Light
Dark

ಚೆನ್ನೈನಲ್ಲಿ ಓದುವಾಗಲೇ ‘ಆಂದೋಲನ’ ಗೊತ್ತಿತ್ತು : ಚಿತ್ರನಟ ಶಿವರಾಜ್‌ಕುಮಾರ್ ಆಪ್ತನುಡಿ

ಮೈಸೂರು: ಚೆನ್ನೈನಲ್ಲಿ ಓದುತ್ತಿದ್ದ ಕಾರಣಕ್ಕೆ ಆಸಂದರ್ಭದಲ್ಲಿ ನನಗೆ ರಾಜ್ಯದ ಕೆಲವೇ ಪತ್ರಿಕೆಗಳ ಸಂಪರ್ಕವಷ್ಟೇ ಇತ್ತು. ಅದರಲ್ಲಿ ‘ಆಂದೋಲನ’ವೂ ಒಂದು… ಹೀಗೆ ಅತ್ಯಂತ ಹೆಮ್ಮೆಯಿಂದ ‘ಆಂದೋಲನ’ದ ಬಗ್ಗೆ ಆಪ್ತತೆಯ ನುಡಿಗಳನ್ನಾಡಿದವರು ಹೆಸರಾಂತ ನಟ ‘ಹ್ಯಾಟ್ರಿಕ್ ಹಿರೋ’ ಡಾ.ಶಿವರಾಜ್‌ಕುಮಾರ್. ‘ಆಂದೋಲನ- ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ‘ಆಂದೋಲನ ವೆಬ್‌ಸೈಟ್’ ಅನಾವರಣ ಮಾಡಿ ಮಾತನಾಡಿದ ಅವರು, ಮೈಸೂರಿನಲ್ಲಿ ಊಟ ಮಾಡಿ, ಬಿರಿಯಾನಿ ಪಾರ್ಸೆಲ್ ತಗೊಂಡು ಈ ಕಡೆಯಿಂದ ಗಾಜನೂರಿಗೆ ಹೋಗುತ್ತಿದ್ದ ದಿನಗಳಿಂದಲೂ ‘ಆಂದೋಲನ’ ಬಲ್ಲೆ. ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ದಿವಂಗತ ರಾಜಶೇಖರ ಕೋಟಿ ಅವರು ರಾಷ್ಟ್ರ ಮತ್ತು ಜನ ಸಮುದಾಯದ ಬಗ್ಗೆ ಹೊಂದಿದ್ದ  ಉತ್ತಮ ಆಲೋಚನೆ, ಕಾಳಜಿಯನ್ನು ಪತ್ರಿಕೆ ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತಿರುವುದು ಖುಷಿ ತಂದಿದೆ. ಪತ್ರಿಕಾ ರಂಗದಲ್ಲಿ ಏರು-ಪೇರುಗಳಿದ್ದಾಗ್ಯೂ ಕೋಟಿ ಅವರು ಈ ರಂಗಕ್ಕೆ ಬೇರೆಯದೇ ತಿರುವು ನೀಡಿದ್ದು, ಅವರ ಈ ಮನೋಭಾವ ತುಂಬಾ ಇಷ್ಟವಾಗಿದ್ದಾಗಿ ಹೇಳಿದರು.

ನಾನು ಬಿಎಸ್ಸಿ ಪದವಿ ಪಡೆದಿದ್ದರೂ ನಟನೆ, ಸಿನಿಮಾ ಕುರಿತು ಮಾತನಾಡುವ ಮಟ್ಟಿಗೆ ರಾಜಕೀಯ ಮತ್ತು ಪತ್ರಿಕೆಗಳ ಕುರಿತು ಮಾತನಾಡಲಾರೆ. ಆದರೆ ಚಿತ್ರ ರಂಗಕ್ಕೂ ಪತ್ರಿಕಾರಂಗಕ್ಕೂ ಬಹಳ ನಂಟಿದೆ. ‘ಆಂದೋಲನ’ ೫೦ ವರ್ಷ ಪೂರೈಸಿರುವುದು ಬಹಳ ಸಂತೋಷ ತಂದಿದೆ ಎಂದರು.

