Light
Dark

ಜಗಜಟ್ಟಿಗಳ ತವರೂರಾಗಿದ್ದ ಮೈಸೂರು

ಮೈಸೂರಿನ ದಸರೆಯ ಸಂದರ್ಭದಲ್ಲಿ ನಡೆಯುತ್ತಿದ್ದ ಕುಸ್ತಿ ಪಂದ್ಯದಲ್ಲಿ ದೇಶದ ನಾನಾ ಪ್ರಾಂತ್ಯಗಳ ಕುಸ್ತಿ ಪಟುಗಳು ಭಾಗವಹಿಸುತ್ತಿದ್ದರು. ಅಂದಿನ ರೋಚಕ ಕುಸ್ತಿ ಪಂದ್ಯಗಳ ಬಗ್ಗೆ ಹಲವು ದಂತಕಥೆಗಳಿವೆ. ಅಂದಿನ ವೈಭವದ ದಿನಗಳು ಈಗ ಮರೆಯಾಗಿವೆ. ಆದರೂ ಮೈಸೂರಿನಲ್ಲಿ ಈಗಲೂ ಕುಸ್ತಿ ಕಲೆಯನ್ನು ಕಲಿಸುವ ಗರಡಿ ಮನೆಗಳಿವೆ. ಉಸ್ತಾದರಿದ್ದಾರೆ, ಪೈಲ್ವಾನರಿದ್ದಾರೆ. ಮುಂಜಾನೆಯ ಚುಮುಚುಮು ಚಳಿಯಲ್ಲಿಯೇ ಅಭ್ಯಾಸ ನಡೆಸುವ ಜಟ್ಟಿಗಳಿದ್ದಾರೆ.

ಆರ್.ಎಲ್.ಮಂಜುನಾಥ್

ದಸರಾ ಕುಸ್ತಿಯಲ್ಲೂ ರಕ್ತಸಿಕ್ತ ಚರಿತ್ರೆ

ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಮೀಸಲು ನೀತಿ ಜಾರಿಗೊಳಿಸಿದ್ದು ರಾಜರ್ಷಿ ನಾಲ್ವಡಿಯವರ ಹೆಗ್ಗಳಿಕೆ. ಆದರೆ ಅಂದಿನ ಸಾಮಾಜಿಕ ಕಟ್ಟುಪಾಡುಗಳ ಕಾರಣಕ್ಕಾಗಿ ದಲಿತ ಕುಸ್ತಿಪಟುಗಳಿಗೆ ಸವರ್ಣೀಯ ಕುಸ್ತಿ ಪಟುಗಳೊಂದಿಗೆ ಸೆಣಸಲು ಅವಕಾಶ ಇರಲಿಲ್ಲ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಮೈಸೂರು ಜಿಲ್ಲಾ ಕುಸ್ತಿ ಸಮಿತಿಯ ಅಧ್ಯಕ್ಷರೂ ಆಗಿದ್ದ ಕಾಂಗ್ರೆಸ್ ಮುಖಂಡ ಸಾಹುಕಾರ್ ಚೆನ್ನಯ್ಯ, ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾವ್ ಮತ್ತಿತರರು ದಸರಾ ಕುಸ್ತಿ ಸ್ಪರ್ಧೆಗಳಲ್ಲಿ ದಲಿತ ಕುಸ್ತಿ ಪಟುಗಳಿಗೆ ಅವಕಾಶ ಕೊಡಬೇಕು ಎಂದು ಮಹಾರಾಜರನ್ನು ಒತ್ತಾಯಿಸುತ್ತಿದ್ದರು.

