Mysore
23
clear sky

Social Media

ಶುಕ್ರವಾರ, 17 ಜನವರಿ 2025
Light
Dark

ಸಮಾಜವಾದದ ದುರಂತ ಕಥೆ: ಒಂದು ಸಮಕಾಲೀನ ನೋಟ

ಕಳೆದ ಶತಮಾನದ ೭೦ರ ದಶಕದಲ್ಲಿ ತುರ್ತುಪರಿಸ್ಥಿತಿ ವಿರುದ್ಧದ ಚಳವಳಿಯ ಮೂಲಕ ಸಮಾಜವಾದಿ ರಾಜಕಾರಣ ಮುನ್ನೆಲೆಗೆ ಬಂದಿದ್ದು, ಲೋಹಿಯಾ, ಜೆಪಿ, ಕಿಷನ್ ಪಟ್ನಾಯಕ್ ಮುಂತಾದವರ ಪ್ರಭಾವ ದೇಶದ ವಿವಿಧ ರಾಜ್ಯಗಳ ಜೊತೆಗೆ ಕರ್ನಾಟಕವನ್ನೂ ಪ್ರಭಾವಿಸಿದ್ದು, ಸಮಾಜವಾದಿ ಸಿದ್ಧಾಂತ, ಬದ್ಧತೆಯ ಹೋರಾಟ ಯುವಜನರನ್ನು ದೊಡ್ಡಮಟ್ಟದಲ್ಲಿ ಸೆಳೆದದ್ದು, ಹಲವು ರಾಜ್ಯಗಳಲ್ಲಿ ಶಕ್ತಿರಾಜಕಾರಣದಲ್ಲೂ ಯಶ ಸಿಕ್ಕಿದ್ದು, ಆದರೆ, ಕ್ರಮೇಣ ಸೈದ್ಧಾಂತಿಕ ಬದ್ಧತೆ ಎನ್ನುವುದು ತೆರೆಯ ಮರೆಗೆ ಸರಿದು, ‘ರಾಜೀ ಕಬೂಲಿ’ನ ರಾಜಕಾರಣ ಆರಂಭವಾದ ಬಗೆ, ಸಮಾಜವಾದಿಗಳಲ್ಲಿ ಹಲವರು ಮಜಾವಾದಿಗಳು ಎಂಬ ಅಪಖ್ಯಾತಿಗೂ ಗುರಿಯಾದದ್ದು- ಈ ಎಲ್ಲ ಸಂಗತಿಗಳು ಮತ್ತು ಮುಂದಿನ ಸಮಾಜವಾದಿ ಹೋರಾಟದ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಶ್ಲೇಷಣೆಯ ಲೇಖನವಿದು.

ಡಿ.ಎಸ್. ನಾಗಭೂಷಣ

ಸಮಾಜವಾದ ಎಂಬ ಪದ ಇಂದು ನಮ್ಮ ನಡುವೆ ಎರಡು ನೆಲೆಗಳಲ್ಲಿ ಬಳಕೆಯಲ್ಲಿದೆ. ಒಂದು ನೆಲೆಯಲ್ಲಿ ಅದು ಜನಸಾಮಾನ್ಯರ ನುಡಿಗಟ್ಟಿನ ಭಾಗವಾಗಿ ಬಹಳ ಸಡಿಲ ಅರ್ಥದಲ್ಲಿ ಬಳಕೆಯಾಗುತ್ತಿದೆ. ಉದಾ: ಬಸವಣ್ಣ ಕನ್ನಡನಾಡಿನ ಮೊದಲ ಸಮಾಜವಾದಿ ಎಂಬಂತಹ ಮಾತುಗಳು. ಇನ್ನೊಂದು, ಕಾಲ-ದೇಶಗಳ ಒಂದು ಚೌಕಟ್ಟಿರುವ ರಾಜಕೀಯ ಪರಿಭಾಷೆಯಾಗಿ ಅದರ ಬಗ್ಗೆ ಚಿಂತಿಸುವುದು, ಬರೆಯುವುದು ಇತ್ಯಾದಿ. ಅಪ್ಪಾದೊರೈ ಎಂಬ ರಾಜಕೀಯ ಶಾಸ್ತ್ರ ಪಂಡಿತ ಗ್ರಂಥಕರ್ತರೊಬ್ಬರು ಸಮಾಜವಾದ ಎನ್ನುವುದು ಗಾಂಧಿ ಟೋಪಿ ಇದ್ದಂತೆ; ಅದು, ಅದನ್ನು ಹಾಕಿಕೊಂಡವರ ತಲೆಯ ಆಕಾರ ಪಡೆಯುವಂತೆ, ಅದರ ಅನುಯಾಯಿಗಳು ಹೇಳುವ ಅರ್ಥ ಪಡೆಯುವಷ್ಟು ಸಡಿಲ ಶಬ್ದವಾಗಿದೆ ಎನ್ನುತ್ತಾರೆ. ಅಂದರೆ ಒಂದು ಕಾಲದಲ್ಲಿ ಸಾರ್ವಜನಿಕ ಜೀವನದಲ್ಲಿ ಸಮಾಜವಾದ ಎನ್ನುವುದು ಬಹುತೇಕ ಎಲ್ಲರ ಒಲವಿನ ಶಬ್ದವಾಗಿತ್ತು.
