-ರತಿರಾವ್, ಸಮತಾ ವೇದಿಕೆ, ಮೈಸೂರು.
‘ಆಂದೋಲನ’ ದಿನಪತ್ರಿಕೆ ಸಮಾಜಮುಖಿ ಹೋರಾಟಗಳಿಗೆ ವೇದಿಕೆಯಿದ್ದಂತೆ, ಇಂದಿಗೂ ಅದು ತನ್ನ ಸತ್ವವನ್ನು ಕಳೆದುಕೊಂಡಿಲ್ಲ. ಹಿಂದಿನಂತೆೆಯೇ ನಮ್ಮ ಚಿಂತನೆಗಳಿಗೆ ಪೂರಕವಾಗಿಯೇ ನಡೆಯುತ್ತಿದೆ.
ಪತ್ರಿಕೆಯು ನಮ್ಮ ಸಮತಾ ವೇದಿಕೆಯಿಂದ ನಿರಂತವಾಗಿ ನಡೆಯುತ್ತಿದ್ದ ಹೋರಾಟಗಳ ವರದಿಯನ್ನು ದಾಖಲು ಮಾಡುತ್ತಿತ್ತು. ಈ ಹಿಂದೆ ಹೆಣ್ಣುಮಕ್ಕಳಿಗೆ ಕೊಂಗಳ್ಳಿ ಬೆಟ್ಟಕ್ಕೆ ಪ್ರವೇಶ ಇರುತ್ತಿರಲಿಲ್ಲ. ಈ ಸಂಪ್ರದಾಯ ತಪ್ಪು ಎಂದು ವಿರೋಧಿಸಿ ವೈಜ್ಞಾನಿಕವಾಗಿ ತಿಳಿವಳಿಕೆ ಮೂಡಿಸಲು ಮುಂದಾದಾಗ ಕೊಂಗಳ್ಳಿ ಬೆಟ್ಟಕ್ಕೇ ಹೋಗಬೇಕಾಯಿತು. ಈ ವೇಳೆ ‘ಆಂದೋಲನ’ ಪತ್ರಿಕೆ ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರ ಪತ್ನಿ ನಿರ್ಮಲಾ ಅವರೂ ಭಾಗಿಯಾಗಿದ್ದರು.
ಸೆಕ್ಷನ್ ೪೯೮ ದಾಖಲಿಸಿದ್ದು ಇತಿಹಾಸ:
ಮೈಸೂರಿನಲ್ಲೇ ಇದ್ದ ಸ್ಥಳೀಯ ಪತ್ರಿಕೆೊಂಂದು ಅಂದು ವಿವಿಧ ಕ್ಷೇತ್ರದ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ವರ್ಣಿಸಿತ್ತು. ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣುಮಕ್ಕಳಲ್ಲಿ ಇದು ಅಪಾರ ಮುಜುಗರ ತರಿಸಿತ್ತು. ಅಲ್ಲದೆ, ಲಕ್ಮೀಪುರಂ ಸ್ಥಳವೊಂದರಲ್ಲಿ ಮಹಿಳೆಯರನ್ನು ಮಾರಾಟ ಮಾಡುವ ಅಡ್ಡವಾಗಿ ಮಾಡಿಕೊಳ್ಳಲಾಗಿತ್ತು. ಇದರ ವಿರುದ್ಧ ಸಮತಾ ವೇದಿಕೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾಯಿತು. ೧೯೭೮, ೧೯೮೦, ೧೯೮೧-೮೨ರಲ್ಲಿ ದೊಡ್ಡ ಮಟ್ಟದ ಹೋರಾಟವನ್ನೇ ನಡೆಸಲಾಯಿತು. ಇದರಿಂದ ಮೊದಲ ಬಾರಿಗೆ ಭಾರತೀಯ ಪತ್ರಿಕಾ ಮಂಡಳಿ ಆ ಸ್ಥಳೀಯ ಪತ್ರಿಕೆಗೆ ಶಿಕ್ಷೆ ವಿಧಿಸಿತ್ತು. ಅಲ್ಲದೆ, ಈ ಪತ್ರಿಕೆ ವಿರುದ್ಧ ಮೈಸೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಕ್ಷನ್ ೪೯೮ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಈ ಮೂಲಕ ನಮ್ಮ ಬೃಹತ್ ಹೋರಾಟ ಯಶಸ್ವಿಯೂ ಆಯಿತು. ಇದಕ್ಕೆಲ್ಲ ಬೆಂಬಲವಾಗಿ ನಿಂತದ್ದು, ‘ಆದೋಲನ’ ದಿನಪತ್ರಿಕೆ, ನಮ್ಮ ಪ್ರತ್ರಿಯೊಂದು ಹೋರಾಟವನ್ನು ಪತ್ರಿಕೆಯಲ್ಲಿ ದಾಖಲು ಮಾಡುತ್ತಾ, ಸಹಕಾರ ನೀಡುತ್ತಾ ಬಂದಿತ್ತು. ಅದನ್ನು ನಾವು ಎಂದಿಗೂ ಮರೆಯುವಂತಿಲ್ಲ.
ಅಲ್ಲದೆ, ರಾಜಶೇಖರ ಕೋಟಿ ಅವರು ಎನ್‌ಟಿಎಂ ಶಾಲೆ ಉಳಿಸುವಲ್ಲಿ ವಹಿಸಿದ ಶ್ರಮ, ಗೌರಿಹತ್ಯೆ, ೧೯೮೫ರಲ್ಲಿ ದೀಪಕ್ ಎಂಬವರ ಪ್ರಕರಣ ಇದೆಲ್ಲವನ್ನು ವರದಿ ಮಾಡುವಲ್ಲಿ ‘ಆಂದೋಲನ’ ಪತ್ರಿಕೆ ತಳೆದ ನಿಲುವು ಮೆಚ್ಚುವಂತಹದ್ದು, ಇಂದಿಗೂ ಪತ್ರಿಕೆ ತನ್ನ ಸತ್ವವನ್ನು ಉಳಿಸಿಕೊಂಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.