Mysore
21
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಬಿಸಿಲು, ಮಳೆಯ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವ ರಥ

ಮಂಜು ಕೋಟೆ

ಎಚ್. ಡಿ. ಕೋಟೆ: ಮುಜರಾಯಿ ಇಲಾಖೆಯ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದ ಲಕ್ಷಾಂತರ ರೂ. ಬೆಲೆಬಾಳುವ ರಥ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿಸಿಲು ಮಳೆಯಿಂದ ಹಾಳಾಗುತ್ತಿದೆ.

ಪಟ್ಟಣದ ಮೊದಲನೇ ಮುಖ್ಯರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನ ಇತ್ತೀಚಿನ ವರ್ಷಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ದೇವಸ್ಥಾನ ಸಮಿತಿಯವರ ಪರಿಶ್ರಮದಿಂದ ಹಾಗೂ ದಾನಿಗಳ ಸಹಕಾರದಿಂದ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯತ್ತ ಸಾಗಿದೆ.

ದೇವಸ್ಥಾನಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಬಿ. ಎಸ್. ರಂಗ ಅಯ್ಯಂಗಾರ್ ಕುಟುಂಬದವರು ೧೫ ವರ್ಷಗಳ ಹಿಂದೆ ೨೦ ಲಕ್ಷ ರೂ. ಗಳಷ್ಟು ಖರ್ಚು ಮಾಡಿ ಸಾಗುವಾನಿ ಮರದಿಂದ ರಥವನ್ನು ನಿರ್ಮಿಸಿಕೊಟ್ಟಿದ್ದು, ೧೪ ವರ್ಷಗಳಿಂದ ಮೇ ತಿಂಗಳಿನಲ್ಲಿ ಶ್ರೀದೇವಿ, ಭೂದೇವಿ ವರದರಾಜಸ್ವಾಮಿ ಉತ್ಸವಮೂರ್ತಿಗಳ ಮುಖಾಂತರ ಬ್ರಹ್ಮರಥೋತ್ಸವ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.

ರಸ್ತೆಯಲ್ಲಿ ದೇವಸ್ಥಾನದ ರಥವನ್ನು ನಿಲ್ಲಿಸಿರುವುದರಿಂದ ನಮಗೆ ಓಡಾಡಲು ತೊಂದರೆಯಾಗಿದೆ ಎಂದು ದೇವಸ್ಥಾನ ಸಮೀಪದ ನಿವಾಸಿ ಒಬ್ಬರು ಲೋಕಾಯುಕ್ತರಿಗೆ ಒಂದು ವರ್ಷದ ಹಿಂದೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿದಾಗ ಅಧಿಕಾರಿಗಳಿಗೆ ಸಮಿತಿಯವರು ದೇವಸ್ಥಾನ ಪಕ್ಕದ ಮನೆ ಪಾಳು ಬಿದ್ದಿದ್ದು, ಖಾಲಿ ಜಾಗದಲ್ಲಿ ರಥ ನಿಲ್ಲಿಸಲಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ಪಕ್ಕದ ನಿವಾಸಿ ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ, ತಹಸಿಲ್ದಾರ್ ಶ್ರೀನಿವಾಸ್ ಮತ್ತು ಪುರಸಭೆ ಮುಖ್ಯ ಅಧಿಕಾರಿ ಸುರೇಶ್ ರವರಿಗೆ ರಥವನ್ನು ತೆರವುಗೊಳಿಸುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದರು.

೧ ತಿಂಗಳ ಹಿಂದೆ ಮುಖ್ಯ ಅಧಿಕಾರಿ ಮತ್ತು ತಹಸಿಲ್ದಾರ್ ಅವರು ರಥಕ್ಕೆ ನಿರ್ಮಾಣ ಮಾಡಿದ್ದ ತಗಡಿನ ಕೊಠಡಿಯನ್ನು ತೆರವುಗೊಳಿಸಿದ್ದಾರೆ. ಹೀಗಾಗಿ ರಥ ಒಂದು ತಿಂಗಳಿಂದ ಬಿಸಿಲು ಮಳೆಯ ಹೊಡೆತಕ್ಕೆ ಸಿಲುಕಿ ಹಾಳಾಗುತ್ತಿದೆ.

ರಥ ಹಾಳಾದರೆ ಅದನ್ನು ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗುವುದಿಲ್ಲ. ಅದನ್ನು ಸುರಕ್ಷಿತವಾದ ಸ್ಥಳದಲ್ಲಿರಿಸಿ ರಕ್ಷಣೆ ಮಾಡಬೇಕಾದ ಸಂಬಂಧಪಟ್ಟ ಅಽಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Tags:
error: Content is protected !!