ʼಆಂದೋಲನ ೫೦ ಸಾರ್ಥಕ ಪಯಣ’ ಸಂತೋಷದ ಸಂಗತಿ. ರಾಜಶೇಖರ ಕೋಟಿ ಅವರು ಸದಾ ಧರಿಸುತ್ತಿದ್ದ ಕೆಂಪು ಟಿ-ಶರ್ಟ್ ಅನ್ನು ಆಹ್ವಾನ ಪತ್ರಿಕೆಯೇ ನೆನಪಿಗೆ ತರುತ್ತಿದೆ. ‘ಆಂದೋಲನ’ ದಿನಪತ್ರಿಕೆ ಮೈಸೂರಿನ ಸಾಕ್ಷಿಪ್ರಜ್ಞೆಯಂತಿರುವ ಒಂದು ಪ್ರಮುಖ ಸುದ್ದಿ ಮಾಧ್ಯಮ. ಅದರ ವಿಶ್ವಾಸಾರ್ಹತೆಯೇ ಅದರ ಜನಪ್ರಿಯತೆಯ ಮಾನದಂಡ, ಹಿಂದಿನ ತಲೆಮಾರಿನ ಪತ್ರಕರ್ತರ ಮೌಲ್ಯಗಳ ಸಾಕಾರ ರೂಪದಂತಿದ್ದ ರಾಜಶೇಖರ ಕೋಟಿ ಅವರು ಪತ್ರಿಕೆಯನ್ನು ಈ ಹಂತಕ್ಕೆ ತರುವಲ್ಲಿ ಪಟ್ಟ ಸಾಹಸ ಅವರ್ಣನೀಯ. ಬಹುತೇಕ ಬರಿಗೈಯಲ್ಲಿ ಪ್ರಾರಂಭವಾದ ಈ ಪತ್ರಿಕಾ ಸಾಹಸ ಸಮಾಜವಾದಿ ಸ್ನೇಹಿತರ ಕೈಯಾಸರೆಯಿಂದ ಬೆಳೆದು ಅಪಾರ ಜನವಿಶ್ವಾಸವನ್ನು ಗಳಿಸಿರುವುದು ಸರ್ವವಿಧಿತ. ದೀನ ದಲಿತರು, ಬಡಬಗ್ಗರು, ನೊಂದವರ ಧ್ವನಿಯಾದ ಈ ಪತ್ರಿಕೆಯು ಇಂದಿನವರೆಗೂ ತಾನು ನಂಬಿದ ಮೌಲ್ಯಗಳಿಂದ ಹಿಂದೆ ಸರಿದಿಲ್ಲ. ಪತ್ರಿಕೆಯ ಸ್ಥಾಪಕ-ಸಂಪಾದಕರಾದ ರಾಜಶೇಖರ ಕೋಟಿಯವರ ಸರಳತೆ, ಸಾಮಾಜಿಕ ಬದ್ಧತೆ, ವೈಯಕ್ತಿಕ ಪರಿಶುದ್ಧತೆ ಇವುಗಳು ನಿಜಕ್ಕೂ ‘ಆಂದೋಲನ’ ಪತ್ರಿಕೆಯ ರಕ್ಷಾ ಕವಚಗಳು, ನೇರ ನಡೆ-ನುಡಿ, ಸ್ನೇಹಜೀವಿಗಳಾಗಿದ್ದ ಅವರು ತಾತ್ವಿಕ ಭಿನ್ನಾಭಿಪ್ರಾಯಗಳು ವ್ಯಕ್ತಿಗತ ಸ್ನೇಹಕ್ಕೆ ಎರವಾಗದಂತೆ ಜಾಗ್ರತೆ ವಹಿಸುತ್ತಿದ್ದರು. ನಿರ್ಮಲಾ ಕೋಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಿ, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಾಹಿತಿಗಳು, ಕಲಾವಿದರು, ಚಿಂತಕರು – ಹೀಗೆ ಎಲ್ಲರೂ ಒಟ್ಟಿಗೇ ಭಾಗವಹಿಸಿರುವುದು ಕಾರ್ಯಕ್ರಮದ ಮತ್ತೊಂದು ವಿಶೇಷವೇ ಆಗಿದೆ.
ಯಾವುದೇ ಸಂಸ್ಥೆಯ ವಿಷಯದಲ್ಲಿ ೫೦ ವರ್ಷಗಳೆಂಬುದು ಅತ್ಯಂತ ಸಾರ್ಥಕತೆಯ ಕ್ಷಣ, ನಡೆದು ಬಂದ ದಾರಿಯ ಅವಲೋಕನ ಮಾಡಿಕೊಳ್ಳುತ್ತಲೇ ಹೊಸ ಯೋಜನೆಗಳ ನೀಲನಕ್ಷೆಯನ್ನು ರೂಪಿಸುವ ಕ್ಷಣ. ಜನಸಮುದಾಯದ ಒಳಿತಿಗಾಗಿ ಮರುಸಮರ್ಪಣೆ ಮಾಡಿಕೊಳ್ಳುವ ಕ್ಷಣ, ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಸಾಮುದಾಯಿಕ ಸಾಮರಸ್ಯವನ್ನು ಸಂರಕ್ಷಿಸಬೇಕಾದ ಕ್ಷಣ.ಪತ್ರಿಕೆ ಇದೆ ರೀತಿ ಜನರ ಪ್ರೀತಿಯ ಪತ್ರಿಕೆಯಾಗಿ ಪ್ರಕಟವಾಗುತ್ತಿರಲೆಂದು ಆಶಿಸುತ್ತೇವೆ. (ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂದೇಶ )