Light
Dark

ಅರಸರ ಬಳುವಳಿ ಮೈಸೂರು ಪೇಟ

-ದಿನೇಶ್ ಕುಮಾರ್

ಪೇಟ ಎಂದರೆ ಸಾಕು ಈ ಹೆಸರಿನ ಜೊತೆಗೆ ತಳುಕು ಹಾಕಿಕೊಳ್ಳುವ ಮೊದಲ ಹೆಸರು ಮೈಸೂರು. ಮೈಸೂರು ಪೇಟ ಎಂದರೆ ಅದು ಗೌರವದ ಸಂಕೇತ. ಸಾಂಸ್ಕೃತಿಕ ನಗರಿಗೆ ಆಗಮಿಸುವ ಅತಿಥಿ ಗಣ್ಯರೆಲ್ಲರಿಗೂ ತೊಡಿಸುವ ಮೈಸೂರು ಪೇಟಕ್ಕೆ ಎರಡು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ. ೧೮೧೦ರ ದಶಕದ ಮಾತು. ಅಂದು ರಾಜರನ್ನು ಭೇಟಿ ಮಾಡಲು ಬರುವ ಗಣ್ಯರು, ಅಧಿಕಾರಿಗಳು ಥರಾವರಿ ಧಿರಿಸುಗಳನ್ನು ಧರಿಸಿ ಬರುತ್ತಿದ್ದುದನ್ನು ಗಮನಿಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ ಪೂರ್ಣಯ್ಯನವರನ್ನು ಕರೆಸಿಕೊಂಡು, ಅರಮನೆಗೆ ಪ್ರವೇಶಿಸುವವರಿಗೆ ವಸ್ತ್ರ ಸಂಹಿತೆ ಜಾರಿಗೆ ತಂದರೆ ಹೇಗಿರುತ್ತದೆ ಎಂದು ಚರ್ಚಿಸಿದ್ದಾರೆ.
ಮಹಾರಾಜರ ಸೂಚನೆಯ ಮೇರೆಗೆ ದಿವಾನ್ ಪೂರ್ಣಯ್ಯ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದರು. ಅದರಂತೆ ರಾಜರನ್ನು ಭೇಟಿ ಮಾಡಲು ಹಾಗೂ ದರ್ಬಾರ್ ಹಾಲ್ ಪ್ರವೇಶಿಸಲು ಬರುವವರು ಷರಾಯಿ ನಿಲುವಂಗಿ, ವಲ್ಲಿ ಅಥವ ಜರತಾರಿ ಕಚ್ಚೆಪಂಚೆ, ಜುಬ್ಬ ಹಾಗೂ ವಲ್ಲಿಯನ್ನು ಧರಿಸಬೇಕೆಂದು ಆಜ್ಞೆ ಹೊರಡಿಸಲಾಯಿತು.


ರಾಜರ ಅಪ್ಪಣೆಯ ಮೇರೆಗೆ ವಸ್ತ್ರಸಂಹಿತೆಯೇನೋ ಜಾರಿಗೆ ಬಂತು. ಆದರೆ ಭೇಟಿ ಮಾಡಲು ಬರುತ್ತಿದ್ದವರ ನಾನಾ ‘ಕೇಶ ವಿನ್ಯಾಸ’ ಸಮಸ್ಯೆಯಾಯಿತು. ಕೆಲವರದು ಉದ್ದ ತಲೆಗೂದಲು, ಇನ್ನು ಕೆಲವರದು ಅರೆತಲೆಗೂದಲು, ಮತ್ತೆ ಕೆಲವರ ಬೋಳು ತಲೆ ! ಇದರಿಂದ ಧರಿಸುತ್ತಿದ್ದ ವಸ್ತ್ರಕ್ಕೆ ಮೆರುಗು ಬರುತ್ತಿರಲಿಲ್ಲ. ಆಗ ಧಿರಿಸಿಗೆ ತಕ್ಕ ಪೇಟ ಧರಿಸಬೇಕೆಂದು ದಿವಾನ್ ಪೂರ್ಣಯ್ಯ ಆದೇಶ ಹೊರಡಿಸಿದರು.


ಪೂರ್ಣಯ್ಯನವರು ಬದುಕಿರುವವರೆಗೂ ಮರಾಠ ಮಾದರಿಯ ಪೇಟ ಬಳಕೆಯಾಗುತ್ತಿತ್ತು. ಅವರ ನಿಧನಾನಂತರ ಅಂದರೆ ೧೮೨೦ರ ನಂತರ ಪೇಟದ ಮಾದರಿಯನ್ನು ಬದಲಿಸಿ ಅದನ್ನು ಮೈಸೂರು ಪೇಟ ಎಂದು ಹೆಸರಿಸಲಾಯಿತು.
ರೇಷ್ಮೇ ಬಟ್ಟೆಯನ್ನು ಬಳಸಿ ತಯಾರಿಸಿದ ಹಾಗೂ ೩ ಇಂಚು ಜರತಾರಿ ಅಂಚುಳ್ಳ ಪೇಟವನ್ನು ಅಧಿಕಾರಿಗಳು ಹಾಗೂ ರಾಜಪರಿವಾರದವರು ಮತ್ತು ಗಣ್ಯರು ಬಳಸಬೇಕೆಂದು ಕಡ್ಡಾಯಗೊಳಿಸಲಾಯಿತು. ನಂತರದ ದಿನಗಳಲ್ಲಿ ದರ್ಬಾರ್ ಹಾಲ್‌ನಲ್ಲಿ ನಡೆಯುವ ಸಮಾರಂಭ, ದಸರಾ ಹಬ್ಬ ಮುಂತಾದ ದಿನಗಳಲ್ಲಿ ಅರಮನೆಗೆ ಬೇಟಿ ನೀಡುವ ಎಲ್ಲರೂ ಮೈಸೂರು ಪೇಟದೊಂದಿಗೆ ಠಾಕು ಠೀಕಾಗಿ ಅರಮನೆಗೆ ಬರತೊಡಗಿದರು.

ಮುಂದೆ ಅರಸೊತ್ತಿಗೆ ಅಳಿದರೂ ಪೇಟ ಉಳಿಯಿತು. ಜನಸಾಮಾನ್ಯರೂ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಪೇಟ ಬಳಸಲಾರಂಭಿಸಿದರು. ಈಗ ಬಟ್ಟೆಯಲ್ಲಿ ನೂರಿನ್ನೂರು ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ಪೇಟವೂ ‘ಮೈಸೂರು ಪೇಟ’ ಎಂದು ಕರೆಸಿಕೊಳ್ಳುತ್ತಿದೆ. ಮೈಸೂರಿನ ಇತಿಹಾಸದ ಭಾಗವಾಗಿರುವ ಮೈಸೂರು ಪೇಟದ ಘನತೆಯನ್ನು ಕಾಪಾಡುವ ಜವಾಬ್ದಾರಿ ಮೈಸೂರಿಗರ ಮೇಲಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