Mysore
25
few clouds

Social Media

ಶನಿವಾರ, 24 ಜನವರಿ 2026
Light
Dark

ಭತ್ತದ ನಾಡಿನಲ್ಲಿ ಭರಪೂರ ರಾಗಿ ಫಸಲು!

ಭೇರ್ಯ ಮಹೇಶ್

ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ಕೈ ಹಿಡಿದ ಚಿತ್ತ, ಸ್ವಾತಿ ಮಳೆಗಳು; ಅನ್ನದಾತರಲ್ಲಿ ಸಂತಸ 

ಕೆ.ಆರ್.ನಗರ: ಭತ್ತದ ನಾಡಿನಲ್ಲಿ ಈ ಬಾರಿ ರಾಗಿ ಫಸಲು ಉತ್ತಮವಾಗಿ ಬರುತ್ತಿದ್ದು, ರಾಗಿ ಬಿತ್ತನೆ ಮಾಡಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಂಬಾಕು ಬೆಳೆ ಮುಗಿದ ತಕ್ಷಣ ರಾಗಿ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಇಲ್ಲದೆ ಇನ್ನೇನು ಬೆಳೆ ಕೈಕೊಟ್ಟಿತು ಎಂಬ ಆತಂಕ ಎದುರಾಗಿತ್ತು. ಆದರೆ, ಚಿತ್ತ ಹಾಗೂ ಸ್ವಾತಿ ಮಳೆಗಳು ಉತ್ತಮವಾಗಿ ಸುರಿದಿದ್ದರಿಂದ ಹೊಲಗಳಲ್ಲಿ ರಾಗಿ ಬೆಳೆ ಹಸಿರು ಹೊದ್ದು ಕಂಗೊಳಿಸುತ್ತಿದೆ. ಎತ್ತ ನೋಡಿದರೂ ರಾಗಿಯ ಕಂಪು ರಾರಾಜಿ ಸುತ್ತಿದ್ದು, ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಸುರಿದ ಸೋನೆ ಮಳೆ ಹಿನ್ನೆಲೆಯಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದರು. ಬಿತ್ತನೆ ನಂತರ ಬಂದ ಹದವಾದ ಮಳೆಗೆ ರಾಗಿ ಪೈರು ಮೊಳಕೆಯೊಡೆದಿತ್ತು. ನಂತರ ಕಳೆ ತೆಗೆದು ಗೊಬ್ಬರ ಹಾಕಿದ ನಂತರ ಸುಮಾರು ಒಂದೂವರೆ ತಿಂಗಳು ಮಳೆ ಸಂಪೂರ್ಣ ಕೈ ಕೊಟ್ಟಿತ್ತು. ಇದ ರಿಂದ ರಾಗಿ ಬೆಳೆ ಒಣಗಲು ಪ್ರಾರಂಭಿಸಿದ್ದರಿಂದ ರೈತರು ಕಂಗಾಲಾಗಿದ್ದರು. ಆದರೆ, ಅಕ್ಟೋಬರ್ ತಿಂಗಳ ೨ನೇ ವಾರದಲ್ಲಿ ಶುರುವಾದ ಚಿತ್ತ ಮಳೆಯಿಂದಾಗಿ ಒಣಗುತ್ತಿದ್ದ ರಾಗಿ ಪೈರು ಉತ್ತಮವಾಗಿ ಬಂದು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ರಾಗಿ ತೆನೆ ಕಳೆಗಟ್ಟಿದೆ.

