Mysore
26
overcast clouds

Social Media

ಭಾನುವಾರ, 05 ಜನವರಿ 2025
Light
Dark

ನಂಜನಗೂಡು ಮತ್ತು ಪ್ರವಾಸೋದ್ಯಮ

ಅರಮನೆ ನಗರಿಗೆ ಕೂಗಳತೆಯ ದೂರದಲ್ಲಿರುವ ಮೈಸೂರಿನ ಸಣ್ಣ ಪಟ್ಟಣ ಎಂಬ ಖ್ಯಾತಿ ಹೊಂದಿರುವ ಗರಳಪುರಿ ‘ನಂಜನಗೂಡು’ ದಕ್ಷಿಣಕಾಶಿ ಎಂಬ ಹಿರಿಮೆಯ ಜೊತೆಗೆ ರಾಜ್ಯದಲ್ಲೇ ಅತ್ಯಂತ ವಿಶೇಷ ಮತ್ತು ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ಮತ್ತು ರಮಣೀಯ ಸ್ಥಳಗಳನ್ನು ಹೊಂದಿರುವ ಗರಿಮೆಯನ್ನು ಪಡೆದುಕೊಂಡಿದೆ. ಇವುಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾಡಬೇಕಾದ ಹೊಣೆ ಜಿಲ್ಲಾಡಳಿತದ ಮೇಲಿದೆ.

ಚಿರಂಜೀವಿ ಸಿ.ಹುಲ್ಲಹಳ್ಳಿ

ನಂಜನಗೂಡು ಪಟ್ಟಣ ಹತ್ತಾರು ವಿಶೇಷತೆಗಳ ಜೊತೆಗೆ ರಮಣೀಯವಾದ ಸುಂದರ ಸ್ಥಳಗಳನ್ನು ಹೊಂದಿದೆ. ಕಪಿಲಾ ನದಿ ತೀರದ ನಂಜುಂಡೇಶ್ವರನ ಸನ್ನಿಧಿಯು ದೇಶದ ನಾನಾ ಭಾಗಗಳ ಭಕ್ತರನ್ನು ಹೊಂದಿರುವ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇದರ ಜೊತೆಗೆ ದೇಗುಲದ ಬಳಿಯ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ, ಕಪಿಲಾ ನದಿ ತೀರದ ಅಯ್ಯಪ್ಪ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ, ಪ್ರಸನ್ನ ನಂಜುಂಡೇಶ್ವರ ದೇವಾಲಯ ಸೇರಿದಂತೆ ಹತ್ತಾರು ಪ್ರಸಿದ್ಧ ದೇಗುಲಗಳು ಪಟ್ಟಣದಲ್ಲಿವೆ.  

ಇದಲ್ಲದ ತಾಲ್ಲೂಕಿನ ಹೆಡತಲೆ ಲಕ್ಷ್ಮೀಕಾಂತಸ್ವಾಮಿ, ಹೆಮ್ಮೆರಗಾಲದ ಕೊಳಲು ಗೋಪಾಲಸ್ವಾಮಿ, ಕಳಲೆ ಲಕ್ಷ್ಮಿಕಾಂತಸ್ವಾಮಿ, ತಗಡೂರಿನ ಅಂಕನಾಥೇಶ್ವರ ಮತ್ತು ಲಕ್ಷ್ಮಿರಮಣ, ಹುಲ್ಲಹಳ್ಳಿ ವರದರಾಜಸ್ವಾಮಿ, ಕಾರ್ಯ ಸಿದ್ದೇಶ್ವರಸ್ವಾಮಿ ಸೇರಿದಂತೆ ಹಲವು ದೇಗುಲಗಳು ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಇವು ಧಾರ್ಮಿಕ ಕೇಂದ್ರಗಳಾದರೆ ಹುಲ್ಲಹಳ್ಳಿಯ ಕಿರು ಅಣೆಕಟ್ಟೆ, ಹದಿನಾರು ಕೆರೆ, ನುಗು, ಅಲಸೂರು, ಕಪಿಲಾ ಬಲದಂಡೆ, ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗಳು ಹರಿಯುವ ಮೂಲಕ ಇಲ್ಲಿನ ನೆಲ ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ಕೀರ್ತಿಯನ್ನು ಹೊಂದಿದೆ.