ಆಗ್ರಹಕ್ಕೆ ಮಣಿದ ಮಹಾರಾಜ ಜಯಚಾಮರಾಜ ಒಡೆಯರ್ ಅವರು ೧೯೫೩ರ ( ಶ್ರೀಕಂಠದತ್ತ ಒಡೆಯರ್ ಹುಟ್ಟಿದ ವರ್ಷ) ದಸರಾ ಕುಸ್ತಿ ಸಂದರ್ಭದಲ್ಲಿ ದಲಿತ ಕುಸ್ತಿ ಪಟುಗಳು ಇತರರ ಜತೆ ಸಮಾನವಾಗಿ ಸ್ಪರ್ಧಿಸಬಹುದೆಂದು ಘೋಷಿಸಿದರು. ಆದರೆ ಸವರ್ಣೀಯರು ಇದನ್ನು ಬಲವಾಗಿ ವಿರೋಧಿಸಿದರು. ಕುಸ್ತಿಯ ದಿನ ವೆಂಕಟಸುಬ್ಬಯ್ಯ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಸವರ್ಣೀಯರು ದೇವರಾಜ ಮಾರುಕಟ್ಟೆಯ ಯು.ಎಲ್. ರಾಮಚಂದ್ರರಾವ್ ಅವರ ಖಾದಿ ಭಂಡಾರಕ್ಕೆ ನುಗ್ಗಿ ದಾಂಧಲೆ ನಡೆಸಿದರು. ಇದರಿಂದ ಬೇಸರಗೊಂಡ ಮಹಾರಾಜರು, ಅಂದು ಮಧ್ಯಾಹ್ನ ಅರಮನೆೊಂಳಗೆ ನಡೆಯಬೇಕಿದ್ದ ದಸರಾ ಕುಸ್ತಿಯನ್ನು ರದ್ದುಪಡಿಸಿದರು.

ಆದರೆ ಇದರಿಂದ ಗಾಂಧಿನಗರ, ಕೈಲಾಸಪುರ, ಆದಿಕರ್ನಾಟಕಪುರದ (ಈಗಿನ ಅಶೋಕಪುರಂ) ಕುಸ್ತಿಪಟುಗಳಿಗೆ ನಿರಾಸೆಯಾಯಿತು. ಈ ಹಂತದಲ್ಲಿ ಕಿಡಿಗೇಡಿಗಳು ಅರಮನೆ ಮುಂಭಾಗ ನಿಂತಿದ್ದ ಪೊಲೀಸ್ ವ್ಯಾನ್‌ಗಳನ್ನು ಜಖಂಗೊಳಿಸಿ, ತಡೆಯಲು ಬಂದ ಪೊಲೀಸರ ಮೇಲೆೆುೀಂ ಹಲ್ಲೆ ನಡೆಸಿದರು. ಪೊಲೀಸರು ಅರಮನೆ ದಕ್ಷಿಣ ದ್ವಾರದ (ಜೆಎಸ್‌ಎಸ್ ವೃತ್ತ) ಬಳಿ ಗೋಲಿಬಾರ್ ನಡೆಸಿದಾಗ, ನಾಲ್ವರು ಮೃತಪಟ್ಟರು. ೧೩ ಮಂದಿ ಗಾಯಗೊಂಡರು. ಅಂಬಾ ವಿಲಾಸ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ದಸರಾ ಕುಸ್ತಿ ಸ್ಪರ್ಧೆ ಅದೇ ಕೊನೆಯಾಯಿತು. ಆ ವರ್ಷದ ದಸರಾ ಜಂಬೂ ಸವಾರಿ ಮೆರವಣಿಗೆಯನ್ನು ರದ್ದುಪಡಿಸಲಾಯಿತು. ಅರಮನೆಯ ದಸರಾ ಉತ್ಸವ ಸಾಂಕೇತಿಕ ‘ವಜ್ರ ಮುಷ್ಟಿ’ ಕಾಳಗಕ್ಕೆ ಸೀಮಿತವಾಯಿತು.

