Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

ಸವಿದವರೇ ಬಲ್ಲರು ಕೊಡಗಿನ ಕಾಫಿ ರುಚಿ..!

ಮೈ ಜುಮ್ಮೆನಿಸುವ ಚಳಿಯಲ್ಲಿ ಒಂದು ಕಪ್ ಕಾಫಿ ಸಿಕ್ಕಿದರೆ ಸ್ವರ್ಗಕ್ಕೆ ಮೂರೇ ಗೇಣು ! ದೇಶದಲ್ಲಿಯೇ ಅತಿ ಹೆಚ್ಚು ಕಾಫಿ ಬೆಳೆಯುವ ಕೊಡಗಿನಲ್ಲಿ ಕಾಫಿ ಜೀವನದ ಅವಿಭಾಜ್ಯ ಭಾಗ. ಬೆಳೆಗಾರರಿಗೆ ಇದು ಜೀವನಾಧಾರ, ಕಾಫಿ ಪ್ರಿಯರಿಗೆ ಜೀವದಷ್ಟು ಪ್ರಿಯ.

ನವೀನ್ ಡಿ ಸೋಜಾ

ಪ್ರಕೃತಿ ಸೌಂದರ್ಯದ ತವರು, ದಕ್ಷಿಣದ ಕಾಶ್ಮೀರ, ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆ ಕಾಫಿಯಲ್ಲೂ ತನ್ನದೇ ಛಾಪು ಮೂಡಿಸಿದೆ. ಘಮಘಮಿಸುವ ಉತ್ಕೃಷ್ಟ ಗುಣಮಟ್ಟದ ಕೊಡಗಿನ ಕಾಫಿಯನ್ನು ಜಿಲ್ಲೆಗೆ ಬರುವವರು ಸವಿಯದೆ ವಾಪಾಸಾಗುವುದಿಲ್ಲ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಒಂದು ಕಪ್ ಬಿಸಿ ಬಿಸಿ ಕಾಫಿಯನ್ನು ಗುಟುಕು ಗುಟುಕಾಗಿ ಸವಿಯುವ ಅನುಭವ ಚೇತೋಹಾರಿ.

ಕೊಡಗಿನ ನಸುಕಿನ ಮಂಜಲ್ಲಿ , ಮೈಕೊರೆಯುವ ಚಳಿಗೆ ಒಂದು ಲೋಟ ಬೆಚ್ಚನೆಯ ಕಾಫಿ ದೊರೆತರೆ ಆಹಾ ಎನ್ನಲೇಬೇಕು. ಒಂದು ಕಪ್ ಕಾಫಿ ಗುಟುಕು ಹೊಟ್ಟೆಯೊಳಗೆ ಸೇರಿದರೆ ಮನಸ್ಸು ನಿರುಮ್ಮಳ. ಮಿದುಳಲ್ಲಿ ಹೊಸ ಭಾವ ಪ್ರಪಂಚ.

ವಾರ್ಷಿಕ ಮೂರುವರೆ ಲಕ್ಷ ಟನ್ ಕಾಫಿ ಉತ್ಪಾದಿಸುವ ಭಾರತದಲ್ಲಿ ಶೇ.೭೫ಕ್ಕಿಂತ ಹೆಚ್ಚಿನ ಪ್ರಮಾಣದ ಕಾಫಿಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಬೆಳೆಯುವ ಶೇ.೫೦ರಷ್ಟು ಕಾಫಿ ಕೊಡಗಿನಿಂದ ಉತ್ಪಾದನೆಯಾಗುತ್ತದೆ ಎನ್ನುವುದು ವಿಶೇಷ. ಕೊಡಗಿನಲ್ಲಿರುವ ಒಟ್ಟು ೪೧೦೬ ಚ.ಕಿ.ಮೀ. ಭೌಗೋಳಿಕ ಪ್ರದೇಶದಲ್ಲಿ ೧೧೯೭ ಚ.ಕಿ.ಮೀ. ಪ್ರದೇಶದಲ್ಲಿ ಕಾಫಿ ಕೃಷಿ ಮಾಡಲಾಗುತ್ತಿದೆ. ೧,೦೬,೯೨೧ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಕರ್ನಾಟಕ ರಾಜ್ಯದ ಒಟ್ಟು ಕಾಫಿ ಪ್ರದೇಶದ ಶೇ.೪೪ರಷ್ಟು ಪ್ರದೇಶದ ಕಾಫಿ ಕೊಡಗಿನಿಂದ ದೊರೆಯುತ್ತಿದೆ. ಕೊಡಗು ವರ್ಷಕ್ಕೆ ಸುಮಾರು ೧,೧೦,೭೩೦ ಮೆಟ್ರಿಕ್ ಟನ್ ಗಳಷ್ಟು ಕಾಫಿ ಉತ್ಪಾದಿಸುತ್ತದೆ.

ಕೊಡಗು ಜಿಲ್ಲೆಯ ಹೆಚ್ಚಿನ ಭಾಗ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವುದರಿಂದ ಕಾಫಿ ಕೃಷಿಗೆ ಅನುಕೂಲಕರ ವಾತಾವರಣವನ್ನು ಹೊಂದಿದೆ. ಇದೇ ಕಾರಣಕ್ಕೆ ಕೊಡಗಿನಲ್ಲಿ ಗುಣಮಟ್ಟದ ಕಾಫಿ ಬೆಳೆಯಲಾಗುತ್ತದೆ.

ಕಾಫಿ ಗಿಡಗಳಲ್ಲಿ ಅರೇಬಿಕಾ ಮತ್ತು ರೋಬಸ್ಟ ಎಂದು ಎರಡು ಮುಖ್ಯ ಪ್ರಭೇದಗಳಿವೆ. ಅರೇಬಿಕಾ ತಳಿಗೆ ಇಥಿಯೋಪಿಯ ಮೂಲ. ರೋಬಸ್ಟ ತಳಿ ಇಂದಿನ ಉಗಾಂಡ ಮೂಲದ್ದು. ರೋಬಸ್ಟ ತಳಿಯ ಕಾಫಿ ಬೀಜಗಳು ಹೆಚ್ಚು ಕೆಫಿನ್ ಅಂಶವನ್ನು ಹೊಂದಿದ್ದು, ಸ್ಟ್ರಾಂಗ್ ಕಾಫಿ ಬಯಸುವವರಿಗೆ ಹೆಚ್ಚು ಇಷ್ಟ. ಸುವಾಸನೆಯುಕ್ತ ಅರೇಬಿಕಾ ತಳಿಯ ಕಾಫಿ ಇಂದು ಹೆಚ್ಚು ಜನಪ್ರಿಯವಾಗಿದೆ.

ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ಮತ್ತು ಕುಶಾಲನಗರ ತಾಲ್ಲೂಕಿನಲ್ಲಿ ರೋಬಸ್ಟಾ ಕಾಫಿಯನ್ನು ಹೆಚ್ಚು ಬೆಳೆಯಲಾಗುತ್ತಿದ್ದು, ಸೋಮವಾರಪೇಟೆ ತಾಲ್ಲೂಕಿನಲ್ಲಿ ಅರೇಬಿಕಾ ಕಾಫಿ ಮುಖ್ಯ ಬೆಳೆಯಾಗಿದೆ. ಕರ್ನಾಟಕದಲ್ಲಿ ಅರ್ಧ ಭಾಗದಷ್ಟು ಕಾಫಿಗೆ ಕೊಡಗು ಮೂಲವಾದರೆ ಇನ್ನರ್ಧ ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಬೆಳೆಯಲಾಗುತ್ತಿದೆ.

ಕೊಡಗಿನವರಿಗೆ ಕಾಫಿ ಇಲ್ಲದ ದಿನಗಳಿಲ್ಲ. ಚಳಿಯ ವಾತಾವರಣವಿರುವುದರಿಂದ ದೇಹದ ಉಷ್ಣಾಂಶ ಕಾಯ್ದುಕೊಳ್ಳಲು ಕಾಫಿ ಸಹಕಾರಿಯಾಗಿದೆ. ಸ್ಥಳೀಯವಾಗಿ ಬೆಲ್ಲದಿಂದ ತಯಾರಿಸುವ ಕಾಫಿಯೂ ಪ್ರಖ್ಯಾತಿಯಾಗುತ್ತಿದೆ. ನೀವು ಕೊಡಗಿನತ್ತ ಆಗಮಿಸಿದರೆ ಇಲ್ಲಿನ ಸ್ವಾದಿಷ್ಟಕರ ಕಾಫಿ ಸವಿಯುವುದನ್ನು ಮರೆಯಬೇಡಿ.

ಕಾಫಿಯ ಚರಿತ್ರೆ
ಕಾಫಿಯ ಚರಿತ್ರೆ ಸುಮಾರು ೯ನೇ ಶತಮಾನದ್ದು. ಇಥಿಯೋಪಿಯದಲ್ಲಿ ಮೊದಲು ಬಳಕೆಗೆ ಬಂದ ಕಾಫಿ ನಂತರ ಈಜಿಪ್ಟ್ ಮತ್ತು ಯುರೋಪ್ ಗಳ ಮುಖಾಂತರ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಹಬ್ಬಿತು. ಕಾಫಿ ಎಂಬ ಪದ ಇಥಿಯೋಪಿಯದ ಕಾಫ ಎಂಬ ಪ್ರದೇಶದ ಹೆಸರಿನಿಂದ ಬಂದಿದ್ದು. ೧೫ ನೇ ಶತಮಾನದಲ್ಲಿ ಕಾಫಿ ಪರ್ಷಿಯಾ, ಈಜಿಪ್ಟ್, ಉತ್ತರ ಆಫ್ರಿಕ ಮತ್ತು ಟರ್ಕಿ ದೇಶಗಳನ್ನು ತಲುಪಿತು. ೧೪೭೫ ರಲ್ಲಿ ಇಸ್ತಾಂಬುಲ್ ನಗರದಲ್ಲಿ ಮೊದಲ ‘ಕಾಫಿ ಹೋಟೆಲ್’ ಆರಂಭವಾಯಿತು.

ಕಾಫಿಯ ಪ್ರಚೋದಕ ಗುಣವನ್ನು ಗಮನಿಸಿ ೧೫೧೧ ರಲ್ಲಿ ಮೆಕ್ಕಾದಲ್ಲಿ ಇದರ ಬಳಕೆ ನಿಷೇಧಿಸಲಾಯಿತು. ೧೫೩೨ ರಲ್ಲಿ ಈಜಿಪ್ತ್‌ನಲ್ಲೂ ನಿಷೇಧಿಸಲಾಗಿತ್ತು. ಆದರೆ ಕಾಫಿಯ ಜನಪ್ರಿಯತೆಯ ಮುಂದೆ ಈ ನಿಷೇಧದ ಆದೇಶ ನಿಲ್ಲಲಿಲ್ಲ. ೧೭ ನೇ ಶತಮಾದ ವೇಳೆಗೆ ಯೂರೋಪಿನಲ್ಲಿ ಕಾಫಿ ಜನಪ್ರಿಯವಾಗಿತ್ತು. ಇಂಗ್ಲೆಂಡಿನ ಕಾಫಿ ಮನೆಗಳು ಜನಪ್ರಿಯ ವ್ಯಾಪಾರ ಕೇಂದ್ರಗಳೂ ಆದವು.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