ಇಲ್ಲಿ ನಾನು ಪದೇಪದೇ ಶಬ್ದ ಎಂಬ ಪದವನ್ನೇ ಬಳಸಲು ಕಾರಣವಿದೆ. ಆ ಕಾರಣವೆಂದರೆ, ಹೀಗೆ ಅದನ್ನು ಬಳಸುವವರೆಲ್ಲ ಅದರ ಮೂಲ ಕಲ್ಪನೆ, ಅಂದರೆ ಅದರ ಮೂಲ ರಾಜಕೀಯ ಆಕಾರದ ಬಗ್ಗೆ ಹೆಚ್ಚು ಯೋಚಿಸದೆ ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕ ಅರ್ಥದಲ್ಲಿ ಬಳಸುತ್ತಿರುತ್ತಾರೆ ಎಂಬುದು. ಹೀಗಾಗಿ ಇಂದು ಯಾರಾದರೂ ಸಮಾಜವಾದ ಸೊರಗಿದೆಯೇ? ಎಂಬ ಪ್ರಶ್ನೆ ಕೇಳಿದರೆ ಅದಕ್ಕೆ ಒಂದು ಸ್ಪಷ್ಟ ಉತ್ತರ ಕೊಡಲು ಸಾಧ್ಯವಿಲ್ಲ. ಇಂದಿನ ಸಂದರ್ಭದ ಹಿನ್ನೆಲೆಯಲ್ಲೇ ಇದನ್ನು ವಿಶದೀಕರಿಸುವುದಾದರೆ, ಬಲಪಂಥೀಯ ಎಂದು ಹೇಳಲಾಗುವ ಪ್ರಸಕ್ತ ಮೋದಿ ಸರ್ಕಾರವೂ ಸಮಾಜವಾದವನ್ನು ಕೈಬಿಟ್ಟಿಲ್ಲ ಎಂದು ಹೇಳಬೇಕಾಗುತ್ತದೆ. ಏಕೆಂದರೆ ಅದೂ ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ಹೇಳಿಕೊಂಡಿದೆಯಲ್ಲದೆ ಅದರ ಅನುಸಾರವಾದ ಉಜ್ವಲಾ, ಜನಧನ್, ಪ್ರಧಾನಮಂತ್ರಿ ಕಿಸಾನ್ ಕಲ್ಯಾಣ್ ಯೋಜನಾ, ಆವಾಸ್ ಯೋಜನಾ, ಗರೀಬ್ ಕಲ್ಯಾಣ್ ಯೋಜನಾ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇವುಗಳ ಆಧಾರದ ಮೇಲೆ ಜನಸಾಮಾನ್ಯರಿಂದ ಮತ ಕೇಳುತ್ತಿದೆ; ಪಡೆಯುತ್ತಿದೆ ಕೂಡ. ಇದು ಈ ಹಿಂದೆ ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರು ತಮ್ಮ ಜೀವನ ಚರಿತ್ರಕಾರ ಎಲ್.ಗೊರ್ಡಾನ್‌ರಿಗೆ ಹೇಳಿದಂತೆ, ಮುಂದಿನ ದಿನಗಳ ಅತ್ಯುತ್ತಮ ರಾಜಕಾರಣ ಫ್ಯಾಸಿವಾದ ಮತ್ತು ಸಮಾಜವಾದಗಳ ಸೂಕ್ತ ಮಿಶ್ರಣದ ಮೇಲೇ ರೂಪುಗೊಳ್ಳಬೇಕಾಗುತ್ತದೆ ಎಂಬ ಸೂತ್ರಕ್ಕೆ ತಕ್ಕುದಾಗಿಯೇ ಇದೆ ಎನ್ನಬೇಕು!
ಆದರೆ ನಾವು ಸಾರ್ವತ್ರಿಕವಾಗಿ ಜಗತ್ತಿನಲ್ಲಿ, ನಿರ್ದಿಷ್ಟವಾಗಿ ನಮ್ಮ ದೇಶದಲ್ಲಿ ಸಮಾಜವಾದ ಎಂಬ ರಾಜಕೀಯ ಪರಿಕಲ್ಪನೆ ಅಥವಾ ಸಿದ್ಧಾಂತ ಒಂದು ನಿರ್ದಿಷ್ಟ ಅರ್ಥದಲ್ಲಿ ಹುಟ್ಟಿ ಬೆಳೆದ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಮಾತನಾಡುವುದಾದರೆ, ಆ ಸಮಾಜವಾದ ಒಂದು ತತ್ವವಾಗಿ ಮತ್ತು ರಾಜಕಾರಣವಾಗಿ, ಈ ಎರಡೂ ನೆಲೆಗಳಲ್ಲಿ ಮಸುಕಾಗಿದೆ ಎಂದೇ ಹೇಳಬೇಕು. ಈಗಲೂ, ದ. ಅಮೆರಿಕದ (ವೆನಿಜೂಲಾ, ಬೊಲಿವಿಯಾ, ನಿಕಾರ್ಗುವಾ ಮುಂತಾದ) ಮತ್ತು ಯೂರೋಪಿನ (ಜರ್ಮನಿ, ಫ್ರಾನ್ಸ್, ಸ್ಪೇನ್, ಇಟಲಿ, ಸ್ವೀಡನ್, ನಾರ್ವೆ ಮುಂತಾದ) ಕೆಲವು ದೇಶಗಳಲ್ಲಿ ಸಮಾಜವಾದಿ ಎಂಬ ಹಣೆಪಟ್ಟಿಯುಳ್ಳ ಸರ್ಕಾರಗಳು ಅಥವಾ ಪ್ರಬಲ ರಾಜಕೀಯ ಪಕ್ಷಗಳು ಕ್ರಿಯಾಶೀಲವಾಗಿದ್ದರೂ, ಅವು ಇಂದಿನ ಮುಕ್ತ ಮಾರುಕಟ್ಟೆ ಆರ್ಥಿಕತೆಯ ಹೆಸರಿನ ಬಂಡವಾಳಶಾಹಿ ಆರ್ಥಿಕತೆಯ ರಾಜಕಾರಣದ ಎದುರು ಬಸವಳಿಯುತ್ತಾ ಬದುಕಿವೆ ಎಂದೇ ಹೇಳಬೇಕು. ಹಾಗೆ ನೋಡಿದರೆ ಇಂದು ಅಮೆರಿಕಾದಲ್ಲಿ ಅಧಿಕಾರದಲ್ಲಿರುವ ಡೆಮಾಕ್ರೆಟಿಕ್ ಪಕ್ಷ ಅಥವಾ ಬ್ರಿಟಿಷ್ ರಾಜಕಾರಣದ ಮುಖ್ಯವಾಹಿನಿಯಲ್ಲಿರುವ ಲೇಬರ್ ಪಕ್ಷ; ಅಷ್ಟೇ ಏಕೆ ನಮ್ಮ ದೇಶದ ಕೆಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಗಳನ್ನೂ ರಾಜಕೀಯ ವಿಶ್ಲೇಷಕರು ವಿಶಾಲಾರ್ಥದಲ್ಲಿ ಸಮಾಜವಾದಿ ಎಂದು ಗುರುತಿಸುತ್ತಾರೆ; ಈ ಎಲ್ಲ ಪಕ್ಷಗಳೂ ಮುಕ್ತ ಮಾರುಕಟ್ಟೆ ಆರ್ಥಿಕತೆಯ ಅಭಿಮಾನಿಗಳಾಗಿದ್ದರೂ! ಇದಕ್ಕೆ ಕಾರಣ, ಇವುಗಳ ಉದಾರವಾದಿ ಆರ್ಥಿಕ ನೀತಿ ಅನುಸರಣೆಯ ಚರಿತ್ರೆ ಮತ್ತು ವರ್ತಮಾನದ ಅವುಗಳ ನೀತಿ ನಿರ್ಧಾರಗಳಲ್ಲಿ ಕಾಣುವ ಇದರ ಪ್ರಭಾವ. ಇನ್ನು ನಮ್ಮ ದೇಶದಲ್ಲೇ ಸಮಾಜವಾದಿ ಎಂದು ಹೆಸರಿನಲ್ಲಿಯೇ ಅಸ್ತಿತ್ವದಲ್ಲಿರುವ ಮುಲಾಯಂ ಸಿಂಗ್ ಯಾದವ್-ಅಖಿಲೇಶ್ ಯಾದವ್ ಎಂಬ ಅಪ್ಪ-ಮಕ್ಕಳ ಪಕ್ಷವೊಂದು ಇದೆಯಲ್ಲ? ಈ ಪಕ್ಷ ಸಮಾಜವಾದಕ್ಕೆ ಒಳ್ಳೆಯ ಹೆಸರನ್ನೇನೂ ತಂದಂತಿಲ್ಲ. ಹಾಗೇ ಸಮಾಜವಾದಿ ಹಿನ್ನೆಲೆಯನ್ನು ಹೇಳಿಕೊಳ್ಳುವ ಲಾಲೂ-ತೇಜಸ್ವಿ ಯಾದವರ ಅಪ್ಪ ಮಕ್ಕಳ ಪಕ್ಷವೆನಿಸಿರುವ ರಾಷ್ಟ್ರೀಯ ಜನತಾದಳವೂ. ಆದರೆ ಇದೇ ವಿಂಗಡಣೆಗೆ ಸೇರಿದ ನಿತೀಶ್ ಕುಮಾರ್ ಅವರ ನೇತೃತ್ವದ ಸಂಯುಕ್ತ ಜನತಾದಳ ಆಶ್ಚರ್ಯವೆನ್ನುವಂತೆ ನಿರಂತರವಾಗಿ ಎರಡು ದಶಕಗಳ ಕಾಲ ಅಧಿಕಾರ ನಡೆಸುತ್ತಾ ಒಂದಿಷ್ಟು ಘನತೆಯ ಸಮಾಜವಾದಿ ರಾಜಕಾರಣ ಮಾಡುತ್ತಾ ಉಳಿದಿದೆ ಎನ್ನಬಹುದಾದರೂ, ಅದು ಕೋಮುವಾದಿ ಪಕ್ಷದ ಮೈತ್ರಿಯ ಕಳಂಕವನ್ನು ಹೊರಬೇಕಾಗಿದೆ ಎಂಬುದೂ ನಿಜ.

