Mysore
31
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಯೋಗಾಚಾರ್ಯರ ನೆಲೆ ಮೈಸೂರು

ಡಾ. ಕೆ. ರಾಘವೇಂದ್ರ ಆರ್. ಪೈ

ಯೋಗ ಭಾರತದ ಶ್ರೇಷ್ಠ ಪರಂಪರೆಯ ಭಾಗ. ಸುಮಾರು ೨೫೦ ವರ್ಷಗಳಷ್ಟು ಹಿಂದೆಯೇ ಮೈಸೂರು ಸಾಹಿತ್ಯ, ಕಲೆ, ಸಂಗೀತ, ಯೋಗ, ಕ್ರೀಡೆ ಇತ್ಯಾದಿಗಳ ಬಗ್ಗೆ ಸಮಗ್ರ ಹಾಗೂ ಸಮೃದ್ಧ ಮಾಹಿತಿಯನ್ನು ನೀಡಬಲ್ಲ ಕೇಂದ್ರವಾಗಿತ್ತು. ಯೋಗ ಪರಂಪರೆಗೆ ಕೊಡುಗೆ ನೀಡಿರುವ ಮಹನೀಯರಲ್ಲಿ ಮೈಸೂರು ರಾಜಮನೆತನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಣಿಕೆ ಮಹತ್ವದ್ದು. ಅವರ ‘ ಶ್ರೀತತ್ತ್ವನಿಧಿ’ ಕೃತಿಯಲ್ಲಿ ಪ್ರಾಚೀನ ಸಾಹಿತ್ಯ, ಕಲೆ, ಯೋಗ ಹಾಗೂ ಇತರ ವಿಷಯಗಳನ್ನೊಳಗೊಂಡ ಸಮಗ್ರ ಮಾಹಿತಿಯನ್ನು ನೀಡಲಾಗಿತ್ತು. ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಗ್ರಂಥವನ್ನು ವ್ಯವಸ್ಥಿತವಾಗಿ ಒಂದು ಗೂಡಿಸಿದರು.

ಈ ಕೃತಿಯಲ್ಲಿ ೧೨೨ ಆಸನಗಳನ್ನು ಸಚಿತ್ರವಾಗಿ ವಿವರಿಸಿ ನೀಡಲಾಗಿದೆ. ಈ ಹಸ್ತಪ್ರತಿಯ ಆಧಾರದ ಮೇರೆಗೆ ತಿಳಿದು ಬರುವುದೆಂದರೆ ಆ ಕಾಲದಲ್ಲಿ ಯೋಗ ಚಟುವಟಿಕೆ ವಿಫುಲವಾಗಿ ನಡೆಯುತ್ತಿತ್ತು. ಗ್ರಂಥಾಧಾರ ಪ್ರಕಾರ ಈ ಪದ್ಧತಿ ಮೈಸೂರಲ್ಲಿ ಕನಿಷ್ಠ ೧೦೦ ರಿಂದ ೧೫೦ ವರ್ಷಗಳಷ್ಟು ಹಿಂದಿನದು ಎಂದು ತಿಳಿದು ಬರುತ್ತದೆ.
೧೯೩೦ರಿಂದ ೧೯೪೦ರ ತನಕ ಮೈಸೂರು ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಾಯೋಜಕತ್ವದಲ್ಲಿ ಕೃಷ್ಣಮಾಚಾರ್ಯರ ಮಾರ್ಗದರ್ಶನದೊಂದಿಗೆ ಯೋಗಶಾಲೆ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಬಿ.ಕೆ.ಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸರು ಅವರು ವಿದ್ಯಾರ್ಥಿಯಾಗಿದ್ದರು. ಭಾರತದ ಉದ್ದಗಲಕ್ಕೂ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಲು ಮಹಾರಾಜರು ನೆರವಿಗೆ ಬಂದರು. ಇದರ ಪರಿಣಾಮವೇ ಯೋಗವು ಪುನರುಜ್ಜೀವನಗೊಂಡು ಜನಪ್ರಿಯವಾಯಿತು. ಯೋಗದ ಆರಂಭದ ಬೆಳವಣಿಗೆಗೆ ಮುಖ್ಯವಾಗಿ ಅಯ್ಯಂಗಾರ್ ಮತ್ತು ಜೋಯಿಷರಿಗೆ ಧಾರಾಳ ನೆರವಿನ ಕೈಯನ್ನು ನೀಡಿದವರು ಮಹಾರಾಜರು.
ಕೃಷ್ಣಮಾಚಾರ್ಯರು ಬಳಸಿದ ಯೋಗ ಕಾರ್ಯವಿಧಾನಗಳಿಗೆ ‘ಶ್ರೀತತ್ವನಿಧಿ’ಯು ಒಂದು ಮೂಲಾಧಾರ ವಾಗಿ ಕಾಣುತ್ತದೆ. ಬಳಿಕ ಆ ದಾರಿಯನ್ನೇ ಅಯ್ಯಂಗಾರ್ ಮತ್ತು ಜೋಯಿಸರು ಅನುಸರಿಸಿದರು. ಕೃಷ್ಣಮೂರ್ತಿ ವಿರಚಿತ ಯೋಗಗ್ರಂಥಕ್ಕೆ ಈ ಹಸ್ತಪ್ರತಿಯೋ ಆಕರ ಗ್ರಂಥವಾಗಿ ರಾಜರ ನೆರವಿನಿಂದ ‘ಯೋಗ ಮಕರಂದ’ ಹೆಸರಲ್ಲಿ ೧೯೩೦ ರಲ್ಲಿ ಯೋಗ ಗ್ರಂಥವಾಗಿ ಬೆಳಕಿಗೆ ಬಂದಿತು.
ಇಂದು ಮೈಸೂರನ್ನು ಯೋಗ ನಗರಿಯಾಗಿ ವಿಶ್ವವೇ ಗುರುತಿಸಲು ಕಾರಣಕರ್ತರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಹಾಗೂ ಅವರಿಂದ ರಾಜಾಶ್ರಯ ಪಡೆದ ಯೋಗ ಆಚಾರ್ಯರಾದ ಟಿ ಕೃಷ್ಣಮಾಚಾರ್ ಮತ್ತು ಅವರ ಶಿಷ್ಯರಾದ ಬಿ.ಕೆ.ಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸ್, ದೇಶಿಕಾಚಾರ್, ಇಂದ್ರಾದೇವಿ ಮುಂತಾದವರು ಯೋಗಾಭಿಮಾನವನ್ನು, ಯೋಗದರ್ಶನವನ್ನು ಮೆರೆದಿರುವರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