-ಕನ್ನಡ ಪ್ರಮೋದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ರಾಜ್ಯದ ಗಡಿ ತಾಲೂಕುಗಳಲ್ಲಿ ಒಂದಾದ ಎಚ್.ಡಿ. ಕೋಟೆ ನಿಸರ್ಗ ಸಂಪತ್ತಿನ ಖನಿಯಾದರೂ ಶೈಕ್ಷಣಿಕವಾಗಿ, ಕೈಗಾರಿಕೋದ್ಯಮದಲ್ಲಿ ಹಿಂದುಳಿದಿದೆ. ತಾಲ್ಲೂಕು ಭೌಗೋಳಿಕವಾಗಿ ವಿಶಾಲ ಪ್ರದೇಶ ಹೊಂದಿದ್ದು, ೧೬೦೬ ಚ.ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಮೈಸೂರಿಗೆ ಸೇರಿದ ತಾಲೂಕು ಒಂದು ಕಡೆ ಕೊಡಗು ಇನ್ನೊಂದೆಡೆ ಕೇರಳವನ್ನು ಗಡಿಯನ್ನಾಗಿ ಹೊಂದಿದೆ.
ಈಗಿನ ಹೆಗ್ಗಡದೇವನಕೋಟೆ ಪ್ರದೇಶವು ಚಾರಿತ್ರಿಕವಾಗಿ ಬಹು ಪ್ರಾಚೀನ ಕಾಲದಿಂದಲೇ ಪ್ರಮುಖ ಆಯಕಟ್ಟಿನ ಪ್ರದೇಶವಾಗಿದೆ, ಐತಿಹಾಸಿಕವಾಗಿ ಪೊನ್ನಾಟ, ಪೊನ್ನಾಡು ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವನ್ನು ಚೋಳರು, ಹೋಯ್ಸಳರು, ಕದಂಬರು ಆಳ್ವಿಕೆ ನಡೆಸಿರುವುದಕ್ಕೆ ಸಿಕ್ಕ ಶಾಸನಗಳು ಸಾಕ್ಷಿಯಾಗಿವೆ. ತಾಲ್ಲೂಕು ನಾಗರಹೊಳೆ ಮತ್ತು ಬಂಡೀಪುರದ ಹೆಚ್ಚಿನ ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ಹಾಗೆೆುಂ ಕಬಿನಿ, ನುಗು, ತಾರಕ ಮತ್ತು ಹೆಬ್ಬಾಳ ಜಲಾಶಯಗಳಿಂದ ಕೂಡಿದೆ. ಕಾಕನಕೋಟೆ ಖೆಡ್ಡವು ವಿಶ್ವ ಪ್ರಸಿದ್ದಿಯನ್ನು ಪಡೆದಿದ್ದು, ಖೆಡ್ಡಾ ವೀಕ್ಷಿಸಲು ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ರಾಷ್ಟ್ರಪತಿಗಳಾದ ಬಾಬು ರಾಜೇಂದ್ರಪ್ರಸಾದ್ ಮತ್ತು ಇಂಗ್ಲೆಂಡ್‌ನ ರಾಜಕುಮಾರ ಸೇರಿದಂತೆ ವಿದೇಶಿ ಗಣ್ಯರು ಆಗಮಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ಇಷ್ಟಾದರೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡದ ಕಾರಣ ತಾಲೂಕು ಹಿಂದುಳಿಯಲು ಕಾರಣವಾಯಿತು. ಈಗ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾಗಿದ್ದು ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ. ಭೌಗೋಳಿಕವಾಗಿ ವಿಸ್ತಾರವಾಗಿದ್ದ ತಾಲ್ಲೂಕಿನ ಬಹುತೇಕ ಕಡೆ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳು ಈಗ ತಾನೇ ತಲೆ ಎತ್ತಿವೆ. ತಾಲ್ಲೂಕಿನಲ್ಲಿ ಆಡಳಿತ ನಡೆಸಿದ ಜನಪ್ರತಿನಿಧಿಗಳು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡದೆ ಇರುವುದು ಹಿನ್ನಡೆಗೆ ಕಾರಣವಾಯಿತು. ವಿದ್ಯಾವಂತ ನಿರುದ್ಯೋಗಿಗಳಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮುಂದಾಗದೆ ಇರುವುದು ಕೂಡ ತಾಲ್ಲೂಕಿನ ಅಭಿವೃದ್ದಿಯಲ್ಲಿ ಹಿನ್ನಡೆಯಾಗಿದೆ.
