ಚಿರಂಜೀವಿ ಸಿ.ಹುಲ್ಲಹಳ್ಳಿ
ದಸರಾ ವೇಳೆ ಆರಂಭವಾಗಿದ್ದ ಕಾಮಗಾರಿ ಈಗ ಪೂರ್ಣ; ಈಜು ಸ್ಪರ್ಧೆಗಳು ಆರಂಭ
ಮೈಸೂರು: ನಗರದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿರುವ ಒಳಾಂಗಣ ಈಜುಕೊಳ ಇದೀಗ ‘ಹೈಟೆಕ್ಸ್ಪರ್ಶ’ದೊಂದಿಗೆ ಈಜು ಪ್ರಿಯರನ್ನು ಆಕರ್ಷಿಸುತ್ತಿದೆ.
ಈಜಲು ನೀರಿಗೆ ಇಳಿದರೂ ಬೇಸಿಗೆಯ ಬಿಸಿಲ ಹೊಡೆತದಿಂದ ಬಸವಳಿಯುತ್ತಿದ್ದ ಈಜು ಪ್ರಿಯರಿಗೆ ಅನುಕೂಲ ಕಲ್ಪಿಸಲು ೮ ಕೋಟಿ ರೂ. ವೆಚ್ಚದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ಈಜುಕೊಳಕ್ಕೆ ಮೇಲ್ಚಾವಣಿ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ದಸರಾ ವೇಳೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದೆ.
೩.೨೫ ಕೋಟಿ ರೂ. ವೆಚ್ಚದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಕಾಮಗಾರಿಗೆ ೨೦೧೨ರ ಸೆಪ್ಟೆಂಬರ್ ನಲ್ಲಿ ಚಾಲನೆ ನೀಡಲಾಗಿತ್ತು. ಕಾಮಗಾರಿ ವಿಳಂಬದಿಂದಾಗಿ ೩.೨೫ ಕೋಟಿ ರೂ. ಇದ್ದ ಯೋಜನಾ ವೆಚ್ಚವನ್ನು ೪.೯೭ ಕೋಟಿ ರೂ.ಗಳಿಗೆ ಪರಿಷ್ಕರಿಸಲಾಗಿತ್ತು.
೫ ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡು ೨೦೧೮ರಿಂದ ಸಾರ್ವಜನಿಕರಿಗೆ ಈಜು ಕೊಳವನ್ನು ಮುಕ್ತಗೊಳಿಸಲಾ ಗಿತ್ತು. ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ಕಾಂಪಿಟೇಷನ್, ವಾರ್ಮ್‌ಅಪ್, ಚಿಲ್ಡ್ರನ್ಸ್ ನಿರ್ಮಿಸಲಾಗಿದೆ. ಉಳಿದಂತೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಬಟ್ಟೆ ಬದಲಿಸುವ ಕೊಠಡಿ, ಸ್ನಾನಗೃಹ, ಶವರ್ ವ್ಯವಸ್ಥೆ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈಜುಕೊಳದಲ್ಲಿ ಅನುಭವಿ ತರಬೇತುದಾರರು, ಇನ್ ಸ್ಟ್ರಕ್ಟರ್, ಜೀವ ರಕ್ಷಕರು, ಸಕ್ಷನ್ ಎಳೆಯುವವರು, ಸ್ವಚ್ಛತಾಗಾರರು, ಪಾಸ್/ಟಿಕೆಟ್ ಚೆಕ್ ಮಾಡುವವರು, ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ.
” ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದ ಆವರಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳಕ್ಕೆ ಮೇಲ್ಚಾವಣಿ ನಿರ್ಮಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಎಲ್ಲ ರೀತಿಯ ಸೌಕರ್ಯಗಳೊಂದಿಗೆ ಈಜುಕೊಳಕ್ಕೆ ‘ಹೈಟೆಕ್ ಸ್ಪರ್ಶ’ ನೀಡಲಾಗಿದೆ.”
-ಭಾಸ್ಕರ್ ನಾಯಕ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಬೇಸಿಗೆ ಶಿಬಿರ ಆಯೋಜನೆ: ಈಜುಕೊಳದಲ್ಲಿ ಮಕ್ಕಳೂ ಸೇರಿದಂತೆ ಎಲ್ಲ ವಯೋಮಾನದವರ ಈಜು ತರಬೇತಿಗೆ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಮಾರ್ಚ್ ೨೩ರಿಂದ ಏಪ್ರಿಲ್ ೧೨ರವರೆಗೆ ಮೊದಲ ಅವಽಯ ಶಿಬಿರ ಆರಂಭವಾಗಲಿದೆ. ಬೆಳಿಗ್ಗೆ ೬ರಿಂದ ೭, ೭ರಿಂದ ೮, ೮ರಿಂದ ೯, ೯ರಿಂದ ೧೦ ಹಾಗೂ ಮಧ್ಯಾಹ್ನ ೩.೩೦ ರಿಂದ ೪.೩೦ರವರೆಗೆ ಮಕ್ಕಳು ಮತ್ತು ವಯಸ್ಕರರಿಗೆ ಶಿಬಿರ ನಡೆಯಲಿದೆ. ಮಕ್ಕಳು ಮತ್ತು ಮಹಿಳೆಯರಿಗೆ ಬೆಳಿಗ್ಗೆ ೧೦ ರಿಂದ ೧೧, ೧೪ ವರ್ಷದ ಮಕ್ಕಳಿಗೆ ಸಂಜೆ ೪.೩೦ ರಿಂದ ೫.೩೦, ೫.೩೦ ರಿಂದ ೬.೩೦, ೧೦ ವರ್ಷದೊಳಗಿನ ಮಕ್ಕಳಿಗೆ ೬.೩೦ ರಿಂದ ೭.೩೦ ಹಾಗೂ ೭.೩೦ ರಿಂದ ೮.೩೦ರವರೆಗೆ ಕ್ಯಾಂಪ್ ನಡೆಯಲಿದೆ. ಬಳಿಕ ಏಪ್ರಿಲ್ ೧೩ ರಿಂದ ಮೇ ೯ ಹಾಗೂ ಮೇ ೪ ರಿಂದ ಮೇ ೨೪ರ ವರೆಗೆ ಎರಡನೇ ಹಾಗೂ ಮೂರನೇ ಹಂತದ ಶಿಬಿರ ನಡೆಯಲಿದೆ.