 

ಅರಮನೆಗಳ ನಗರಿ ಮೈಸೂರು ಎಂದಾಕ್ಷಣ ಅದರ ಜತೆಗೆ ಸಾಂಪ್ರದಾಯಿಕ ಕಲೆಯಾದ ಕುಸ್ತಿಯೂ ತಳುಕು ಹಾಕಿಕೊಳ್ಳುತ್ತದೆ. ಇದಕ್ಕೆ ಮೈಸೂರು ಸಂಸ್ಥಾನವನ್ನು ಆಳಿದ ರಾಜ-ಮಹಾರಾಜರು ನೀಡಿದ ಪ್ರೋತ್ಸಾಹವೇ ಇದಕ್ಕೆ ಕಾರಣ. ಸ್ವತ: ಕುಸ್ತಿ ಪಟುವಾಗಿದ್ದ ರಣಧೀರ ಕಂಠೀರವ ನರಸ ಒಡೆಯರು ತಿರುಚನಾಪಳ್ಳಿಗೆ ಹೋಗಿ ಅಲ್ಲಿನ ದುರಹಂಕಾರಿ ಜಟ್ಟಿಯ ಮದ ಅಡಗಿಸಿದ ಕತೆ ಇಂದಿಗೂ ಜನಜನಿತವಾಗಿದೆ. ರಾಜರ್ಷಿ ಎಂದು ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಸ್ವತಃ ಕುಸ್ತಿ ಆಡುತ್ತಿದ್ದರು. ಕುಸ್ತಿ ಪಂದ್ಯಗಳನ್ನು ಏರ್ಪಡಿಸಿ ಜಟ್ಟಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹೀಗೆ ದೊರೆತ ಪ್ರೋತ್ಸಾಹದಿಂದಲೇ ಮೈಸೂರಿನ ಕುಸ್ತಿಪಟುಗಳು ದೇಶ ವಿದೇಶಗಳಲ್ಲಿ ಹೆಸರು ಮಾಡಲು ಸಾಧ್ಯವಾಯಿತು. ಆದರೆ, ಈಗಿನ ಆಧುನೀಕರಣದ ಛಾಯೆಯಲ್ಲಿ ಅಗತ್ಯ ಸೌಲಭ್ಯ, ಪ್ರೋತ್ಸಾಹದ ಕೊರತೆಯಿಂದ ಕುಸ್ತಿ ಕಲೆ ಕ್ಷೀಣಿಸುತ್ತಿದೆ. ದಸರಾ ಸಂದರ್ಭದಲ್ಲಿ ಮಾತ್ರ ನೆನಪಾಗುವ ಕ್ರೀಡೆಯಾಗಿ ಉಳಿದುಬಿಟ್ಟಿದೆ.

ಕುಸ್ತಿ ಎಂದರೆ ನಮ್ಮ ಕಣ್ಣ ಮುಂದೆ ಗರಡಿ ಮನೆಗಳು ಹಾದುಹೋಗುತ್ತವೆ. ರಾಜರ ಅವಧಿಯಲ್ಲಿ ಮೈಸೂರಿನಲ್ಲಿ ೧೫೦ಕ್ಕೂ ಹೆಚ್ಚು ಹೆಸರಾಂತ ಗರಡಿ ಮನೆಗಳಿದ್ದವು. ಆದರೆ, ಈಗ ಅವುಗಳ ಸಂಖ್ಯೆ ೭೦ರ ಆಸುಪಾಸಿನಲ್ಲಿದೆ. ಇವುಗಳ ಸ್ಥಾನವನ್ನು ಈಗ ಹೈಟೆಕ್ ಜಿಮ್‌ಗಳು ಆವರಿಸಿವೆ ಎನ್ನುವುದು ಹಿರಿಯ ಕುಸ್ತಿಪಟುಗಳ ಅನಿಸಿಕೆ.

