Mysore
23
overcast clouds
Light
Dark

ಟೈಟ್ ಜಾಕೆಟ್ ಆರೆಂಜ್‌ಗೆ ಮರು ಹುಟ್ಟು

ಕೊಡಗಿನಲ್ಲಿ ವಿಶೇಷ ಕಿತ್ತಳೆ ತಳಿಗೆ ಸುಮಾರು ೧೮೦ ವರ್ಷಗಳ ಹಿಂದಿನ ಇತಿಹಾಸವಿದೆ.ಹಿಂದೊಮ್ಮೆ ಸಾವಿರ ಲಾರಿಗಳ ಕಿತ್ತಳೆ ಲೋಡು ಕೊಡಗಿಂದ ಹೊರಡುತ್ತಿತ್ತು.ನಂತರ ದಿನಗಳಲ್ಲಿ ಗ್ರೇನಿಂಗ್ ರೋಗ ಬಾಧೆಯಿಂದ ಕೊಡಗಿನ ಕಿತ್ತಳೆಯ ವೈಭವ ಇಳಿಮುಖವಾಯಿತು. ಅದರ ಜಾಗವನ್ನು ನಾಗಪುರದ ಕಿತ್ತಳೆ ಆವರಿಸಿಕೊಂಡಿತ್ತು. ಈಗ ರೋಗ ನಿಧಾನಕ್ಕೆ ನಿಯಂತ್ರಣಕ್ಕೆ ಬಂದಿದ್ದು ಕೊಡಗಿನಲ್ಲಿ ಕಿತ್ತಳೆ ಬೆಳೆ ಚೇತರಿಕೆ ಕಾಣುತ್ತಿದೆ.

ಪುನೀತ್ ಮಡಿಕೇರಿ

ಕೊಡಗಿನ ಕಿತ್ತಳೆ ಗಾತ್ರ, ಬಣ್ಣ, ರುಚಿ ಹಾಗೂ ಔಷಧೀಯ ಗುಣಗಳಿಂದ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಾದ್ಯಂತ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ.
ಕೊಡಗಿನಲ್ಲಿ ಕಾಫಿ, ಕಾಳು ಮೆಣಸು ತೋಟದ ಜತೆಯಲ್ಲಿಯೇ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಕಳೆದ ೧೨ ವರ್ಷಗಳಿಂದ ರೋಗಗಳಿಗೆ ತುತ್ತಾಗಿ ಅವನತಿಯತ್ತ ಸಾಗುತ್ತಿದ್ದ ಕಿತ್ತಳೆ ಇಂದು ಚೇತರಿಕೆ ಕಾಣುತ್ತಿದೆ.
ಭಾರತದಲ್ಲಿನ ಮೂರು ಪ್ರಮುಖ ಕಿತ್ತಳೆ ತಳಿಗಳೆಂದರೆ ನಾಗಪುರ ಕಿತ್ತಳೆ, ಖಾಸಿ ಕಿತ್ತಳೆ ಮತ್ತು ಕೊಡಗಿನ ಕಿತ್ತಳೆ. ಅದರಲ್ಲೂ ಕೊಡಗಿನ ಕಿತ್ತಳೆಗೆ ಹೆಚ್ಚಿನ ಬೇಡಿಕೆಯಿದೆ. ಸಿಪ್ಪೆಯು ಒಳಗಿನ ಹಣ್ಣಿನ ಭಾಗಕ್ಕೆ ಸಡಿಲವಾಗಿ ಅಂಟಿಕೊಳ್ಳುವ ಗುಣವಿರುವ ನಾಗಪುರ ಕಿತ್ತಳೆ ತಳಿಗೆ ಲೂಸ್ ಜಾಕೆಟ್ ಆರೆಂಜ್ ಅಂತ ಕರೆಯಲಾಗುತ್ತದೆ. ಸಿಪ್ಪೆಯು ಒಳಗಿನ ಹಣ್ಣಿಗೆ ಬಿಗಿಯಾಗಿ ಅಂಟಿಕೊಳ್ಳುವ ಗುಣವಿಶೇಷದ ಕೊಡಗಿನ ಕಿತ್ತಳೆಯು ಟೈಟ್ ಜಾಕೆಟ್ ಆರೆಂಜ್ ಎಂದೇ ಪ್ರಸಿದ್ಧವಾಗಿದೆ.

ಕೊಡಗಿನ ಕಿತ್ತಳೆಯ ಸಿಪ್ಪೆ ತೆಳು. ನೀರಿನಂಶ ಜಾಸ್ತಿ. ಬಾಯಲ್ಲಿ ನೀರೂರಿಸುವ ಹುಳಿಮಿಶ್ರಿತ ಸಿಹಿಯೇ ಕೊಡಗಿನ ಕಿತ್ತಳೆಯ ವಿಶೇಷ. ಅದರ ಸ್ವಾದಿಷ್ಟ ರಸ, ರುಚಿ ಹಾಗು ಕಾಂತಿಗಳು ಅದನ್ನು ಫೇಸ್ ಪ್ಯಾಕಿಗಾಗಿ ಹಾಗು ಮತ್ತಿತರ ಔಷಧೀಯ ಉಪಯೋಗಕ್ಕಾಗಿ ಜನರು ಬಳಸಿಕೊಳ್ಳುವಂತೆ ಆಕರ್ಷಿಸಿವೆ.
ಕಿತ್ತಳೆ ರಸವನ್ನು ಕೂದಲು ಉದುರದಂತೆ ತಡೆಯಲು, ತಲೆತುರಿಕೆ ಹಾಗೂ ಕೂದಲ ಹೊಟ್ಟು ಆಗದಂತೆ ತಡೆಯಲು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಕೊಡಗಿನ ಕಿತ್ತಳೆಯು ಈ ಪ್ರದೇಶಕ್ಕೆ ಸೀಮಿತವಾದ ವಿಶೇಷ ಬೆಳೆಯಾದ ಹಿನ್ನೆಲೆಯಲ್ಲಿ ಭೌಗೋಳಿಕ ಮಾನ್ಯತೆ ( ಜಿಐ ಟ್ಯಾಗ್ ) ದೊರೆತಿದೆ.

 

ಕುಗ್ಗದ ಬೆಳೆಗಾರರ ಆಸಕ್ತಿ

ಕೊಡಗಿನ ಕಿತ್ತಳೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಪ್ರತಿವರ್ಷ ತೋಟಗಾರಿಕಾ ಇಲಾಖೆಯಲ್ಲಿ ಕಿತ್ತಳೆ ಸಸಿಗಳನ್ನು ಅಭಿವೃದ್ಧಿಪಡಿಸಿ ಬೆಳೆಗಾರರಿಗೆ ವಿತರಿಸಲಾಗುತ್ತಿದೆ. ಜತೆಗೆ, ಖಾಸಗಿ ನರ್ಸರಿಗಳಲ್ಲಿಯೂ ಕಿತ್ತಳೆ ಗಿಡಗಳನ್ನು ಬೆಳೆಯಲಾಗುತ್ತಿದ್ದು ಮುಂಗಾರಿನ ಅವಧಿಯಲ್ಲಿ ಬೆಳೆಗಾರರು ಕಿತ್ತಳೆ ಗಿಡಗಳನ್ನು ಖರೀದಿಸಿ ತೋಟಗಳಲ್ಲಿ ನೆಡುತ್ತಾರೆ. ಕೊಡಗಿನ ಕಿತ್ತಳೆ ಹಣ್ಣಿಗೆ ಅಧಿಕ ಬೇಡಿಕೆ ಇರುವುದರಿಂದ ಬೆಳೆಗಾರರ ಆಸಕ್ತಿ ಕುಗ್ಗಿಲ್ಲ. ನರ್ಸರಿಗಳಲ್ಲಿ ಗಿಡಗಳನ್ನು ಬೆಳೆದು ರೈತರು ಲಾಭಗಳಿಸುತ್ತಿದ್ದಾರೆ.

ರೋಗ ಬಾಧೆಗೆ ತುತ್ತಾಗಿದ್ದ ಕೊಡಗಿನ ಕಿತ್ತಳೆ ೧೨ ವರ್ಷಗಳ ನಂತರ ಚೇತರಿಕೆ ಕಾಣುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು ೬೬೩೯ ಹೆಕ್ಟರ್‌ನಲ್ಲಿ ಬೆಳೆಯಲಾಗುತ್ತಿದ್ದು, ಸುಮಾರು ಒಂದೂವರೆ ಲಕ್ಷ ಮೆಟ್ರಿಕ್ ಟನ್ ಇಳುವರಿ ಬರುತ್ತಿದೆ.ಕೇರಳದಲ್ಲಿ ಕೊಡಗಿನ ಕಿತ್ತಲೆಗೆ ಹೆಚ್ಚು ಬೇಡಿಕೆ ಇದೆ. ಜತೆಗೆ ಜಿಲ್ಲೆಯ ಹಾಪ್ ಕಾಮ್ಸ್ ನಲ್ಲಿ ಖರೀದಿ ಮಾಡಲಾಗುತ್ತದೆ.

-ಸಿ.ಎಂ.ಪ್ರಮೋದ್, ಉಪನಿದೇರ್ಶಕರು(ಪ್ರಭಾರ), ತೋಟಗಾರಿಕೆ ಇಲಾಖೆ.

 

 

 

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