ಶ್ರೀಕಂಠೇಶ್ವರ ದೇವಸ್ಥಾನ: ೧೨ನೇ ಶತಮಾನದಲ್ಲಿ ಜೋಳ ರಾಜರು ಶ್ರೀಕಂಠೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ. ಮೈಸೂರು ರಾಜರು ದೇವಾಲಯದ ನವೀಕರಣದ ವ್ಯಾಪ್ತಿಯನ್ನು ಕೈಗೊಂಡರು. ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಯವರು ಈ ದೇವಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಶ್ರೀಕಂಠೇಶ್ವರ ದೇಗುಲ ರಾಜ್ಯದ ಅತ್ಯಂತ ವಿಸ್ತಾರವಾದ ಶಿವನ ದೇವಾಲಯವಾಗಿದ್ದು, ೧೧೭ ಮೀಟರ್ ಉದ್ದ ಮತ್ತು ೪೮ ಮೀಟರ್ ಅಗಲ ಇದೆ. ೭೩ ಮೀಟರ್ ಎತ್ತರದ ಆಕರ್ಷಣೆಯ ರಾಜ ಗೋಪುರವು ದೇವಸ್ಥಾನದ ಸುಂದರತೆಯನ್ನು ಹೆಚ್ಚಿಸಿದೆ. ಇದರ ಮೇಲೆ ಸ್ವರ್ಣ ಲೇಪಿತ ಮೂರು ಮೀಟರ್ ಎತ್ತರದ ೭ ಕಳಸಗಳು ಮನ ಸೆಳೆಯುತ್ತವೆ. ಪ್ರತಿ ಹುಣ್ಣಿಮೆ ಹಾಗೂ ಶಿವರಾತ್ರಿಯಂದು ದೊಡ್ಡಜಾತ್ರೆ ಮತ್ತು ಚಿಕ್ಕಜಾತ್ರೆಗಳಲ್ಲಿ ರಾಜ್ಯ, ಹೊರ ರಾಜ್ಯಗಳಿಂದ ಅಸಂಖ್ಯಾತ ಜನರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಹದಿನಾರು ಕರೆ: ಇತಿಹಾಸದ ದಾಖಲೆಗಳಲ್ಲಿ ಹದಿನಾಡು ಎಂದು ಉಲ್ಲೇಖಗೊಂಡಿರುವ ಹದಿನಾರು ಮೈಸೂರು ಒಡೆಯರ ಆಳ್ವಿಕೆಯ ಮೂಲಗ್ರಾಮ ಎಂಬುದು ಇತಿಹಾಸಕಾರರ ಉಲ್ಲೇಖ. ಮೈಸೂರು ಅರಸರ ಆಳ್ವಿಕೆಯ ಅವಧಿಯಲ್ಲಿ ಹದಿನಾರು ಕೆರೆ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿರುವ ಪ್ರತೀಕವಿದೆ. ಪಕ್ಷಿ ಸಂಕುಲದ ವಾಸಸ್ಥಾನವಾಗಿರುವ ಈ ಕರೆಯಲ್ಲಿ ಮೀನುಗಾರಿಕೆಯು ನಡೆಯುತ್ತವೆ.

ಪ್ರತಿ ವರ್ಷ ಚಳಿಗಾಲದಲ್ಲಿ ಹದಿನಾರು ಕೆರೆಯಲ್ಲಿವಲಸೆ ಹಕ್ಕಿಗಳದ್ದೇ ಕಾರುಬಾರು. ದೂರದ ಯೂರೋಪ್, ಜರ್ಮನಿ, ಬಲೂಚಿಸ್ತಾನ್, ಮಧ್ಯ ಏಷಿಯಾ ಇನ್ನಿತರ ಪ್ರದೇಶಗಳಿಂದ ಆಗಮಿಸುವ ಸಾವಿರಾರು ಹಕ್ಕಿಗಳು ನವೆಂಬರ್‌ನಲ್ಲಿ ಹದಿನಾರು ಕೆರೆಗೆ ವಲಸೆ ಬಂದು ಫೆಬ್ರವರಿ ಅಂತ್ಯದವರೆಗೂ ಸುತ್ತಲಿನ ಪ್ರದೇಶದಲ್ಲೇ ವಿಹರಿಸುತ್ತವೆ. ಕೆರೆಯಲ್ಲಿ ವಿದೇಶಿ ಬಾತುಗಳು, ಪರ್ವತಹಕ್ಕಿ, ಸೂಜಿಬಾಲದ ಬಾತು, ಸಲಾಕೆ, ವಿಜನ್ ಹಾಗೂ ನೀರ್ನಡಿಗೆ ಹಕ್ಕಿಗಳು ಕೆರೆುಂಲ್ಲಿ ಸ್ವಚ್ಛಂದವಾಗಿ ವಿಹರಿಸುವ ಮೂಲಕ ನೋಡುಗರ ಕಣ್ಮನ ಸೆಳೆಯುತ್ತವೆ.