ನಗರದ ನಜರ್‌ಬಾದ್, ಸುಣ್ಣದ ಕೇರಿ, ಕೆ.ಜಿ.ಕೊಪ್ಪಲು, ದೇವರಾಜ ಮೊಹಲ್ಲ, ಮಂಡಿ ಮೊಹಲ್ಲ ಮುಂತಾದ ಬಡಾವಣೆಗಳಲ್ಲಿ ಇದ್ದ ಗರಡಿ ಮನೆಗಳು ಕುಸ್ತಿಪಟುಗಳಿಗೆ ತರಬೇತಿ ನೀಡುವ ಶಾಲೆಗಳಾಗಿದ್ದವು. ಇಲ್ಲಿ ಗುರುಗಳು ತಮ್ಮ ಶಿಷ್ಯರಿಂಗೆ ಸಂಪೂರ್ಣ ವಿದ್ಯೆ ಧಾರೆ ಎರೆಯುತ್ತಿದ್ದರು. ಅದೇ ರೀತಿ ಕುಸ್ತಿಪಟುಗಳು ಶ್ರದ್ಧೆಯಿಂದ ಅಭ್ಯಾಸ ನಡೆಸುತ್ತಿದ್ದರು. ಇನ್ನು ಕುಸ್ತಿಪಂದ್ಯಗಳಂತೂ ಕುಸ್ತಿಪ್ರಿಯರಿಗೆ ರಸದೌತಣ ಉಣಬಡಿಸುತ್ತಿದ್ದವು.

ನಗರದ ನಾಲ್ಕೂ ವಲಯಗಳಲ್ಲಿದ್ದ ಪ್ರಮುಖ ಗರಡಿಗಳ ಅಧೀನದಲ್ಲಿ ಸುಮಾರು ೨೦-೨೫ ಗರಡಿಗಳು ಇರುತ್ತಿದ್ದವು. ಪ್ರತಿನಿತ್ಯ ಗರಡಿಮನೆಗಳಲ್ಲಿ ಬೆಳಿಗ್ಗೆ, ಸಂಜೆ ಅಭ್ಯಾಸ ನಡೆಸಿ ಕುಸ್ತಿ ಪಂದ್ಯಾವಳಿಗೆ ಸಜ್ಜಾಗುತ್ತಿದ್ದರು. ಕುಸ್ತಿಪಂದ್ಯಗಳು ಆಯೋಜನೆಗೊಂಡರೆ ಹಳ್ಳಿಗಳಿಂದ ಜನರು ಗಾಡಿಗಳನ್ನು ಕಟ್ಟಿಕೊಂಡು ನೂರಾರು ಸಂಖ್ಯೆಯಲ್ಲಿ ದಾಂಗುಡಿಯಿಡುತ್ತಿದ್ದರು.ರಾಜರು ಪ್ರತೀವಾರ ಜಟ್ಟಿಗಳನ್ನು ಅರಮನೆಗೆ ಕರೆಸಿ ಪಂದ್ಯಗಳನ್ನು ಆಡಿಸುತ್ತಾ ಪ್ರೋತ್ಸಾಹಿಸುತ್ತಿದ್ದರು. ಪೈಲ್ವಾನರಿಗೆ ಕುಡಿಯಲು ಹಾಲು, ತರಕಾರಿ, ಹಣ್ಣುಗಳನ್ನು ಸಾರ್ವಜನಿಕರೇ ಪೂರೈಸುತ್ತಿದ್ದರು ಎನ್ನುವುದು ಹಿರಿಯ ಪೈಲ್ವಾನರೊಬ್ಬರು ಹೇಳುತ್ತಾರೆ.

