Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಕೊಡಗು ಜಿಲ್ಲೆಯಲ್ಲಿ 3 ತಿಂಗಳಲ್ಲಿ 31 ಶಿಶುಗಳ ಮರಣ

ಹಾಡಿಗಳಲ್ಲಿ ಹೆಚ್ಚುತ್ತಿರುವ ಶಿಶು ಮರಣ ಪ್ರಮಾಣ: ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮ

ನವೀನ್ ಡಿಸೋಜ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ೩ ತಿಂಗಳುಗಳಲ್ಲಿ ೩೧ ಶಿಶುಗಳ ಮರಣ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಬಹುತೇಕ ಹಾಡಿಗಳ ಶಿಶುಗಳು ಮೃತಪಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಪ್ರತಿವರ್ಷ ೬,೫೦೦ ರಿಂದ ೭,೦೦೦ ಹೆರಿಗೆಗಳು ಆಗುತ್ತಿದ್ದು, ಶೇ.೯.೫ ಶಿಶು ಮರಣ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಶೇ.೧೬ ಶಿಶು ಮರಣ ಪ್ರಕರಣಗಳಿದ್ದರೂ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಶೇ.೯.೫ ಮಕ್ಕಳು ಮೃತಪಡುತ್ತಿರುವುದು ಆಘಾತಕಾರಿಯಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯ ಕ್ರಮ ಕೈಗೊಂಡಿದೆ. ಸದ್ಯ ೩ ತಿಂಗಳುಗಳಲ್ಲಿ ೩೧ ಶಿಶು ಮರಣ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ೯ ಮಕ್ಕಳು ಸೂಕ್ತ ಚಿಕಿತ್ಸೆ ದೊರಕದೆ ಮೃತಪಟ್ಟಿವೆ. ಅಂದರೆ ಈ ಮಕ್ಕಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿ ದ್ದರೆ ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು. ಆದರೆ, ಇನ್ನುಳಿದ ೨೨ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ನೀಡಿದರೂ ಬದುಕುಳಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲೆಯಲ್ಲಿ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶಿಶು ಮರಣ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಜೊತೆಗೆ ಮುಖ್ಯವಾಗಿ ಹಾಡಿಗಳಲ್ಲಿ ಶಿಶುಮರಣ ಪ್ರಕರಣಗಳು ಹೆಚ್ಚುತ್ತಿವೆ. ಮಗು ಕೊಂಚ ಅಸ್ವಸ್ಥಗೊಂಡಾಗ ತಾವೇ ನಾಟಿ ಔಷಧ ನೀಡುವುದರಿಂದಲೂ ಶಿಶುಗಳು ಸಾವನ್ನ ಪ್ಪುತ್ತಿವೆ ಎಂದು ಡಿಎಚ್‌ಒ ಡಾ.ಸತೀಶ್ ಕುಮಾರ್ ಹೇಳಿದ್ದಾರೆ. ಪುಟ್ಟ ಮಕ್ಕಳಲ್ಲಿ ಸೋಂಕು ಉಂಟಾಗುತ್ತಿದೆ.

ಅದು ತೀವ್ರ ಗೊಂಡ ಬಳಿಕ ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಪ್ರಕರಣಗಳು ಕಂಡುಬರುತ್ತಿವೆ. ಈ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆಶಾಕಾರ್ಯಕರ್ತೆಯರ ಮೂಲಕ ಮಗು ಇರುವ ಕುಟುಂಬಗಳನ್ನು ಸಂಪರ್ಕಿಸಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಹಾಡಿಗಳಲ್ಲಿ ಆರೋಗ್ಯ ಶಿಕ್ಷಣ ವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು, ತಾಯಂದಿರ ಬಗ್ಗೆಯೂ ಹೆಚ್ಚಿನ ಗಮನ ಹರಿಸಿ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ ಎಂದು ಡಾ.ಸತೀಶ್‌ಕುಮಾರ್ ಮಾಹಿತಿ ನೀಡಿದ್ದಾರೆ. ಶಿಶು ಮರಣವನ್ನು ತಡೆಗಟ್ಟಲು ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ೨೦ ಹಾಸಿಗೆಗಳ ಸಾಮ ರ್ಥ್ಯದ ವಾರ್ಡ್ ಇದ್ದು, ಇಲ್ಲಿನ ಸಿಬ್ಬಂದಿಗೆ ವಿಶೇಷ ತರಬೇತಿ ನೀಡ ಲಾಗಿದೆ. ಇತರ ಸಿಬ್ಬಂದಿಗೂ ವಿಶೇಷ ಶಿಬಿರ ಆಯೋಜಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರಕದೆ ಇರುವ ಕಾರಣಕ್ಕೆ ಕೆಲವರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವ ಆರೋಪವೂಇದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಆರೋಗ್ಯ ಇಲಾಖೆಗೆ ದೂರು ನೀಡಿದರೆ ನಿರ್ಲಕ್ಷ ವಹಿಸಿದ ವೈದ್ಯರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಎಚ್‌ಒ ಡಾ. ಸತೀಶ್‌ಕುಮಾರ್ ಹೇಳಿದ್ದಾರೆ.

” ಕೊಡಗು ಜಿಲ್ಲೆಯಲ್ಲಿ ಕಳೆದ ೩ ತಿಂಗಳುಗಳಲ್ಲಿ ೩೧ ಶಿಶು ಮರಣ ಪ್ರಕರಣಗಳು ವರದಿಯಾಗಿವೆ. ವಿಜ್ಞಾನ ಮುಂದುವರಿದಿರುವ ಇಂದು ಎಲ್ಲ ಕಾಯಿಲೆಗಳಿಗೂ ಚಿಕಿತ್ಸೆ ದೊರಕುತ್ತಿದೆ. ಅದರಲ್ಲೂ ಸರ್ಕಾರ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ನುರಿತ ವೈದ್ಯರಿದ್ದಾರೆ. ಸಾರ್ವಜನಿಕರು ಮನೆ ಮದ್ದಿನಂತಹ ಔಷಧ ನೀಡುವುದಕ್ಕೆ ಆದ್ಯತೆ ನೀಡದೆ, ಆಸ್ಪತ್ರೆಗಳಲ್ಲಿ ಮಕ್ಕಳನ್ನು ಪರೀಕ್ಷಿಸಿ ಚಿಕಿತ್ಸೆ ಕೊಡಿಸಬೇಕು. ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು.”

-ಡಾ. ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Tags:
error: Content is protected !!