Light
Dark

ವನ್ಯಲೋಕಕ್ಕೆ ವರದಾನವಾದ ಕಬಿನಿ

 ಸ್ವಾತಂತ್ರ್ಯಪೂರ್ವದಲ್ಲಿ ಕಬಿನಿಗಿಂತ ಕಾಕನಕೋಟೆಯ ಹೆಸರೇ ಹೆಚ್ಚು ಪ್ರಚಲಿತದಲ್ಲಿತ್ತು. ಮೈಸೂರಿನ ಅರಸರಿಗೆ ಮತ್ತು ಬ್ರಿಟಿಷರಿಗೆ ಇದು ಶಿಕಾರಿ ಕೇಂದ್ರವಾಗಿತ್ತು. ಕಬಿನಿ ಜಲಾಶಯ ಈ ಪ್ರದೇಶದ ಮಾತ್ರವಲ್ಲ, ನಾಡಿನ ವನ್ಯಲೋಕದ ದಿಕ್ಕು ದೆಶೆಗಳನ್ನು ಬದಲಿಸಿತು.

 ಐದು ದಶಕಗಳ ಹಿಂದಿನ ಮಾತು. ಸ್ಥಳೀಯರಿಗೆ ಕಪಿಲೆಯಾಗಿ, ಹೊರಗಿನವರಿಗೆ ಕಬಿನಿಯಾಗಿದ್ದ ನದಿಯೊಂದು ಕಾವೇರಿಯೊಂದಿಗೆ ಲೀನಗೊಂಡು ತನ್ನ ಪಾಡಿಗೆ ತಾನು ಸಮುದ್ರ ಸೇರುತ್ತಿತ್ತು. ಕಾವೇರಿ, ತುಂಗೆ, ಭದ್ರಾ, ಕೃಷ್ಣೆ, ಭೀಮೆಗಳಿಗಿದ್ದಷ್ಟು ಪ್ರಾಮುಖ್ಯತೆ ಈ ನದಿಗೆ ಇರಲಿಲ್ಲ. ಕೇರಳದಲ್ಲಿ ಹುಟ್ಟಿ ಕರ್ನಾಟಕದ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಹರಿದು ಕಾವೇರಿಯಲ್ಲಿ ಒಂದಾಗುತ್ತಿದ್ದ ನದಿಯು ಜನರಿಗಿಂತ ಹೆಚ್ಚಾಗಿ ತನ್ನ ದಂಡೆಯ ಮೇಲೆ ವಿಶಾಲವಾಗಿ ಹರಡಿದ್ದ ನಾಗರಹೊಳೆ ಮತ್ತು ಬಂಡೀಪುರ ಕಾಡಿಗೆ ಆಸರೆಯಾಗಿತ್ತು. ಇದರ ನಡುವೆ ತಲೆಮಾರುಗಳಿಂದ ಜೀವಿಸಿದ್ದ ಒಂದಷ್ಟು ಹಾಡಿಗಳಿದ್ದವು.

೬೦ರ ದಶಕದ ಕೊನೆಯಲ್ಲಿ ಕಪಿಲಾ ನದಿಗೆ ಅಡ್ಡಲಾಗಿ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಸಮೀಪ ಕಬಿನಿ ಎಂಬ ಅಣೆಕಟ್ಟು ನಿರ್ಮಾಣದ ಪ್ರಸ್ತಾಪ ಬಂತು. ಅಲ್ಲಿ ಶತಮಾನಗಳಿಂದ ನೆಲೆ ನಿಂತಿದ್ದ ೧೦ಕ್ಕೂ ಅಧಿಕ ಗ್ರಾಮಗಳನ್ನು ಬೇರೆಡೆ ಸ್ಥಳಾಂತರ ಮಾಡುವ ಜೊತೆಗೆ, ಅಪಾರ ಪ್ರಮಾಣದ ಕಾಡನ್ನು ಕಡಿದು ಜಲಾಶಯಕ್ಕೆ ಬುನಾದಿ ಹಾಕುವ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಎದುರಾಯಿತು. ೨೨ ಹಳ್ಳಿಗಳು ಮತ್ತು ೧೪ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶಕ್ಕಾಗಿ ಇಷ್ಟೊಂದು ಪ್ರಮಾಣದಲ್ಲಿ ಕಾಡು ನಾಶ ಮಾಡುವ ಅವಶ್ಯಕತೆ ಇತ್ತೇ ಎಂಬ ಚರ್ಚೆಯ ನಡುವೆಯೇ ಯೋಜನೆಯ ರೂಪುರೇಷೆ ಪೂರ್ಣಗೊಂಡಿತ್ತು. ಕಾಡಿನ ಜನರ ನೆಲೆಗಳು ನದಿಪಾಲಾಯಿತು. ನೂರಾರು ಬಗೆಯ ಜೀವ ವೈವಿಧ್ಯತೆಯ ಬದುಕು ಜಲಗರ್ಭದಲ್ಲಿ ಒಂದಾಯಿತು. ೨೨೮೪ ಅಡಿ ಉದ್ದದ ೧೯.೫೨ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ ನಿರ್ಮಾಣ ೧೯೭೪ರಲ್ಲಿ ಮುಕ್ತಾಯವಾಯಿತು.

ಕಾಡನ್ನು ನುಂಗಿ, ಕಾಡಿನ ಜನರನ್ನು ಎತ್ತಂಗಡಿ ಮಾಡಿದ ಯೋಜನೆಯೇ ಮುಂದೊಂದು ದಿನ ಈ ಸ್ಥಳಕ್ಕೆ ವಿಶ್ವ ಭೂಪಟದಲ್ಲಿ ಮಾನ್ಯತೆ ತಂದುಕೊಡುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಜಲಾಶಯವೇ ಮುಂದೆ ಸಾವಿರಾರು ವನ್ಯಜೀವಿಗಳಿಗೆ ನೀರ ಆಸರೆಯಾಗಿ ಅವುಗಳ ಕಾಯಂ ನೆಲೆಯಾಗಲು ಸಹಕಾರಿಯಾಯಿತು. ಕಬಿನಿಯ ಹಿನ್ನೀರು ಕಾಡಿನ ಜೀವ ವೈವಿಧ್ಯತೆಗೆ ಹೊಸ ರೂಪ ನೀಡಿತು. ಬೇಸಿಗೆಯಲ್ಲಿ ನೀರನ್ನು ಹುಡುಕಿಕೊಂಡು ಅಲೆದಾಡುತ್ತಿದ್ದ ಬಂಡೀಪುರ ಮತ್ತು ನಾಗರಹೊಳೆಯ ವನ್ಯಜೀವಿಗಳಿಗೆ ಕಾಯಂ ನೀರಿನ ಸೆಲೆ ಸಿಕ್ಕಿದ್ದು ವರದಾನವಾಯಿತು. ಕಾಡಂಚಿನಲ್ಲಿ ನಿತ್ಯ ಹಸಿರ ಹೊದಿಕೆ ಸಿಕ್ಕಿದ್ದರಿಂದ ಮೇವಿನ ಬರವೂ ನೀಗಿತು. ನೀರಾವರಿ ಜತೆಗೆ ೨೪ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೂಡ ಇಲ್ಲಿ ಉತ್ಪಾದನೆಯಾಗುತ್ತಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