Light
Dark

ಮಠಗಳ ತವರು ನಂಜನಗೂಡು

ಶ್ರೀಧರ್ ಆರ್ ಭಟ್
ನಂಜನಗೂಡಿನಲ್ಲಿ ಪಂಚ ಮಠಗಳಿದ್ದು, ಈ ತಾಲ್ಲೂಕು ಮಠಗಳ ತವರೂರು ಸಹ ಆಗಿದೆ.  ಜ್ಞಾನ ಗೊಂಗೋತ್ರಿಯಾದ ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಮಠ, ಭಕ್ತಿ ಪರಂಪರೆಯ ಮಲ್ಲನ ಮೂಲೆಯ ಗುರು ಕಂಬಳೇಶ್ವರ ಮಠ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮೂಲ ಮಠ, ಪವಾಡ ಪುರುಷರೆಂದೇ ಖ್ಯಾತಿವೆತ್ತ ೩೦೦ ವರ್ಷಗಳಿಗೂ ಮಿಕ್ಕಿ ಜೀವಂತವಾಗಿದ್ದ  ಮಹದೇವ ತಾತಾರ ಸಂಗಮ ಮಠ ಹಾಗೂ ಭಕ್ತಿಯೊಂದಿಗೆ ಅನ್ನದಾಸೋಹವನ್ನು ಶತ ಶತಮಾನಗಳಿಂದ  ಹಚ್ಚಿದ, ಒಲೆ ಆರಿಸದೇ ನಿರಾಂತಂಕವಾಗಿ ನಡೆಸಿಕೊಂಡು ಬರುತ್ತಲೇ ಇರುವ ದೇವನೂರಿನ  ಗುರು ಮಲ್ಲೇಶ್ವರ ಎಂಬ ಪಂಚ ಮಠಗಳ ತವರು ಈ ನಂಜನಗೂಡು ತಾಲ್ಲೂಕು ಆಗಿದೆ. ಈ ಐದೂ ಮಠಗಳು  ತಾಲ್ಲೂಕಿನ ಜೀವ ನದಿ ಕಪಿಲೆಯ ಎಡ-ಬಲಗಳ ದಡದಲ್ಲೇ ವಿರಾಜಮಾನವಾಗಿವೆ.
ನಂಜನಗೂಡು ತಾಲ್ಲೂಕಿನಲ್ಲಿ ಕಪಿಲಾ ನದಿಯ ದಡದಲ್ಲಿರುವ ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಮಠ  ಇಂದು ಜ್ಞಾನ ಗಂಗೋತ್ರಿಯಾಗಿದೆ. ಸಾವಿರ ವರ್ಷಗಳಿಗೂ ಮಿಗಿಲಾಗಿ ಧಾರ್ಮಿಕ ಪರಂಪರೆಯನ್ನು ಹೊಂದಿರುವ   ರೇಣುಕ ಪರಂಪರೇ ಶ್ರೀಮಠ  ಇಂದು ಸುತ್ತೂರು ದಾಟಿ  ಹತ್ತೂರು ಸುತ್ತಿ ತಾಲ್ಲೂಕು, ಜಿಲ್ಲೆ , ರಾಜ್ಯ, ರಾಷ್ಟ್ರದ ಪರಿಧಿಯನ್ನೂ ಮೀರಿ ಬೆಳೆದು  ತನ್ನ ಜ್ಞಾನದಾಸೋಹದ ಕವಲುಗಳನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ಕಳೆದ ಶತಮಾನದ ಆರಂಭದವರೆಗೂ ಸುತ್ತೂರು  ಹಾಗೂ ಮೈಸೂರಿನಲ್ಲಿ ಧಾರ್ಮಿಕ ಕೈಂಕರ‌್ಯಕ್ಕೆ  ಸೀಮಿತವಾಗಿದ್ದ  ಸುತ್ತೂರು ಮಠ ಇಂದು ಅನ್ನದಾಸೋಹ ಜ್ಞಾನದಾಸೋಹದಿಂದಾಗಿ  ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದ್ದು ರಾಜ್ಯಕ್ಕೆ ಹೆಮ್ಮೆ ತರುವಂತಾಗಿದೆ.  ಶ್ರೀಮಠದ ಈ ಸಾಧನೆಯಲ್ಲಿ ಶತಮಾನಗಳ ಪರಿಶ್ರಮ ಅಡಗಿದೆ.
ಈ ಮಠದ ೨೩ ನೇ ಪೀಠಾಧಿಪತಿಯಾಗಿ ಪಟ್ಟವನ್ನೇರಿದ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಸುತ್ತಲಿನ ಜನತೆಯ ಕಡುಕಷ್ಟವನ್ನು ತಿಳಿದು ಅವರ ಸಾಮಾಜಿಕ, ಆರ್ಥಿಕ, ಧಾರ್ಮಿಕ  ಅಭಿವೃದ್ಧಿಗೆ  ಕೇವಲ ಧರ್ಮದ ಲೇಪನ ಮಾತ್ರ ಸಾಕಾಗುವುದಿಲ್ಲ ಎಂಬುದನ್ನು  ಅರಿತು ಅಕ್ಷರ ಜ್ಞಾನದಿಂದ ಮಾತ್ರ ಸಾಮಾಜಿಕ ಸುಧಾರಣೆಯ ಮುನ್ನುಡಿ ಬರೆಯಲು ನಿಶ್ಚಯಿಸಿದ ಪರಿಣಾಮವೇ ನಾವಿಂದು ಕಾಣುತ್ತಿರುವ  ಜೆ ಎಸ್ ಎಸ್ ಸಂಸ್ಥೆ .
ಜ್ಞಾನದಾಸೋಹಕ್ಕಾಗಿ ಆಗಮಿಸುವವರ ವಸತಿಗಾಗಿ ಶ್ರೀಗಳಿಂದ  ಮೈಸೂರಿನಲ್ಲಿ ಪ್ರಥಮವಾಗಿ ಆರಂಭವಾಗಿದ್ದು ಸುತ್ತೂರು ಮೇನ್ ಬಿಲ್ಡಿಂಗ್ .  ಈ ಕಟ್ಟಡದಲ್ಲಿ  ಉಚಿತ ಅನ್ನದಾಸೋಹ, ಜ್ಞಾನದಾಸೋಹ ಪಡೆದ ಸಹಸ್ರಾರು ಜನ ಇಂದು  ದೇಶ ವಿದೇಶಗಳಲ್ಲಿ ಖ್ಯಾತನಾಮರಾಗಿದ್ದಾರೆ.  ಮೈಸೂರು -ಬೆಂಗಳೂರಿನಲ್ಲಿ ಶಾಲಾ ಕಾಲೇಜು ತೆರೆದರೆ ಹಳ್ಳಿಗಾಡಿನ ಬಡ ಮಕ್ಕಳ ಶಿಕ್ಷಣದ ಕತೆ ಏನು ಎಂದು ಯೋಚಿಸಿದ ಶ್ರೀಗಳು ಈ ಭಾಗದ ಕುಗ್ರಾಮಗಳಲ್ಲೂ ಶಾಲೆಗಳನ್ನು ತೆರೆದು ವಿದ್ಯಾರ್ಜನೆಯ ಹಸಿವು ಇಂಗಿಸುವ ಪಣ ತೊಟ್ಟರು . ಇವರ ನಂತರ ಸುತ್ತೂರು ಮಠದ ೨೪ ನೇ ಪೀಠಾಧಿಪತಿಯಾಗಿ  ಬಂದ ಶ್ರೀ ಶಿವರಾತ್ರೀ ದೇಶಿಕೇಂದ್ರ ಶ್ರೀಗಳು ರಾಜೇಂದ್ರ ಶ್ರಿಗಳ ಸಂಕಲ್ಪದ  ಜ್ಞಾನದಾಸೋಹದ  ಸಸಿಗಳಿಗೆ ನೀರು, ಗೊಬ್ಬರ ನೀಡಿ ಅದನ್ನು ಹೆಮ್ಮರವಾಗಿಸುವತ್ತ  ದಾಪುಗಾಲಿಕ್ಕಿದ್ದಾರೆ.