ತಾಲ್ಲೂಕು ಒಂದು ಕಾಲದಲ್ಲಿ ರಾಗಿ ಕಣಜವಾಗಿ ಪ್ರಖ್ಯಾತಿ ಪಡೆದಿತ್ತು. ಅನಂತರದಲ್ಲಿ ವಾಣಿಜ್ಯ ಬೆಳೆಗಳಾದ ಹತ್ತಿ ಮತ್ತು ತಂಬಾಕು ಬೆಳೆಯಲು ಪ್ರಾರಂಭಿಸಿದರು. ಈಗ ಕೇರಳಿಗರ ಆಗಮನದಿಂದ ರೈತರು ಶುಂಠಿ ಬೆಳೆಗೆ ಮಾರು ಹೋಗಿ ಭೂ ತಾಯಿಗೆ ವಿಷ ಉಣಿಸುವ ಕೆಲಸ ನಡೆದಿದೆ. ತಾಲ್ಲೂಕಿಗೆ ಪರಭಾಷಿಗರಾದ ತಮಿಳರು ಕೃಷಿಗೆ, ಕೇರಳಿಗರು ವ್ಯಾಪಾರಕ್ಕಾಗಿ, ಅಣೆಕಟ್ಟೆ, ರಸ್ತೆ ನಿರ್ಮಾಣಕ್ಕೆ ತೆಲಗು ಭಾಷಿಕರು ಆಗಮಿಸಿದರು. ಈಗ ವ್ಯಾಪಾರ, ವಹಿವಾಟಿನಲ್ಲಿ ಮಾರ್ವಾಡಿಗಳು ಕಾಣಿಸಿಕೊಂಡಿದ್ದಾರೆ. ತಾಲೂಕಿನ ಖಾಸಗಿ ರೆಸಾರ್ಟ್‌ಗಳು ದೇಶದೆಲ್ಲೆಡೆಯ ಪ್ರಭಾವಿಗಳ ಕೈಯಲ್ಲಿದೆ.
ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಆಲನಹಳ್ಳಿ ಕೃಷ್ಣ, ವೆಂಕಟಸುಬ್ಬಯ್ಯ, ತಾತಯ್ಯ, ಸಂಗೀತ ಸುಬ್ಬಣ್ಣ, ಪ.ನಾಗರಾಜಯ್ಯ, ಸ.ಚ. ಮಹದೇವನಾಯಕ, ನಿ. ಗಿರಿಗೌಡ, ಶ್ರೀಮತಿ ಲೀಲಾವತಿ ರಾಮಕೃಷ್ಣ, ಕ್ಷೀರಸಾಗರ, ಡಾ. ಅಂಕನಹಳ್ಳಿ ಕುಮಾರ್, ಡಾ.ಕಿರಣ್ ಸಿಡ್ಲೇಹಳ್ಳಿ ಮತ್ತಿತರರು ತಮ್ಮ ಕೊಡುಗೆ ನೀಡಿದ್ದಾರೆ. ನಾಡು, ನುಡಿ, ಭಾಷೆ, ಸಂಸ್ಕ ೃತಿಯ ಬೆಳವಣಿಗೆಗಾಗಿ ತಾಲ್ಲೂಕು ಕನ್ನಡ ಪರಿಷತ್ತಿನಿಂದ ೫ ತಾಲ್ಲೂಕು ಸಮ್ಮೇಳನ ಮತ್ತು ಎರಡು ಜಿಲ್ಲಾ ಸಮ್ಮೇಳನಗಳನ್ನು ನಡೆಸುವ ಮೂಲಕ ಕನ್ನಡವನ್ನು ಕಟ್ಟುವ ಕೆಲಸ ಮಾಡಿದೆ. ಹಾಗೆಯೇ ರಾಜ್ಯದಲ್ಲಿ ನಾಡು,ನುಡಿ, ನೆಲ, ಜಲ, ಭಾಷೆಯ ವಿಚಾರವಾಗಿ ದಕ್ಕೆಯುಂಟಾದ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿವೆ.