Light
Dark

ಮೈಸೂರು ಪ್ರಾಂತ್ಯದಲ್ಲಿ ಆಯುರ್ವೇದದ ಹೆಜ್ಜೆಗುರುತು


ಡಾ.ಶಿವಾನಂದ ಗವಿಮಠ

ಪ್ರಾಧ್ಯಾಪಕರು ಹಾಗೂ ತಜ್ಞ ವೈದ್ಯರು
ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು-ಮೈಸೂರು

ಮೈಸೂರು ರಾಜ ಪರಂಪರೆಯ ರಚನಾತ್ಮಕ ಕಾರ‌್ಯಗಳನ್ನು ಈಗಲೂ ಜನರು ನೆನಪಿಸಿಕೊಳ್ಳುತ್ತಿದ್ದಾರೆ.ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ ಮತ್ತಿತರ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡಿದ ನೀಡಿದ ಅರಸರು ಆಯುರ್ವೇದ ಪಂಡಿತರಿಗೂ ರಾಜಾಶ್ರಯ ನೀಡಿದ್ದರು. ಕೇರಳದಂತೆ ಆಯುರ್ವೇದ ಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ಸಲ್ಲುತ್ತದೆ. ಕ್ರಿಸ್ತಶಕ ೧೭೫೯ರಲ್ಲಿ ಸ್ವತಃ ಆಯುರ್ವೇದ ತಜ್ಞ ವೈದ್ಯರು, ತರ್ಕ ಪ್ರಾಜ್ಞರೂ ಆದ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರು ವಾಗ್ಭಟಾಚಾರ್ಯ ವಿರಚಿತ ಅಷ್ಟಾಂಗ ಹೃದಯ ಗ್ರಂಥಕ್ಕೆ ಕನ್ನಡದಲ್ಲಿ ‘ಚಾಹಟ ಟೀಕೆ’ ಎಂಬ ವ್ಯಾಖ್ಯಾನವನ್ನು ಬರೆದು ಖ್ಯಾತಿ ಗಳಿಸಿದ್ದರು.

 

ಕ್ರಿಸ್ತಶಕ ೧೭೯೯ರಲ್ಲಿ ಗುಂಡ್ಲುಪಂಡಿತ ಮನೆತನದ ವೇದಾಂತಾಚಾರ್ಯರು ಮೈಸೂರಿನ ಪ್ರಥಮ ಆಯುರ್ವೇದ ಗುರುಗಳಾಗಿ ಅನೇಕ ಜ್ಞಾನಾಸಕ್ತರಿಗೆ ಮಾರ್ಗದರ್ಶನ ಮಾಡಿದರು. ಇವರ ಸಮಕಾಲೀನರಾದ ನಾರಾಯಣಪಂಡಿತರು ಯಶಸ್ವಿ ಚಿಕಿತ್ಸಕರಾಗಿ ಹೆಸರು ಗಳಿಸಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಅರ್ಧನಾರೀಶ್ವರ ವೈದ್ಯ ಎಂಬ ಬಿರುದಿಗೆ ಪಾತ್ರರಾಗಿದ್ದರು. ಮುಮ್ಮಡಿಯವರ ಆಸ್ಥಾನದಲ್ಲಿ ಸುಬ್ರಹ್ಮಣ್ಯ ಪಂಡಿತ ವೈದ್ಯರೂ, ಒಂದನೇ ಅಣ್ಣಯ್ಯ ಪಂಡಿತರು ಸೇವೆ ಸಲ್ಲಿಸುತ್ತಿದ್ದರು.

