Mysore
23
clear sky

Social Media

ಶನಿವಾರ, 03 ಜನವರಿ 2026
Light
Dark

ಕೊಡಗಿನಲ್ಲಿ ಶೇ.80ರಷ್ಟು ಭತ್ತ ಕಟಾವು ಕಾರ್ಯ ಪೂರ್ಣ

ನವೀನ್ ಡಿಸೋಜ

೧೮,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿರುವ ರೈತರು; ಹವಾಮಾನ ವೈಪರೀತ್ಯದ ನಡುವೆಯೂ ಕಟಾವು ಕಾರ್ಯ ಚುರುಕು

ಮಡಿಕೇರಿ: ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ವನ್ಯಮೃಗಗಳ ಹಾವಳಿ ಇನ್ನಿತರೆ ಸಮಸ್ಯೆಗಳ ನಡುವೆಯೂ ಭತ್ತ ಕೃಷಿ ಮಾಡಿದ ರೈತರು ಕಟಾವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಶೇ.೮೦ರಷ್ಟು ಕಟಾವು ಕಾರ್ಯ ಪೂರ್ಣಗೊಂಡಿದೆ.

ದಶಕಗಳ ಹಿಂದೆ ಅನ್ನದ ಬಟ್ಟಲು ಎಂದೇ ಕರೆಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಕಾಲ ಕಳೆದಂತೆ ಹಲವಾರು ಕಾರಣಗಳಿಂದ ಭತ್ತದ ಬೆಳೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು, ಭತ್ತ ಬೆಳೆಯುವ ಪ್ರದೇಶವು ಗಣನೀಯವಾಗಿ ಕ್ಷೀಣಿಸುತ್ತಿದೆ. ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲು ಬೇಕಾಗಿರುವ ಕದಿರನ್ನು ಕೂಡ ಭತ್ತವನ್ನು ಬೆಳೆದಿರುವ ಬೇರೆ ರೈತರಿಂದ ತಂದು ಆಚರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಆಸಕ್ತಿ ಹೊಂದುತ್ತಿದ್ದು, ಭತ್ತದ ಇಳುವರಿ ಕೂಡ ಇಳಿಮುಖವಾಗುತ್ತಿದೆ. ಕಾರ್ಮಿಕರ ಸಮಸ್ಯೆ, ಉತ್ತಮವಾದ ಬೆಲೆ ಸಿಗದಿರುವುದು, ವಾತಾವರಣದ ಬದಲಾವಣೆ ಮತ್ತು ಕಡಿಮೆ ಪರಿಶ್ರಮದಿಂದ ಬೇರೆ ಬೆಳೆಗಳಲ್ಲಿ ಹೆಚ್ಚಿನ ಇಳುವರಿ, ಆದಾಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆ, ವನ್ಯಮೃಗಗಳ ಹಾವಳಿಗಳಂತಹ ಸಮಸ್ಯೆಗಳಿಂದಾಗಿ ಭತ್ತ ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಜಿಲ್ಲೆಯಲ್ಲಿ ಸಾಂಪ್ರಾದಾಯಿಕ ಕೃಷಿಯನ್ನು ಹಲವು ರೈತರು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಈ ಬಾರಿ ಸುಮಾರು ೨೩ ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ, ೧೮,೫೦೦ ಹೆಕ್ಟೇರ್‌ನಷ್ಟು ಮಾತ್ರ ಗುರಿ ಸಾಽಸಲಾಗಿದೆ. ಈ ಬಾರಿ ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳೊಂದಿಗೆ ಅತಿರಾ, ತುಂಗಾದಂತಹ ಬಿತ್ತನೆ ಬೀಜಗಳನ್ನು ರೈತರಿಗೆ ಪೂರೈಸಲಾಗಿತ್ತು. ಭತ್ತದ ಫಸಲು ಕಟಾವಿಗೆ ಬರುವ ಸಂದರ್ಭದಲ್ಲಿ ರೈತರು ಆತಂಕ ಎದುರಿಸುತ್ತಿದ್ದರೂ ಜಿಲ್ಲೆಯಲ್ಲಿ ಶೇ.೮೦ರಷ್ಟು ಕಟಾವು ಪೂರ್ಣಗೊಂಡಿದೆ.

ಕೆಲ ಭಾಗಗಳಲ್ಲಿ ಕಟಾವು ಮಾಡಿದ ಬೆಳೆಯನ್ನು ಒಣಗಲು ಬಿಡಲಾಗಿದೆ. ಆದರೆ, ಕಳೆದ ಕೆಲ ದಿನಗಳಿಂದ ಬಿಸಿಲಿನ ವಾತಾವರಣ ಕಡಿಮೆಯಾಗಿದ್ದು, ಮೋಡ ಕವಿದ] ವಾತಾವರಣದಿಂದ ತೊಡಕುಂಟಾಗಿದೆ. ಈ ಸಮಯದಲ್ಲಿ ಮಳೆ ಬಂದಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಇದರ ಹೊರತಾಗಿಯೂ ಹಲವೆಡೆ ಕಟಾವು ಕಾರ್ಯ ಚುರುಕುಗೊಂಡಿದೆ.

” ಹಲವು ಸಮಸ್ಯೆಗಳ ನಡುವೆಯೂ ಭತ್ತ ಬೆಳೆಯುತ್ತಿದ್ದೇವೆ. ಇತ್ತೀಚೆಗೆ ಭತ್ತದ ಕಟಾವು ಕಾರ್ಯ ಪೂರ್ಣಗೊಳಿಸಿದ್ದೇವೆ. ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ಕೊಂಚ ಸಮಸ್ಯೆಯುಂಟಾಗಿದೆ. ಬಿಸಿಲಿನ ವಾತಾವರಣ ಇದ್ದಲ್ಲಿ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ.”

-ನಾಗರತ್ನ, ಕೃಷಿಕರು,

” ಸೋಮವಾರಪೇಟೆ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಮಾದರಿಯ ತಳಿಗಳನ್ನು ರೈತರು ತಮ್ಮ ಜಾಗದ ಅನುಕೂಲಕ್ಕೆ ಸರಿಯಾಗಿ ಬೆಳೆದಿದ್ದರು. ಇದೀಗ ಶೇ.೮೦ರಷ್ಟು ಕಟಾವು ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದ ಭಾಗಗಳಲ್ಲಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.”

-ಡಾ.ಚಂದ್ರಶೇಖರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರು

Tags:
error: Content is protected !!