ಆಡು ಮುಟ್ಟದ ಸೊಪ್ಪಿಲ್ಲ, ಸುತ್ತೂರಿನ ಜೆ ಎಸ್ ಎಸ್ ಸಂಸ್ಥೆ ಸ್ಥಾಪಿಸದ   ಜ್ಞಾನ ಪ್ರಸಾರದ ವಿಭಾಗಗಳೇ ಇಲ್ಲ ಎಂಬಷ್ಟರ ಮಟ್ಟಿಗೆ  ಶೈಕ್ಷಣಿಕ ರಂಗದ ವಿವಿಧ ಸ್ತರಗಳ ಜ್ಞಾನವನ್ನು ಧಾರೆ ಎರೆಯುವಂತಹ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ  ಪ್ರಾಚೀನ ಭಾರತದ ಪರಂಪರೆಯಿಂದ ಹಿಡಿದು ಆಧುನಿಕ ವಿಜ್ಞಾನದ ಆವಿಷ್ಕಾರದವರೆಗಿನ ಶಿಕ್ಷಣವನ್ನು ಕಲಿಸಲು ಸೂಕ್ತ ವ್ಯವಸ್ಥೆ ಮಾಡಿದ್ದು ದೇಶಿಕೇಂದ್ರ ಸ್ವಾಮೀಜಿಯವರ ಸಾಧನೆಯೇ ಹೌದು. ಆದಿ  ಜಗದ್ಗುರು ಶ್ರೀ ಶಿವರಾತ್ರೀ ಭಗವತ್ಪಾದರಿಂದ ಹಿಡಿದು  ಈಗಾಗಲೇ ೨೩ ಪೀಠಾಧಿಪತಿಗಳನ್ನು  ಕಂಡ ಶ್ರೀ ಮಠದ  ಹಾಲಿ ಪೀಠಾಧಿಪತಿಯಾಗಿರುವವ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಇಂದು ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಸದ ಜ್ಞಾನಾರ್ಜನೆಯ ವಿಭಾಗಗಳೇ ಇಲ್ಲಾ ಎಂಬಷ್ಟರ ಮಟ್ಟಿಗೆ ಶ್ರೀ ಮಠದ ವಿದ್ಯಾಸಂಸ್ಥೆಗಳನ್ನು  ಅಭಿವೃದ್ದಿ ಪಡಿಸಿದ್ದಾರೆ. 
ಮೈಸೂರಿನಲ್ಲಿ ೧೯೫೪ ರಲ್ಲಿ ಪ್ರೌಢಶಾಲೆ ಸ್ಥಾಪಿಸುವುದರ ಮೂಲಕ ವಿದ್ಯಾಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಜೆ ಎಸ್ ಎಸ್ ಸಂಸ್ಥೆ ಇಂದು ವಾಮನನ ಪಾದದಂತೆ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ಶಿಶುವಿಹಾರ, ಪ್ರಾಥಮಿಕ, ಮಾಧ್ಯಮಿಕ, ಆಂಗವಿಕಲ,  ಪದವಿ ಪೂರ್ವ, ಪದವಿ , ವಿಜ್ಞಾನ, ವಾಣಿಜ್ಯ , ಕಲೆ, ಸಾಹಿತ್ಯ, ರಾಸಾಯನಿಕ,  ವೈದ್ಯಕೀಯ, ಆಯುರ್ವೇದ , ತಾಂತ್ರಿಕ, ಕೃಷಿ ಕ್ಷೇತ್ರಗಳಿಗೆ ಅನುಕೂಲವಾಗುವ ಕೃಷಿ ಬೀಜ ಗೊಬ್ಬರದ  ಶಿಕ್ಷಣದ  ಜ್ಞಾನದ ಎಲ್ಲ ಪ್ರಾಕಾರಗಳ ಅರಿವು ಮೂಡಿಸುವ  ವಿಭಾಗಗಳು ಈ ಸಂಸ್ಥೆಯಲ್ಲಿದ್ದು, ಜೆ ಎಸ್ ಎಸ್ ಶಿಕ್ಷಣ ಸಂಸ್ಥೆ ಜೆ ಎಸ್ ಎಸ್ ಮಹಾ ವೀದ್ಯಾಪೀಠವಾಗಿ ಇಂದು  ಹೊರಹೊಮ್ಮಿದೆ.