ಚಾಮರಾಜ ಒಡೆಯರ್ ಶಿಕ್ಷಣ ಹಾಗೂ ಸಾರ್ವಜನಿಕ ಆರೋಗ್ಯ ಅಧ್ಯಯನ ಕೇಂದ್ರದ ಅವಶ್ಯಕತೆಯನ್ನು ಅರಿತು ೧೮೭೬ರಲ್ಲಿ ಶ್ರಿಮನ್ಮಹಾರಾಜ ಸಂಸ್ಕೃತ ಮಹಾಪಾಠಶಾಲೆಯನ್ನು ಸ್ಥಾಪಿಸಿ ವೇದಾಧ್ಯಯನ , ಆಯುರ್ವೇದ, ತರ್ಕ ಇತ್ಯಾದಿ ಶಾಸತ್ತ್ರಗಳ ಅಧ್ಯಯನಕ್ಕೆ ಅನುವು ಮಾಡಿಕೊಟ್ಟರು. ೧೮೯೪ರಲ್ಲಿ ಪ್ರತ್ಯೇಕ ಆಯುರ್ವೇದ ವೈದ್ಯ ವಿಭಾಗವನ್ನು ಸ್ಥಾಪಿಸಿ ಪಂಡಿತ ಅಗರಂ ಪುಟ್ಟಸ್ವಾಮಿ ಅವರನ್ನು ಪ್ರಧಾನ ವ್ಯವಸ್ಥಾಪಕರನ್ನಾಗಿ ನೇಮಿಸಿದರು. ಇಲ್ಲಿ ಉತ್ತೀರ್ಣರಾದವರಿಗೆ ‘ಆಯುರ್ವೇದ ವಿದ್ವಾನ್’ ಪದವಿಯನ್ನು ನೀಡಲಾಗುತ್ತಿತ್ತು.

