Mysore
30
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ರಾಜರೂರಿನಲ್ಲಿ ಶ್ರೀಸಾಮಾನ್ಯರ ನೆನಪುಗಳು

                                                                     ಆರ್.ವೀರೇಂದ್ರ ಪ್ರಸಾದ್

ಪರಂಪರೆ ಮತ್ತು ಆಧುನಿಕತೆಯನ್ನು ಮೇಳೈಸಿ ಬೆಳೆದ ನಗರ ಮೈಸೂರು. ಒಡಲಾಳದಲ್ಲಿ ಶತಮಾನಗಳಷ್ಟು ಹಿಂದಿನ ಸಂಸ್ಕೃತಿ-ಪರಂಪರೆಗಳನ್ನು ಬೆಚ್ಚಗೆ ಕಾಪಿಟ್ಟುಕೊಂಡೇ ನವೋದಯಕ್ಕೆ ತೆರೆದುಕೊಂಡ ನಗರದಲ್ಲಿ ಪ್ರಮುಖ ರಸ್ತೆ, ವೃತ್ತ, ಕಟ್ಟಡಗಳಿಗೆ ರಾಜ ಮಹಾರಾಜರದೇ ಹೆಸರು. ಈ ನಡುವೆ ಅಸಾಮಾನ್ಯ ಕಾರಣಗಳಿಗಾಗಿ ಶ್ರೀಸಾಮಾನ್ಯರ ಹೆಸರು ಪಡೆದ ಸ್ಥಳ, ರಸ್ತೆ, ವೃತ್ತ, ಕಟ್ಟಡಗಳು ಇಲ್ಲಿವೆ.

ನಂಜು ಮಳಿಗೆ ಸರ್ಕಲ್
ಅದು ಸ್ವಾತಂತ್ರ್ಯಕ್ಕೂ ಮುಂಚಿನ ಕಾಲ. ಮೈಸೂರಲ್ಲಿ ಇನ್ನೂ ರಾಜಪ್ರಭುತ್ವವಿತ್ತು. ಆಗ್ರಹಾರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಅಶೋಕಪುರಂ ಸೇರಿದಂತೆ ಅಕ್ಕ-ಪಕ್ಕದ ಮೊಹಲ್ಲಾಗಳು ಅದಾಗಲೇ ಬೆಳೆದು ನಿಂತಿದ್ದವು. ಈ ಮೊಹಲ್ಲಾಗಳ ಮಧ್ಯದಲ್ಲಿ ಮಳಿಗೆಗಳು ತಲೆ ಎತ್ತಲು ಪ್ರಾರಂಭವಾದವು. ಅಗ್ರಹಾರದಿಂದ ಎಚ್.ಡಿ.ಕೋಟೆಗೆ ಹೋಗುವ ಹಾಗೂ ಇತ್ತ ಚಾಮುಂಡಿಪುರಂಗೆ ಹೋಗುವ ಹಾದಿಯ ಕೂಡು ಜಾಗದಲ್ಲಿ ಬಾದಾಮಿ ನಂಜಪ್ಪ ಎನ್ನುವವರು ಮಳಿಗೆ ಸ್ಥಾಪನೆ ಮಾಡಿದ್ದರು. ಬಾಯಿಂದ ಬಾಯಿಗೆ ಹರಡುತ್ತಾ ಅದು ನಂಜು ಮಳಿಗೆಯಾಯಿತು. ಮುಂದೆ ಇದೇ ನಂಜು ಮಳಿಗೆ ವೃತ್ತವಾಯಿತು. ಸರ್ಕಾರಿ ದಾಖಲೆಗಳಲ್ಲಿ ಈಗ ಕನಕ ವೃತ್ತವಾಗಿ ನಾಮಕರಣಗೊಂಡಿದ್ದರೂ ಜನರ ಬಾಯಲ್ಲಿ ನಂಜುಮಳಿಗೆಯಾಗಿಯೇ ಉಳಿದುಕೊಂಡಿದೆ.