ಪಟ್ಟೆತಲೆ ಹೆಬ್ಬಾತುಗಳು ವಿದೇಶದಿಂದ ಆಗಮಿಸುವ ಪಟ್ಟೆತಲೆ ಹೆಬ್ಬಾತುಗಳು ಹದಿನಾರು ಕೆರೆಯ ಆಕರ್ಷಣೆಯಾಗಿವೆ. ಸುತ್ತಲಿನ ಹೊಲ ಗದ್ದೆಗಳಲ್ಲಿ ಆಹಾರ ಸೇವಿಸಿ ಕೆರೆುಂಲ್ಲಿ ಸ್ವಚ್ಛಂದವಾಗಿ ಈಜಾಡುವ ಪಟ್ಟೆತಲೆ ಹೆಬ್ಬಾತು, ಹೆಜ್ಜಾರ್ಲೆ, ಗೊರವಂತ, ನೀರು ಕಾಗೆಗಳು, ಬಗೆಬಗೆಯ ಕೊಕ್ಕರೆಗಳು ಮತ್ತು ನೀರ್ನಡಿಗೆ ಹಕ್ಕಿಗಳು ನೋಡುಗರ ಮನ ತಣಿಸುತ್ತವೆ.

ಸುತ್ತೂರು ಕ್ಷೇತ್ರ : ನಂಜನಗೂಡಿಗೆ ಮತ್ತೊಂದು ವಿಶೇಷವೆಂದರೆ ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠ. ತಾಲ್ಲೂಕಿನ ಸುತ್ತೂರಿನಲ್ಲಿರುವ ಶ್ರೀ ವೀರ ಸಿಂಹಾಸನ ಮಠಕ್ಕೆ ಒಂದು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ತಲಕಾಡಿನ ಗಂಗರ ದೊರೆ ರಾಚಮಲ್ಲ ಮತ್ತು ಕಂಚಿಯ ಚೋಳರ ದೊರೆ ರಾಜರಾಜನ ನಡುವೆ ನಡೆಯಬೇಕಾಗಿದ್ದ ಯುದ್ಧವು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸಕಾಲಿಕ ಮಧ್ಯ ಪ್ರವೇಶದಿಂದಾಗಿ ತಪ್ಪಿತು. ಪರಸ್ಪರ ಯುದ್ಧ ಮಾಡಲು ಹೋದವರು ನಂತರ ಆಪ್ತಮಿತ್ರರಾದರು. ಈ ಘಟನೆ ನಂತರ ಇಬ್ಬರು ರಾಜರ ಮನವಿಯ ಮೇರೆಗೆ ಕಪಿಲಾ ನದಿ ದಡದಲ್ಲಿರುವ ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ಮಠವನ್ನು ಸ್ಥಾಪಿಸಿದರು. ಇದುವರೆಗೂ ೨೩ ಜಗದ್ಗುರುಗಳು ಪೀಠವನ್ನು ಅಲಂಕರಿಸಿದ್ದು, ಈಗ ೨೪ನೆಯ ಗುರುಗಳಾಗಿ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಸುತ್ತೂರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ನೂರಾರು ಕೇಂದ್ರಗಳು ದೇಶ ಹಾಗೂ ವಿದೇಶದ ನಾನಾ ಮೂಲೆಗಳಲ್ಲಿ ತಲೆ ಎತ್ತುವ ಮೂಲಕ ಜಗತ್ತಿನಾದ್ಯಂತ ಜ್ಞಾನ ದಾಸೋಹವನ್ನು ಒದಗಿಸುತ್ತಿವೆ. ಇನ್ನು ಸುತ್ತೂರಿನಲ್ಲಿರುವ ಜೆಎಸ್‌ಎಸ್ ಉಚಿತ ವಸತಿ ಶಿಕ್ಷಣ ಕೇಂದ್ರದಲ್ಲಿ ಪ್ರತೀ ವರ್ಷ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗಿ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಸುತ್ತೂರು ವಸತಿ ಶಾಲೆಯಲ್ಲಿ ಮಣಿಪುರ, ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಮಹಾದೇವ ತಾತಾ ಸಂಗಮ : ಲೋಕ ಕಲ್ಯಾಣಕ್ಕಾಗಿ ಅವತಾರವೆತ್ತಿದ ಮಹದೇವ ತಾತಾ, ತಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಲೋಕ ಸಂಚಾರ ನಡೆಸಿ ಅಪಾರ ಭಕ್ತವೃಂದ ಹೊಂದಿದ್ದರು. ತಾತಾ ಅವರು ಅಂತಿಮ ದಿನಗಳನ್ನು ನಂಜನಗೂಡು ತಾಲ್ಲೂಕಿನ ಸಂಗಮ ಕ್ಷೇತ್ರದಲ್ಲಿ ಕಳೆದರು. ಈ ಭಾಗದ ಸಾರ್ವಜನಿಕರ ಬವಣೆಗಳನ್ನು ನೀಗಿಸುತ್ತಾ ಕಾಯಕ ಯೋಗಿಯಾಗಿ ದವಸ ಧಾನ್ಯಗಳನ್ನು ತಾವೇ ಬೆಳೆದು ಆಹಾರ ಮಾಡಿಕೊಂಡು ಜೀವಿಸಿದ್ದರು. ೧೯೮೭ರಲ್ಲಿ ಸಂಗಮದಲ್ಲಿ ಲಿಂಗೈಕ್ಯರಾದರು. ಅವರ ಐಕ್ಯಸ್ಥಳ ದೊಡ್ಡ ಧಾರ್ಮಿಕ ಕೇಂದ್ರವಾಗಿ ಬೆಳೆದು ನಿಂತಿದೆ. ಲಕ್ಷಾಂತರ ಭಕ್ತರ ಪಾಲಿನ ಇಷ್ಟಾರ್ಥ ಸಿದ್ಧಿಸುವ ಆಕರ್ಷಣೀಯ ಕೇಂದ್ರವೂ ಆಗಿದೆ. ಉದ್ಯಮಿಗಳು, ರಾಜಕಾರಣಿಗಳು, ರೈತಾಪಿ ವರ್ಗ ಮಹದೇವ ತಾತಾರ ಪರಮ ಭಕ್ತರಾಗಿದ್ದಾರೆ. ಕಪಿಲಾ, ನುಗು (ಭೃಗು) ಹಾಗೂ ಗುಪ್ತಗಾಮಿನಿ ನದಿಗಳ ತ್ರಿವೇಣಿ ಸಂಗಮ ಪ್ರಸಿದ್ಧ ಯಾತ್ರಾಸ್ಥಳ. ಮಹದೇವ ತಾತಾ ಜೀವಿತಾವಧಿಯಲ್ಲಿ ನೆಲೆಸಿದ್ದ ಗುಡಿ, ಬಳಸುತ್ತಿದ್ದ ಗಾಳಿಗುಂಡು ಬಂದೂಕು, ಪಾದರಕ್ಷೆ, ಮೇಜು-ಕುರ್ಚಿ, ಪೆಟ್ಟಿಗೆ, ಪೂಜಾ ಸಾಮಗ್ರಿಗಳು ಈ ಐಕ್ಯಸ್ಥಳದಲ್ಲಿ ಇದ್ದು, ಶ್ರೀ ಮಹದೇವ ತಾತಾ ಅವರ ಐಕ್ಯ ಸ್ಥಳಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಜನರು ಭೇಟಿ ನೀಡುತ್ತಾರೆ. ತಾತಾರ ಆರಾಧನೆ ಮತ್ತು ಅಮಾವ್ಯಾಸೆ ಪೂಜೆಗಳಲ್ಲಿ ಸಾವಿರರಾ ಜನರು ಭಾಗವಹಿಸುತ್ತಾರೆ.