ಹೀಗೆ ಸಮಾಜವಾದ ಜಗತ್ತಿನಲ್ಲಿಯೂ, ಭಾರತದಲ್ಲಿಯೂ ಆಕಾರ ಕಳೆದುಕೊಂಡು ಅಥವಾ ಒಂದು ಸ್ಪಷ್ಟ ಆಕಾರವಿಲ್ಲದೆ, ಅಸ್ತವ್ಯಸ್ತವಾಗಿ ಅಲ್ಲಲ್ಲಿ ತನ್ನನ್ನು ಚೆಲ್ಲಿಕೊಂಡಿದೆ. ಕಾಲ ದೇಶಗಳ ಮಿತಿಗಳಲ್ಲಿ ಹುಟ್ಟಿದ-ನಾವು ಮನುಷ್ಯರೂ ಸೇರಿ-ಎಲ್ಲದರಂತೆ ಸಮಾಜವಾದಕ್ಕೂ ಒಂದು ನಿರ್ದಿಷ್ಟ ಆಯಸ್ಸು-ತಾಳಿಕೆ ಮತ್ತು ಬಾಳಿಕೆಗಳ ಅವಧಿ-ಇತ್ತಷ್ಟೆ. ಅದರಾಚೆ ಬಾಳಲು ಅದು ತನ್ನನ್ನು ತಾನು ಪುನರ್ ಅನ್ವೇಷಿಸಿಕೊಂಡು ಪುನರುಜ್ಜೀವನಗೊಳ್ಳಬೇಕಷ್ಟೆ. ಹಾಗೆ ಪುನರುಜ್ಜೀವನಗೊಳ್ಳಲು ಅದು ತಾನು ಹುಟ್ಟಿದ ಕಾಲ ದೇಶಗಳ ಗಡಿಗಳಾಚೆಗೆ ತನ್ನ ರೆಕ್ಕೆಗಳನ್ನು ಬಿಚ್ಚಿಕೊಳ್ಳಬೇಕಷ್ಟೆ. ಇದು ತನ್ನನ್ನು ತಾನೇ ಮೀರುವ ಸಾಹಸ. ಅದಕ್ಕೆ ಬೇಕಾದ ಅಪಾರ ಸೃಜನಶೀಲತೆ, ತನ್ನ ಯೌವನದ, ಸಂಭ್ರಮದ ದಿನಗಳ ಬಿಂಕ ಬಿನ್ನಾಣಗಳನ್ನು ನುಂಗಿಕೊಳ್ಳುವ ನಮ್ರತೆಯನ್ನು ಬೇಡುತ್ತದೆ. ಆದರೆ ಸಮಾಜವಾದ ಇದರಲ್ಲಿ ಸೋತಿದೆ ಎಂದು ನನಗನ್ನಿಸುತ್ತದೆ. ಆದುದರಿಂದಲೇ ಅದು ಅಂತರ್ ಪಿಶಾಚಿಯಂತೆ ಜಗತ್ತಿನಲ್ಲಿ ಸಂಚರಿಸುತ್ತಿದೆ.
ಈ ಮೇಲಿನ ನನ್ನ ಮಾತುಗಳನ್ನು ಸರಿಯಾಗಿ ಅರಿಯಲು ನಾವು ಸಮಾಜವಾದದ ಹುಟ್ಟಿನ ಹಿನ್ನೆಲೆ ನೋಡಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅದು ೧೪ನೇ ಶತಮಾನದಲ್ಲಿ ಆರಂಭವಾಗಿ ಈಗಲೂ ವಿವಿಧ ರೂಪಗಳಲ್ಲಿ ಜಗತ್ತನ್ನು ಆವರಿಸಿರುವ ಜ್ಞಾನಯುಗ ಎಂದು (ತಪ್ಪಾಗಿ) ಕರೆಯಲಾಗುವ ಆಧುನೀಕರಣದ ಭಾಗವಾಗಿ ೧೬-೧೭ನೇ ಶತಮಾನದಲ್ಲಿ ಯೂರೋಪಿನ ಕೆಲವು ದೇಶಗಳಲ್ಲಿ ಆರಂಭವಾದ ಯಾಂತ್ರೀಕೃತ ಕೈಗಾರಿಕೀಕರಣ ಅಲ್ಲಿನ ಸಮಾಜದಲ್ಲಿ-ಅದರ ಸಾಮಾಜಿಕ ಸಂಬಂಧಗಳಲ್ಲಿ-ಉಂಟು ಮಾಡಿದ ಉತ್ಪಾತಗಳ ಇತ್ಯರ್ಥಕ್ಕೆ ಅಲ್ಲಿನ ಬೌದ್ಧಿಕತೆ ಕಂಡುಕೊಂಡ ಒಂದು ಪರಿಹಾರ ರೂಪ. ಇದೊಂದು ಬಹುರೂಪಿ ಪರಿಹಾರವಾಗಿದ್ದು ದೇಶ ಮತ್ತು ಕಾಲಕ್ರಮೇಣ ಇದು ಎರಡು ಮುಖ್ಯ ರೂಪಗಳನ್ನು ಪಡೆಯಿತು. ಒಂದು, (ಕೈಗಾರಿಕಾ) ಕಾರ್ಮಿಕರ ಸರ್ವಾಧಿಕಾರದಲ್ಲಿ ತನ್ನ ಸಾರ್ಥಕ್ಯ ಕಂಡುಕೊಳ್ಳುವ (ಮಾರ್ಕ್ಸ್ ವಾದಿ) ಕಮ್ಯೂನಿಸಂ ಮತ್ತು ಇನ್ನೊಂದು, ಯಾರದೇ ಸರ್ವಾಧಿಕಾರದಲ್ಲಿನ ಸಮಸ್ಯೆಗಳನ್ನು ಮುನ್ನೋಡಿ ರೂಪುಗೊಂಡ ಉದಾರವಾದಿಯಾದ ಪ್ರಜಾಸತ್ತಾತ್ಮಕ ಸಮಾಜವಾದ. ಜಗತ್ತು ಈ ಎರಡನ್ನೂ, ಅದರ ಗೆಲುವು-ಸೋಲುಗಳೊಂದಿಗೆ ನೋಡಿದೆ; ನೋಡುತ್ತಿದೆ.

