Mysore
20
overcast clouds

Social Media

ಮಂಗಳವಾರ, 10 ಡಿಸೆಂಬರ್ 2024
Light
Dark

ತಿ.ನರಸೀಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಹಕ್ಕೋತ್ತಾಯ ಮಂಡನೆ

ಆಂದೋಲನ ಸಾರ್ಥಕ ಪಯಣ ಕಾರ್ಯಕ್ರಮದಲ್ಲಿ ಡಾ.ಬಿ.ಎನ್.ರವೀಶ್ ಮಂಡನೆ

ಮೈಸೂರು: ರಾಜಕೀಯವಾಗಿ ಹಾಗೂ ವಾಣಿಜ್ಯವಾಗಿಯೂ ಜಿಲ್ಲೆಯಲ್ಲಿ ಗಮನ ಸೆಳೆದಿರುವ ತ್ರಿವೇಣಿ ಸಂಗಮ ತಿ.ನರಸೀಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜನತೆಯ ಪರವಾಗಿ ಆಂದೋಲನ ಪತ್ರಿಕೆಯು ಹಕ್ಕೋತ್ತಾಯವನ್ನು ಮಂಡಿಸಿತು. ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿನಡೆದ ಕಾರ್ಯಕ್ರಮದಲ್ಲಿ ಹಾಲಿ-ಮಾಜಿ ಶಾಸಕರು,ಸಂಸದರ ಸಮ್ಮುಖದಲ್ಲಿ ಕೆ.ಆರ್.ಆಸ್ಪತ್ರೆಯ ಮನೋರೋಗ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್.ರವೀಶ್ ಮಂಡಿಸಿದರು. ನರಸೀಪುರ ತಾಲ್ಲೂಕು ಹಿಂದುಳಿಯಲು ಕಾರಣವನ್ನು ಹೇಳುವ ಜೊತೆಗೆ ಭವಿಷ್ಯದಲ್ಲಿ ಆಗಬೇಕಿರುವ ಕೆಲಸಗಳ ಕುರಿತು ಗಮನ ಸೆಳೆದರು.


ಆಂದೋಲನ ಹಕ್ಕೊತ್ತಾಯಗಳು

* ಭತ್ತದ ಕಣಜವಾದ ತಾಲ್ಲೂಕಿನಲ್ಲಿ ಪ್ರತೀ ವರ್ಷವೂ ಖರೀದಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಕಾಲದಲ್ಲಿ ಭತ್ತ ಖರೀದಿಗೆ ವ್ಯವಸ್ಥೆಯಾಗಬೇಕಿದೆ. ತಾಲ್ಲೂಕಿನಲ್ಲಿ ಸಾಕಷ್ಟು ಭತ್ತದ ಗಿರಣಿಗಳಿದ್ದರೂ ಭತ್ತವನ್ನು ಮೌಲ್ಯವರ್ಧಿತ ಉತ್ಪನ್ನವಾಗಿಸಿ ಮಾರುವ ವ್ಯವಸ್ಥೆ ಇಲ್ಲ. ಈ ಬಗ್ಗೆ ಗಮನಹರಿಸಬೇಕಾಗಿದೆ

*ಕೃಷಿ ಪ್ರಧಾನ ಜಿಲ್ಲೆಯಲ್ಲಿ ಜಿಲ್ಲೆಯು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಬಹುದಾದ, ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ, ಸ್ಥಳೀಯರ ಉದ್ಯೋಗಕ್ಕೆ ಪೂರಕವಾದ ಕಾರ್ಖಾನೆಗಳನ್ನು ಸ್ಥಾಪಿಸಲು ಉತ್ತೇಜನ ನೀಡಬೇಕು.ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವುದರಿಂದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ವಿಫುಲ ಅವಕಾಶವಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಕೇಂದ್ರದಲ್ಲಿ ಪ್ರವಾಸಿಗರಿಗೆ ಉಳಿಯಲು ಅಗತ್ಯವಾದ ಯಾತ್ರಿ ನಿವಾಸ್ ಮಾದರಿಯ ವಸತಿಗೃಹಗಳನ್ನು ನಿರ್ಮಿಸುವ ಅಗತ್ಯವಿದೆ.

*ತಾಲ್ಲೂಕಿಗೆ ಹೆಸರು ಬರಲು ಕಾರಣವಾದ ಸಂಗಮ ಸ್ಥಳ ಮತ್ತು ನದಿಯ ಶುಚಿತ್ವಕ್ಕೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ. ಸಂಗಮದಲ್ಲಿ ನದಿ ನೀರು ಮಲೀನಗೊಳ್ಳಲು ಕಾರಣವಾಗುವ ಎಲ್ಲ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಸುರಕ್ಷತೆಗೆ ಒತ್ತು ನೀಡಬೇಕು. ಸ್ಥಳದ ಅಂದ ಮತ್ತು ಪಾವಿತ್ರ್ಯಕ್ಕೆ ಭಂಗ ಬರದಂತೆ ಬಟ್ಟೆ ಬದಲಿಸುವ ಕೊಠಡಿಗಳು, ಜನರು ಊಟ ತಿಂಡಿ ಮಾಡುವ ಶೆಲ್ಟರ್ ಗಳ ಅಗತ್ಯವಿದೆ.

