Mysore
26
broken clouds

Social Media

ಗುರುವಾರ, 08 ಜನವರಿ 2026
Light
Dark

ಕೊಡಗು ಜಿಲ್ಲೆಯಲ್ಲಿ 5240 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

ಮಾ.೧ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ; ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಅಗತ್ಯ ಸಿದ್ಧತೆ

 ನವೀನ್ ಡಿಸೋಜ

* ಪರೀಕ್ಷೆಗೆ ನೋಂದಣಿಯಾಗಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: ೫,೨೪೦

* ಪ್ರಥಮ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು: ೪,೮೬೫

* ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು: ೨೫೪

* ಪರೀಕ್ಷೆ ಬರೆಯಲಿರುವ ಪುನರಾವರ್ತಿತ ವಿದ್ಯಾರ್ಥಿಗಳು: ೧೨೧

ಮಡಿಕೇರಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ.೧ರಿಂದ ಆರಂಭವಾಗಲಿದ್ದು, ಕೊಡಗು ಜಿಲ್ಲೆಯಲ್ಲಿ ಸುಗಮ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ೫,೨೪೦ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಇವರಲ್ಲಿ ಪ್ರೆಶರ್ಸ್ ೪,೮೬೫ ವಿದ್ಯಾರ್ಥಿಗಳು, ಖಾಸಗಿಯಾಗಿ ೨೫೪ ವಿದ್ಯಾರ್ಥಿಗಳು ಮತ್ತು ೧೨೧ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮಾರ್ಚ್ ೧ರಿಂದ ೨೦ ರವರೆಗೆ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ.

೨೦೨೨ರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊಡಗು ೬ನೇ ಸ್ಥಾನ ಪಡೆದಿತ್ತು. ೨೦೨೩ರಲ್ಲಿ ಶೇ.೧೭.೨೩ರಷ್ಟು ಫಲಿತಾಂಶ ಹೆಚ್ಚಳವಾಗಿ ೩ನೇ ಸ್ಥಾನ ಪಡೆದಿತ್ತು. ೨೦೨೪ರಲ್ಲಿ ಶೇ.೧.೫೮ರಷ್ಟು ಫಲಿತಾಂಶ ಹೆಚ್ಚಳವಾಗಿದ್ದರೂ ಕೊಡಗು ರಾಜ್ಯದಲ್ಲಿ ೫ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ಬಾರಿ ಪರೀಕ್ಷೆ ಬರೆದಿದ್ದ ೪,೫೭೬ ವಿದ್ಯಾರ್ಥಿಗಳಲ್ಲಿ ೪,೨೧೬ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಈ ಬಾರಿ ಮತ್ತಷ್ಟು ಫಲಿತಾಂಶ ಹೆಚ್ಚಳದ ನಿರೀಕ್ಷೆ ಹೊಂದಲಾಗಿದೆ.

ಜಿಲ್ಲೆಯಲ್ಲಿ ೧೯ ಪರೀಕ್ಷಾ ಕೇಂದ್ರಗಳಿದ್ದು, ಗೋಣಿಕೊಪ್ಪದ ಕಾವೇರಿ ಪಿಯು ಕಾಲೇಜು, ನಾಪೋಕ್ಲು, ಪೊನ್ನಂಪೇಟೆ, ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ಹಾಗೂ ಕುಶಾಲನಗರ ಸರ್ಕಾರಿ ಪಿಯು ಕಾಲೇಜು, ಮೂರ್ನಾಡು ಪಿಯು ಕಾಲೇಜು, ಚೇರಂಬಾಣೆ ಅರುಣ ಪಿಯು ಕಾಲೇಜು, ಕೊಡ್ಲಿಪೇಟೆಯ ಪಿಯು ಕಾಲೇಜು, ಶ್ರೀಮಂಗಲ ಪಿಯು ಕಾಲೇಜು, ಶನಿವಾರಸಂತೆ ಪಿಯು ಕಾಲೇಜು, ನಗರದ ಸಂತ ಮೈಕೆಲರ ಶಾಲೆ, ನೆಲ್ಯಹುದಿಕೇರಿ ಹಾಗೂ ಕೂಡಿಗೆಯ ಸರ್ಕಾರಿ ಪಿಯು ಕಾಲೇಜು, ವಿರಾಜಪೇಟೆಯ ಸಂತ ಅನ್ನಮ್ಮ ಪಿಯು ಕಾಲೇಜು, ಕುಶಾಲನಗರದ ಕನ್ನಡ ಭಾರತಿ ಪಿಯು ಕಾಲೇಜು, ಸುಂಟಿಕೊಪ್ಪ ಸರ್ಕಾರಿ ಸಂಯುಕ್ತ ಪಿಯು ಕಾಲೇಜು, ಗೋಣಿಕೊಪ್ಪವಿದ್ಯಾನೀಕೇತನ ಪಿಯು ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ.