ಈ ಬೆಳವಣಿಗೆಗಳ ಹಿಂದೆ ಇರುವುದು ಮೂಲತಃ ಕೃಷಿಕವಾಗಿದ್ದ ಸಮಾಜದಲ್ಲಿ ಕೈಗಾರಿಕಾ ಕ್ರಾಂತಿ ತಂದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳನ್ನು ಗ್ರಹಿಸಿದ ಬಗೆ: ಇದು ಸಂಭವಿಸಿದ ಆಗಿನ ಯೂರೋಪಿನ ಬೌದ್ಧಿಕತೆ. ಮುಖ್ಯವಾಗಿ ಅದು ಮಾಲೀಕ ವರ್ಗ ಮತ್ತು ಕಾರ್ಮಿಕ ವರ್ಗಗಳೆಂಬ ಎರಡು ಸ್ಪಷ್ಟ ವರ್ಗಗಳ ಉದಯವನ್ನು ಗುರುತಿಸಿ ಈ ಎರಡು ವರ್ಗಗಳ ಹಿತಾಸಕ್ತಿಗಳ ಘರ್ಷಣೆಯ ತಾರ್ಕಿಕ ಅಂತ್ಯವನ್ನು ಕಾರ್ಮಿಕರ ಐಕ್ಯತೆಯಲ್ಲಿ ಕಂಡದ್ದು. ಈ ಐಕ್ಯತೆಯ ಸಂಘಟನೆಯ ಶೈಲಿಗಳೇ ಮೇಲೆ ಹೇಳಿದ ಸಮಾಜವಾದದ ಎರಡೂ ಮುಖ್ಯ ರೂಪಗಳಿಗೆ ಕಾರಣವಾದದ್ದು ಎನ್ನಬಹುದು. ಇವುಗಳಲ್ಲಿ ಕಾರ್ಮಿಕರ ಅಥವಾ ದುಡಿಯುವ ವರ್ಗದ ಸರ್ವಾಧಿಕಾರದ ರೂಪಗಳು-ಅವು ಎಷ್ಟರಮಟ್ಟಿಗೆ ತಮ್ಮದೇ ಮೂಲ ತಾತ್ವಿಕತೆಗೆ ನಿಷ್ಠವಾಗಿವೆ ಎಂಬುದು ಬೇರೆ ವಿಷಯ-ಇಂದು ಕಾಣುವುದು ಎರಡೇ ದೇಶಗಳಲ್ಲಿ: ಚೀನಾ ಮತ್ತು ಕ್ಯೂಬಾಗಳಲ್ಲಿ. ಇಂತಹುದೇ ಪ್ರಯೋಗ ಬಹು ದೊಡ್ಡ ಪ್ರಮಾಣದಲ್ಲಿ ನಡೆದ ರಷ್ಯಾ ಮತ್ತು ಅದರ ಅಕ್ಕಪಕ್ಕದ ದೇಶಗಳಲ್ಲಿ ಅದು ವಿಫಲಗೊಂಡು ಬಹಳ ವರ್ಷಗಳೇ ಆಗಿವೆ. ಅವುಗಳಲ್ಲಿ ರಷ್ಯಾ ಸೇರಿದಂತೆ ಹಲವು ದೇಶಗಳು ಕಾರ್ಮಿಕರ ಎಂಬ ವಿಶೇಷಣವನ್ನು ಕಳೆದುಕೊಂಡು ಬರೀ ಸರ್ವಾಧಿಕಾರಗಳಾಗಿ ಮಾರ್ಪಟ್ಟಿವೆ ಇಲ್ಲವೆ ಅರಾಜಕತೆ-ರಾಜಕೀಯ ವಿಭಜನೆಗಳಿಗೆ ಈಡಾಗಿವೆ.