* ಸೋಮನಾಥಪುರದಲ್ಲೂ ಪ್ರವಾಸಿಗರಿಗೆ ಸುಸಜ್ಜಿಜಿತ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇಲ್ಲಿ ಪ್ರವಾಸಿಗರು ತಂಗಲು ವಸತಿ ಮತ್ತು ಕ್ಯಾಂಟೀನ್ ವ್ಯವಸ್ಥೆ ಅಗತ್ಯವಿದೆ. ಸೋಮನಾಥಪುರ ಗ್ರಾಮದ ಪ್ರಮುಖ ದ್ವಾರದಲ್ಲಿ ಕಮಾನು ಗೇಟ್ ನಿರ್ಮಿಸಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿದೆ. ತಾಲ್ಲೂಕು ಕೇಂದ್ರಕ್ಕೆ ಬರುವ ಪ್ರವಾಸಿಗರು ಪಟ್ಟಣದ ಮೂರು ದಿಕ್ಕಿನಲ್ಲಿರುವ ತ್ರಿವೇಣಿ ಸಂಗಮ, ಸೋಮನಾಥಪುರ, ತಲಕಾಡು ಹಾಗೂ ಮೂಗೂರು ಪ್ರವಾಸಿ ತಾಣಗಳನ್ನು ಒಂದೇ ದಿನದಲ್ಲಿ ಸಂದರ್ಶಿಸಲು ಅನುಕೂಲವಾಗುವಂತೆ ಟೂರಿಸಂ ಸರ್ಕೀಟ್ ಮಾದರಿಯಲ್ಲಿ ಸಂಪರ್ಕ ಕಲ್ಪಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕಾಗಿದೆ.

*ತಲಕಾಡು ಕಾವೇರಿ ನದಿಗೆ ಈಜಾಡಲು ಪ್ರತಿದಿನ ನೂರಾರು ಜನರು ಆಗಮಿಸುತ್ತಿದ್ದಾರೆ. ಸುರಕ್ಷತೆ ಮತ್ತು ಶುಚಿತ್ವ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಒತ್ತು ನೀಡುವ ಅಗತ್ಯವಿದೆ. ನೈಸರ್ಗಿಕ ಈಜು ತರಬೇತಿ ಕೇಂದ್ರವಾಗಿಯೂ ಈ ಸ್ಥಳವನ್ನು ಅಭಿವೃದ್ಧಿಪಡಿಸಬಹುದು.

*ತಿ. ನರಸೀಪುರ ತಾಲ್ಲೂಕು ಕೇಂದ್ರವಾಗಿದ್ದರೂ ಇಲ್ಲಿ ಕ್ರೀಡಾಂಗಣದ ಸೌಕರ್ಯವಿಲ್ಲ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಆಟಗಾರರು ಈ ತಾಲ್ಲೂಕಿನಲ್ಲಿದ್ದಾರೆ. ಕ್ರೀಡಾಳುಗಳ ನಿತ್ಯ ಅಭ್ಯಾಸಕ್ಕೆ ಸಹಕಾರಿಯಾದ ಕ್ರೀಡಾಂಗಣವೊಂದರ ಅವಶ್ಯಕತೆ ಇದೆ.

*ತಾಲ್ಲೂಕಿನಲ್ಲಿ ಇಎಸ್ ಐ ವಿಮಾ ಸೌಲಭ್ಯ ಹೊಂದಿದ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ವಿವಿಧ ಸಂಸ್ಥೆಗಳು, ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ. ಇಲ್ಲಿ ಕಾರ್ಮಿಕರ ವಿಮಾ ಚಿಕಿತ್ಸಾಲಯವಿದ್ದರೂ ಇದಕ್ಕೆ ಸ್ವಂತ ಕಟ್ಟಡವಿಲ್ಲ. ತಾಲ್ಲೂಕಿಗೆ ತನ್ನದೇ ಆದ ಕಾರ್ಮಿಕರ ವಿಮಾ ಆಸ್ಪತ್ರೆ ಅಗತ್ಯವಿದೆ. ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಹೆಚ್ಚಿನ ವೈದ್ಯಕೀಯ ಸೌಲಭ್ಯ ಸಿಗುವಂತೆ  ಮಾಡಬೇಕಾಗಿದೆ.

* ತಾಲ್ಲೂಕು ಕೇಂದ್ರದಲ್ಲಿ ಉದ್ಯಾನವನಗಳ ಅಭಿವೃದ್ಧಿ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಕ್ರಿಯಾ ಯೋಜನೆ ರೂಪಿಸಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