೧೯ ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧಿಕ್ಷಕರು, ಉಪ ಮುಖ್ಯ ಅಧಿಕ್ಷಕರು, ಕಚೇರಿ ಅಧಿಕ್ಷಕರು, ಉತ್ತರ ಪತ್ರಿಕೆ ಪಾಲಕರು, ಕೊಠಡಿ ಮೇಲ್ವಿಚಾರಕರು, ಕರ್ತವ್ಯ ನಿರ್ವಾಹಕರನ್ನು ನಿಯೋಜಿಸಲಾಗಿದೆ. ಜಿಲ್ಲಾ ಖಜಾನೆಯಲ್ಲಿ ತ್ರಿಸದಸ್ಯ ಸಮಿತಿ ಅಧಿಕಾರಿಗಳಿಗೆ ಮತ್ತು ಎಲ್ಲ ಮಾರ್ಗ ಅಧಿಕಾರಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗದಲ್ಲಿ ಪೊಲೀಸರ ನಿಯೋಜನೆ, ಪರೀಕ್ಷಾ ಕೇಂದ್ರದಲ್ಲಿ ಶ್ರುಶೂಷಕರು ಹಾಗೂ ಪೊಲೀಸರ ನಿಯೋಜನೆ, ಬ್ಯಾಗ್ ಇಟ್ಟುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ, ಕುಡಿಯುವ ನೀರು ಕಲ್ಪಿಸುವುದರ ಮತ್ತಿತರ ಅಗತ್ಯ ಮೂಲ ಸೌಲಭ್ಯ ಸಂಬಂಧ ಕ್ರಮ ಕೈಗೊಳ್ಳಲಾಗಿದೆ.

ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೆ ಪರೀಕ್ಷೆಯನ್ನು ಸುಲಲಿತವಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಽಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಎಸ್‌ಆರ್‌ಟಿಸಿ ಬಸ್ ಕಲ್ಪಿಸಲು ಹಾಗೂ ಪರೀಕ್ಷೆ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಗಮನಹರಿಸಲು ಸೂಚಿಸಲಾಗಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳು ತಮಗೆ ವಹಿಸಿರುವ ಕೆಲಸವನ್ನು ವ್ಯವಸ್ಥಿತವಾಗಿ ಮತ್ತು ಗಂಭೀರವಾಗಿ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ನಿರ್ದೇಶನ ನೀಡಿದ್ದಾರೆ

” ದ್ವಿತೀಯ ಪಿಯುಸಿ ಪರೀಕ್ಷೆ ಸಂಬಂಧ ಅಗತ್ಯಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾ.೨೧ರಿಂದ ಪರೀಕ್ಷೆಗಳು ಆರಂಭ ವಾಗಲಿದ್ದು, ಈ ಬಾರಿ ೫,೨೪೦ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದಾರೆ. ಜಿಲ್ಲೆ ಯಲ್ಲಿ ೧೯ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯ ಲಿದ್ದು, ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.”

-ಕೆ.ಮಂಜುಳಾ, ಉಪ ನಿರ್ದೇಶಕರು,  ಪದವಿ ಪೂರ್ವ ಶಿಕ್ಷಣ ಇಲಾಖೆ 

 

Tags:
error: Content is protected !!