ರಾಗಿಗೆ ಕೇಂದ್ರ ಸರ್ಕಾರ ೪,೮೮೬ ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೂ ರೈತರು ಕಷ್ಟಪಟ್ಟು ರಾಗಿ ಬೆಳೆಯುತ್ತಾರೆ. ರಾಸಾಯನಿಕ ಗೊಬ್ಬರದ ದರ ದುಪ್ಪಟ್ಟು ಆಗಿದೆ. ಜಮೀನು ಹದ ಮಾಡಲು ಟ್ರಾಕ್ಟರ್ ಬಾಡಿಗೆ, ಕೂಲಿ ಕಾರ್ಮಿಕರ ಕೂಲಿ ಹೆಚ್ಚಾಗಿದ್ದು, ಕ್ವಿಂಟಾಲ್‌ಗೆ ಕನಿಷ್ಠ ೬ ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕೆಂಬುದು ರಾಗಿ ಬೆಳೆಗಾರರ ಬೇಡಿಕೆಯಾಗಿದೆ.

ಜಾನುವಾರುಗಳ ಮೇವಿಗೆ ಮಳೆ ನೆರವು: ಮಳೆ ಕೊರತೆಯಿಂದಾಗಿ ರೈತರ ಜಮೀನಿನ ಬದುವಿನಲ್ಲಿ ಬೆಳೆಯುತ್ತಿದ್ದ ಮೇವು ಒಣಗಿದ್ದರಿಂದ ಜಾನುವಾರುಗಳ ಮೇವಿಗಾಗಿ ರೈತರು ಪರದಾಡುವಂತಾಗಿತ್ತು. ಈ ವರ್ಷವೂ ಕೆಲವು ಕಡೆ ಮಳೆ ಆಗದ ಪರಿಣಾಮ ದನಕರುಗಳಿಗೆ ಮೇವು ಒದಗಿಸಲಾಗದೆ ರೈತರು ಕಷ್ಟಪಡುತ್ತಿದ್ದರು. ತಡವಾಗಿ ಯಾದರೂ ಮಳೆ ಆಗುತ್ತಿರುವುದರಿಂದ ಮೇವಿನ ಕೊರತೆ ನೀಗಿದಂತಾಗಿ ರೈತರು ನಿಟ್ಟುಸಿರು ಬಿಡುವಂತಾಗಿದೆ

” ಈ ವರ್ಷ ಮಳೆ ತಡವಾಗಿ ಸುರಿದಿದ್ದು, ಈ ಬಾರಿ ರಾಗಿಸೊಗಸಾಗಿ ಬೆಳೆಯುತ್ತಿದೆ. ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಇದೇ ರೀತಿ ಮುಂದೆ ಒಂದೆರಡು ಬಾರಿ ಮಳೆ ಬಂದರೆ ಉತ್ತಮ ಇಳುವರಿ ಸಿಗಲಿದೆ. ಈ ಬಾರಿ ರಾಗಿ ಬಂಪರ್ ಬೆಳೆಯಾಗಿದ್ದು ಅನ್ನದಾತರ ಕೈ ಹಿಡಿದಿದೆ.”

-ಜೆ.ಎಂ.ಕುಮಾರ್, ಗೌರವಾಧ್ಯಕ್ಷ, ರಾಜ್ಯ ರೈತ ಪರ್ವ ಸಂಘ

” ಕೆ.ಆರ್.ನಗರ ತಾಲ್ಲೂಕಿನಲ್ಲಿ ೮,೧೦೦ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಈ ನಡುವೆ ಚಿತ್ತ ಹಾಗೂ ಸ್ವಾತಿ ಮಳೆಗಳು ಉತ್ತಮವಾಗಿ ಬರುತ್ತಿದ್ದು ಬೆಳೆ ಚೆನ್ನಾಗಿ ಬಂದಿದೆ. ರೋಗ ಬಾಧೆ ಕಂಡು ಬಂದಲ್ಲಿ ಇಲಾಖೆಯಿಂದ ರೈತರಿಗೆ ಅಗತ್ಯ ಮಾಹಿತಿ ನೀಡಲಾಗುವುದು.”

-ಕೆ.ಜೆ.ಮಲ್ಲಿಕಾರ್ಜುನ್, ಸಹಾಯಕ ಕೃಷಿ ನಿರ್ದೇಶಕ

Tags:
error: Content is protected !!