Mysore
23
overcast clouds
Light
Dark

ನೆಲೆ ಕಾಣದ ಸಂತ್ರಸ್ತರು

ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ತಾಣವಾಗಿ ಬದಲಾದ ಬಳಿಕ ಕಬಿನಿ ಸೇರಿದಂತೆ ಪ್ರವಾಸಿ ತಾಣಗಳ ಚಹರೆ ಸಂಪೂರ್ಣ ಬದಲಾಗಿದೆ. ವಿದೇಶಿಯರು, ಶ್ರೀಮಂತರು, ಅಧಿಕಾರಿಗಳು ಮತ್ತು ಪ್ರಭಾವಿಗಳಿಗೆ ಹತ್ತಿರವಾದ ತಾಣ ಜನ ಸಾಮಾನ್ಯರ ಪಾಲಿಗೆ ದೂರವಾಗುತ್ತಾ ಸಾಗಿದೆ. ಕಬಿನಿಯ ಆಕರ್ಷಣೆಗೆ ಮರುಳಾದ ದೇಶದ ನಾನಾ ಭಾಗದ ಸಿರಿವಂತರು ಇಲ್ಲಿನ ರೈತರ ಜಮೀನುಗಳನ್ನು ಖರೀದಿಸಿ ರೆಸಾರ್ಟ್‌ಗಳನ್ನು ಕಟ್ಟಿಕೊಂಡರು.

ಕಬಿನಿಗಾಗಿ ಅಂದು ನೆಲೆ ಕಳೆದುಕೊಂಡವರು, ಜಮೀನು ತ್ಯಾಗ ಮಾಡಿದ ಜನರ ಪಾಲಿಗೆ ಬದುಕು ಕಟ್ಟಿಕೊಳ್ಳಲು ಈ ರೆಸಾರ್ಟ್‌ಗಳು ನೆರವಾಗಲಿಲ್ಲ. ಅನ್ಯ ರಾಜ್ಯದ ಜನರ ದೌಲತ್ತಿನಲ್ಲಿ ಸಣ್ಣ ಪುಟ್ಟ ನೌಕರಿಯೂ ಇವರಿಗೆ ಲಭ್ಯವಾಗಲಿಲ್ಲ.

ಪ್ರವಾಸೋದ್ಯಮ ಮತ್ತು ಅದರ ವ್ಯವಸ್ಥೆಗಳು ಇಂದು ಕೇವಲ ಉನ್ನತ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ ಮೋಜು ಮಸ್ತಿಯ, ಗೂಢಾಲೋಚನೆಯ ತಾಣವಾಗಿ ಬದಲಾಗಿದೆ ಎನ್ನುವುದು ಕಣ್ಣಿಗೆ ಗೋಚರಿಸುವ ಸತ್ಯ. ಆದರೆ ಅಂದು ಪುನರ್ವಸತಿ ಹೆಸರಿನಲ್ಲಿ ಎತ್ತಂಗಡಿಯಾದ ಗ್ರಾಮಗಳು ೫೦ ವರ್ಷಗಳ ಬಳಿಕವೂ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಇಲ್ಲಿ ಶಿಕ್ಷಣ, ಆರೋಗ್ಯ, ನೀರು, ಸಾರಿಗೆ ಸಂಪರ್ಕ ಇನ್ನೂ ದೂರಾದ ಮಾತಾಗಿದೆ. ಇಲ್ಲಿಂದ ಸರಕಾರದ ಖಜಾನೆ ಸೇರುವ ಹಣದಲ್ಲಿ ಒಂದಿಷ್ಟು ಭಾಗ ಇಲ್ಲಿನವರ ಅಭಿವೃದ್ಧಿಗೆ ಪೂರಕವಾಗಿ ಖರ್ಚು ಮಾಡಿದರೆ ಅಂದಿನ ತ್ಯಾಗಕ್ಕೂ ಫಲ ಸಿಕ್ಕಂತಾಗುತ್ತದೆ. ಜೊತೆಗೆ ಸ್ಥಳೀಯರಿಗೆ ಸರಕಾರದ ಮೇಲೆ, ಅರಣ್ಯ ಇಲಾಖೆಯ ಮೇಲೆ ವಿಶ್ವಾಸ ಮೂಡಿಸಲಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

ಕಬಿನಿ ಜಲಾಶಯದ ನಿರ್ಮಾಣದ ಹಂತದಲ್ಲಿ ಮುಳುಗಡೆಗೊಂಡ ೧೦-೧೨ ಗ್ರಾಮಗಳಿಗೆ ಪುನರ್ವಸತಿ ನೀಡಲಾಗಿದೆ. ಅಲ್ಲದೆ ಜಲಾಶಯದಿಂದ ಸ್ಥಳೀಯ ರೈತರಿಗೆ, ಗ್ರಾಮಗಳಿಗೆ ಸಾಕಷ್ಟು ಅನುಕೂಲಗಳಿವೆ. ಆದರೆ ಅಲ್ಲಿಂದ ಹೊರಬಂದ ಗ್ರಾಮಗಳಿಗೆ ಮಾತ್ರ ೫೦ ವರ್ಷಗಳು ಉರುಳಿದರೂ ಸರಿಯಾದ ಮೂಲಭೂತ ಸೌಕರ್ಯ ಮಾತ್ರ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರ ಚಿಂತಿಸಬೇಕಾದ ಅವಶ್ಯಕತೆ ಇದೆ. -ಜಯರಾಮೇಗೌಡ, ಹೊಸಮಾಳ ಗ್ರಾಮಸ್ಥರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