ಹಿಂದೆ ರಾಜರ ಕಾಲದಲ್ಲಿ ಪೈಲ್ವಾನರಿಗೆ ಅಪಾರ ಪ್ರೋತ್ಸಾಹವಿತ್ತು. ಪಂದ್ಯಗಳನ್ನಾಡಿಸಿದಾಗ ದುಡ್ಡಿನ ಚೀಲ ಕೊಟ್ಟು ಕಳುಹಿಸುತ್ತಿದ್ದರು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅವರನ್ನು ಯೋಧರಂತೆ ಕಾಣುತ್ತಿದ್ದರು. ಈಗ ಕುಸ್ತಿಗೆ ಅಂಥ ಮಾನ್ಯತೆ ಇಲ್ಲವಾಗಿದೆ. ದಸರಾ ವೇಳೆ ಮಾತ್ರ ಸರ್ಕಾರ ನೆನಪಿಸಿಕೊಳ್ಳುತ್ತದೆ. ಸರ್ಕಾರದ ಪ್ರೋತ್ಸಾಹವಿಲ್ಲದೆ ಅನೇಕ ಗರಡಿಮನೆಗಳು ಕಣ್ಮರೆಯಾಗಿವೆ. ಹಿರಿಯ ಕುಸ್ತಿಪಟುಗಳಿಗೆ ನೀಡುತ್ತಿದ್ದ ಪ್ರೋತ್ಸಾಹಧನ ಬಹಳ ಕಡಿಮೆಯಾಗಿದೆ. ಅದನ್ನು ಹೆಚ್ಚಿಸಬೇಕಿದೆ. ಗರಡಿಮನೆಗಳಿಗೆ ಉತ್ತೇಜನ ನೀಡಿ, ಉತ್ತಮ ಕುಸ್ತಿಪಟುಗಳಿಗೆ ಸರ್ಕಾರಿ ಕೆಲಸಗಳಲ್ಲಿ ಆದ್ಯತೆ ನೀಡಬೇಕಿದೆ. ಆಗ ಮಾತ್ರ ಕುಸ್ತಿ ಕಲೆ, ಇದನ್ನು ಮುನ್ನಡೆಸುತ್ತಿರುವ ಜಟ್ಟಿಗಳ ಉಳಿವು ಸಾಧ್ಯ. ನಾವು ಪ್ರತಿನಿತ್ಯ ೩೦-೪೦ ಮಂದಿ ಯುವಕರಿಗೆ ಗರಡಿಯಲ್ಲಿ ತರಬೇತಿ ನೀಡುತ್ತಿದ್ದೇವೆ. – ಪೈಲ್ವಾನ್ ರಮೇಶ್

ಪ್ರಮುಖ ಪೈಲ್ವಾನರು
ಪೈಲ್ವಾನ್‌ಪೈ ರುದ್ರ ಅಲಿಯಾಸ್ ಮೂಗ, ಪೈಲ್ವಾನ್ ಪಡುವಾರಹಳ್ಳಿ ಕೆಂಚಪ್ಪ, ಪೈಲ್ವಾನ್ ಸುಂದರಣ್ಣ, ಪೈಲ್ವಾನ್ ಕುಚೇಲಣ್ಣ, ಪೈಲ್ವಾನ್ ಮಹದೇವ್, ಪೈಲ್ವಾನ್ ಅಮೀರಣ್ಣ, ದಿಲ್ದಾರ್ ಬಸವರಾಜು, ಪೈಲ್ವಾನ್‌ಬಾಲಾಜಿ ಮುಂತಾದವರು.

ಗರಡಿ ಮಣ್ಣಿನ ವಿಶೇಷ
ಗರಡಿಯಲ್ಲಿ ಮಂಡಿಯುದ್ದ ಹಾಕಲಾಗಿರುವ ಕೆಮ್ಮಣ್ಣು ನೋಡಲಷ್ಟೇ ಮಣ್ಣು. ಆದರೆ, ಇದಕ್ಕೆ ಮಜ್ಜಿಗೆ, ಕಡಲೆಕಾಯಿ ಎಣ್ಣೆ, ಅರಿಶಿನ ಹಾಕಿ ತಿಂಗಳುಗಟ್ಟಲೆ ಚೆನ್ನಾಗಿ ಹದಗೊಳಿಸಲಾಗಿರುತ್ತದೆ. ಕುಸ್ತಿಪಟುಗಳು ಈ ಮಣ್ಣಿನ ಬಗ್ಗೆ ಅಪಾರ ಗೌರವ ಹೊಂದಿದ್ದು, ಇದಕ್ಕೆ ನಮಸ್ಕರಿಸಿಯೇ ಕುಸ್ತಿಗೆ ಅಣಿಯಾಗುತ್ತಾರೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