ಗಾಡಿ ಚೌಕ..
ಸಿದ್ದಪ್ಪ ಚೌಕದಿಂದ ಚಾಮುಂಡಿಪುರಂಗೆ ಹೋಗುವ ರಸ್ತೆಗೆ ಅಗ್ರಹಾರದಿಂದ ಹಾದು ಬರುವ ರಸ್ತೆಯು ಸಂಧಿಸುವ ಜಾಗವೇ ಗಾಡಿಚೌಕ. ಆಗಿನ ಕಾಲಕ್ಕೆ ಊರಿನ ಹೃದಯಭಾಗವೇ ಆಗಿದ್ದ ಈ ಜಾಗದಲ್ಲಿ ಎಚ್.ಡಿ.ಕೋಟೆ, ನಂಜನಗೂಡು ಕಡೆಯ ರೈತರು ದವಸ ಧಾನ್ಯಗಳನ್ನು ಗಾಡಿಗಳಲ್ಲಿ ತಂದು ಇಲ್ಲಿ ಸೇರುತ್ತಿದ್ದರು. ಜತೆಗೆ ಸೌದೆ ವ್ಯಾಪಾರವೂ ಇತ್ತು. ಇವುಗಳನ್ನು ಖರೀದಿಸಿದ ವರ್ತಕರು ಬೇರೆಡೆಗೆ ಸಾಗಿಸಲು ಸ್ಥಳೀಯ ಗಾಡಿಗಳನ್ನು ಬಳಸುತ್ತಿದ್ದರು. ಎತ್ತುಗಳಿಗೆ ಲಾಳ ಹಾಕುವ ಕಾರ‌್ಯವೂ ಇಲ್ಲಿ ನಡೆಯುತ್ತಿತ್ತು. ಮಹಾನಗರ ಪಾಲಿಕೆ ಈ ಸರ್ಕಲ್‌ಗೆ ಶ್ರೀಕಂಠಶರ್ಮಾ ವೃತ್ತ ಎಂದು ಮರು ನಾಮಕರಣ ಮಾಡಿದ್ದರೂ ಹಿರಿ ತಲೆಗಳ ಪಾಲಿಗೆ ಈಗಲೂ ಇದು ಗಾಡಿ ಚೌಕ.

ಶಿವರಾಮ್ ಪೇಟೆ ರಸ್ತೆ
ಶತಮಾನದ ಇತಿಹಾಸವಿರುವ ಶಿವರಾಮಪೇಟೆ ರಸ್ತೆಯಲ್ಲಿ ಸ್ವಾತಂತ್ರ್ಯ ಹೋರಾಟದ ಸಭೆಗಳು, ಮೆರವಣಿಗೆಗಳು ಪ್ರಮುಖವಾಗಿ ನಡೆಯುತ್ತಿತ್ತು. ದೇವರಾಜ ಅರಸ್ ರಸ್ತೆಯು ಆಗ ನಿರ್ಮಾಣವಾಗಿರಲಿಲ್ಲ.
ನಲ್ಲಪ್ಪ ಎಂಬ ಪೊಲೀಸ್ ಕಾನ್ಸ್‌ಟೇಬಲ್ ಹೆಸರಿನ ಠಾಣೆಯೂ ಶಿವರಾಂ ಪೇಟೆ ರಸ್ತೆಯಲ್ಲಿಯೇ ಇದೆ. ಇದರ ಹಿಂಬದಿಯಲ್ಲೇ ಇರುವ ಕೊತ್ವಾಲ್ ರಾಮಯ್ಯ ಬೀದಿಯಲ್ಲಿ ಅಂದಿನ ಸಂಸ್ಕೃತ ವಿದ್ವಾಂಸರು, ಗಣ್ಯ ವರ್ತಕರು ನೆಲೆಸಿದ್ದರು. ಇದಕ್ಕೆ ಹೊಂದಿಕೊಂಡಿರುವುದು ಸೀಬಯ್ಯ ರಸ್ತೆ. ಇವರು ಚುನಾಯಿತ ಪ್ರತಿನಿಧಿಯಾಗಿ ನಗರದ ಅಭಿವೃದ್ಧಿಗೆ ಶ್ರಮಿಸಿದ್ದವರು. ಮತ್ತೊಂದು ಸಮಾಂತರ ರಸ್ತೆ ಗಾಡಿ ಲಕ್ಕಣ್ಣ ಬೀದಿಗೂ ಇಷ್ಟೇ ಇತಿಹಾಸವಿದೆ.

ಸಾವಡೇ ರಸ್ತೆ
ಮೈಸೂರಿನ ಮಂಡಿ ಮೊಹಲ್ಲಾದ ಮಿಷನ್ ಆಸ್ಪತ್ರೆ ಬಳಿಯ ರಸ್ತೆಯೇ ಸಾವಡೇ ರಸ್ತೆ. ಆದರೆ ಇದು ಜನರ ಬಾಯಲ್ಲಿ ಸಾಡೇ ರಸ್ತೆಯಾಗಿ ಉಳಿದು ಬಿಟ್ಟಿದೆ. ಫಾದರ್ ಜಾರ್ಜ್ ವಿಲಿಯಂ ಸಾವಡೇ ಎನ್ನುವವರು ಪುರೋಭಿವೃದ್ಧಿಗಾಗಿ ಶ್ರಮಿಸಿದವರು. ಈ ರಸ್ತೆಯ ಬಾಜುವಿನಲ್ಲೇ ಬೆಂಕಿ ನವಾಬ ರಸ್ತೆ ಇದೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಸೈನಿಕನಾಗಿದ್ದ ಈತ ಸ್ವಾಮಿ ನಿಷ್ಠೆಗೆ ಹೆಸರಾಗಿದ್ದ ಕಾರಣ ಈ ಗೌರವ ದೊರೆತಿದೆ.

ಎಸ್.ಎನ್.ಪಂಡಿತ್ ಗಲ್ಲಿ:
ಖಿಲ್ಲೆ ಮೊಹಲ್ಲಾದ ಶಂಕರ ಮಠದ ಸಮೀಪದ ಒಂದು ಸಣ್ಣ ಹಾದಿಗೆ ಎಸ್.ಎನ್ ಪಂಡಿತ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಆಯುರ್ವೇದ ಪಂಡಿತರಾಗಿದ್ದು, ಜನರ ಕಾಯಿಲೆಗಳನ್ನು ವಾಸಿ ಮಾಡುತ್ತಿದ್ದ ಸುಬ್ಬ ನರಸಿಂಹ ಪಂಡಿತರು, ತಮ್ಮದೇ ಆದ ಚಿಕ್ಸಿತಾ ವಿಧಾನಗಳನ್ನು ಹೊಂದಿದ್ದರು.
ಮೈಸೂರು ನಗರವೂ ಮೆಟ್ರೋ ನಗರವಾಗಿ ಬೆಳವಣಿಗೆ ಹೊಂದುತ್ತಿದ್ದರೂ ಕುಂಬಾರಗೇರಿ, ಗೊಲ್ಲಗೇರಿ, ಮೇದರಕೇರಿ, ಕುರುಬಗೇರಿ, ಗರಡಿಗೇರಿ ಮತ್ತಿತರ ರಸ್ತೆ-ಗಲ್ಲಿಗಳು ಹಾಗೆಯೇ ಉಳಿದುಕೊಂಡಿವೆ.

