Mysore
22
broken clouds

Social Media

ಶನಿವಾರ, 30 ಮೇ 2026
Light
Dark

ಕಂದಾಯ ದಾಖಲೆಯಲ್ಲಿ ೪ ವಾರ್ಡ್‌ಗಳೇ ನಾಪತ್ತೆ!  

ಎಸ್.ಎಸ್.ಭಟ್

ನಂಜನಗೂಡು ನಗರಸಭೆಯಲ್ಲಿ ೩೧ ವಾರ್ಡ್‌ಗಳು, ಕಂದಾಯ ಇಲಾಖೆಯಲ್ಲಿ ೨೭ ವಾರ್ಡ್‌ಗಳು

ನಂಜನಗೂಡು: ಪುರಸಭೆ ನಗರಸಭೆಯಾಗಿ ಬಡ್ತಿ ಹೊಂದಿ ೨೭ ವಾರ್ಡುಗಳಿಂದ ೩೧ ವಾರ್ಡುಗಳಿಗೆ ಹೆಚ್ಚಳವಾಗಿ ಈಗಾಗಲೇ ೮ ವರ್ಷಗಳೇ ಕಳೆದುಹೋಗಿವೆ.

ಬಡ್ತಿ ಹೊಂದಿದ ನಗರಸಭೆಯ ೩೧ ವಾರ್ಡುಗಳಿಗೂ ೨೦೧೯ರಲ್ಲಿಯೇ ಚುನಾವಣೆ ನಡೆದು ಆ ೩೧ ವಾರ್ಡುಗಳಿಗೂ ಜನಪ್ರತಿನಿಧಿಗಳು ಆಯ್ಕೆಯಾಗಿ ೨೦೨೫ರಲ್ಲೇ ಅವರ ಅವಧಿಯೂ ಪೂರ್ಣವಾಗಿ ನಗರಸಭೆ ಮತ್ತೊಂದು ಚುನಾವಣೆ ಎದುರಿಸಲು ಸಿದ್ಧವಾಗಿ ನಿಂತಿದೆ.

ಆದರೆ ನಗರಸಭೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿದ ೨೮, ೨೯, ೩೦ ಹಾಗೂ ೩೧ನೇ ವಾರ್ಡ್‌ಗಳು ಇಂದಿಗೂ ಕಂದಾಯ ಇಲಾಖೆಯ ವೆಬ್‌ಸೈಟ್‌ನಲ್ಲಿ (ಎಂಟು ವರ್ಷಗಳಾದರೂ) ಅಪ್‌ಲೋಡ್ ಆಗಿಯೇ ಇಲ್ಲ ಎನ್ನಲಾಗಿದೆ.

ನಗರಸಭೆಯಿಂದ ವಾರ್ಡ್‌ಗಳ ವಿವರ ಪಡೆದ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ೨೯ನೇ ವಾರ್ಡ್‌ನ ಅಂಗನವಾಡಿ ಹುದ್ದೆಗಾಗಿ ೨೦-೬-೨೦೨೬ ಅರ್ಜಿ ಸಲ್ಲಿಸಲು ಅಂತಿಮ ದಿನವೆಂದು ತಿಳಿಸಿದೆ.

ಆಫ್ಲೈನ್ ಮೂಲಕ ಸಲ್ಲಿಸಲೇಬೇಕಾದ ದಾಖಲೆಗಳಲ್ಲಿ ೨೯ನೇ ವಾರ್ಡಿನ ವಾಸ ದೃಢೀಕರಣ ಪತ್ರವೂ ಒಂದಾಗಿದ್ದು, ೨೯ನೇ ವಾರ್ಡ್‌ನ ವಾಸ ದೃಢೀಕರಣ ಪತ್ರದ ದಾಖಲೆಯೊಂದಿಗೆ ಅರ್ಜಿ ಹಾಕಬೇಕಿದೆ. ವಾಸ ದೃಢೀಕರಣ ಪತ್ರ ಪಡೆಯಲು ಹೋದರೆ ಅಲ್ಲಿ ತೋರಿಸುತ್ತಿರುವುದು ೨೭ನೇ ವಾರ್ಡ್. ೨೯ನೇ ವಾರ್ಡ್‌ನವಾಸ ದೃಢೀಕರಣ ಪತ್ರವಿಲ್ಲದಿದ್ದರೆ ಆಕಾಂಕ್ಷಿಗಳ ಅರ್ಜಿ ತಿರಸ್ಕೃತವಾಗುತ್ತಿದೆ. ಇದೀಗ ೨೯ನೇ ವಾರ್ಡ್‌ನ ವಾಸದ ದೃಢೀಕರಣ ಪತ್ರ ಸಿಗುತ್ತಿಲ್ಲ. ಅದಿಲ್ಲದೆ ಅರ್ಜಿ ಸ್ವೀಕಾರವಾಗುತ್ತಿಲ್ಲ. ಅಂಗನವಾಡಿ ಹುದ್ದೆಯ ಅರ್ಜಿ ತಿರಸ್ಕೃತದಿಂದಾಗಿ ನಗರಸಭೆಯ ನಾಲ್ಕು ವಾರ್ಡುಗಳು ಕಂದಾಯ ಇಲಾಖೆಯಲ್ಲಿ ಕಾಣೆಯಾದ ಸುದ್ದಿ ಬೆಳಕಿಗೆ ಬಂದಿದೆ.