ಇದು ಸಮಾಜವಾದದ ಕಥನದ ಒಂದು ಭಾಗವಾದರೆ, ಈ ಯೂರೋಪಿನ ಪ್ರಯೋಗವನ್ನು ಕಂಡು ಸ್ಫೂರ್ತಿಗೊಂಡ ಭಾರತದಂತಹ ಐರೋಪ್ಯೇತರ ದೇಶದ ಬೌದ್ಧಿಕತೆ ಮತ್ತು ವಿವೇಕ ಇದಕ್ಕೆ ಪ್ರತಿಕ್ರಿಯಿಸಿದ ರೀತಿ ನೀತಿಗಳದ್ದೇ ಇನ್ನೊಂದು ಕಥೆಯಾಗಿದ್ದು ಅದನ್ನು ಭಾರತೀಯ ಸಮಾಜವಾದದ ಕಥೆ ಎಂದು ಕರೆಯಬಹುದು. ಇದರಲ್ಲಿ ಯೂರೋಪಿನ ಕಥೆಯನ್ನೇ ಇಲ್ಲಿ ಪುನರಾವರ್ತನೆಗೊಳಿಸಲು ಯತ್ನಿಸಿ ಸೋತು ಸುಸ್ತಾಗಿ ತಮ್ಮದೇ ದಾರಿ ಹಿಡಿದಿರುವ ಕಮ್ಯೂನಿಸ್ಟ್ ಪಕ್ಷಗಳ ಕಥೆ-ಉಪಕಥೆಗಳನ್ನು ಸೇರಿಸಿ ಗೊಂದಲ ಮಾಡಿಕೊಳ್ಳುವುದು ಬೇಡ. ಈ ಕಮ್ಯೂನಿಸ್ಟರನ್ನುಳಿದು ಯೂರೋಪಿನ ಸಮಾಜವಾದದಿಂದ ಸ್ಫೂರ್ತಿಗೊಂಡವರನ್ನು ಮೂರು ಗುಂಪುಗಳನ್ನಾಗಿ ಮಾಡಿ ನೋಡಬಹುದು. ಈ ಮೂರೂ ಗುಂಪುಗಳ ಒಂದು ಸಾಮಾನ್ಯ ಲಕ್ಷಣವೆಂದರೆ ಇವರಲ್ಲಿದ್ದವರೆಲ್ಲರೂ ಅಂದು ತಮಗೆ ತಕ್ಷಣದ ಮುಖ್ಯ ಹೋರಾಟವಾಗಿದ್ದ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಹೋರಾಟ ಅಥವಾ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿದ್ದವರಾಗಿದ್ದರು. ಮತ್ತೂ ಮುಖ್ಯವೆಂದರೆ ಇವರೆಲ್ಲರೂ ಈ ಹೋರಾಟದ ಕೇಂದ್ರಬಿಂದುವಾಗಿದ್ದ ಮಹಾತ್ಮ ಗಾಂಧಿಯವರ ವ್ಯಕ್ತಿತ್ವ ಮತ್ತು ವಿವಿಧ ತೀವ್ರತೆಗಳಲ್ಲಿ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಹಾಗಾಗಿಯೇ ಇವರ ಸಮಾಜವಾದಿ ಪಯಣ ಜಾಗತಿಕ ಸಮಾಜವಾದಿ ಪಯಣದಿಂದ ವಿಭಿನ್ನವಾಗಿತ್ತು.
ಭಾರತದ ಸಮಾಜವಾದಿ ಕಥನದ ಮೂರು ಮುಖ್ಯ ಗುಂಪು ಎಂದೆನಲ್ಲ. ಆ ಮೂರೂ ಮೊದಲು ಒಂದೇ ಆಗಿದ್ದು ಗಾಂಧಿ ಪ್ರಭಾವದ ತೀವ್ರತೆಗನುಸಾರ ಬೇರೆಬೇರೆ ಆಗಿ ಕಾಣತೊಡಗಿದವಷ್ಟೆ. ಈ ಮೂರು ಗುಂಪುಗಳನ್ನು ಅವು ಆಯ್ಕೆ ಮಾಡಿಕೊಂಡ ರಾಜಕೀಯ ಆದ್ಯತೆಗಳ ಅನುಸಾರವಾಗಿ ಮೂರು ಧಾರೆಗಳೆಂದೂ ಗುರುತಿಸಬಹುದಾಗಿದ್ದು ಈ ಧಾರೆಗಳನ್ನು (ಜಯಪ್ರಕಾಶ ನಾರಾಯಣ) ಜೆಪಿ, (ರಾಮಮನೋಹರ)ಲೋಹಿಯಾ ಮತ್ತು (ಜವಾಹರಲಾಲ್)ನೆಹರೂ ಧಾರೆಗಳೆನ್ನಬಹುದು. ಇವುಗಳಲ್ಲಿ ಜೆಪಿ ಧಾರೆ ಆರಂಭದಲ್ಲಿ ಪ್ರಖರ (ಮಾರ್ಕ್ಸ್‌ವಾದಿ (ಕಮ್ಯೂನಿಸ್ಟ್) ಆಗಿದ್ದು, ಗಾಂಧಿ ಹತ್ಯೆ ನಂತರ ಜ್ಞಾನೋದಯವಾದಂತೆ ಹೆಚ್ಚು ಗಾಂಧಿವಾದಿ-ಸರ್ವೋದಯದ ರಾಜಕೀಯೇತರ ದಾರಿ ಹಿಡಿಯಿತು. ಆದರೆ ಆರಂಭದಿಂದಲೂ ಯೂರೋಪಿನ
ವಿದ್ಯಮಾನವನ್ನು ವಿಮರ್ಶಾತ್ಮಕವಾಗಿಯೇ ನೋಡುತ್ತಿದ್ದ ಲೋಹಿಯಾ ಧಾರೆ ಗಾಂಧಿಯವರಿಂದ ತನಗೆ ಬೇಕಾದ್ದಷ್ಟನ್ನೇ ಪಡೆದು ಭಾರತೀಯ ಸಂದರ್ಭದ ಸಮಾಜವಾದವನ್ನು ರೂಪಿಸಲು ಹೆಣಗಾಡಿತು. ಇನ್ನು ನೆಹರೂ ಧಾರೆ ಎಂದರೆ, ಬ್ರಿಟಿಷ್ ಲೇಬರ್ ಪಕ್ಷದ ಮಾದರಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ಸಮಾಜವಾದವನ್ನು ಅಳವಡಿಸುವ ಪ್ರಯತ್ನ ಮಾಡಿ ಮಿಶ್ರ ಆರ್ಥಿಕತೆ ಎಂಬೊಂದು ರಾಜಕೀಯ ಹೇಸೆರಗತ್ತೆಯ ಹುಟ್ಟಿಗೆ ಕಾರಣವಾಗಿ ಸಮಾಜವಾದದ ದೃಷ್ಟಿಕೇಂದ್ರವನ್ನು ಇದು ಬಹುಕಾಲ ಆಡಳಿತ ನಡೆಸಿದ ಧಾರೆಯೂ ಆದ್ದರಿಂದ- ವಿಚಲಿತಗೊಳಿಸಿದ ಕಥೆ ಎನ್ನಬಹುದು.

