ಗಣತಿ ಕಾರ್ಯದಿಂದ ಶಿಕ್ಷಕರ ಬಿಡುಗಡೆ ; ಇತರೆ ಇಲಾಖೆ ಸಿಬ್ಬಂದಿಯಿಂದ ಬಾಕಿ ಸಮೀಕ್ಷೆ
ಮೈಸೂರು: ರಾಜ್ಯ ಸರ್ಕಾರದ ಮಹತ್ವಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಜಿಲ್ಲೆಯಲ್ಲಿ ಕೆಲ ಗೊಂದಲಗಳ ನಡುವೆಯೂ ಶೇ.೮೫ರಷ್ಟು ಪೂರ್ಣಗೊಂಡಿದ್ದು, ಅ.೧೮ರೊಳಗೆ ಈ ಕಾರ್ಯ ಮುಗಿಯಬೇಕಿತ್ತು. ಬಹಳಷ್ಟು ಜಿಲ್ಲೆಗಳಲ್ಲಿ ಇನ್ನೂ ಸಮೀಕ್ಷೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅ.೩೧ರವರೆಗೆ ಸಮೀಕ್ಷಾ ಅವಧಿಯನ್ನು ವಿಸ್ತರಿಸಿದೆ. ಆದರೆ, ಶಿಕ್ಷಕರನ್ನು ಕರ್ತವ್ಯಕ್ಕೆ ಕಳುಹಿಸಿ, ಇತರೆ ಸಿಬ್ಬಂದಿಯಿಂದ ಸಮೀಕ್ಷೆ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಇದರಿಂದ ಪಿಡಿಒ ಮತ್ತು ಇತರೆ ಇಲಾಖೆಯ ಅಧಿಕಾರಿಗಳಿಗೆ ಸವಾಲು ಎದುರಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷಾ ಕಾರ್ಯ ಸೆ.೨೨ರಿಂದ ನಡೆಯುತ್ತಿದೆ. ಇದು ಅಕ್ಟೋಬರ್ ೭ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿದ್ದರಿಂದ ಅ.೧೮ರವರೆಗೆ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಗಣತಿ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಹೆಚ್ಚುವರಿಯಾಗಿ ದೊರೆತ ೧೧ ದಿನಗಳಲ್ಲಿ ಸಮೀಕ್ಷಾ ಕಾರ್ಯಕ್ಕೆ ವೇಗ ದೊರೆಯಿತು. ಆದರೆ, ಇದೀಗ ರಾಜ್ಯ ಸರ್ಕಾರ ಸಮೀಕ್ಷೆಗೆ ೧೩ ದಿನಗಳ ಕಾಲ ಅವಧಿ ವಿಸ್ತರಣೆ ಮಾಡಿರುವುದು ಸಮೀಕ್ಷೆ ಪೂರ್ಣಗೊಳ್ಳುವ ನಿರೀಕ್ಷೆ ವಿಶ್ವಾಸವನ್ನು ಹಿಂದುಳಿದ ವರ್ಗಗಳ ಇಲಾಖೆ ವ್ಯಕ್ತಪಡಿಸಿದೆ. ಆದರೆ, ಜಿಲ್ಲೆಯಲ್ಲಿ ಶೇ.೧೦೦ರಷ್ಟು ಸಮೀಕ್ಷೆ ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಸಮೀಕ್ಷೆಗಾಗಿ ಜಿಲ್ಲೆಯಲ್ಲಿ ಅಂದಾಜು ೧೦ ಲಕ್ಷ ಮನೆಗಳನ್ನು ಗುರುತಿಸಿದ್ದು, ೭,೬೮೬ ಗಣತಿದಾರರು ನಿತ್ಯ ಶ್ರಮಿಸುತ್ತಿದ್ದರು. ಇವರ ಪರಿಶ್ರಮದ ಫಲವಾಗಿ ಜಿಲ್ಲೆಯಲ್ಲಿ ಶೇ.೮೫ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಸಮೀಕ್ಷೆ ತಿರಸ್ಕಾರ, ಮನೆ ಬಾಗಿಲು ಹಾಕಿರುವುದು, ಬಾಡಿಗೆದಾರರ ಮನೆಗಳ ಸ್ಥಳಾಂತರ ಇತ್ಯಾದಿ ಕಾರಣಗಳಿಂದ ಶೇ.೧೦೦ರಷ್ಟು ಸಮೀಕ್ಷೆ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಇಂತಹ ಸಮಸ್ಯೆಗಳ ನಡುವೆಯೂ ಸಮೀಕ್ಷೆ ಕಾರ್ಯವು ಶೇ.೯೦ರ ಗಡಿ ದಾಟುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಣತಿ ವೇಳೆಯಲ್ಲಿ, ಜನರು ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ನಂಬರ್ ಹೇಳಿದರೆ, ೧೫-೨೦ ನಿಮಿಷಗಳಲ್ಲೇ ಸಮೀಕ್ಷೆ ಕಾರ್ಯ ಮುಗಿದು ಹೋಗುತ್ತದೆ. ಇಷ್ಟು ಕೊಡಲು ಕೆಲವು ಮನೆಯವರು ಸತಾಯಿಸುತ್ತಾರೆ. ಇದು ವಿಳಂಬಕ್ಕೆ ಕಾರಣವಾಗಿದೆ ಎಂದು ಮಹಿಳಾ ಸಮೀಕ್ಷೆದಾರರೊಬ್ಬರು ತಿಳಿಸಿದರು.
