–ಎಚ್.ಜನಾರ್ದನ್ (ಜನ್ನಿ), ಮಾಜಿ ನಿರ್ದೇಶಕರು,
ರಂಗಾಯಣ, ಮೈಸೂರು
ಜನಪರ ಸಾಂಸ್ಕೃತಿಕ ಚಳವಳಿಯನ್ನು ಮೈಸೂರು ಭಾಗದಲ್ಲಿ ಕಟ್ಟಲು ‘ಆಂದೋಲನ’ ಆಧಾರಸ್ತಂಭವಾಗಿ ರೂಪುಗೊಂಡಿತ್ತು. ಆಗ ನಮಗೆ ಕೆಲಸ ಮಾಡುವ ಹುಮ್ಮಸ್ಸಿದ್ದರೂ ಆರ್ಥಿಕ ಶಕ್ತಿ ಇರಲಿಲ್ಲ. ಇಂಥ ಹೊತ್ತಿನಲ್ಲಿ ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಲು ಬೆನ್ನೆಲುಬಾಗಿ ‘ಆಂದೋಲನ’ ನಿಂತಿದ್ದು ಬಹಳ ಸಹಕಾರಿಯಾಯಿತು.
೧೯೭೦ರ ದಶಕ ಸಾಮಾಜಿಕ, ಆರ್ಥಿಕವಾಗಿ ಬಹಳ ಸೋತುಹೋಗಿದ್ದ ದಲಿತ, ರೈತ ಹಾಗೂ ಕಾರ್ಮಿಕ ಸಮುದಾಯಗಳ ಚಾರಿತ್ರಿಕ ಒತ್ತಾಸೆಯ ಮೇರೆಗೆ ಬಹಳ ದೊಡ್ಡ ಆಂದೋಲನ ಉದ್ದೀಪನಕ್ಕೆ ಬಂದಿದ್ದ ಕಾಲ. ದಲಿತ ಸಂಘರ್ಷ ಸಮಿತಿಯೂ ಪೂರ್ಣಾವಧಿಯ ಚಳವಳಿಯಲ್ಲಿತ್ತು. ಈ ಸಂದರ್ಭದಲ್ಲಿ ಧಾರವಾಡದಲ್ಲಿ ಉದಯವಾಗಿ ಮೈಸೂರಿನಲ್ಲಿ ನೆಲೆ ನಿಂತು ಎಲ್ಲ ಚಳವಳಿಗೆ ಆಧಾರವಾಗಿ, ಚಳವಳಿಯ ಮುಖವಾಣಿಯಾಗಿ ಕೆಲಸ ಮಾಡುತ್ತಿದ್ದುದು ಆಂದೋಲನ’ ದಿನಪತ್ರಿಕೆ.ದಸಂಸ ಒಂದು ಸ್ಥಿತ್ಯಂತರಕ್ಕೆ ಬಂದ ಮೇಲೆ ‘ಪಂಚಮ’ ಎಂಬ ಪತ್ರಿಕೆಯನ್ನು ತರಲಾಗುತ್ತಿತ್ತು. ಇಂದೂಧರ ಹೊನ್ನಾಪುರ ಸೇರಿದಂತೆ ಹಲವರು ಇದರಲ್ಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಎಲ್ಲೂ ಮುದ್ರಿಸಲಾಗುತ್ತಿರಲಿಲ್ಲವಾದ ಕಾರಣ ಮೈಸೂರಿನ ಸರಸ್ವತಿಪುರಂನ ಪ್ರಕಾಶನವೊಂದರಲ್ಲಿ ಅಚ್ಚುಮೊಳೆಗಳಿಂದ ಮುದ್ರಿಸಬೇಕಿತ್ತು. ಸಾಹಿತಿ ದೇವನೂರ ಮಹಾದೇವ ಅವರ ಸಲಹೆ ಮೇರೆಗೆ ಬೆಂಗಳೂರಿನಿಂದ ‘ಪಂಚಮ’ ಪತ್ರಿಕೆಗಾಗಿ ತರುತ್ತಿದ್ದ ಹಲವು ಸುದ್ದಿಗಳು ಆಂದೋಲನ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.
ಮುಖ್ಯವಾಗಿ ೧೯೮೭-೮೮ರಲ್ಲಿ ದೇವನೂರರ ‘ಕುಸುಮ ಬಾಲೆ’ ರಂಗರೂಪಕ್ಕಿಳಿಸಲು ಬಂದಾಗ ಹೆಗಲು ಕೊಟ್ಟಿದ್ದು ರಾಜಶೇಖರ ಕೋಟಿ. ಅಂದು ನೇರವಾಗಿ ಕಾಂದಬರಿಯನ್ನೇ ರಂಗಕ್ಕೆ ಅಳವಡಿಸಿದ್ದರಿಂದ ಪತ್ರಿಕೆಯಲ್ಲಿ ಉಚಿತ ಜಾಹೀರಾತು ನೀಡುವ ಜೊತೆಗೆ ಪ್ರಚಾರ ನೀಡುತ್ತಾ ಸಾಂಸ್ಕೃತಿಕ ಬೆನ್ನೆಲುಬಾಗಿ ‘ಆಂದೋಲನ’ ನಿಂತಿತ್ತು.