ಹೀಗಾಗಿ ಈ ಮೂರೂ ಧಾರೆಗಳಲ್ಲಿ ಸಮಾಜವಾದಕ್ಕೆ ತಮ್ಮದೇ ನಿಜ ಕೊಡುಗೆ ಸಲ್ಲಿಸಿದವರೆಂದರೆ ರಾಮಮನೋಹರ ಲೋಹಿಯಾ ಅವರೇ ಎನ್ನಬಹುದು. ಹಾಗಾಗಿಯೇ ಇಂದು ಈ ದೇಶದಲ್ಲಿ ಸಾಮಾನ್ಯವಾಗಿ ಸಮಾಜವಾದ ಎಂದರೆ ಲೋಹಿಯಾ ಸಮಾಜವಾದವೆಂಬ ಕಲ್ಪನೆಯೇ ಚಾಲ್ತಿಯಲ್ಲಿದ್ದು ಅದರಲ್ಲಿನ ಪ್ರತಿಪಾದನೆಗಳೇ ಚರ್ಚೆಗೆ ಈಡಾಗುತ್ತಿವೆ. ಆದರೆ ಈ ತಮ್ಮದೇ ಸಮಾಜವಾದಿ ಕಾಣ್ಕೆಗೆ ಬದ್ಧರಾದ ಇವರು ಇದೇ ಕಾರಣದಿಂದಾಗಿ ಇದ್ದ ವ್ಯವಸ್ಥೆಯ ಜೊತೆಗೆ ಇತರೆರಡು ಧಾರೆಗಳ ವಿರುದ್ಧವೂ-ನಿರ್ದಿಷ್ಟವಾಗಿ ಆಡಳಿತಾರೂಢ ನೆಹರೂ ಧಾರೆ ವಿರುದ್ಧ-ಹೋರಾಡುವ ಅನಿವಾರ್ಯತೆಗೆ ಸಿಕ್ಕಿ ಬಸವಳಿದು ಇವರ ನಾಯಕ ಲೋಹಿಯಾ ಬಹುಬೇಗನೇ-ತಮ್ಮ ೫೭ನೇ ವಯಸ್ಸಿನಲ್ಲಿ- ನಿಧನರಾದ ಕಾರಣದಿಂದಾಗಿ ಅವರ ಕಾಣ್ಕೆಯ ಸಮಾಜವಾದ ಹೊರ (ಸ್ಥೂಲ) ನೋಟಕ್ಕೆ, ಹೊಚ್ಚಹೊಸ ಒಳನೋಟಗಳ ಬಿಡಿ ವಿಚಾರಗಳ ರೂಪದಲ್ಲಿ ಗಮನ ಸೆಳೆಯುವಂತಾಯಿತೇ ಹೊರತು ಒಂದು ಸಮಗ್ರ ಸಾವಯವ ರಾಜಕೀಯ ರಚನೆಯಾಗಿ ಹರಳುಗಟ್ಟಲು ಸಾಧ್ಯವಾಗಲಿಲ್ಲ. ಜೊತೆಗೆ ಲೋಹಿಯಾ ಅವರ ಪ್ರಖರ ಪ್ರಭುತ್ವ ವಿರೋಧಿ ಧೋರಣೆಯಿಂದಾಗಿ ಅವರೊಂದಿಗೆ ವೈಯಕ್ತಿಕ ನೆಲೆಯಲ್ಲಿ ದೇಶದ ಉತ್ಕೃಷ್ಟ ಮನಸ್ಸುಗಳ ಜೊತೆಗೆ ಬೆಂಬಲಿಗರಾಗಿ ಗುರುತಿಸಿಕೊಂಡ ಸಮೂಹವು ವೈವಿಧ್ಯಮಯ ರಾಜಕೀಯ ಆಶೋತ್ತರಗಳನ್ನುಳ್ಳ ಮಿಶ್ರ ಸಮೂಹವಾಗಿದ್ದು ಅಲ್ಲಿ ರಾಜಕೀಯ ಕಹಿ ಮತ್ತು ಕ್ರೋಧಗಳು ಪ್ರಬಲವಾಗಿದ್ದವು ಎಂದು ನನಗೆ ಈಗೀಗ ಅನ್ನಿಸತೊಡಗಿದೆ. ಇದಕ್ಕೆ ಪ್ರಚಂಡ ಬುದ್ಧಿಮತ್ತೆ ಮತ್ತು ಮಿಂಚಿನ ಒಳನೋಟಗಳ ಲೋಹಿಯಾ, ಅವರೇ ಒಂದೆಡೆ ಹೇಳಿಕೊಂಡಿರುವಂತೆ, ತಾವು ಕಾಲಕ್ಕಿಂತ ಒಂದೆರಡು ಹೆಜ್ಜೆ ಮುಂದಿರುತ್ತಿದ್ದುದರಿಂದ ಸಮಕಾಲೀನ ರಾಜಕಾರಣದಲ್ಲಿ ಯಥೋಚಿತ ಜಾಗದಿಂದ ವಂಚಿತರಾಗಿದ್ದ ಕಾರಣದಿಂದಾಗಿ ಅವರ ವ್ಯಕ್ತಿತ್ವವನ್ನು ಆವರಿಸಿದ್ದ ಒಳ ದಣಿವು-ಹತಾಶೆಗಳೂ ಇದಕ್ಕೆ ಪೂರಕವಾಗಿದ್ದಿರಬಹುದು.
ಹಾಗಾಗಿಯೇ ಅವರ ಬೆಂಬಲಿಗ ಸಮೂಹ ಅವರ ನಿಧನಾನಂತರ ಅವರ ಪ್ರತಿಪಾದನೆಗಳಲ್ಲಿ ತಮಗೆ ಹಿತವೆನಿಸಿದ್ದಷ್ಟನ್ನೇ ಬಿಡಿಬಿಡಿಯಾಗಿ ಹಿಡಿದು ಅವರ ಸಮಾಜವಾದಿ ದರ್ಶನದ ದೃಷ್ಟಿಕೇಂದ್ರವನ್ನೇ ಕಳೆದು ರಾಜಕಾರಣ ಮಾಡುವುದರಲ್ಲಿ ತೊಡಗಿದವು. ಮುಖ್ಯವಾಗಿ ಲೋಹಿಯಾ ಅಂದಿನ ಕಾಲಕ್ಕೆ-ಅರವತ್ತು ವರ್ಷಗಳ ಹಿಂದೆ-ಅಪಾಯಕಾರಿಯಾಗಿ ಕಾಣುತ್ತಿದ್ದ ಬ್ರಾಹ್ಮಣ-ಕ್ಷತ್ರಿಯ-ಬನಿಯಾ ಮೇಲಾಟದ ಸಾಮಾಜಿಕತೆಯ ನೇರ್ಪಿಗಾಗಿ ಪ್ರತಿಪಾದಿಸಿದ ಹಿಂದುಳಿದ ಜಾತಿ ಪ್ರಾಶಸ್ತ್ಯ ನೀತಿಯನ್ನು ಇಂದು ಸಾಮಾಜಿಕ ನ್ಯಾಯದ ಹೆಸರಿನಲಿ, ಅಸ್ಪೃಶ್ಯ ಜಾತಿಗಳನ್ನೂ ಹಿಂದಿಕ್ಕುವ ಹಿಂದುಳಿದ ಜಾತಿವಾದ ವಾಗಿ ಅಶ್ಲೀಲಗೊಳಿಸಿ ಕುಟುಂಬ ರಾಜಕಾರಣದ ನವಪಾಳೇಗಾರಿ ವ್ಯವಸ್ಥೆಯ ಮುಂದಾಳುಗಳಂತೆ ಕಾಣತೊಡಗಿದ್ದಾರೆ. ಇನ್ನೂ ದುರಂತವೆಂದರೆ ಲೋಹಿಯಾ ಪ್ರತಿಪಾದಿಸಿದ್ದ ಮಹಿಳಾ ಸಬಲೀಕರಣ ನೀತಿಯನ್ನು ತುಳಿದುಹಾಕಿದಂತೆ ಶಾಸನಸಭೆಗಳಲ್ಲಿನ ಮಹಿಳಾ ಮೀಸಲಾತಿ ವಿರೋಧಿ ಹೋರಾಟದ ಮುಂಚೂಣಿ ನಾಯಕರೂ ಇವರೇ ಆಗಿದ್ದಾರೆ. ಹೀಗೆ ದಾರಿ ತಪ್ಪಲು ಮುಖ್ಯ ಕಾರಣ, ಈ ಮೊದಲೇ ಹೇಳಿದಂತೆ, ಇವರು ಸಮಾಜವಾದ ತನ್ನ ಇಡಿತನವನ್ನು ಕಾಣಿಸುವ ಆದರ ದಾರ್ಶನಿಕತೆಯ ಕೇಂದ್ರದೃಷ್ಟಿಯನ್ನೇ ಕಳೆದುಕೊಂಡಿರುವುದು; ಲೋಹಿಯಾ ಸಮಾಜವಾದದ ತಾತ್ವಿಕ ಸೌಂದರ್ಯ ಮೀಮಾಂಸೆಯ ಈ ಸೂಕ್ಷ್ಮಕ್ಕೆ ಎರವಾಗಿರುವುದು: ಅಂದರೆ ಲೋಹಿಯಾ ಸಮಾಜವಾದ ಒಂದು ಕಾಮನಬಿಲ್ಲಿನಂತಿದ್ದು ಅದರ ಎಲ್ಲ ಬಣ್ಣಗಳ ಒಟ್ಟಾರೆ ದರ್ಶನ ಮಾತ್ರ ಅದರ ಸೌಂದರ್ಯವನ್ನು- ಅದರ ರಾಜಕೀಯ ಸಾಮರ್ಥ್ಯವನ್ನು-ನಿಜಗೊಳಿಸುತ್ತದೆ; ಆಳದ ನೆಮ್ಮದಿಯನ್ನು ಸೃಷ್ಟಿಸುತ್ತದೆ.
