Mysore
20
overcast clouds
Light
Dark

ಇಂದು ಗುಂಡ್ಲುಪೇಟೆ ಹಿಂದೆ ಕುಡುಗನಾಡು

• ಶೈಲ ಕುಮಾರ್, ಜಿಲ್ಲಾಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್‌, ಚಾಮರಾಜನಗರ

ಶ್ರೀರಂಗ ಡಣಾಯಕ ನಿರ್ಮಿಸಿದ ವಿಜಯಪುರ ಪಟ್ಟಣದ ಮೂಲ ಕರ್ನಾಟಕದ ದಕ್ಷಿಣ ತುದಿಯಲ್ಲಿರುವ ಗಡಿ ಭಾಗದ ಪಟ್ಟಣ ಗುಂಡ್ಲುಪೇಟೆ. ಪಶ್ಚಿಮ ಘಟ್ಟ ಕೊನೆಗೊಳ್ಳುವ ಈ ಭೂಭಾಗವನ್ನು ಕುಡುಗನಾಡು ಎಂದೇ ಕರೆಯುತ್ತಿದ್ದರು.

ತಮಿಳುನಾಡು, ಕೇರಳ ರಾಜ್ಯಗಳೊಂದಿಗೆ ವ್ಯಾವಹಾರಿಕ ಸಂಬಂಧಕ್ಕೆ ಆಯಕಟ್ಟಿನ ಪ್ರದೇಶ ಇದಾಗಿದೆಯೆಂದು ಗಮನಿಸಿ ಹೊಯ್ಸಳರ ದೊರೆ ವೀರನರಸಿಂಹನ ದಂಡನಾಯಕ ಶ್ರೀರಂಗ ಡಣಾಯಕ ಇಲ್ಲಿಯೇ ನೆಲೆಸಿದ. ತನ್ನ ಆರಾಧ್ಯ ದೈವ ವಿಜಯ
ದೇವರಾಜರು ನಾರಾಯಣಸ್ವಾಮಿಗೆ ದೇಗುಲ ನಿರ್ಮಿಸಿ ಪಟ್ಟಣವೊಂದನ್ನು ಕ್ರಿ. ಶ.1221 ರಲ್ಲಿ ನಿರ್ಮಿಸಿ ‘ವಿಜಯಪುರ’ ಎಂದು ನಾಮಕರಣ ಮಾಡಿದ.

ಪೂರ್ವ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ದ್ವಾರಗಳನ್ನು ಒಳಗೊಂಡ ಚೌಕಾಕಾರದ ಕೋಟೆಯೊಳಗೆ ಅಗ್ರಹಾರ, ರಾಜಮಾರ್ಗ, ಕುದುರೆ ಲಾಯ ಮುಂತಾದವುಗಳೊಂದಿಗೆ ಜನ ವಾಸಿಸಲು ಯೋಗ್ಯವಾದ ಪುರ ನಿರ್ಮಾಣ ಮಾಡಿದ್ದು ಈ ಶ್ರೀರಂಗ
ಡಣಾಯಕ.

ಕೋಟೆಯ ಜನರಿಗಾಗಿ ದಕ್ಷಿಣದಲ್ಲಿ ಹರಿಯುತ್ತಿದ್ದ ಗುಂಡ್ಲು ನದಿಗೆ ಪೂರಕವಾಗಿ ಕೆರೆ ನಿರ್ಮಿಸಿ ಕಾಲುವೆಗಳ ಮೂಲಕ ನೀರು ಸರಬರಾಜು ಆಗುವಂತಹ ವ್ಯವಸ್ಥೆ ಮಾಡಿದ್ದರ ಕುರುಹುಗಳು ಇಂದಿಗೂ ಲಭ್ಯವಿವೆ. ಪೂರ್ವದಲ್ಲಿ ಕೋಟೆ ಬಾಗಿಲು ಗಣಪತಿ, ದಕ್ಷಿಣದಲ್ಲಿ ಕೋಟೆ ಬಾಗಿಲು ಆಂಜನೇಯ ಗುಡಿಗಳು ಕಾಲಕಾಲಕ್ಕೆ ನವೀಕರಣಗೊಂಡು ಸುಸ್ಥಿತಿಯಲ್ಲಿವೆ.

ಕಲ್ಲಹಳ್ಳಿಯ ಶಾಸನ 1542ರಲ್ಲಿ ವಿಜಯ ನಾರಾಯಣ ದೇವರ ನಿತ್ಯ ಸಮಾರಾಧನೆಗೆ ದತ್ತಿ ಬಿಟ್ಟ ಉಲ್ಲೇಖವಿದೆ. ಆದಿತ್ಯರಸರ ಮಕ್ಕಳು, ಘಾಳಿಮಂಟಪ ಕಟ್ಟಿಸಿ ಉದಯ ಕಾಲದ ನೈವೇದ್ಯಕ್ಕೆ ದತ್ತಿ ಬಿಟ್ಟ ದಾಖಲೆಯಿದೆ. ಈಗಲೂ ಸರ್ಕಾರಿ ದಾಖಲೆಯಲ್ಲಿ ಕಸಬಾ ಹೋಬಳಿಯ ಜಮೀನುಗಳು ವಿಜಯಪುರ ಎಂದೇ ಗುರುತಿಸಲ್ಪಟ್ಟಿವೆ.