ಪಂಡಿತರ ಪರಂಪರೆ

ಮೈಸೂರು ಆಸ್ಥಾನದಲ್ಲಿ ಪಂಡಿತರಾಗಿದ್ದ ಅನೇಕ ವಿದ್ವಾಂಸರು, ತಜ್ಞ ವೈದ್ಯರು ಆಯುರ್ವೇದ ಕಾಲೇಜು ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ತೊಡಗಿಸಿಕೊಂಡು ಜನಮಾನಸದಲ್ಲಿ ಹೆಸರುವಾಸಿಯಾಗಿದ್ದಾರೆ. ಅಂಥವರಲ್ಲಿ ಅಂಬಳೆ ಸುಬ್ಬರಾಯ ಪಂಡಿತರು, ಕೆಂಪು ರಾಮ ಪಂಡಿತರು, ಡಿ. ಗೋಪಾಲಾಚಾರ್ಯ, ಪಟ್ಟಣಗೆರೆ ಸೂರ್ಯನಾರಾಯಣ ಶಾಸ್ತ್ರಿ, ರಾಮಾಚಾರ್ಯ ಗಲಗಲಿ, ಬಿ .ಕೃಷ್ಣಶಾಸ್ತ್ರಿ, ಬಿ.ವಿ .ಪಂಡಿತ, ವೈ. ಲಕ್ಷ್ಮಿನರಸಿಂಹಶಾಸ್ತ್ರಿ, ಎನ್.ಎನ್.ಭಟ್ಟಾಚಾರ್ಯ ಹಾಗೂ ವೆಂಕಟರಾಮ ಪಂಡಿತ್ ಮುಂತಾದವರ ಹೆಸರು ಮುಂಚೂಣಿಯಲ್ಲಿತ್ತು. ಇವರಲ್ಲಿ ಅನೇಕರು ಮುಂದೆ ತಮ್ಮದೇ ಆಯುರ್ವೇದ ತಯಾರಿಕೆ ಮತ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆದು ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸಂಸ್ಕೃತ ಪಾಠಶಾಲೆಯಿಂದ ಆಯುರ್ವೇದ ಅಧ್ಯಯನ ವಿಭಾಗವನ್ನು ಪ್ರತ್ಯೇಕಿಸಿ ದೇವರಾಜ ಮಾರುಕಟ್ಟೆಯ ಉತ್ತರದ್ವಾರದ ಕೊಠಡಿಗಳಿಗೆ ಸ್ಥಳಾಂತರಿಸಲಾಯಿತು. ಇದರಿಂದ ರೋಗಿಗಳ ಪರೀಕ್ಷೆ ಔಷಧಿಗಳ ತಯಾರಿಕೆ ಹಾಗೂ ವಿತರಕರ ವಿತರಣೆಗಳಿಗೆ ಅನುಕೂಲವಾಯಿತು.
೧೯೨೮ ರಲ್ಲಿ ಸ್ವತಂತ್ರ ಆಯುರ್ವೇದ ಕಾಲೇಜಿನ ಕಟ್ಟಡ ಕಾಮಗಾರಿ ಪ್ರಾರಂಭವಾಯಿತು. ಮೈಸೂರು ಸರ್ಕಾರದ ಆರ್ಥಿಕ ಸಹಾಯದ ಜತೆಗೆ ಗುಂಡ್ಲುಪಂಡಿತ ಲಕ್ಷ್ಮಣಾಚಾರ್ಯರು ೧೬ ಸಾವಿರ ರೂ.ಗಳನ್ನು, ಸಾವುಕಾರ್ ಡಿ . ಬನುಮಯ್ಯ ಮತ್ತು ಅವರ ಸೋದರ ರಾಗಿಮಂಡಿ ಚೌಡಯ್ಯ ಅವರು ೧೦ ಸಾವಿರ ರೂ. ಗಳನ್ನು ದೇಣಿಗೆಯಾಗಿ ನೀಡಿ ಕಟ್ಟಡ ನಿರ್ಮಾಣಕ್ಕೆ ನೀಡಿದರು. ೧೯೩೦ರ ಆಗಸ್ಟ್ ತಿಂಗಳಲ್ಲಿ ಕಾರ್ಯಾರಂಭ ಮಾಡಿದ ಆಯುರ್ವೇದ ಕಾಲೇಜು ರಾಷ್ಟ್ರದ ಅತಿ ಉತ್ಕೃಷ್ಟ ಆಯುರ್ವೇದ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಬಳಿಕ ೧೯೫೯ರಲ್ಲಿ ಜಯಚಾಮರಾಜ ಒಡೆಯರ್ ಸರ್ಕಾರಿ ಆಯುರ್ವೇದ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ವೈದ್ಯ ಬಿ.ವಿ.ಪಂಡಿತ್, ಸಾವುಕಾರ್ ಚೌಡಯ್ಯನವರೂ ಇದಕ್ಕೆ ದೇಣಿಗೆ ನೀಡಿದ್ದರು. ಹಲವಾರು ವರ್ಷಗಳ ಕಾಲ ಈ ಕಾಲೇಜು ಆಯುರ್ವೇದ ಅಧ್ಯಯನಕ್ಕೆ ಮುಖ್ಯಕೇಂದ್ರವಾಗಿತ್ತು. ಆದರೆ ಇಲ್ಲಿ ೫೦ ವಿದ್ಯಾರ್ಥಿಗಳಿಗೆ ಮಾತ್ರ ಓದಲು ಅವಕಾಶವಿತ್ತು. ಇದನ್ನರಿತ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ೧೯೯೨ರಲ್ಲಿ ಆಯುರ್ವೇದ ಆಸ್ಪತ್ರೆ ಯನ್ನು, ೧೯೯೬ರಲ್ಲಿ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಮಹಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಲಲಿತಾದ್ರಿಪುರ ರಸ್ತೆಯಲ್ಲಿ ಹದಿನೈದು ಎಕರೆ ಭೂಮಿಯಲ್ಲಿ ನೆಲೆಗೊಂಡಿರುವ ಈ ಸಂಸ್ಥೆಯು ಅತ್ಯುನ್ನತ ಆಯುರ್ವೇದ ಶಿಕ್ಷಣ ಸಂಸ್ಥೆ ಎಂದು ಹೆಸರುವಾಸಿಯಾಗಿದೆ.