ತೊಗರಿ ಬೀದಿ
ಸಂತೇಪೇಟೆಯ ಬಳಿ ಇರುವ ಬಂಡೀಕೇರಿಯು ಎತ್ತಿನ ಗಾಡಿಗಳನ್ನು ನಿಲ್ಲಿಸುವ ಜಾಗವಾಗಿತ್ತು. ಇಲ್ಲಿಂದ ಸಾಮಾನು-ಸರಂಜಾಮುಗಳನ್ನು ಸಂತೇಪೇಟೆಗೆ ಸಾಗಿಸಲಾಗುತ್ತಿತ್ತು. ಈ ರಸ್ತೆಯನ್ನೇ ತೊಗರಿ ಬೀದಿ ಎಂದು ಕರೆಯಲಾಗುತ್ತಿತ್ತು. ಸಗಟು ವ್ಯಾಪಾರಿಗಳು ರಸ್ತೆಯ ಬದಿಯಲ್ಲಿ ಉದ್ದಕ್ಕೆ ತೊಗರಿಯನ್ನು ಒಣಗಿಸಲು ಹಾಕುತ್ತಿದ್ದರು. ಸ್ವಲ್ಪ ಕಾಲಾನಂತರ ಇಲ್ಲಿ ಸವಿತಾ ಸಮಾಜದವರ ಸೆಲೂನ್‌ಗಳು ಹೆಚ್ಚಿದ್ದ ಕಾರಣ ಕ್ಷತ್ರೀಯ ಬೀದಿ ಎನ್ನಲು ಶುರು ಮಾಡಿದರು.

ಸಣ್ಣ-ಪುಟ್ಟ ವಾದ್ಯಗಳನ್ನು ಮಾಡುತ್ತಿದ್ದ ಜನರು ವಾಸಮಾಡುವ ಬೀದಿಯನ್ನು ಬುಡುಬುಡಿಕೆ ಕೇರಿ ಎಂದು ಕರೆಯಲಾಗುತ್ತಿದೆ. ಕುವೆಂಪು ನಗರದ ರಸ್ತೆಗಳಿಗೆ ರಾಷ್ಟ್ರಕವಿ ರಚಿಸಿರುವ ಕಾವ್ಯಗಳ ಶೀರ್ಷಿಕೆಗಳನ್ನೇ ಹೆಸರನ್ನಾಗಿ ಇಡಲಾಗಿದೆ. ಸಿದ್ಧಾರ್ಥ ಲೇಔಟಿನಲ್ಲಿ ಬುದ್ಧನ ತತ್ವಗಳನ್ನೇ ನಾಮಕರಣ ಮಾಡಲಾಗಿದೆ. ಕುವೆಂಪು ಅವರ ಮೇಲೆ ಪ್ರಭಾವ ಬೀರಿದ್ದ ರಾಮಕೃಷ್ಣ ಪರಮ ಹಂಸ, ವಿವೇಕಾನಂದ, ಶಾರದಾದೇವಿ, ನಿವೇದಿತಾ ನಗರದ ಪ್ರಮುಖ ಇವೆಲ್ಲವೂ ಬಡಾವಣೆಗಳ ಹೆಸರಾಗಿವೆ.