ಜನಪರ ಸಾಂಸ್ಕೃತಿಕ ಚಳವಳಿಯನ್ನು ಮೈಸೂರು ಭಾಗದಲ್ಲಿ ಕಟ್ಟಲು ‘ಆಂದೋಲನ’ ಆಧಾರಸ್ತಂಭವಾಗಿ ರೂಪುಗೊಂಡಿತ್ತು. ಆಗ ನಮಗೆ ಕೆಲಸ ಮಾಡುವ ಹುಮ್ಮಸ್ಸಿದ್ದರೂ ಆರ್ಥಿಕ ಶಕ್ತಿ ಇರಲಿಲ್ಲ. ಇಂಥ ಹೊತ್ತಿನಲ್ಲಿ ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಲು ಬೆನ್ನೆಲುಬಾಗಿ ‘ಆಂದೋಲನ’ ನಿಂತಿದ್ದು ಬಹಳ ಸಹಕಾರಿಯಾಯಿತು.
ಅಲ್ಲದೆ, ಮೊದಲ ಬಾರಿಗೆ ಜನಮನ ತಂಡದಿಂದ ಮೈಸೂರು-ಚಾಮರಾಜನಗರದ ಸೋಲಿಗರು, ಜೇನುಕುರುಬರು, ಕಾಡುಕುರುಬರು ಹಾಗೂ ಗೊರವರು ಬುಡಕಟ್ಟು ಸಮುದಾಯದ ಪ್ರತಿಭೆಗಳಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಬುಡಕಟ್ಟು ಸಮುದಾಯದ ೪೫ ಮಂದಿಯನ್ನು ಮೈಸೂರಿಗೆ ಕರೆತಂದು ರಂಗ ತರಬೇತಿ ನೀಡಲಾಗುತ್ತಿತ್ತು. ಆಗ ಕೋಟಿ ಅವರು, ‘ಎಷ್ಟೇ ಕಷ್ಟವಾದರೂ ಈ ಪ್ರಯತ್ನ ಬಿಡದಿರಿ, ನಾಟಕ ಕಲೆಯ ಮೂಲಕ ಬುಡಕಟ್ಟು ಜನರ ಬದುಕು, ಸಂಸ್ಕೃತಿಯನ್ನು ಸಮಾಜಕ್ಕೆ ತೋರಿಸೋಣ’ ಎಂದು ಸಲಹೆ ನೀಡುತ್ತಿದ್ದರು. ಈ ಸಹಕಾರವನ್ನು ನಾವು ಎಂದಿಗೂ ಮರೆಯುವಂತಿಲ್ಲ.
‘ಆಂದೋಲನ’ ದಿನಪತ್ರಿಕೆಯ ಉದ್ದೇಶವೇ ಸಾಮಾಜಿಕ ಚಳವಳಿಯಿಂದ ಸಮಾಜದಲ್ಲಿ ಬದಲಾವಣೆ ತರುವ ಮೂಲಕ ಪತ್ರಿಕೋದ್ಯಮವನ್ನು ನಿರ್ದಿಷ್ಟ ಹಾದಿಗೆ ಕೊಂಡೊಯ್ಯಬೇಕು ಎನ್ನುವುದಾಗಿತ್ತು. ಅದಕ್ಕೆ ರಾಜಶೇಖರಕೋಟಿ ಅವರು ತಾನು ಹಸಿವಿನಿಂದ ಬಳಲಿದರೂ ಪತ್ರಿಕೆ ಜನರ ಬಳಿಗೆ ಮುಟ್ಟಿಸಲು ತ್ಯಾಗ ಮಾಡಿದರು. ಆದ್ದರಿಂದಲೇ ಆಂದೋಲನ’ ಜನರ ಪತ್ರಿಕೆಯಾಗಿ, ಸಾಮಾನ್ಯರ ಪತ್ರಿಕೆಯಾಗಿ ಉಳಿದುಕೊಂಡಿದೆ.
‘ಆಂದೋಲನ’ವನ್ನು ಜನಾಂದೋಲನವಾಗಿ ಕೊಂಡೊಯ್ಯುವತ್ತ ದಿನವಿಡೀ ಚರ್ಚೆ ಮಾಡಲಾಗುತ್ತಿತ್ತು. ಅದರಲ್ಲೂ ಕೋಟಿ ಅವರು ಕನ್ನಡ ಜನಪರ ಚಳವಳಿಗಳಲ್ಲಿ ಭಾಗವಹಿಸುವಿಕೆ ಮೂಲಕ ಪತ್ರಿಕೆಗೆ ಮುನ್ನುಡಿಯಾದರು. ಪತ್ರಿಕೆಗೆ ಜನಪರ ರೂಪಕೊಟ್ಟರು. ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಯೂ ‘ಆಂದೋಲನ’ ಪತ್ರಿಕೆ ನನ್ನದು ಎನ್ನುವಂತೆ ಮಾಡಿದ್ದು ಪ್ರಮುಖ ಘಟನಾವಳಿ. ಈ ಉದಾಹರಣೆಯನ್ನು ಬೇರೆ ಪತ್ರಿಕೆಗೆ ಕೊಡಲು ಸಾಧ್ಯವಿಲ್ಲ!
(