ಇದನ್ನು ಓದಿ: ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಗುಂಡಿಗಳ ದರ್ಬಾರ್
ಈಗಾಗಲೇ ಜಿಲ್ಲಾದ್ಯಂತ ಎಲ್ಲ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳ ನೀಡುವಿಕೆ ಮತ್ತು ಮ್ಯಾಪಿಂಗ್ ಮಾಡುವ ಕೆಲಸ ವ್ಯವಸ್ಥಿತವಾಗಿ ಆಗಿದೆ. ಅದರ ಆಧಾರದ ಮೇಲೆ ಸಮೀಕ್ಷಾದಾರ ರಿಗೆ ಮನೆಗಳನ್ನು ಹಂಚಿಕೆ ಮಾಡಿದ್ದರೂ, ಅವು ಬೇರೆ ಬೇರೆ ಬೀದಿಗಳು, ಬಡಾವಣೆಗಳಲ್ಲಿರುವುದು ಗಣತಿ ಕಾರ್ಯಕ್ಕೆ ಅಡಚಣೆಯಾಗಿದೆ ಎಂದು ಶಿಕ್ಷಕರೊಬ್ಬರು ಹೇಳಿದರು.
ಹುಣಸೂರು ತಾಲ್ಲೂಕಿನಲ್ಲಿ ಶೇ.೯೦ ಸಮೀಕ್ಷೆ: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಶೇ.೯೦ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಈ ತಾಲ್ಲೂಕಿನಲ್ಲಿ ಇನ್ನೂ ಶೇ.೫ರಷ್ಟು ಸಮೀಕ್ಷೆ ನಡೆಯುವ ವಿಶ್ವಾಸವಿದೆ. ಹೀಗಾಗಿ ಹುಣಸೂರು ಹೊರತಾಗಿ ಜಿಲ್ಲೆಯ ೮ ತಾಲ್ಲೂಕುಗಳಲ್ಲಿ ಶೇ.೮೦ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
” ಮೈಸೂರು ಜಿಲ್ಲೆಯಲ್ಲಿ ಇದುವರೆಗೂ ಶೇ.೮೫ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಅ.೩೧ರವರೆಗೆ ಸಮೀಕ್ಷೆ ಅವಧಿ ವಿಸ್ತರಣೆಯಾಗಿರುವುದರಿಂದ ನಿಗದಿತ ಗುರಿ ತಲುಪುವ ವಿಶ್ವಾಸವಿದೆ. ಆದರೆ, ಕೆಲ ಕುಟುಂಬಗಳು ಸಮೀಕ್ಷೆಯನ್ನು ತಪ್ಪಾಗಿ ಅರ್ಥೈಸಿಕೊಂಡು ತಿರಸ್ಕಾರ ಮಾಡುತ್ತಿವೆ. ಇಲ್ಲಿಯವರೆಗೆ ಶಿಕ್ಷಕರು ಸಮೀಕ್ಷೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಗ್ರಾಪಂ ಆಡಳಿತ ಮತ್ತು ಇತರೆ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಲಿದ್ದಾರೆ.”
– ರವಿಕುಮಾರ್, ಉಪ ನಿರ್ದೇಶಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು
ಸಮೀಕ್ಷೆಯ ಅರ್ಥವನ್ನು ತಿಳಿಯದ ಜನ: ಸಮೀಕ್ಷೆಯ ಹಿಂದಿನ ಉದ್ದೇಶವೇ ಬಹಳಷ್ಟು ಜನರಿಗೆ ಅರ್ಥವಾಗಿಲ್ಲ. ಶಿಕ್ಷಿತರು, ಉದ್ಯೋಗಸ್ಥರೂ ತಿಳಿದಿಲ್ಲ. ಸರ್ಕಾರದ ವಿವಿಧ ಇಲಾಖೆಗಳಿಂದ ಪ್ರಾರಂಭಿಸಲಾಗಿರುವ ಹಾಗೂ ಮುಂದೆ ಪ್ರಾರಂಭಿಸಲಿರುವ ಎಲ್ಲ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಬಹುದಾದ ಉಪಯುಕ್ತ ದತ್ತಾಂಶ ಈ ಸಮೀಕ್ಷೆಯಿಂದ ದೊರೆಯ ಲಿದೆ ಎಂಬ ಸತ್ಯವೇ ಬಹಳಷ್ಟು ಜನರಿಗೆ ತಲೆಗೆ ಹೋಗುತ್ತಿಲ್ಲ. ಬಿಪಿಎಲ್ ಕಾರ್ಡ್ ರದ್ದಾಗುತ್ತದೆ, ಉದ್ಯೋಗ ನಿಧಿ ಯೋಜನೆಯ ಲಾಭ ಕೈತಪ್ಪಿಲಿದೆ ಎಂಬ ಆತಂಕ ಫಲಾನುಭವಿಗಳನ್ನು ಕಾಡುತ್ತಿದೆ. ಹೀಗಾಗಿ, ಹಲವೆಡೆ ಜನರು ನೈಜ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಸಮೀಕ್ಷೆದಾರರೊಬ್ಬರು ತಿಳಿಸಿದರು.
–ಚಿರಂಜೀವಿ. ಸಿ. ಹುಲ್ಲಹಳ್ಳಿ