ಪುಟ್ಟಸ್ವಾಮಿ ಎಂದು ಮೂಲ ಹೆಸರಿನಿಂದ ಕರೆದಾಗ ಶಿವಣ್ಣ ಚಕಿತ!: ನಟ ಶಿವರಾಜ್ ಕುಮಾರ್ ಅವರ ಮೂಲ ಹೆಸರು ಎನ್.ಎಸ್. ಪುಟ್ಟಸ್ವಾಮಿ. ನಿರೂಪಕರು, ಈ ಹೆಸರಿನಿಂದ ಕರೆಯುತ್ತಿದಂತೆ ಶಿವಣ್ಣ ಆಶ್ಚರ್ಯಚಕಿತರಾದರು. ಮೂಲ ಹೆಸರಲ್ಲೇ ಈಗಲೂ ಚೆಕ್, ಪಾಸ್ ಪೋರ್ಟ್ ಇನ್ನಿತರ ದಾಖಲೆಗಳಿಗೆ ಸಹಿ ಹಾಕು ತ್ತಿರುವುದಾಗಿ ಶಿವಣ್ಣ ಮಾತನಾಡುತ್ತಾ ಹೇಳಿದರು. ನಮ್ಮ ಕುಟುಂಬಕ್ಕೆ ಆತ್ಮೀಯರಾದ ತಿಪಟೂರಿನವರೊಬ್ಬರು ನನ್ನ ಮತ್ತು ನನ್ನ ಸಹೋದರರ ಹೆಸರಿನ ಮುಂದೆ ತಂದೆ ರಾಜ್ ಕುಮಾರ್ ಅವರ ಹೆಸರನ್ನು ಸೇರಿಸಿದರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು. ವೇದಿಕೆಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಮಾತನಾಡದ ಶಿವಣ್ಣ ‘ಆಂದೋಲನ’ ಕಾರ್ಯಕ್ರಮದಲ್ಲಿ ೫ ನಿಮಿಷ ಮನ ಬಿಚ್ಚಿ ಮಾತನಾಡಿದರು.

ನಂತರ ಅನ್ಯಕಾರ್ಯ ನಿಮಿತ್ತ ನಿರ್ಗಮಿಸಿದ ಅವರು, ಮುಂಬದಿ ಸಾಲಿನಲ್ಲಿ ಕುಳಿತ್ತಿದ್ದವರ ಜೊತೆ ತಾಳ್ಮೆಯಿಂದ ಸೆಲ್ಛಿ ತೆಗೆಸಿಕೊಂಡರು. ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರ ಸುದೀರ್ಘ ಭಾಷಣವನ್ನು ತದೇಕ ಚಿತ್ತದಿಂದ ಶಿವಣ್ಣ ಆಲಿಸಿದರು.

ನಿರ್ಮಲ ಕೋಟಿ ಅವರ ಪಕ್ಕದಲ್ಲಿ ಕುಳಿತದ್ದು ತಾಯಿ ಅನುಭವ ನೀಡಿತು: ಶಿವರಾಜ್ ನಮ್ಮ ಕುಟುಂಬದವರಿಗೂ ರಾಜಶೇಖರ ಕೋಟಿ ಮನೆಯವರಿಗೂ ಮೊದಲಿನಿಂದಲೂ ತುಂಬಾ ಹತ್ತಿರದ ಸಂಬಂಧ. ಮೈಸೂರಿನ ‘ಶಕ್ತಿ ಧಾಮ’ ಟ್ರಸ್ಟ್ ಜೊತೆ ನಮ್ಮೆರಡೂ ಕುಟುಂಬಗಳ ಸದಸ್ಯರಿದ್ದು ವೇದಿಕೆಯಲ್ಲಿ ನಿರ್ಮಲ ಕೋಟಿ ಅವರ ಪಕ್ಕದಲ್ಲೇ ತಾವು ಕುಳಿತದ್ದು ತಾಯಿ ಪಕ್ಕದಲ್ಲೇ ಕುಳಿತ ಅನುಭವವಾಯಿತು ಎಂದು ನಟ ಶಿವರಾಜ್‌ಕುಮಾರ್ ಭಾವುಕರಾದರು.

ಪತ್ರಿಕೆ ಕಾರ್ಯ ಕ್ರಮದಲ್ಲೂ ನಟ ಶಿವಣ್ಣ ಹವಾ!: ‘ಆಂದೋಲನ-೫೦’ ಕಾರ್ಯಕ್ರಮದಲ್ಲಿಯೂ ನಟ ಶಿವರಾಜ್ ಕುಮಾರ್ ಹವಾ ಅನುರಣಿಸಿತು. ಅವರು ಸಂಜೆ ೫ ಗಂಟೆಗೆ ಸರಿಯಾಗಿ ವೇದಿಕೆ ಏರುವಾಗಲೂ ೬.೧೦ರಲ್ಲಿ ನಿರ್ಗಮಿಸುವಾಗಲೂ ಸಭಿಕರ ಸಾಲಿನಿಂದ ಚಪ್ಪಾಳೆ ಮೊಳಗಿತು. ಶಿವಣ್ಣ ವೇದಿಕೆ ಹತ್ತಿ ಕೂರುತ್ತಲೇ ‘ಆಂದೋಲನ’ ವನ್ನು ಕೈಯಲ್ಲಿ ಹಿಡಿದು ಕೆಲಕಾಲಓದಿದರು. ನಂತರ ಗದ್ದಕ್ಕೆ ಕೈ ಒತ್ತಿ ಕುಳಿತು ಇತರರಭಾಷಣವನ್ನು ಮನಸಾರೆ ಆಲಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