ಮೈಸೂರಿಗೆ ಕೀರ್ತಿ ತಂದ ಆಯುರ್ವೇದ ಫಾರ್ಮೆಸಿಗಳು
ರೋಗಗಳಿಗೆ ಅನುಸಾರವಾಗಿ ವಿಶಿಷ್ಟ ಔಷಧೋಪಚಾರಗಳನ್ನು ಗಮನದಲ್ಲಿಟ್ಟುಕೊಂಡು ಪಾಳ್ಯದ ವೆಂಕಟಾಚಲ ಪಂಡಿತರು, ಬಿ.ವಿ.ಪಂಡಿತರು, ಬಿ.ಆರ್. ಶಾಮಾಚಾರ್, ಎಸ್.ಎನ್.ಪಂಡಿತ್, ಲಕ್ಷ್ಮಿನರಸಿಂಹ ಶಾಸ್ತ್ರಿ ಇತ್ಯಾದಿ ಪಂಡಿತರು ಔಷಧಿ ತಯಾರಿಕಾ ಘಟಕಗಳನ್ನು ಸ್ಥಾಪಿಸಿ, ಅಗತ್ಯ ಔಷಧಿಗಳ ಪೂರೈಕೆ ಮಾಡಿದರು. ದೇಶ ವಿದೇಶಗಳಲ್ಲಿಯೂ ಕೂಡ ಈ ಔಷಧಿಗಳು ಹೆಸರು ಮಾಡಿದ್ದವು.

ಶ್ರೀ ಸೀತಾರಾಘವ ವೈದ್ಯಶಾಲೆ: ಪಾಳ್ಯದ ಶ್ರಿ ವೆಂಕಟಾಚಲ ಪಂಡಿತರು (೧೮೬೮–೧೯೫೮) ಸ್ಥಾಪಿಸಿದ, ಇಂದಿನ ರಾಮಸ್ವಾಮಿ ವೃತ್ತದ ಬಳಿಯಿರುವ ಈ ವೈದ್ಯಶಾಲೆ ಹಲವಾರು ಉತ್ಕೃಷ್ಟ ಗುಣಮಟ್ಟದ ಔಷಧಿಗಳಿಗೆ ಹೆಸರುವಾಸಿಯಾಗಿದೆ. ೧೯೧೯ರಲ್ಲಿ ಮೈಸೂರಿನಲ್ಲಿ ಪ್ಲೇಗ್ ವ್ಯಾಪಿಸಿದಾಗ ಕಸ್ತೂರಿ ಮಾತ್ರೆ- ಲೋಕಾಮಯಹರ ಮಾತ್ರೆ ಗಳನ್ನು ತಯಾರಿಸಿ ಚಿಕಿತ್ಸೆ ನೀಡಲಾಯಿತು. ಶ್ರೀಲಂಕಾ, ನೇಪಾಳ, ಬರ್ಮಾ ಮುಂತಾದ ದೇಶಗಳಿಂದಲೂ ಈ ಔಷಧಿಗಳಿಗೆ ಬೇಡಿಕೆ ಬಂದಿತ್ತು.

ದಿ ಮೈಸೂರು ಆಯುರ್ವೇದಿಕ್ ಫಾರ್ಮಸಿ : ಆಸ್ಥಾನ ಪಂಡಿತರಾಗಿದ್ದ ವೈದ್ಯ ಸುಬ್ಬು ನರಸಿಂಹ ಪಂಡಿತರು ೧೯೦೦ರಲ್ಲಿ ಈ ಫಾರ್ಮಸಿಯನ್ನು ಸ್ಥಾಪಿಸಿದರು. ಇಂದಿಗೂ ಕೂಡ ಈ ಮನೆತನದ ವೈದ್ಯರು ಫಾರ್ಮಸಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