ಈ ವೀದ್ಯಾಪೀಠದ ಆಶ್ರಯದಲ್ಲಿ ಸದ್ಯ ೨ ವಿಶ್ವವಿದ್ಯಾನಿಲಯಗಳು, ೧೨೭ ಶಾಲಾ ಶಿಕ್ಷಣ ಸಂಸ್ಥೆಗಳು, ೧೭ ಪಬ್ಲೀಕ್ ಶಾಲೆಗಳು , ೩೩ ಕಾಲೇಜುಗಳು, ೨೩ ತಾಂತ್ರಿಕ ಶಾಖೆಗಳು, ೨೩ ವೈದ್ಯಕೀಯ ಸಂಸ್ಥೆಗಳು,  ೨೦ ಸ್ನಾತಕೋತ್ತರ ವಿಭಾಗಗಳು,  ೬೨ ವಿದ್ಯಾರ್ಥಿನಿಲಯಗಳು,  ೧೨ ಸಮಾಜಮುಖಿ  ಸೇವಾ ಶಾಖೆಗಳು , ೨ ಆಧ್ಯಾತ್ಮಿಕ ಕೇಂದ್ರಗಳು, ೭ ಕಲೆ ಮತ್ತು ಸಾಹಿತ್ಯ ಪ್ರಸಾರ ಕೇಂದ್ರಗಳು,  ೮ ಆಸ್ಪತ್ರೆಗಳು, ೨ ಗುರುಕುಲಗಳು, ೫ ಹಿರಿಯ ನಾಗರಿಕ ಸೇವಾ ಕೇಂದ್ರಗಳು  ಹಾಗೂ ೮ ಬೇರೆ ಬೇರೆ ಸೇವಾಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹಿರಿಯರ ಮನೆ, ಮಕ್ಕಳ ಶಿಕ್ಷಣಿಕ ಹಾಗೂ ಜನತೆಯ ಆರೋಗ್ಯದತ್ತ ಲಕ್ಷ್ಯ ವಹಿಸಿದ ಶ್ರೀಗಳು ವೃದ್ಧಾಪ್ಯಕ್ಕೆ  ಕಾಲಿಟ್ಟ ಹಿರಿಯರ ಸುರಕ್ಷತೆ ಹಾಗೂ ಯೋಗಕ್ಷೇಮದತ್ತ ಗಮನ ಹರಿಸಿ ಹಿರಿಯರ ಮನೆಗಳನ್ನು ಆರಂಭಿಸಿ ಅವರುಗಳ ಸೇವೆಯಲ್ಲೂ ತೊಡಗಿದ್ದಾರೆ. ದೇಶ ವೀದೇಶಗಳಿಲ್ಲಿ ಶೈಕ್ಷಣಿಕ ಕೇಂದ್ರಗಳನ್ನು  ಸ್ಥಾಪಿಸಿದ ಜೆ ಎಸ್ ಎಸ್ ಸಂಸ್ಥೆ  ತನ್ನ ಮೂಲ ನೆಲೆ ಸುತ್ತೂರನ್ನು ಜ್ಞಾನದಾಸೋಹದ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದೆ. 
ಸುತ್ತೂರಿನ  ಉಚಿತ  ಶಾಲೆ : ಈ ಶಾಲೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯದ ೪,೦೦೦ ಕ್ಕೂ  ಹೆಚ್ಚು  ವಿದ್ಯಾರ್ಥಿಗಳು ೧ ರಿಂದ ೧೦ ನೇ ತರಗತಿಯವರೆಗೂ ವ್ಯಾಸಂಗ ಮಾಡುತ್ತಿದ್ದಾರೆ.  ತಮ್ಮ ಮಕ್ಕಳನ್ನು ಇಲ್ಲಿಗೆ ತಂದು ಬಿಡುವುದೊಂದೇ ತಂದೆ ತಾಯಿಗಳ ಕೆಲಸವಾಗಿದ್ದು ಆ ಮಗು  ೧೦ ನೇ ತರಗತಿ ಮುಗಿಸುವವರೆಗೂ ಊಟ, ಬಟ್ಟೆ , ಪುಸ್ತಕ, ಪೆನ್ನೂ ಸೇರಿದಂತೆ ಕಲಿಕಾ ಸಾಮಗ್ರಿಗಳೆಲ್ಲವೂ ಉಚಿತವಾಗಿದೆ. ಈಶಾನ್ಯ  ರಾಜ್ಯಗಳಾದ ಮೇಘಾಲಯ, ಮಣಿಪುರದ ನೂರಾರು ಮಕ್ಕಳು ಇಲ್ಲಿ ಕಲಿಯುತ್ತಿದ್ದು ಅವರೀಗ ಕನ್ನಡ ಮಾತನಾಡುವುದೂ ಅಲ್ಲದೆ  ಸುಶ್ರಾವ್ಯವಾಗಿ  ವಚನಗಳನ್ನು , ಭಕ್ತಿ ಗೀತೆಗಳನ್ನು ಕನ್ನಡದಲ್ಲೇ ಹಾಡುವಷ್ಟರ ಮಟ್ಟಿಗೆ ಅವರನ್ನು ಸಿದ್ಧಪಡಿಸಲಾಗುತ್ತದೆ.