” ವಾರ್ಡ್ ಕಾಣೆಯಾಗಿಲ್ಲ. ನಗರಸಭೆಯಿಂದ ನಮಗೆ ಈವರೆಗೂ ಆ ನಾಲ್ಕು ವಾರ್ಡುಗಳ ಕುರಿತಂತೆ ನೋಟಿಫಿಕೇಷನ್ ಸಹಿತವಾದ ವಿವರ ಬಂದಿಲ್ಲ. ನಗರಸಭೆಯಿಂದ ಆ ವಿವರ ಬಂದ ತಕ್ಷಣ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದುಅಟಲ್ ಜನಸ್ನೇಹಿ ವೆಬ್‌ಸೈಟ್‌ಗೆ ವಾರದೊಳಗಾಗಿಯೇ ಅಪ್‌ಲೋಡ್ ಮಾಡಲಾಗುವುದು.”

-ರಾಜೇಶ್, ಗ್ರೇಡ್ ೨ ತಹಸಿಲ್ದಾರ್

” ನಾವು ನಗರಸಭೆಯಿಂದ ವಾರ್ಡ್ ಪಟ್ಟಿ ತಂದು ಆ ಅಂಗನವಾಡಿ ಯಾವ ವಾರ್ಡ್ ನಲ್ಲಿದೆ ಎಂದು ಗುರುತಿಸಿ ಹುದ್ದೆ ಭರ್ತಿಗೆ ಅರ್ಜಿ ಕರೆದಿದ್ದೇವೆ. ವಾಸ ದೃಢೀಕರಣ ಪತ್ರ ಆ ವಾರ್ಡಿಗಿಲ್ಲ ಎನ್ನುವುದು ನಮ್ಮ ಗಮನಕ್ಕೀಗ ಬಂದಿದೆ. ಹಾಗಾಗಿ ಆ ಹುದ್ದೆಗೆ ಮತ್ತೆ ಅರ್ಜಿ ಕರೆಯಬೇಕಾಗಬಹುದು.”

-ಭವ್ಯಶ್ರೀ, ಸಿಡಿಪಿಒ, ನಂಜನಗೂಡು

” ೨೯ನೇ ವಾರ್ಡಿನವರಿಗಾಗಿ ಈ ಹುದ್ದೆ ಮೀಸಲಾಗಿದೆ. ಸಂಬಂಧಪಟ್ಟವರು ಅಂಗನವಾಡಿ ಹುದ್ದೆಗೆ ನಮ್ಮ ೨೯ನೇ ವಾರ್ಡಿನವರನ್ನೇ ಆಯ್ಕೆ ಮಾಡಬೇಕು. ಇದಕ್ಕೆ ಜಿಲ್ಲಾಧಿಕಾರಿಗಳೂ ಆದ ನಗರಸಭೆಯ ಆಡಳಿತಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿಯವರೇ ಅವಕಾಶ ಮಾಡಿಕೊಡಬೇಕು.”

ಚಂದ್ರು, ೨೯ನೇ ವಾರ್ಡಿನಿಂದ ಚುನಾಯಿತರಾಗಿದ್ದ ಶಶಿಕಲಾರ ಪತಿ

 

Tags:
error: Content is protected !!