ಹಾಡಿಯ ಹುಡುಗನೊಬ್ಬ ಹಾಲಿವುಡ್ ಗೆ ಹಾರಿ ಮಹಾನ್ ನಟನಾಗಿ ಬೆಳೆದ ಸಾಬು ದಸ್ತಗೀರ್ ಕಥೆ ಎಲ್ಲರಿಗೂ ಸ್ಪೂರ್ತಿ ನೀಡುವಂತದ್ದು. ಇದೇ ರೀತಿ ಪ್ರೇರಣೆಯಾಗಬೇಕಿದ್ದ ಕೋಟೆಯ ಇನ್ನೊಬ್ಬ ಹಾಡಿ ಹುಡುಗನ ಜೀವನ ದುರಂತದಲ್ಲಿ ಕೊನೆಗೊಂಡಿದ್ದನ್ನು ರಾಜ್ಯದ ಜನತೆ ಈಗಲೂ ನೆನಪಿಸಿಕೊಳ್ಳುತ್ತಾರೆ.
ನೈಜ ಗಂಧದ ಮರಗಳ ಪರಿಮಳವನ್ನು ಆಘ್ರಾಣಿಸುತ್ತಿದ್ದ ಎಚ್.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯ ಯುವಕ ರಾಜೇಶ್, ಸ್ಯಾಂಡಲ್‌ವುಡ್ ಸ್ಪಾಟ್‌ಲೈಟ್‌ನ ಪ್ರಖರತೆ ತಾಳಲಾರದೆ ನಕ್ಷತ್ರದಂತೆ ಉರಿದು ಹೋಗಿ ಈಗ ದಶಕವೇ ಸಂದಿದೆ.
ರಾಜೇಶ್ ೨೦೧೦ರಲ್ಲಿ ಖಾಸಗಿ ಚಾನೆಲ್‌ನಲ್ಲಿ ಬಿತ್ತರವಾದ ‘ಹಳ್ಳಿ ಹೈದ ಪ್ಯಾಟ್ಗೆ ಬಂದ’ ರಿಯಾಲಿಟಿ ಶೋನಲ್ಲಿ ೧೦ ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದುಕೊಂಡು ರಾತ್ರಿ ಬೆಳಗಾಗುವುದರೊಳಗೆ ಸೆಲೆಬ್ರಿಟಿಯಾಗಿದ್ದ. ಹಾಡಿಗೆ ಬಂದ ತರುವಾಯ ಕಪ್ಪು ಪಲ್ಸರ್ ಬೈಕ್ ಖರೀದಿಸಿ ನಾಲ್ಕೈದು ಹೈಕ್ಳನ್ನು ಕೂರಿಸಿಕೊಂಡು ಆ ಕಡೆ ಕೇರಳಕ್ಕೆ ಈ ಕಡೆ ಕೋಟೆಗೆ ತಿರುಗಾಟ ಆರಂಭವಾಗಿತ್ತು. ಇದೇ ಸಮಯದಲ್ಲಿ ‘ಜಂಗಲ್ ಜಾಕಿ’ ಎನ್ನುವ ಸಿನಿಮಾಕ್ಕೆ ನಾಯಕನಾಗಿ ಆಯ್ಕೆಯಾದ. ಚಿತ್ರ ತೋಪಾಯಿತು. ವಿವಾದಿತ ನಟಿ ಪೂನಂ ಪಾಂಡೆ ಜತೆ ನಟಿಸಿದ್ದ ‘ಲವ್ ಇಸ್ ಪಾಯಿಸನ್’ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು. ಇವುಗಳ ಮಧ್ಯೆ ಏನೇನೋ ಘಟನೆಗಳು, ವಿವಾದಗಳು.. ಮಾನಸಿಕ ಖಿನ್ನತೆಗೆ ಒಳಗಾದ ರಾಜೇಶ್, ಬಿಗ್‌ಬಾಸ್- ಮೊದಲ ಸೀಸನ್‌ನಲ್ಲಿ ಅತಿಥಿಯಾಗಿ ಎಂಟ್ರಿ ಕೊಟ್ಟರೂ ಎರಡೇ ದಿನಕ್ಕೆ ವಾಪಸ್ ಹೋಗಿಬಿಟ್ಟ. ಮುಂದೆ ಕೆಲವೇ ದಿನಗಳಲ್ಲಿ ಬಳಿಕ ಮೈಸೂರಿನ ಪಕ್ಕದ ಹಳ್ಳಿಯೊಂದರಲ್ಲಿ ತಾನು ವಾಸವಾಗಿದ್ದ ಮನೆಯಲ್ಲಿಯೇ ಬಾದ ಲೋಕಕ್ಕೆ ಪಯಣಿಸಿದ. ತನ್ನ ಹೆಗಲೇರಿದ ‘ಕೀರ್ತಿಶನಿ’ಯನ್ನು ನಿಭಾಯಿಸುವ ಕಲೆ ಆತನಿಗೆ ತಿಳಿದಿರಲಿಲ್ಲ.