ಸಂಸ್ಕೃತಿಯ ಪುನರೋತ್ಥಾನಕ್ಕಾಗಿ, ಇತಿಹಾಸದ ಹಾಗೂ ಆಧುನಿಕ ತಂತ್ರಜ್ಞಾನದ ಅರಿವಿಗಾಗಿ ಸುತ್ತೂರು ಜಾತ್ರೆ: ಸಮಾಜದ ಎಲ್ಲ ಸ್ತರಗಳ ಜನರ ಆಕರ್ಷಣೆಗಾಗಿ ಆರು ದಿನಗಳ  ಈ ಜಾತ್ರೆ ಎಂಬಂತಾಗಿದ್ದು ಆರು ದಿನಗಳ ಕಾಲ ಇಲ್ಲಿ ಸಮಾಜದ ಪರಿವರ್ತನೆಯ ಎಲ್ಲ ಪ್ರಾಕಾರಗಳ ಪ್ರದರ್ಶನ ಏರ್ಪಾಡಾಗುತ್ತದೆ. ಪ್ರತಿ ದಿನ ಇಲ್ಲಿಗೆ ಆಗಮಿಸುವ ಲಕ್ಷ ಲಕ್ಷ ಮಂದಿಗೆ ಅರಿವಿನ ದಾಸೋಹದೊಂದಿಗೆ ಅನ್ನದಾಸೋಹ ನೀಡುವ ಅಚ್ಚುಕಟ್ಟುತನ ಸುತ್ತೂರು ಮಠಧ ಕ್ರಿಯಾ ಶಕ್ತಿಗೆ ಸಾಕ್ಷಿಯಾಗಿದೆ.
 ಕ್ಷೇತ್ರದ ಇತಿಹಾಸ: ಸಾವಿರ ವರ್ಷಗಳ ಹಿಂದೆ ಕಂಚಿಯ ರಾಜೇಂದ್ರ ಚೋಳ  ತಲಕಾಡಿನ ಗಂಗರಾಜ ರಾಚಮಲ್ಲಯನ ಮೇಲೆ ದಂಡೆತ್ತಿ ಬಂದಾಗ ಆತನೇರಿದ ಕುದುರೆ ರಾಜನ ನಿಯಂತ್ರಣವನ್ನೂ ಮೀರಿ ಶ್ರೋತ್ರಿಯರ ಊರಿಗೆ ಬಂದು ಕಪಿಲಾ ನದಿ ದಡದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಶ್ರೀ ಶಿವರಾತ್ರೀಶ್ವರ ಭಗವತ್ಪಾದರನ್ನು ಪ್ರದಕ್ಷಿಣಾಕಾರವಾಗಿ ಸುತ್ತಿ ನಿಂತಿತು ಎನ್ನಲಾಗಿದೆ. ಆ ಕುದುರೆ ಶ್ರಿಗಳನ್ನು ಸುತ್ತು ಹಾಕಿದ ಊರೇ ಮುಂದೆ ಸುತ್ತೂರು ಎಂದಾಗಿದೆ. ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಮಠದ ಈಗಿನ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರರ ನೇರ ಉಸ್ತುವಾರಿಯ ಮಾರ್ಗದರ್ಶನದಲ್ಲಿ ಇಂದು ತನ್ನ ಶೈಕ್ಷಣಿಕ, ಸಾಮಾಜಿಕ ಪರಿವರ್ತನೆಯ ಮೂಲಕ ವಿಶ್ವ ವ್ಯಾಪಿಯಾಗುತ್ತ ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ವೃದ್ಧಿಯಾಗುತ್ತಲೇ ಇದೆ.
 ಮಲ್ಲನಮೂಲೆ ಮಠ ಭಕ್ತಿಗೆ ವಾತ್ರ ಸಿಮಿತವಾಗಿ ಗುರುತಿಸಿಕೊಂಡಿದ್ದು ಇಂದಿಗೂ ತಾಲ್ಲೂಕಿನಲ್ಲಿ ಅಸಂಖ್ಯಾತ ಭಕ್ತ ಸಮೂಹವನ್ನು ಹೊಂದಿದೆ. ದೇವನೂರಿನ ಗುರುಮಲ್ಲೇಶ್ವರ ಮಠ  ಅನಾದಿ ಕಾಲದಿಂದಲೂ  ಆಳು ಅರಸ ಎಂಬ ಭೇದ ಭಾವವಿಲ್ಲದೆ  ಹಸಿದು ಬಂದವರ  ಉದರ ತಣಿಸುತ್ತಲೇ  ಭಕ್ತಿ ಪ್ರಸಾರ ಕಾುಂಕದಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗೆ ಈ ಮಠವೂ  ಭಕ್ತಿುಂ ಜೊತೆಗೆ ಜ್ಞಾನ ದಾಸೋಹದತ್ತ ಅಡಿ ಇಡಲಾರಂಭಿಸಿದೆ.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