ಅಂದರೆ ಅವರ ಅಧಿಕಾರದ ವಿಕೇಂದ್ರೀಕರಣ, ಮಧ್ಯಮ ಗತಿಯ ಕೈಗಾರಿಕೀಕರಣ, ಭೂ ಪರಿಮಿತಿಯ ಸೂತ್ರ, ಕೃಷಿ-ಕೈಗಾರಿಕಾ ಬೆಲೆಗಳ ಸಮನ್ವಯ, ಆದಾಯ-ವೆಚ್ಚಗಳ ನಿಯಂತ್ರಣ ನೀತಿ, ಮಾತೃಭಾಷಾ ಶಿಕ್ಷಣ ಮತ್ತು ಇವೆಲ್ಲಕ್ಕೆ ಅರ್ಥ ಪ್ರದಾನ ಮಾಡುವ ಸರಳ ಸಭ್ಯ ಜೀವನಶೈಲಿಗಳ ಅನುಷ್ಠಾನವಿಲ್ಲದೆ ಈ ಯಾವೊಂದೂ ಸ್ಥಿರವಾಗಿ ನಿಲ್ಲುವುದಿಲ್ಲ. ಎಲ್ಲವೂ ಮೌಲ್ಯ ಕಳೆದುಕೊಂಡು ಖೋಟಾ ಆಗುತ್ತವೆ. ಈಗ ಆಗಿರುವುದೂ ಹಾಗೇ.
ಲೋಹಿಯಾ ತಾವು ಕಲ್ಪಿಸಿಕೊಂಡಿದ್ದ ಸಮಾಜವಾದವನ್ನು ಅದರ ಒಟ್ಟು ಪರಿಣಾಮ ರೂಪವಾಗಿ ಹೀಗೆ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದರು: ಆಂತರಿಕ ಪ್ರಶಾಂತಿ ಮತ್ತು ಬಾಹ್ಯ ಬಂಧುತ್ವ. ಅವರ ಪ್ರಕಾರ ಸಮಾಜವಾದದ ಆತ್ಯಂತಿಕ ಗುರಿ ಇದಾಗಿತ್ತು. ಆದರೆ ಕಿಷನ್ ಪಟ್ನಾಯಕ್‌ರಂತಹ ಅವರ ಕೆಲವೇ ಆಪ್ತ ಸಂಗಾತಿಗಳ ಹೊರತಾಗಿ ಇತರರಾರೂ ಇದನ್ನು ಅದರ ಎಲ್ಲ ರಾಜಕೀಯ ಮತ್ತು ಆಧ್ಯಾತ್ಮಿಕ ಅರ್ಥಗಳಲ್ಲಿ ಗ್ರಹಿಸುವಷ್ಟು ಸೂಕ್ಷ್ಮಮತಿಗಳಾಗಿರಲಿಲ್ಲವಾದ್ದರಿಂದ ಅವರ ಕಣ್ಮುಂದೆಯೇ ಅವರ ಕನಸು ಛಿದ್ರವಾಗತೊಡಗಿತ್ತು. ಅವರ ನಿಧಾನಾನಂತರ ಸಿಕ್ಕವರಿಗೆ ಸೀರುಂಡೆಯಾಗಿ ಚದುರಿಹೋಯಿತು.
ಅಧಿಕಾರ ರಾಜಕಾರಣದಲ್ಲಿ ಸ್ವಲ್ಪಮಟ್ಟಿಗೆ ನಿತೀಶ್ ಕುಮಾರ್, ಜನಮಧ್ಯದ ಕ್ರಿಯಾಶೀಲತೆಯ ರೂಪದಲ್ಲಿ ಮೇಧಾ ಪಾಟ್ಕರ್ ಮತ್ತು ತಾತ್ವಿಕ ಚಿಂತನೆಯ ಮಟ್ಟದಲ್ಲಿ ಯೋಗೇಂದ್ರ ಯಾದವ್ ಅವರ ಹೊರತಾಗಿ ಇನ್ನಾರೂ ನನಗಿಂದು ಈ ದೇಶದಲ್ಲಿ ಲೋಹಿಯಾ ಸಮಾಜವಾದವಷ್ಟೇ ಅಲ್ಲ, ಒಟ್ಟಾರೆ ಸಮಾಜವಾದದ ಪುನರುಜ್ಜೀವನದ ಆಸೆ ಹುಟ್ಟಿಸುವವರು ಕಾಣುತ್ತಿಲ್ಲ. ಹೀಗಾಗಿ ಸಮಾಜವಾದದ ಕಥೆ ಒಂದು ದುರಂತ ಕಥೆಯೇ ಆಗಿದೆ.