ದಿ ಸದ್ವೈದ್ಯ ಶಾಲಾ ಪ್ರೈವೈಟ್ ಲಿಮಿಟೆಡ್: ಖ್ಯಾತ ವೈದ್ಯ ಬಿ. ವಿ. ಪಂಡಿತರು ೧೯೧೩ರಲ್ಲಿ ದಿ ಸದ್ವೈದ್ಯ ಶಾಲಾ ಎಂಬ ಔಷಧಿ ತಯಾರಿಕಾ ಘಟಕವನ್ನು ನಂಜನಗೂಡಿನಲ್ಲಿ ಸ್ಥಾಪಿಸಿದರು. ಪಂಡಿತರ ದಂತಧಾವನ ಚೂರ್ಣ, ನಂಜನಗೂಡಿನ ಹಲ್ಲುಪುಡಿ, ಕಷಾಯ, ಚೂರ್ಣ, ಲೇಹ್ಯ, ಅರಿಷ್ಟಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದು ಮನ್ನಣೆಯನ್ನು ಗಳಿಸಿದವು.

ನಿಖಿಲಾ ಕರ್ನಾಟಕ ಸೆಂಟ್ರಲ್ ಆಯುರ್ವೇದಿಕ್ ಫಾರ್ಮಸಿ ಲಿಮಿಟೆಡ್ ( NKCA FARMACY): ೧೯೪೨ರಲ್ಲಿ ನಗರದ ಅನಾಥಾಲಯ ಕಟ್ಟಡದಲ್ಲಿ ವೈದ್ಯ ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಸ್ಥಾಪಿಸಿದ ಈ ಸಂಸ್ಥೆ ಇಂದಿಗೂ ಚೂರ್ಣ, ಕಷಾಯ, ಆಸವ, ಅರಿಷ್ಟ, ಲೇಹ್ಯ, ಗುಟಿಕಾ, ಭಸ್ಮಗಳ ವಿವಿಧ ಔಷಧಿ ಪ್ರಕಾರಗಳನ್ನು ವಿಧಿವತ್ತಾಗಿ ತಯಾರಿಸಿ ಪೂರೈಸುತ್ತಿದೆ.

ಗುರುರಾಜ ಆಯುರ್ವೇದ ಫಾರ್ಮಸ್ಯುಟಿಕಲ್ಸ್ : ವೈದ್ಯ ಬಿ.ಆರ್. ಶಾಮಾಚಾರ್ ಅವರು ೧೯೬೫ ರಲ್ಲಿ ವಿಶ್ವೆಶ್ವರ ನಗರದಲ್ಲಿ ಈ ಘಟಕವನ್ನು ಸ್ಥಾಪಿಸಿ, ವೈದ್ಯಕೀಯ ವೃತ್ತಿಯ ಜತೆ ಔಷಧಿ ತಯಾರಿಕೆ ಹಾಗೂ ವಿತರಣೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಮೈಸೂರು ರಿಸರ್ಚ್ ಸೆಂಟರ್ ಆಫ್ ಇಂಡಿಯನ್ ಮೆಡಿಸಿನ್: ವೈದ್ಯ ಎಂ.ಜಿ.ಕೃಷ್ಣ ಮೂರ್ತಿಯವರು ೧೯೬೫ ರಲ್ಲಿ ಬೀರಿಹುಂಡಿ ಗ್ರಾಮದಲ್ಲಿ ಔಷಧಿ ತಯಾರಿಕಾ ಘಟಕವನ್ನು ಸ್ಥಾಪಿಸಿ ಮೂಲಿಕಾ ಔಷಧಿಗಳನ್ನು ವೈದ್ಯ ಸಮೂಹಕ್ಕೆ ಪೂರೈಕೆ ಮಾಡಿದರು.

ಆಕರ ಗ್ರಂಥಗಳು: ಮೈಸೂರು ದರ್ಶನ ಸಂಪುಟ-೧೨, ಪ್ರಸಾರಾಂಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು. ಲೇಖಕರು ಕೆ.ಎಸ್. ಉಮಾಶಂಕರ್, ವೈದ್ಯ ಆರೋಗ್ಯ ಲೇಖನಗಳು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