ್ರಸ್ತುತ ಪೀಳಿಗೆಯ ಮಕ್ಕಳಿಗೆ ಸಿಗುವುದು ಕಷ್ಟ ಬಿಡಿ.

Tags:
error: Content is protected !!