ಹುಲ್ಲಹಳ್ಳಿ ಅಣೆಕಟ್ಟು: ೧೮೮೯ರಲ್ಲಿ ಅಂದಿನ ಮೈಸೂರಿನ ಅರಸ ಮುಮ್ಮಡಿ ಚಾಮರಾಜ ಒಡೆಯರ್ ಈ ಕಲ್ಲುಗೋಡೆಗಳನ್ನು ಹಾಗೆ ಉಳಿಸಿಕೊಂಡು ೪೩೦ ಮೀಟರ್ ಉದ್ದ ಹಾಗೂ ೪೨ ಮೀಟರ್ ಎತ್ತರದ ಕಿರು ಅಣೆಕಟ್ಟೆ ನಿರ್ಮಿಸಿದ್ದಾರೆ. ಈ ಕಿರು ಅಣೆ ಕಟ್ಟೆಯು ಕೃಷಿಗೆ ಅನುಕೂಲವಾಗುತ್ತಿದ್ದು, ಜೊತೆಗೆ ನೀರಾಟವಾಡಲು ಯೋಗ್ಯವಾಗಿದೆ. ಮಹಿಳೆಯರು ಕೂಡ ಇಲ್ಲಿ ಸುರಕ್ಷಿತವಾಗಿ ನೀರಿನ ಮೇಲೆ ವಿರಮಿಸಬಹುದು. ಈಜಾಡಬಹುದು. ಒಡ್ಡಿನ ಮೇಲೆ ಹರಿದು ಬರುವ ನೀರು ರಭಸವಾಗಿ ಕೆಳಗಿಳಿಯುತ್ತದೆ. ಇಲ್ಲಿ ಮೈಯೊಡ್ಡಿ ನಿಂತು ನೀರಾಟವಾಡಬಹುದು. ಅಲ್ಲಲ್ಲಿ ಬಂಡೆಗಳಿದ್ದು, ನೀರೊಂದಿಗೆ ಆಡಿ ಅಲ್ಲಲ್ಲಿರುವ ಬಂಡೆಗಳ ಮೇಲೆ ಕುಳಿತು ವಿಶ್ರಾಂತಿ ಪಡೆಯಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