ರಾಮಸ್ವಾಮಿ ಸರ್ಕಲ್

ಭಾರತಕ್ಕೆ ೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಸಿಕ್ಕಿದ ಕೂಡಲೇ ಸಂಸ್ಥಾನವಾಗಿದ್ದ ಮೈಸೂರಿನಲ್ಲಿ ಪ್ರಜಾತಂತ್ರ ರಾಜ್ಯ ಸ್ಥಾಪನೆಗಾಗಿ ‘ಮೈಸೂರು ಚಲೋ’ ಚಳವಳಿ ನಡೆಯಿತು. ೧೯೪೭ರ ಸೆ.೧೭ರಂದು ಈಗಿನ ರಾಮಸ್ವಾಮಿ ವೃತ್ತದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಚಳವಳಿ ಆರಂಭಿಸಿದ್ದರು. ಅವರನ್ನು ಚದುರಿಸಲು ಅಂದಿನ ಜಿಲ್ಲಾಧಿಕಾರಿಯವರು ಲಾಠಿಚಾರ್ಚ್‌ಗೆ ಆದೇಶ ನೀಡಿದರು. ಇದಕ್ಕೂ ಜಗ್ಗದಿದ್ದಾಗ ಗೋಲಿಬಾರ್‌ಗೆ ಆಜ್ಞೆ ನೀಡಿದರು. ಪೊಲೀಸರು ಬಾಲಕರ ಮೇಲೆ ಗುಂಡು ಹಾರಿಸಲು ಒಪ್ಪದಿದ್ದಾಗ ಜಿಲ್ಲಾಧಿಕಾರಿ ತಾವೇ ಸ್ವತಃ ಬಂದೂಕಿನಿಂದ ಗುಂಡು ಹಾರಿಸಿದರು. ಇದರಿಂದ ಹಾರ್ಡ್ವಿಕ್ ಶಾಲೆಯ ವಿದ್ಯಾರ್ಥಿ ರಾಮಸ್ವಾಮಿ, ಕಡಕೊಳದಿಂದ ಚಾಪೆ ಮಾರಲು ಬಂದಿದ್ದ ತೋರನಾಯ್ಕ ಹಾಗೂ ಗುಂಪಿನಲ್ಲಿ ನಿಂತಿದ್ದ ರಂಗ ಎಂಬುವವರು ಸ್ಥಳದಲ್ಲೇ ಮೃತಪಟ್ಟರು. ಈ ಹಿನ್ನೆಲೆಯಲ್ಲಿ ಆ ಜಾಗಕ್ಕೆ ರಾಮಸ್ವಾಮಿ ವೃತ್ತ ಎಂದು ನಾಮಕರಣ ಮಾಡಿರುವುದು ಮೈಸೂರು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಪೈಲ್ವಾನ್ ಮೂಗಪ್ಪ ಸರ್ಕಲ್
ಕುಸ್ತಿಗೆ ಹೆಸರಾದ ಮೈಸೂರಿನಲ್ಲಿ ಪೈಲ್ವಾನ್ ಮೂಗಪ್ಪ ಅವರ ಹೆಸರು ಒಂದು ಕೈ ಮೇಲೆಯೇ ಇದೆ. ಹತ್ತು-ಹಲವು ಕುಸ್ತಿಗಳಲ್ಲಿ ಎದುರಾಳಿಗಳನ್ನು ಚಿತ್ ಮಾಡಿ ಹೆಸರುವಾಸಿಯಾಗಿದ್ದ ಮೂಗಪ್ಪ ನವರು ದಸರಾ ವಸ್ತು ಪ್ರದರ್ಶನ ಮೈದಾನದ ಸಮೀಪವಿರುವ ಸಾಹುಕಾರ್ ಚನ್ನಯ್ಯ ಕುಸ್ತಿ ಅಖಾಡವನ್ನೇ ಕಾಯಕ ತಾಣವನ್ನಾಗಿ ಮಾಡಿಕೊಂಡಿದ್ದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಪೌರ ಸನ್ಮಾನ ಮಾಡಿ ಅರಮನೆ ಕೋಟೆ ಮಾರಮ್ಮ ದೇವಾಲಯದ ಬಳಿ ಇರುವ ವೃತ್ತಕ್ಕೆ ಮೂಗಪ್ಪ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಬೇವೂರ ಸದನ
ಭಾರತದ ಪೋಸ್ಟ್ ಮಾಸ್ಟರ್ ಜನರಲ್ ಆಗಿದ್ದ ವೆಂಕಟೇಶ್ ಬೇವೂರ ಅವರು ಮೈಸೂರು ರಾಜ್ಯದ ಅಂಚೆ ಸೇವೆಯ ಬೆಳವಣಿಗೆಗೆ ಶ್ರಮಿಸಿದ್ದವರು. ಈ ಹಿನ್ನೆಲೆಯಲ್ಲಿ ಈಗಿನ ನೆಹರೂ ಸರ್ಕಲ್‌ನಲ್ಲಿ ಇರುವ ಮೈಸೂರು ವಲಯ ಅಂಚೆ ಕಚೇರಿಯು ಕಾರ್ಯನಿರ್ವಹಿಸುತ್ತಿರುವ ಕಟ್ಟಡಕ್ಕೆ ಬೇವೂರು ಸದನ (ಬೇವೂರು ಬಿಲ್ಡಿಂಗ್) ಎಂದು ರಾಜರು ನಾಮಕರಣ ಮಾಡಿ ಗೌರವ ಸಲ್ಲಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