ಕೊನೆಯದಾಗಿ, ಸಮಾಜವಾದ ತಾತ್ವಿಕವಾಗಿ ಜಾಗತಿಕ ಮಟ್ಟದಲ್ಲಿ ಹಿನ್ನೆಲೆಗೆ ಸರಿಯುವಂತಾಗಿರಲು ನಾನು ಇತ್ತೀಚೆಗೆ ಗಾಂಧಿ ಬಗ್ಗೆ ಹೆಚ್ಚು ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ನನಗನ್ನಿಸಿದ ಒಂದು ನಿರ್ಣಾಯಕ ಕಾರಣವೆಂದರೆ, ಅದು ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಮಾಲಿಕ ಮತ್ತು ಕಾರ್ಮಿಕ ಎಂಬ ಎರಡು ವಿಶಿಷ್ಟ ವರ್ಗಗಳು ಸೃಷ್ಟಿಯಾದವು ಎಂಬ ಮತ್ತು ಅವುಗಳ ನಡುವೆ ಸಂಬಂಧ ಘರ್ಷಣಾತ್ಮಕವೇ ಆಗಿರಬಲ್ಲುದು ಎಂಬ ಗ್ರಹಿಕೆ ಮತ್ತು ಅವನ್ನು ಆ ಗ್ರಹಿಕೆಯ ನೆಲೆಯಲ್ಲೇ ನಿರ್ವಹಿಸಿ ಸಮಾಜವಾದಿ ಮೀಮಾಂಸೆ-ಸಂಕಥನವನ್ನು ಕಟ್ಟಿದ್ದು ಎನಿಸುತ್ತದೆ. ಚರಿತ್ರೆಯನ್ನು ದಿನನಿತ್ಯದ ಮನುಷ್ಯನ ಸ್ತರದಲ್ಲಿ ಗ್ರಹಿಸದೆ ಯುದ್ಧಗಳ-ಘರ್ಷಣೆಗಳ ಸರಪಳಿಯಾಗಿ ನೋಡುವ ಐರೋಪ್ಯ ದೃಷ್ಟಿಯ ಪರಿಣಾಮ ಇದಿರಬಹುದು.
ಬಹುಶಃ ಹಾಗಾಗಿಯೇ ಬಂಡವಾಳಶಾಹಿ ಇರಲಿ, ಮನುಷ್ಯನನ್ನು ನೆಲ ಮತ್ತು ಆಕಾಶಗಳ ನಡುವೆ ಹರಿದು ಹಾಕುವ ಯಂತ್ರಶಾಹಿ ಕೈಗಾರಿಕೀಕರಣವೇ ಒಂದು ಹಿಂಸಾಕಾಂಡದ ಆರಂಭ ಎಂಬುದು ಅವರಿಗೆ ಗೊತ್ತಾಗಲಿಲ್ಲವೇನೋ. ಆದರೆ ಗಾಂಧಿ ಪ್ರಭಾವ ವಲಯದಲ್ಲಿ ಬೆಳೆದ ಭಾರತದ ಸಮಾಜವಾದಿಗಳಿಗಾದರೂ-ಕನಿಷ್ಠ ಆ ಸಮೃದ್ಧ ಮನಸ್ಸಿನ ಲೋಹಿಯಾ ಅವರಿಗಾದರೂ ಇದೆಲ್ಲ ಹೊಳೆಯಬಹುದಿತ್ತಲ್ಲವೆ? ಘರ್ಷಣೆ, ವೈರಗಳೇ ಮನಸ್ಸಿನ ಚೋದಕಗಳಾಗಿದ್ದ ದಿನಗಳು ಅವಿರಬಹುದು. ಇವು ನನ್ನ ಬೀಸು ಹೇಳಿಕೆಗಳೆಂದು ನನಗೆ ಗೊತ್ತಿದ್ದೂ ಇವನ್ನು ಹೇಳಲು, ಹೆಚ್ಚಿಗೆ ಬಲ್ಲವರು ಈ ಬಗ್ಗೆ ನಾಲ್ಕು ಮಾತಾಡಲಿ ಎಂಬುದೇ ಕಾರಣವಾಗಿದೆ.

ಸಮಾಜವಾದ ಜಗತ್ತಿನಲ್ಲಿಯೂ, ಭಾರತದಲ್ಲಿಯೂ ಆಕಾರ ಕಳೆದುಕೊಂಡು ಅಥವಾ ಒಂದು ಸ್ಪಷ್ಟ ಆಕಾರವಿಲ್ಲದೆ, ಅಸ್ತವ್ಯಸ್ತವಾಗಿ ಅಲ್ಲಲ್ಲಿ ತನ್ನನ್ನು ಚೆಲ್ಲಿಕೊಂಡಿದೆ. ಕಾಲ ದೇಶಗಳ ಮಿತಿಗಳಲ್ಲಿ ಹುಟ್ಟಿದ-ನಾವು ಮನುಷ್ಯರೂ ಸೇರಿ-ಎಲ್ಲದರಂತೆ ಸಮಾಜವಾದಕ್ಕೂ ಒಂದು ನಿರ್ದಿಷ್ಟ ಆಯಸ್ಸು-ತಾಳಿಕೆ ಮತ್ತು ಬಾಳಿಕೆಗಳ ಅವಧಿ-ಇತ್ತಷ್ಟೆ. ಅದರಾಚೆ ಬಾಳಲು ಅದು ತನ್ನನ್ನು ತಾನು ಪುನರನ್ವೇಷಿಸಿಕೊಂಡು ಪುನರುಜ್ಜೀವನಗೊಳ್ಳಬೇಕಷ್ಟೆ. ಹಾಗೆ ಪುನರುಜ್ಜೀವನಗೊಳ್ಳಲು ಅದು ತಾನು ಹುಟ್ಟಿದ ಕಾಲ ದೇಶಗಳ ಗಡಿಗಳಾಚೆಗೆ ತನ್ನ ರೆಕ್ಕೆಗಳನ್ನು ಬಿಚ್ಚಿಕೊಳ್ಳಬೇಕಷ್ಟೆ. ಇದು ತನ್ನನ್ನು ತಾನೇ ಮೀರುವ ಸಾಹಸ. ಅದಕ್ಕೆ ಬೇಕಾದ ಅಪಾರ ಸೃಜನಶೀಲತೆ, ತನ್ನ ಯೌವನದ, ಸಂಭ್ರಮದ ದಿನಗಳ ಬಿಂಕ ಬಿನ್ನಾಣಗಳನ್ನು ನುಂಗಿಕೊಳ್ಳುವ ನಮ್ರತೆಯನ್ನು ಬೇಡುತ್ತದೆ. ಆದರೆ ಸಮಾಜವಾದ ಇದರಲ್ಲಿ ಸೋತಿದೆ ಎಂದು ನನಗನ್ನಿಸುತ್ತದೆ. ಆದುದರಿಂದಲೇ ಅದು ಅಂತರ್ಪಿಶಾಚಿಯಂತೆ ಜಗತ್ತಿನಲ್ಲಿ ಸಂಚರಿಸುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