ಮುಂದೆ ಕಾಲ ಕಳೆದಂತೆ ಪೂರ್ವ ದಿಕ್ಕಿನಲ್ಲಿ ಒಂದು ಕಿ.ಮೀ. ಅಂತರದಲ್ಲಿ ಹರಿಯುವ ಗುಂಡ್ಲು ನದಿಯ ಪಶ್ಚಿಮ ದಂಡೆಯಲ್ಲಿ; ಇದನ್ನು ಕೌಂಡಿನ್ಯ ಕ್ಷೇತ್ರವೆಂದು, ಇಲ್ಲಿ ಹರಿಯುವ ಗುಂಡ್ಲು ನದಿಯನ್ನು ಕೌಂಡಿನ್ಯ ನದಿಯೆಂದು ಗರಳಪುರಿ ಪುರಾಣದಲ್ಲಿ ಉಲ್ಲೇಖಿಸುತ್ತಾರೆ. ಕ್ರಿ.ಶ. 1674ರಲ್ಲಿ ದೆಹಲಿಯ ಔರಂಗಜೇಬನಿಂದ ಬೆಂಗಳೂರನ್ನು ಭೋಗ್ಯಕ್ಕೆ ತೆಗೆದುಕೊಂಡು ಆಡಳಿತ ನಡೆಸಿದ ಮೈಸೂರಿನ ಮಹಾರಾಜರಾದ ಚಿಕ್ಕ ದೇವರಾಜರು ಹಂಗಳ ಗ್ರಾಮದಲ್ಲಿದ್ದರು. ಅವರ ತಂದೆ ದೊಡ್ಡ ದೇವರಾಜರು ನಿಧನರಾದಾಗ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿ ತಂದೆಯ ಆರಾಧ್ಯ ದೈವವಾದ ಪರವಾಸು ದೇವರ ದೇವಾಲಯವನ್ನು ನಿರ್ಮಿಸಿದರು. ಅದರ ಸುತ್ತಲೂ ಅಗ್ರಹಾರ, ಪೇಟೆ ಬೀದಿಗಳನ್ನು ಸ್ಥಾಪಿಸಿ ಈ ಸ್ಥಳಕ್ಕೆ ‘ಗುಂಡ್ಲುಪೇಟೆ’
ಎಂದು ನಾಮಕರಣ ಮಾಡಿದರು.

ಇಲ್ಲೊಂದು ಸ್ವಾರಸ್ಯಕರ ಕತೆಯಿದೆ. ದೇವಸ್ಥಾನದ ಲೋಕಾರ್ಪಣೆಗೆ ದೇವತಾಮೂರ್ತಿಯನ್ನು ಗರ್ಭಗೃಹದ ಪಾಣಿಪೀಠದ ಮೇಲೆ ತೊಟ್ಟಿಲಲ್ಲಿ ಇಟ್ಟು, ನಿಶ್ಚಯ ಮಾಡಿದ್ದ ಶುಭಗಳಿಗೆ ಗುರುತಿಸಲು ಸೂರ್ಯನ ಕಿರಣಗಳ ಚಲನೆ ಆಧರಿಸಿ ಹರಿದಾರಿಗೊಬ್ಬ ಹರಿದಾಸರನ್ನು ನಿಲ್ಲಿಸಿ ಶಂಖೋದ್ವೇಷ ಮಾಡಲು ನೇಮಕ ಮಾಡಿ ಮಂತ್ರ ಘೋಷಗಳಲ್ಲಿ ತಲ್ಲೀನರಾಗಿದ್ದರಂತೆ.
ಇದಾವುದರ ಅರಿವಿಲ್ಲದ ಅನಾಮಿಕ ಹರಿದಾಸನೊಬ್ಬ ದೇಗುಲದ ವೈಭವ ಕಂಡು ಉತ್ಸಾಹದಿಂದ ಬಾಗಿಲ ಬಳಿ ಬಂದು ಜೋರಾಗಿ ಶಂಖನಾದ ಮಾಡಿದ ಕ್ಷಣವೇ ಒಳಗಿದ್ದ ಅರ್ಚಕರು ದೇವತಾಮೂರ್ತಿ ಪ್ರತಿಷ್ಠಾಪನೆ ಮಾಡಿದರಂತೆ. ನಂತರ ಯೋಜಿತ ಹರಿದಾಸರ ಶಂಖಗಳು ತಡವಾಗಿ ಮೊಳಗಿ ಪುರೋಹಿತರಿಗೆ ಗೊಂದಲವಾಯಿತಂತೆ. ಆಗ ಎಡವಟ್ಟು ತಿಳಿದ ನಂತರ ಜ್ಯೋತಿಷರು ನೋಡಿದ ಫಲ ಜ್ಯೋತಿಷದಂತೆ ಈ ಊರು ಹಾಗೂ ಇಲ್ಲಿನ ದೇವರು ಇಲ್ಲಿರದೆ ಸ್ಥಳಾಂತರಗೊಳ್ಳುತ್ತವೆಂದು ತಿಳಿಸಿದ ಕಾರಣಕ್ಕೆ ಈ ಊರು ಮುಂದೆ ಕ್ರಿ.ಶ.1751ರ ಆಜುಬಾಜಿನಲ್ಲಿ ವಿಜಯಪುರದ ಒಳಹೊಕ್ಕು ವಿಲೀನವಾಯಿತು. ಆದರೆ, ಚಿಕ್ಕದೇವರಾಜರ ಮೇಲಿನ ಪ್ರೀತಿಗೆ ‘ಗುಂಡ್ಲುಪೇಟೆ’ ಎಂಬ ಹೆಸರನ್ನು ಪ್ರಧಾನವಾಗಿಸಿಕೊಂಡು ಊರು ಬೆಳೆಯಿತು. ಪರವಾಸು ದೇವತಾಮೂರ್ತಿ ವಿಜಯ ನಾರಾಯಣಸ್ವಾಮಿ ದೇವಾಲಯದಲ್ಲಿ ಬಂದು ಪ್ರತಿಷ್ಠಾಪನೆಯಾಯಿತು.

  • ಹಂಗಳ ಗ್ರಾಮದಲ್ಲಿದ್ದ
    ಮೈಸೂರಿನ ಮಹಾರಾಜ ಚಿಕ್ಕದೇವರಾಜರು
  • ಕ್ರಿ.ಶ.1751ರ ಆಜುಬಾಜಿನಲ್ಲಿ
    ವಿಜಯಪುರಕ್ಕೆ ವಿಲೀನ
  •  ಸರ್ಕಾರಿ ದಾಖಲೆಯಲ್ಲಿ
    ಕಸಬಾ ಹೋಬಳಿಯ
    ಜಮೀನುಗಳು ವಿಜಯಪುರ
    ಎಂದೇ ಗುರುತು
  • ಚಿಕ್ಕದೇವರಾಜರ ಮೇಲಿನ ಪ್ರೀತಿಗೆ ‘ಗುಂಡ್ಲುಪೇಟೆ ಎಂಬ ಹೆಸರು ಪ್ರಧಾನವಾಗಿಸಿ
    ಕೊಂಡ ಊರು
  •  ಐತಿಹಾಸಿಕ ನೆಲೆಯಲ್ಲಿ ಜನಜನಿತವಾದ ಹಿಮವದ್
    ಗೋಪಾಲಸ್ವಾಮಿ ಬೆಟ್ಟ

349ನೆಯ  ವರ್ಷಾಚರಣೆ

ಶತಮಾನಗಳ ಹಿಂದೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿಯೇ ಗುಂಡ್ಲುಪೇಟೆಯಲ್ಲಿ ಪುರಭವನವಾಯಿತು. ಆಧುನಿಕ ಸೌಲಭ್ಯಗಳಿಂದ ಬೆಳೆಯಿತು. ಸ್ವಾತಂತ್ರ್ಯಾ ನಂತರ ಪೇಟೆ ಬೆಳೆಯುತ್ತಾ ಇದೆ. ಇಂದಿಗೂ ಕೋಟೆ ದಾಟಿ ವಿಶಾಲವಾಗುತ್ತಿದೆ. ಆದರೆ, ಗುಂಡ್ಲು ಗುಪ್ತಗಾಮಿನಿಯಾಗುತ್ತಾ ಹೋಯಿತು. ಊರು ಕಟ್ಟಿದ ಚಿಕ್ಕ ದೇವರಾಯರು ಪಟ್ಟಕ್ಕೇರಿದ 349ನೆಯ ವರ್ಷಾಚರಣೆಯಲ್ಲಿ ನಾವಿದ್ದೇವೆ.

ನಾಲ್ಲೆಸೆಯಲ್ಲೂ ಹಬ್ಬಿದ ಕೀರ್ತಿ 

21 ವರ್ಷಗಳ ಕಾಲ ಆಳ್ವಿಕೆ ಮಾಡಿದ ಚಿಕ್ಕದೇವರಾಯರು ಮೈಸೂರು ಸಂಸ್ಥಾನಕ್ಕೆ ಅಠಾರ ಕಚೇರಿ, ಅಂಚೆ ವ್ಯವಸ್ಥೆಯ ಪರಿಚಯ ಮಾಡಿದವರು. ಕರ್ನಾಟಕ ಚಕ್ರವರ್ತಿ, ನವಕೋಟಿ ನಾರಾಯಣ ಮುಂತಾದ ಬಿರುದಾಂಕಿತರು ಸ್ಥಾಪಿಸಿದ ಊರೆಂದು ಖ್ಯಾತಿ ಪಡೆಯಿತು. ಪರವಾಸು ದೇವಸ್ಥಾನದ ಕೀರ್ತಿ ನಾಲ್ಲೆಸೆಯಲ್ಲೂ ಹಬ್ಬಿತು.